‘ದೇವರ ವಾಕ್ಯವನ್ನು ನಿರ್ಭಯದಿಂದ ಹೇಳಿರಿ’
1 ಶಾಲೆಯಲ್ಲಿ ಅಥವಾ ಉದ್ಯೋಗದ ಸ್ಥಳದಲ್ಲಿ ನಿಮ್ಮ ನಂಬಿಕೆಯ ಕುರಿತು ಮಾತಾಡುವ ಸಂಧರ್ಭ ಬಂದಾಗ ನೀವು ಕೆಲವೊಮ್ಮೆ ಹಿಂಜರಿಯುತ್ತೀರೊ? ನಿಮ್ಮ ಸಂಬಂಧಿಕರಿಗೆ, ನೆರೆಯವರಿಗೆ ಅಥವಾ ಪ್ರಾಯಶಃ ಅಪರಿಚಿತರಾದ ಜನರಿಗೆ ಅನೌಪಚಾರಿಕ ಸಾಕ್ಷಿನೀಡುವುದು ನಿಮಗೆ ಕಷ್ಟಕರವಾಗಿದೆಯೊ? ಸೂಕ್ತ ಸನ್ನಿವೇಶಗಳನ್ನು ಬಳಸಿ “ದೇವರ ವಾಕ್ಯವನ್ನು ನಿರ್ಭಯದಿಂದ ಹೇಳುವದಕ್ಕೆ” ನಮಗೆಲ್ಲರಿಗೆ ಯಾವುದು ಸಹಾಯ ಮಾಡಬಲ್ಲದು?—ಫಿಲಿ. 1:14.
2 ಹಿಂಜರಿಯಬೇಡಿ: ತಪ್ಪು ಆರೋಪಕ್ಕೊಳಗಾದ ನಿಮ್ಮ ಆಪ್ತ ಸ್ನೇಹಿತ ಅಥವಾ ಸಂಬಂಧಿಕನೊಬ್ಬನ ಪರವಾಗಿ ಮಾತಾಡಲು ನೀವು ಹಿಂಜರಿಯುವಿರೊ? ನಮ್ಮ ಅತ್ಯಾಪ್ತ ಮಿತ್ರನಾದ ಯೆಹೋವನು ಸಾವಿರಾರು ವರ್ಷಗಳಿಂದ ತಪ್ಪಾಗಿ ಪ್ರತಿನಿಧಿಸಲ್ಪಟ್ಟಿದ್ದಾನೆ. ನಮ್ಮ ಮಹಾನ್ ದೇವರ ಪರವಾಗಿ ಸಾಕ್ಷಿಕೊಡುವ ವಿಶೇಷ ಗೌರವವು ನಮಗಿದೆ! (ಯೆಶಾ. 43:10-12) ಯೆಹೋವನ ಕಡೆಗೆ ನಮಗಿರುವ ಗಾಢವಾದ ಪ್ರೀತಿಯು ಭಯ ಅಥವಾ ಮುಜುಗರದ ಭಾವನೆಗಳನ್ನು ಜಯಿಸಿ ಹಿಂಜರಿಯದೆ ಸತ್ಯಕ್ಕೆ ಧೈರ್ಯದಿಂದ ಸಾಕ್ಷಿಕೊಡಲು ನಮಗೆ ಸಹಾಯ ಮಾಡಬಲ್ಲದು.—ಅ. ಕೃ. 4:26, 29, 31.
3 ನಮ್ಮ ಸಂದೇಶವು ಒಂದು ಶುಭ ವಾರ್ತೆ ಆಗಿದೆ ಎಂಬುದನ್ನು ನೆನಪಿನಲ್ಲಿಡಿ. ಅದಕ್ಕೆ ಲಕ್ಷ್ಯಕೊಡುವ ಜನರಿಗೆ ಶಾಶ್ವತ ಪ್ರಯೋಜನಗಳು ಸಿಗುವವು. ನಮ್ಮ ಗಮನವನ್ನು ಸ್ವತಃ ನಮ್ಮ ಮೇಲಾಗಲಿ ಅಥವಾ ನಮ್ಮ ವಿರೋಧಿಗಳ ಮೇಲಾಗಲಿ ಕೇಂದ್ರೀಕರಿಸುವ ಬದಲು ಸಾರುವ ಕೆಲಸದ ಮಹತ್ವದ ಮೇಲಿಡುವುದು ನಾವು ಧೈರ್ಯದಿಂದ ಸಾಕ್ಷಿಕೊಡುವಂತೆ ಸಹಾಯ ಮಾಡುವುದು.
4 ಇತರರ ಮಾದರಿಗಳು: ದೇವರ ವಾಕ್ಯದ ಕುರಿತು ಧೈರ್ಯದಿಂದ ಮಾತಾಡಿದ ಇತರರ ನಂಬಿಗಸ್ತಿಕೆಯ ಜೀವನಮಾರ್ಗದಿಂದ ನಾವು ಬಲವನ್ನು ಪಡೆದುಕೊಳ್ಳಸಾಧ್ಯವಿದೆ. ಉದಾಹರಣೆಗೆ, ಹನೋಕನು ಭಕ್ತಿಹೀನ ಪಾಪಿಗಳ ವಿರುದ್ಧ ಯೆಹೋವನ ತೀರ್ಪನ್ನು ಧೈರ್ಯದಿಂದ ಘೋಷಿಸಿದನು. (ಯೂದ 14, 15) ನೋಹನು ನಿರಾಸಕ್ತರಾಗಿದ್ದ ಜನರಿಗೆ ನಂಬಿಗಸ್ತಿಕೆಯಿಂದ ಸಾರಿದನು. (ಮತ್ತಾ. 24:37-39) ಪ್ರಥಮ ಶತಮಾನದಲ್ಲಿದ್ದ “ಶಾಸ್ತ್ರಾಭ್ಯಾಸ ಮಾಡದ ಸಾಧಾರಣ” ಕ್ರೈಸ್ತರು ಕಟು ವಿರೋಧದ ಮಧ್ಯೆಯೂ ಸಾರುವುದನ್ನು ಮುಂದುವರಿಸಿದರು. (ಅ. ಕೃ. 4:13, 18-20) ಆಧುನಿಕ ದಿನಗಳಲ್ಲೂ, ಅನೇಕರು ಯೆಹೋವನಲ್ಲಿ ನಂಬಿಕೆಯನ್ನಿಡುವ ಮೂಲಕ ಮನುಷ್ಯ ಭಯವನ್ನು ಜಯಿಸಿದರು ಮತ್ತು ಹುರುಪುಳ್ಳ ಶುಶ್ರೂಷಕರಾದರು. ಇಂಥವರ ಜೀವನ ಕಥೆಗಳು ಅನೇಕ ಸಲ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಕಂಡುಬರುತ್ತವೆ.
5 ಪುರಾತನ ಸಮಯಗಳಲ್ಲಿ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದ ನಂಬಿಗಸ್ತ ಸೇವಕರ ಜೀವನಕ್ರಮವನ್ನು ಪರಿಗಣಿಸುವ ಮೂಲಕ ನಾವು ಧೈರ್ಯ ತೆಗೆದುಕೊಳ್ಳಬಲ್ಲೆವು. (1 ಅರ. 19:2, 3; ಮಾರ್ಕ 14:66-71) ಅವರು “ನಮ್ಮ ದೇವರ ಮೂಲಕ ಧೈರ್ಯಗೊಂಡು” ನಿರ್ಭಯದಿಂದ ಮಾತಾಡಿದರು. ನಾವೂ ಹಾಗಿರಬಲ್ಲೆವು!—1 ಥೆಸ. 2:2.