ನಮ್ಮ ಶುಶ್ರೂಷೆಯು ಏನನ್ನು ಪೂರೈಸುತ್ತದೆ?
1. ಯೆಹೋವನು ನಮ್ಮ ಶುಶ್ರೂಷೆಯನ್ನು ಹೇಗೆ ವೀಕ್ಷಿಸುತ್ತಾನೆ, ಮತ್ತು ಮಾನವರ ಪ್ರತಿಕ್ರಿಯೆ ಏನಾಗಿದೆ?
1 ದೇವರ ವಾಕ್ಯವು ಕ್ರೈಸ್ತರನ್ನು ವಿಜಯೋತ್ಸವದ ಮೆರವಣಿಗೆಯಲ್ಲೊ ಎಂಬಂತೆ, ಯೆಹೋವನ ಸೇವೆಯಲ್ಲಿ ಜಯೋತ್ಸವದೊಡನೆ ಮುನ್ನಡೆಯುತ್ತಿದ್ದಾರೆಂದು ವರ್ಣಿಸುತ್ತದೆ. (2 ಕೊರಿಂ. 2:14-16) ದೇವರ ಜ್ಞಾನವನ್ನು ತಿಳಿಯಪಡಿಸುವಾಗ ನಾವು ಸಲ್ಲಿಸುವ ಸೇವೆಯು ಯೆಹೋವನಿಗೆ ಮೆಚ್ಚಿಗೆಯ ಧೂಪದಂತಿದೆ. ಕೆಲವರು ಸುವಾರ್ತೆಯ ಸುವಾಸನೆಗೆ ಆಕರ್ಷಿಸಲ್ಪಟ್ಟಿದ್ದಾರೆ; ಇತರರು ಅದನ್ನು ತಿರಸ್ಕರಿಸಿದ್ದಾರೆ. ಆದರೆ ಅಧಿಕಾಂಶ ಮಂದಿಯ ನಕಾರಾತ್ಮಕ ಪ್ರತಿಕ್ರಿಯೆಯು ನಮ್ಮ ಕೆಲಸವು ಅಸಫಲವಾಗಿದೆ ಎಂಬರ್ಥವನ್ನು ನೀಡುವುದಿಲ್ಲ. ನಮ್ಮ ಶುಶ್ರೂಷೆಯು ಏನನ್ನು ಪೂರೈಸುತ್ತದೆ ಎಂಬುದನ್ನು ಪರಿಗಣಿಸೋಣ.
2. ನಮ್ಮ ಶುಶ್ರೂಷೆಯು ನಾವೇನನ್ನು ತೋರಿಸುವಂತೆ ಸಹಾಯಮಾಡುತ್ತದೆ?
2 ಯೆಹೋವನನ್ನು ಮಹಿಮೆಪಡಿಸುತ್ತದೆ: ಮಾನವರು ಯೆಹೋವನನ್ನು ಸ್ವಾರ್ಥ ಕಾರಣಗಳಿಗಾಗಿ ಸೇವಿಸುತ್ತಾರೆಂದು ಸೈತಾನನು ವಾದಿಸುತ್ತಾನೆ. (ಯೋಬ 1:9-11) ಆದರೆ, ಕ್ರೈಸ್ತ ಶುಶ್ರೂಷೆಯು ದೇವರ ಕಡೆಗಿನ ನಮ್ಮ ಭಕ್ತಿಯು ಯಥಾರ್ಥವಾದದ್ದೆಂದು ತೋರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ. ಅನೇಕ ಪ್ರಚಾರಕರು, ಕಷ್ಟಕರ ವೈಯಕ್ತಿಕ ಸನ್ನಿವೇಶಗಳು ಅಥವಾ ಸಾಮಾನ್ಯವಾಗಿ ಜನರು ತೋರಿಸುವ ನಿರಾಸಕ್ತಿಯ ಎದುರಿನಲ್ಲೂ, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆಗೆ ವಿಧೇಯರಾಗುತ್ತಾ ಇದ್ದಾರೆ. ಇಂತಹ ನಿಷ್ಠೆಯ ತಾಳ್ಮೆಯು ಯೆಹೋವನಿಗೆ ಸಂತೋಷವನ್ನು ತರುತ್ತದೆ!—ಜ್ಞಾನೋ. 27:11.
3. ದೇವರ ಹೆಸರು ಮತ್ತು ಉದ್ದೇಶವನ್ನು ತಿಳಿಯಪಡಿಸುತ್ತಾ ಇರುವುದು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ?
3 ಮಾತ್ರವಲ್ಲದೆ, ದೇವರ ಉದ್ದೇಶವನ್ನು ಪೂರೈಸುವುದರಲ್ಲಿಯೂ ನಮ್ಮ ಶುಶ್ರೂಷೆಯು ಒಂದು ಪಾತ್ರವನ್ನು ವಹಿಸುತ್ತದೆ. ಸೈತಾನನ ಲೋಕಕ್ಕೆ ಬರಲಿರುವ ನಾಶನದ ಕುರಿತು ತಿಳಿಸುವಾಗ, “ನಾನೇ ಯೆಹೋವ . . . ಎಂದು ಜನಾಂಗಗಳಿಗೆ ಗೊತ್ತಾಗುವದು” ಎಂದು ಯೆಹೋವನು ಹೇಳುತ್ತಾನೆ. (ಯೆಹೆ. 39:7) ಜನಾಂಗಗಳಿಗೆ ಇದು ಗೊತ್ತಾಗಬೇಕಾದರೆ, ದೇವರ ಸೇವಕರು ಆತನ ಹೆಸರನ್ನು ಮತ್ತು ಉದ್ದೇಶವನ್ನು “ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ” ಘೋಷಿಸುತ್ತಾ ಇರುವುದು ಆವಶ್ಯಕ.—ಪ್ರಕ. 14:6, 7.
