ಮೊದಲು ನಿಮಗಿದ್ದ ಪ್ರೀತಿಯನ್ನು ಬಿಟ್ಟುಬಿಡಬೇಡಿರಿ
1 ಮಹಿಮಾನ್ವಿತ ಯೇಸು ಪ್ರಥಮ ಶತಮಾನದ ಎಫೆಸ ಸಭೆಯನ್ನು ಎಚ್ಚರಿಸಿದ್ದು: “ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟು ಬಿಟ್ಟಿದ್ದೀ.” (ಪ್ರಕ. 2:4) ಹೌದು, ಅನೇಕರು ಯೆಹೋವನ ಮೇಲೆ ತಮಗಿದ್ದ ಮೊದಲ ಪ್ರೀತಿಯನ್ನು ಕಳೆದುಕೊಂಡಿದ್ದರು. ನಾವು ಸತ್ಯವನ್ನು ಕಲಿಯುತ್ತಿದ್ದಾಗ ದೇವರ ಮೇಲೆ ಹಾಗೂ ನೆರೆಯವರ ಮೇಲೆ ಗಾಢ ಪ್ರೀತಿಯನ್ನು ಬೆಳೆಸಿಕೊಂಡೆವು. ಈ ಪ್ರೀತಿಯೇ ಹೊಸದಾಗಿ ಕಂಡುಕೊಂಡ ನಿರೀಕ್ಷೆಯನ್ನು ಅತ್ಯುತ್ಸಾಹದಿಂದ ಸಾರುವಂತೆ ನಮ್ಮನ್ನು ಪ್ರಚೋದಿಸಿತು. ಆರಂಭದಲ್ಲಿ ನಮಗಿದ್ದ ಆ ಪ್ರೀತಿಯು ತಣ್ಣಗಾಗುವಂತೆ ಬಿಡದಿರಲು ಮತ್ತು ಶುಶ್ರೂಷೆಯಲ್ಲಿ ಉತ್ಸುಕತೆಯನ್ನು ಕಳಕೊಳ್ಳದಿರಲು ನಮಗೆ ಯಾವುದು ಸಹಾಯಮಾಡಬಲ್ಲದು?
2 ವೈಯಕ್ತಿಕ ಅಧ್ಯಯನ ಮತ್ತು ಕೂಟಗಳಿಗೆ ಹಾಜರಿ: ನಾವು ಮೊದಮೊದಲು ಸತ್ಯವನ್ನು ಕಲಿತಾಗ ದೇವರ ಮತ್ತು ನೆರೆಯವರ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳುವಂತೆ ಮಾಡಿದ್ದು ಯಾವುದು? ಬೈಬಲಿನ ಅಧ್ಯಯನದಿಂದ ನಾವು ಯೆಹೋವನ ಕುರಿತು ತಿಳಿದುಕೊಂಡ ವಿಷಯಗಳೆಲ್ಲವೂ ಅಲ್ಲವೆ? (1 ಯೋಹಾ. 4:16, 19) ಆದುದರಿಂದ, ನಮ್ಮ “ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ” ಇರಲು ನಾವು ಸದಾ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲೇಬೇಕು. ‘ದೇವರ ಅಗಾಧವಾದ ವಿಷಯಗಳನ್ನು ಕೂಡ ಪರಿಶೋಧಿಸಬೇಕು.’—ಫಿಲಿ. 1:9-11; 1 ಕೊರಿಂ. 2:10.
