ನಮ್ಮ ಟೆರಿಟೊರಿಯಲ್ಲಿರುವ ಯೋಗ್ಯರನ್ನು ಹುಡುಕುವುದು
1 ಜನವರಿ 2008ರ ನಮ್ಮ ರಾಜ್ಯದ ಸೇವೆಯ ವಿಶೇಷ ಪುರವಣಿಯು, ನಮ್ಮ ಸಂದೇಶದ ಕಡೆಗೆ ದೇಶದೆಲ್ಲೆಡೆಯ ಜನರ ಮನೋಭಾವ ಬದಲಾಗುತ್ತಿರುವುದರ ಕುರಿತು ನಮ್ಮನ್ನು ಎಚ್ಚರಿಸಿತು. ಅಲ್ಲದೆ ಇಂಥ ಬದಲಾವಣೆಗಳಿಗೆ ಹೊಂದಿಕೊಳ್ಳಲು ನೆರವಾಗುವ ದೇವರ ವಾಕ್ಯದ ಮೂಲತತ್ತ್ವಗಳ ಕಡೆಗೆ ನಮ್ಮ ಗಮನಸೆಳೆಯಿತು. ನಿಮ್ಮ ಟೆರಿಟೊರಿಯಲ್ಲಿ ಇಂಥ ಬದಲಾವಣೆಗಳನ್ನು ಗಮನಿಸಿದ್ದೀರಾ? ಅನೇಕ ವಿರೋಧಿಗಳು, ನಾವು ಒತ್ತಾಯದಿಂದ ಅಥವಾ ಮನವೊಲಿಸಿ ಮತಾಂತರ ಮಾಡುತ್ತೇವೆಂದು ನೆನಸಿ ನಮ್ಮನ್ನು ಕ್ರೈಸ್ತ ಪ್ರಪಂಚದ ಮತಾಂಧ ಬೋಧಕರ ಪಟ್ಟಿಯಲ್ಲಿ ಸೇರಿಸಿಬಿಡಬಹುದು. ಇದು ಜನರು ಗುಂಪುಗೂಡುವುದಕ್ಕೂ ಸಹೋದರ ಸಹೋದರಿಯರನ್ನು ಸೆರೆಮನೆಗೆ ಹಾಕುವುದಕ್ಕೂ ಕಾರಣವಾಗಿದೆ. ಇಂಥ ಸನ್ನಿವೇಶಗಳನ್ನು ಆದಷ್ಟು ಕಡಿಮೆಗೊಳಿಸಲು ಅಥವಾ ಅವು ಏಳದಂತೆ ಜಾಗ್ರತೆವಹಿಸಲು ನಾವೇನು ಮಾಡಬಹುದು? ಒಂದು ವಿಧಾನ, ನಮ್ಮ ಪ್ರಸ್ತಾಪದಲ್ಲಿ ಹೊಂದಾಣಿಕೆ ಮಾಡುವುದಾಗಿದೆ.
2 ಮನೆಮನೆಯ ಶುಶ್ರೂಷೆಯಲ್ಲಾಗಲಿ, ಅಂಗಡಿ ಅಥವಾ ಅನೌಪಚಾರಿಕ ಸೇವೆಯಲ್ಲಾಗಲಿ, ಜನರನ್ನು ನಾವಾಗಿಯೇ ಹೋಗಿ ಮಾತಾಡಿಸುತ್ತೇವೆ. ಆದುದರಿಂದ ನಾವು ಮಾತಾಡುತ್ತಿರುವ ವ್ಯಕ್ತಿಗೆ ನಿಜವಾಗಿ ಆಸಕ್ತಿಯಿದೆ ಮತ್ತು ಅವನು ಗಲಾಟೆ ಮಾಡಿ ದೊಂಬಿ ಎಬ್ಬಿಸುವುದಿಲ್ಲ ಎಂಬದನ್ನು ನಾವು ಮೊದಲು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಟೆರಿಟೊರಿಯಲ್ಲಿ ವಿರೋಧವಿರುವುದಾದರಂತೂ ಇದು ತುಂಬ ಅಗತ್ಯ. ಈ ಮೂಲಕ ನಾವು ಅನಗತ್ಯವಾಗಿ ಘರ್ಷಣೆಗೆ ಎಡೆಕೊಡುವುದಿಲ್ಲ. ದೇವರ ವಾಕ್ಯವು ಸಹ ಹೀಗೆಯೇ ಮಾಡಲು ನಮ್ಮನ್ನು ಪ್ರೋತ್ಸಾಹಿಸುತ್ತದೆ.—ಲೂಕ 10:5, 6.
