ಸಾರಬೇಕಾದ ಸಮಯವು ಇದೇ ಆಗಿದೆ!
1. ಸಾರಬೇಕಾದ ಸಮಯವು ಇದೇ ಆಗಿದೆ ಏಕೆ?
1 “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ.” ಈ ಸಂದೇಶವು, ದೇವದೂತರ ಮಾರ್ಗದರ್ಶನದ ಕೆಳಗೆ “ಸಕಲ ಜನಾಂಗ ಕುಲ ಪ್ರಜೆಗಳವರಿಗೂ” ಘೋಷಿಸಲ್ಪಡುತ್ತಿದೆ. ಯಾಕಾಗಿ? ಯಾಕಂದರೆ, “[ದೇವರು] ನ್ಯಾಯತೀರ್ಪುಮಾಡುವ ಗಳಿಗೆಯು ಬಂದಿದೆ.” ಇಂದು ನಾವು ಆ ‘ನ್ಯಾಯತೀರ್ಪುಮಾಡುವ ಗಳಿಗೆಯಲ್ಲಿ’ ಜೀವಿಸುತ್ತಿದ್ದೇವೆ. ಸದ್ಯದ ಈ ವಿಷಯಗಳ ವ್ಯವಸ್ಥೆಯು ನಾಶಗೊಳಿಸಲ್ಪಡುವಾಗ ಆ ಗಳಿಗೆಯು ತನ್ನ ಪರಾಕಾಷ್ಠೆಯನ್ನು ಮುಟ್ಟುವುದು. ಆದುದರಿಂದ, ಜನರು “ಭೂಲೋಕ ಪರಲೋಕಗಳನ್ನೂ ಸಮುದ್ರವನ್ನೂ ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನಿಗೆ” ಆರಾಧನೆ ಸಲ್ಲಿಸುವುದು ಬಹಳ ಪ್ರಾಮುಖ್ಯ. ಬೇರೆ ಯಾವುದೇ ಕೆಲಸವು “ನಿತ್ಯವಾದ ಶುಭವರ್ತಮಾನ”ವನ್ನು ಘೋಷಿಸುವುದರಷ್ಟು ಪ್ರಾಮುಖ್ಯ ಅಥವಾ ತುರ್ತಿನದ್ದಾಗಿರುವುದಿಲ್ಲ. ಹೌದು, ಸಾರಬೇಕಾದ ಸಮಯವು ಇದೇ ಆಗಿದೆ!—ಪ್ರಕ. 14:6, 7.
2. ಯೆಹೋವನ ಸೇವಕರು ತಾವು ಜೀವಿಸುತ್ತಿರುವಂಥ ಸಮಯವು ತುರ್ತಿನದ್ದಾಗಿದೆ ಎಂಬುದನ್ನು ಗ್ರಹಿಸಿದ್ದಾರೆಂದು ಹೇಗೆ ಪ್ರದರ್ಶಿಸುತ್ತಿದ್ದಾರೆ?
2 ಕಳೆದ ಹತ್ತು ವರುಷಗಳಲ್ಲಿ ಯೆಹೋವನ ಸೇವಕರು ಸುಮಾರು 1,200 ಕೋಟಿ ತಾಸುಗಳನ್ನು ರಾಜ್ಯ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ವಿನಿಯೋಗಿಸಿದ್ದಾರೆ. ಆಧ್ಯಾತ್ಮಿಕ ಕೊಯ್ಲಿನ ಕೆಲಸದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವ ಸಲುವಾಗಿ ಅನೇಕರು ತಮ್ಮ ಜೀವಿತಗಳಲ್ಲಿ ಹೊಂದಾಣಿಕೆಗಳನ್ನು ಮಾಡಿದ್ದಾರೆ. (ಮತ್ತಾ. 9:37, 38) ಉದಾಹರಣೆಗೆ ಕಳೆದ ವರುಷ, ಸರಾಸರಿ 8,50,000 ಪ್ರಚಾರಕರು ಪ್ರತಿ ತಿಂಗಳು ಪಯನೀಯರರಾಗಿ ಸೇವೆಸಲ್ಲಿಸಿದರು. ಇದರರ್ಥ ರೆಗ್ಯುಲರ್ ಪಯನೀಯರರು, ಪ್ರತಿ ತಿಂಗಳು ಸಾರುವ ಕೆಲಸದಲ್ಲಿ ಸರಾಸರಿ 70 ತಾಸುಗಳನ್ನು ಕಳೆದರು. ಮತ್ತು ಆಕ್ಸಿಲಿಯರಿ ಪಯನೀಯರರು 50 ತಾಸುಗಳನ್ನು ವ್ಯಯಿಸಿದರು.
3. ಪಯನೀಯರ್ ಸೇವೆಯನ್ನು ಮಾಡಲು ಅನೇಕವೇಳೆ ಪ್ರಚಾರಕರು ಯಾವ ಹೊಂದಾಣಿಕೆಗಳನ್ನು ಮಾಡಬೇಕಾಗುತ್ತದೆ?
