ಬ್ರಾಂಚ್‌ನಿಂದ ಪತ್ರ
ಪ್ರಿಯ ರಾಜ್ಯ ಘೋಷಕರೇ:
ಕಳೆದ ಸೇವಾವರ್ಷದಲ್ಲಿ ನಾವು ಮಾಡಿದ ಉತ್ತಮ ಕೆಲಸವನ್ನು ಯೆಹೋವನು ಖಂಡಿತವಾಗಿಯೂ ಆಶೀರ್ವದಿಸಿದ್ದಾನೆ. ಮಾರ್ಚ್ ತಿಂಗಳಿನಲ್ಲಿ 74,326 ಮಂದಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾಗಿದ್ದರು. ಮತ್ತು 29,050 ಬೈಬಲ್ ಅಧ್ಯಯನಗಳನ್ನು ನಡೆಸಲಾಯಿತು. ಮೇ ತಿಂಗಳಿನಲ್ಲಿ 29,065 ಪ್ರಚಾರಕರು ಕ್ಷೇತ್ರ ಸೇವೆಯನ್ನು ವರದಿಸಿದರು. ಈ ಹೊಸ ಉಚ್ಚಾಂಕವು ನಿಜಕ್ಕೂ ಬಹಳ ಹರ್ಷವನ್ನು ತರುತ್ತದೆ. ಅದೇ ತಿಂಗಳಿನಲ್ಲಿ, ರೆಗ್ಯುಲರ್ ಪಯನೀಯರರ ಸಂಖ್ಯೆಯು ಇದೇ ಮೊದಲ ಬಾರಿಗೆ 2,342ಕ್ಕೆ ಮುಟ್ಟಿದೆ!
ಬೈಬಲ್ ಸಂದೇಶದಲ್ಲಿ ಆಸಕ್ತಿ ತೋರಿಸಿರುವ ಅನೇಕ ಜನರು ಹೆಚ್ಚಿನ ವಿದ್ಯಾಭ್ಯಾಸ ಪಡೆದವರಲ್ಲ. ಮಾತ್ರವಲ್ಲ, ಬೈಬಲ್ ಬಗ್ಗೆ ಏನೂ ತಿಳಿದಿರದ ಓದುಗರ ಕುರಿತು ಸ್ವಲ್ಪ ಯೋಚಿಸಿ. ನಮ್ಮ ಭಾಷಾಂತರವು ಇಂಥ ಎಲ್ಲಾ ಜನರಿಗೆ ಅರ್ಥವಾಗಬೇಕು ಮತ್ತು ಅವರ ಹೃದಯ ತಲುಪುವಂಥ ರೀತಿಯಲ್ಲಿರಬೇಕು. (1 ತಿಮೊ. 2:4) ಹಾಗಾಗಿ ವಿದ್ಯಾವಂತರು ಮಾತ್ರವಲ್ಲ ಸಾಮಾನ್ಯ ಜನರು ಹಾಗೂ ಮಕ್ಕಳು ಸಹ ನಮ್ಮ ಪ್ರಕಾಶನಗಳನ್ನು ಓದಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಭಾಷಾಂತರ ಮಾಡಲು ಭಾಷಾಂತರಕಾರರಿಗೆ ತರಬೇತಿ ನೀಡಲಾಗಿದೆ. ನಮ್ಮ ಪ್ರಕಾಶನಗಳಲ್ಲಿ ಉಪಯೋಗಿಸಲಾಗಿರುವ ಭಾಷೆಯು ಸುಲಲಿತವಾಗಿಯೂ ಸುಲಭವಾಗಿ ಅರ್ಥವಾಗುವಂತೆಯೂ ಇದೆ ಎಂದು ಅನೇಕ ಓದುಗರು ಪ್ರಶಂಸಿಸಿದ್ದಾರೆ.—1 ಕೊರಿಂ. 14:9-11.
ದೇವರ ಸಂಘಟನೆಯ ಕಡೆಗೆ ಸಮೂಹ ಸಮೂಹವಾಗಿ ಬರುತ್ತಿರುವ ಜನರಿಗೆ ಕೂಟವಾಗಿ ಕೂಡಿಬರಲು ತಕ್ಕದಾದ ಸ್ಥಳಗಳನ್ನು ಒದಗಿಸಲಿಕ್ಕಾಗಿ ಕಳೆದ ಸೇವಾವರ್ಷದಲ್ಲಿ ದೇಶದ ವಿವಿಧೆಡೆಗಳಲ್ಲಿ 15 ರಾಜ್ಯ ಸಭಾಗೃಹಗಳನ್ನು ಕಟ್ಟಲಾಯಿತು. ಈ ಭಾರೀ ಯೋಜನೆಗಳಲ್ಲಿ ನುರಿತ ಕೆಲಸಗಾರರಾಗಿರುವ ಸುಮಾರು 70 ಸಹೋದರರು ತಮ್ಮನ್ನೇ ನೀಡಿಕೊಂಡರು. ಯೆಹೋವನ ಆಶೀರ್ವಾದಗಳೊಂದಿಗೆ ಮುಂದಿನ ಸೇವಾವರ್ಷದಲ್ಲಿ ಇನ್ನೂ 25 ರಾಜ್ಯ ಸಭಾಗೃಹಗಳನ್ನು ಕಟ್ಟಲು ಯೋಜಿಸಿದ್ದೇವೆ. ಅಮೂಲ್ಯವಾದ ಕಾಣಿಕೆಗಳು ಮತ್ತು ಹೃತ್ಪೂರ್ವಕ ಪ್ರಾರ್ಥನೆಗಳ ಮೂಲಕ ನೀವು ಕೊಡುತ್ತಿರುವ ಬೆಂಬಲವನ್ನು ಗಣ್ಯಮಾಡಲಾಗುತ್ತದೆ.—ಜ್ಞಾನೋ. 3:9, 10.
ನಿಮ್ಮ ಸಹೋದರರು,
ಇಂಡಿಯಾ ಬ್ರಾಂಚ್ ಆಫೀಸ್