3 ಆಧ್ಯಾತ್ಮಿಕ ಸಹಾಯ ಯಾರಿಗೆ ಕೊಡಬೇಕು ಎಂಬದನ್ನು ನಾವು ಹೇಗೆ ನಿರ್ಧರಿಸಬಹುದು? ಸಂಭಾಷಣೆಯನ್ನು ಆರಂಭಿಸಲು ಯಾವುದಾದರೊಂದು ವಿಷಯವೆತ್ತಿ ಅಥವಾ ಪ್ರಶ್ನೆ ಕೇಳಿ, ಅವರದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬದನ್ನು ಗಮನಿಸುವ ಮೂಲಕವೇ. ಸ್ವಲ್ಪಸಮಯದ ವರೆಗೆ ಬೈಬಲ್ ಕುರಿತು ಮಾತನ್ನೆತ್ತದೆ ಅಥವಾ ನಮ್ಮ ಪ್ರಕಾಶನಗಳನ್ನು ತೋರಿಸದೆ, ಸಾಮಾನ್ಯ ವಿಷಯಗಳ ಕುರಿತೇ ಮಾತಾಡಿರಿ. ನೀವೊಬ್ಬ ಕ್ರೈಸ್ತರೆಂದು ಗುರುತಿಸಿಕೊಳ್ಳುವ ಮುಂಚೆಯೇ ಮನೆಯವನು ಯಾವ ವಿಧದ ವ್ಯಕ್ತಿಯೆಂದು ಹೆಚ್ಚಿನ ವಿದ್ಯಮಾನಗಳಲ್ಲಿ ತಿಳುಕೊಳ್ಳಸಾಧ್ಯವಾಗುತ್ತದೆ. ಸ್ವಲ್ಪ ಸಮಯದ ಅನಂತರ, ಮಾತು ಮುಂದುವರಿಸಿದರೆ ಏನಾದರೂ ಅಭ್ಯಂತರವಿದೆಯೋ ಎಂದು ಮನೆಯವನನ್ನು ಕೇಳುವುದು ಪ್ರಾಯಶಃ ಒಳ್ಳೇದಾಗಿರುವುದು. ಮಾತಾಡಲು ಇಷ್ಟವಿಲ್ಲವೆಂದು ಅವನು ಹೇಳಿದರೆ ಅಥವಾ ಹಾಗೆಂದು ನಮಗೆ ಅನಿಸಿದರೆ ಸಂಭಾಷಣೆ ಮುಂದುವರಿಸಬಾರದು. (ಮತ್ತಾ. 7:6) ಸ್ನೇಹ ಭಾವದಿಂದಲೇ ಸಂಭಾಷಣೆ ನಿಲ್ಲಿಸಿ, ಅವನಿಗೆ ಉಪಕಾರ ಹೇಳಿ ಅಲ್ಲಿಂದ ಹೊರಡುವುದು ಉಚಿತ.
4 ಶುಶ್ರೂಷೆಯಲ್ಲಿ ನಾವು ಮಾಡಬೇಕಾದ ಇಂಥ ಬದಲಾವಣೆಗಳನ್ನು ಮುಂಬರುವ ನಮ್ಮ ರಾಜ್ಯದ ಸೇವೆಯ ನಿರೂಪಣೆಗಳಲ್ಲಿ ಸೇರಿಸಲಾಗುವುದು. ನಿಮ್ಮ ಸ್ಥಳಿಕ ಟೆರಿಟೊರಿಯಲ್ಲಿನ ವಿರೋಧದ ಮೇಲೆ ಹೊಂದಿಕೊಂಡು ಈ ಬದಲಾವಣೆಗಳನ್ನು ಎಷ್ಟರ ಮಟ್ಟಿಗೆ ಶುಶ್ರೂಷೆಯಲ್ಲಿ ಅಳವಡಿಸತಕ್ಕದ್ದು ಎಂಬದರ ಕುರಿತು ಸಭೆಯೊಂದಿಗೆ ಚರ್ಚಿಸುವಂತೆ ಹಿರಿಯರ ಮಂಡಲಿಯನ್ನು ಪ್ರೋತ್ಸಾಹಿಸಲಾಗಿದೆ.
5 ಯೇಸು ತನ್ನ ಅಪೊಸ್ತಲರನ್ನು ಸೇವೆಗೆ ಕಳುಹಿಸುವ ಮೊದಲು ಅವರಿಗೆ ಹೀಗಂದನು: “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆಮಾಡಿ ಮುಂದಕ್ಕೆ ಹೊರಡುವ ತನಕ ಅವರಲ್ಲೇ ಇರ್ರಿ.” (ಮತ್ತಾ. 10:11) ಸಂದೇಶಕ್ಕೆ ಜನರು ತೋರಿಸಿರುವ ಪ್ರತಿಕ್ರಿಯೆಯು ಎಲ್ಲರೂ ಯೋಗ್ಯರಾಗಿರುವುದಿಲ್ಲ ಎಂಬದನ್ನು ತೋರಿಸುತ್ತದೆ. ಕೆಲವರು ಒರಟಾಗಿ ಪ್ರತಿಕ್ರಿಯಿಸುತ್ತಾರೆ. ಇಂಥ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಿಯೇ ಯೇಸು ಮತ್ತಾಯ 10:12-14ರಲ್ಲಿರುವ ನಿರ್ದೇಶನಗಳನ್ನು ಕೊಟ್ಟನು. ಇದಕ್ಕೆ ಹೊಂದಿಕೆಯಾಗಿ, ಮನೆಯವನಿಗೆ ಮತ್ತಷ್ಟು ಸಿಟ್ಟನ್ನೇರಿಸಬಹುದಾದ ಚರ್ಚೆಯನ್ನು ಮುಂದುವರಿಸುವ ಬದಲು ಅಲ್ಲಿಂದ ನಾವು ಸಮಾಧಾನದಿಂದ ಹೊರಡಬೇಕು. ಯೆಹೋವನೇ ತನ್ನ ನೀತಿಗನುಸಾರ ನ್ಯಾಯತೀರಿಸುವನೆಂಬ ಭರವಸೆಯಿಂದ ನಾವು ವಿಷಯವನ್ನು ಆತನ ಕೈಗೆ ಒಪ್ಪಿಸಬೇಕು.