3 ನಾನಾ ರೀತಿಯ ಚಿಂತೆಗಳು ಮತ್ತು ಅಪಕರ್ಷಣೆಗಳೇ ತುಂಬಿರುವ ಈ ಕಡೇ ದಿವಸಗಳಲ್ಲಿ ಒಳ್ಳೆಯ ವೈಯಕ್ತಿಕ ಅಧ್ಯಯನದ ರೂಢಿಯನ್ನು ಕಾಪಾಡಿಕೊಳ್ಳುವುದು ಅಷ್ಟೇನೂ ಸುಲಭವಲ್ಲ. (2 ತಿಮೊ. 3:1) ಆದುದರಿಂದಲೇ ಆಧ್ಯಾತ್ಮಿಕ ಆಹಾರವನ್ನು ಸೇವಿಸಲಿಕ್ಕಾಗಿ ನಾವು ಸಮಯವನ್ನು ಬದಿಗಿರಿಸಬೇಕು. ಕ್ರಮವಾಗಿ ಸಭಾ ಕೂಟಗಳಿಗೆ ಹಾಜರಾಗುವುದೂ ಅತಿ ಪ್ರಾಮುಖ್ಯ. ವಿಶೇಷವಾಗಿ ‘ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನಾವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಬೇಕು.’—ಇಬ್ರಿ. 10:24, 25.
4 ಶುಶ್ರೂಷೆ: ಶುಶ್ರೂಷೆಯಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುವುದು ಸಹ ದೇವರ ಮೇಲೆ ನಮಗಿದ್ದ ಮೊದಲ ಪ್ರೀತಿಯನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ. ನಾವು ಇತರರಿಗೆ ಸುವಾರ್ತೆಯನ್ನು ಸಾರುವ ಮೂಲಕ ಯೆಹೋವನ ಪ್ರೀತಿಪರ ವಾಗ್ದಾನಗಳನ್ನು ನಮ್ಮ ಮನಸ್ಸಿನಲ್ಲಿ ಹಚ್ಚಹಸುರಾಗಿ ಇಟ್ಟುಕೊಳ್ಳುತ್ತೇವೆ. ಇದರಿಂದ ನಮ್ಮ ನಿರೀಕ್ಷೆಯನ್ನು ಉಜ್ವಲವಾಗಿಯೂ ನಮ್ಮ ಪ್ರೀತಿಯನ್ನು ಸಜೀವವಾಗಿಯೂ ಇಡಲು ಆಗುತ್ತದೆ. ಇತರರಿಗೆ ಬೈಬಲ್ ಸತ್ಯಗಳನ್ನು ಕಲಿಸಲು ಮೊದಲಾಗಿ ನಾವು ಅವುಗಳ ಕುರಿತು ಸಂಶೋಧನೆಮಾಡಿ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಅಗತ್ಯ. ಹೀಗೆ ಮಾಡುವುದರಿಂದ ನಮ್ಮ ನಂಬಿಕೆಯೂ ಬಲಗೊಳ್ಳುತ್ತದೆ.—1 ತಿಮೊ. 4:15, 16.
5 ಯೆಹೋವನು ಎಲ್ಲಕ್ಕೂ ಅರ್ಹನು, ನಮ್ಮ ಪ್ರೀತಿಗೂ ಸಹ. (ಪ್ರಕ. 4:11) ಆದುದರಿಂದ, ಮೊದಲು ನಿಮಗಿದ್ದ ಪ್ರೀತಿಯು ಕಳೆಗುಂದುವಂತೆ ಬಿಡಬೇಡಿರಿ. ವೈಯಕ್ತಿಕ ಬೈಬಲ್ ಅಧ್ಯಯನ, ಕೂಟಗಳಿಗೆ ಕ್ರಮವಾದ ಹಾಜರಿ ಮತ್ತು ನಿಮಗೆ ಅತಿ ಪ್ರಿಯವಾದ ವಿಷಯಗಳನ್ನು ಅತ್ಯುತ್ಸಾಹದಿಂದ ಇತರರಿಗೆ ತಿಳಿಯಪಡಿಸುವ ಮೂಲಕ ದೇವರ ಮೇಲೆ ಮೊದಲು ನಿಮಗಿದ್ದ ಪ್ರೀತಿ ಆಳವಾಗಿ ಬೇರೂರುವಂತೆ ಮಾಡಿ.—ರೋಮಾ. 10:10.