4. ಸಾರುವ ಕೆಲಸವು ಹೇಗೆ ನ್ಯಾಯತೀರ್ಪನ್ನು ವಿಧಿಸಲು ಆಧಾರವಾಗಿ ಕಾರ್ಯನಡಿಸುತ್ತದೆ?
4 ನ್ಯಾಯತೀರ್ಪನ್ನು ವಿಧಿಸಲು ಆಧಾರ: ಸುವಾರ್ತೆಯನ್ನು ಸಾರುವುದು ನ್ಯಾಯತೀರ್ಪನ್ನು ವಿಧಿಸಲು ಆಧಾರವಾಗಿಯೂ ಕಾರ್ಯನಡಿಸುತ್ತದೆ. ಯೇಸು ಕ್ರಿಸ್ತನು “ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ” ಪ್ರತೀಕಾರವನ್ನು ಸಲ್ಲಿಸುವನು ಎಂದು ಅಪೊಸ್ತಲ ಪೌಲನು ಹೇಳಿದನು. (2 ಥೆಸ. 1:8, 9) ಜನರು ಸುವಾರ್ತೆಯ ಕಡೆಗೆ ತೋರಿಸುವ ಪ್ರತಿಕ್ರಿಯೆಯ ಆಧಾರದ ಮೇಲೆ ನ್ಯಾಯತೀರ್ಪನ್ನು ವಿಧಿಸಲಾಗುವುದು. ಇದು ದೇವರ ಸೇವಕರ ಮೇಲೆ ಎಷ್ಟೊಂದು ಗಂಭೀರವಾದ ಜವಾಬ್ದಾರಿಯನ್ನು ಹೊರಿಸುತ್ತದೆ! ರಕ್ತಾಪರಾಧದಿಂದ ದೂರವಿರಬೇಕಾದರೆ, ಜೀವರಕ್ಷಕ ರಾಜ್ಯ ಸಂದೇಶವನ್ನು ತಿಳಿಯಪಡಿಸಲು ನಾವು ಹಿಂಜರಿಯಬಾರದು.—ಅ. ಕೃ. 20:26, 27.
5. ದೇವರ ಕರುಣೆಯು ನಮ್ಮ ಶುಶ್ರೂಷೆಯಲ್ಲಿ ಹೇಗೆ ಪ್ರತಿಬಿಂಬಿಸಲ್ಪಡುತ್ತದೆ?
5 ನಮ್ಮ ನೆರೆಯವರು ದೇವರ ಅನುಗ್ರಹವನ್ನು ಪಡೆಯಲು ಸಾಧ್ಯವಾಗುವಂತೆ ಅವರಿಗೆ ಸಹಾಯಮಾಡುವುದರಲ್ಲಿ ನಾವು ಮಾಡುವ ಸತತ ಪ್ರಯತ್ನವು, ಯೆಹೋವನ ಕರುಣೆಯ ಅಭಿವ್ಯಕ್ತಿಯಾಗಿದೆ. (1 ತಿಮೊ. 2:3, 4) ಜನರ ಜೀವನಗಳು ದಿನೇ ದಿನೇ ಬದಲಾಗುತ್ತಿರುತ್ತವೆ ಎಂಬುದನ್ನು ತಿಳಿದವರಾಗಿರುವ ನಾವು, ಪುನಃ ಪುನಃ ಅವರ ಬಳಿಗೆ ಹೋಗಿ ಸಮಯವಿರುವಾಗಲೇ ಯೆಹೋವನನ್ನು ಹುಡುಕುವಂತೆ ಅವರನ್ನು ಉತ್ತೇಜಿಸುತ್ತೇವೆ. ಹೀಗೆ ಮಾಡುವ ಮೂಲಕ, ‘ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾದ’ ‘ನಮ್ಮ ದೇವರ ಅತ್ಯಂತಕರುಣೆಯನ್ನು’ ನಾವು ಪ್ರತಿಬಿಂಬಿಸುತ್ತೇವೆ.—2 ಪೇತ್ರ 3:9; ಲೂಕ 1:77, 78.
6. ಯೆಹೋವನ ಸೇವೆಯಲ್ಲಿ ನಮ್ಮನ್ನು ಕಾರ್ಯಮಗ್ನರಾಗಿರಿಸಿಕೊಳ್ಳುವುದು ನಮಗೆ ಹೇಗೆ ಪ್ರಯೋಜನವನ್ನು ತರುತ್ತದೆ?
6 ಸ್ವತಃ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ: ಯೆಹೋವನ ಸೇವೆಯಲ್ಲಿ ನಮ್ಮನ್ನು ಕಾರ್ಯಮಗ್ನರಾಗಿರಿಸಿಕೊಳ್ಳುವುದು ನಮಗೆ ಒಂದು ಸಂರಕ್ಷಣೆಯಾಗಿದೆ. ಇದು, ‘[ಯೆಹೋವನ] ದಿನದ ಪ್ರತ್ಯಕ್ಷತೆಯನ್ನು ಎದುರುನೋಡುಲು’ ಮತ್ತು ಈ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯಿಂದ ಮಲಿನವಾಗುವುದರಿಂದ ದೂರವಿರಲು ಸಹಾಯಮಾಡುತ್ತದೆ. (2 ಪೇತ್ರ 3:11-14; ತೀತ 2:11, 12) ಆದುದರಿಂದ, ಕ್ರೈಸ್ತ ಶುಶ್ರೂಷೆಯಲ್ಲಿ ನಾವು ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲವೆಂದು ತಿಳಿದವರಾಗಿ “ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ” ಇದ್ದು, ‘ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರೋಣ.’—1 ಕೊರಿಂ. 15:58.