3 ಪಯನೀಯರ್ ಸೇವೆಯನ್ನು ಮಾಡುವ ವಿಧ: ‘ಸಮಯವು ಸಂಕೋಚವಾಗಿದೆ’ ಎಂಬುದನ್ನು ತಿಳಿದಿರುವ ಪಯನೀಯರರು ತಮ್ಮ ಜೀವನವನ್ನು ಸರಳವಾಗಿಡಲು ಪ್ರಯತ್ನಿಸುತ್ತಾರೆ. (1 ಕೊರಿಂ. 7:29, 31) ಅವರು ತಮ್ಮ ಖರ್ಚುವೆಚ್ಚವನ್ನು ಕಡಿಮೆಗೊಳಿಸಲು ಮಾರ್ಗಗಳಿಗಾಗಿ ಹುಡುಕುತ್ತಾರೆ, ಈ ಮೂಲಕ ಅವರು ಐಹಿಕ ಕೆಲಸದಲ್ಲಿ ಕಡಿಮೆ ಸಮಯವನ್ನು ಕಳೆಯಸಾಧ್ಯವಾಗುತ್ತದೆ. ಉದಾಹರಣೆಗೆ, ಕೆಲವರು ದೊಡ್ಡ ಮನೆಯಿಂದ ಒಂದು ಚಿಕ್ಕ ಮನೆಗೆ ಸ್ಥಳಾಂತರಿಸಿದ್ದಾರೆ. ಇನ್ನು ಕೆಲವರು ಅನಾವಶ್ಯಕ ಭೌತಿಕ ಸೊತ್ತುಗಳನ್ನು ತೊರೆದುಬಿಟ್ಟಿದ್ದಾರೆ. (ಮತ್ತಾ. 6:19-21) ಅನೇಕವೇಳೆ, ಅವರು ತಮ್ಮ ವೈಯಕ್ತಿಕ ಬೆನ್ನಟ್ಟುವಿಕೆಗಳಿಗೂ ತಡೆಯನ್ನು ಹಾಕಬೇಕಾಗುತ್ತದೆ. ಇವೆಲ್ಲವನ್ನು ಮಾಡುವ ಉದ್ದೇಶ, ಶುಶ್ರೂಷೆಗೆ ಹೆಚ್ಚಿನ ಸಮಯ ಮತ್ತು ಗಮನವನ್ನು ನೀಡಲಿಕ್ಕಾಗಿಯೇ. (ಎಫೆ. 5:15, 16) ಪಟ್ಟುಹಿಡಿಯುವಿಕೆ, ಸ್ವತ್ಯಾಗದ ಮನೋಭಾವ ಮತ್ತು ಯೆಹೋವನ ಮೇಲೆ ಪ್ರಾರ್ಥನಾಪೂರ್ವಕ ಅವಲಂಬನೆಯ ಮೂಲಕ ಅನೇಕ ಪ್ರಚಾರಕರು ತಮಗೆ ಪಯನೀಯರ್ ಸೇವೆಯನ್ನು ಮಾಡಲು ಸಾಧ್ಯಗೊಳಿಸುವ ಒಂದು ಪ್ರಾಯೋಗಿಕ ಕಾಲತಖ್ತೆಯನ್ನು ತಯಾರಿಸಲು ಶಕ್ತರಾಗಿದ್ದಾರೆ.
4. ಪಯನೀಯರ್ ಸೇವೆಯನ್ನು ಮಾಡುವ ಗುರಿಯತ್ತ ಸಾಗುವಂತೆ ಯಾವ ಪ್ರಾಯೋಗಿಕ ಹೆಜ್ಜೆಗಳು ನಿಮಗೆ ಸಹಾಯಮಾಡಬಲ್ಲವು?
4 ನೀವು ಪಯನೀಯರ್ ಸೇವೆಯನ್ನು ಮಾಡಬಲ್ಲಿರೊ? ಯಶಸ್ವಿಕರ ಪಯನೀಯರರು ಇದನ್ನು ಹೇಗೆ ಮಾಡುತ್ತಿದ್ದಾರೆ ಎಂದು ಅವರನ್ನು ಏಕೆ ಕೇಳಬಾರದು? ಅವರೊಂದಿಗೆ ಕ್ಷೇತ್ರ ಶುಶ್ರೂಷೆಯಲ್ಲಿ ಕೆಲಸಮಾಡಿರಿ ಮತ್ತು ಅವರ ಆನಂದವನ್ನು ನೀವೂ ಅನುಭವಿಸಿರಿ. ಪಯನೀಯರ್ ಸೇವೆಯ ಕುರಿತಾಗಿ ನಮ್ಮ ಪ್ರಕಾಶನಗಳಲ್ಲಿ ಬಂದಿರುವ ಲೇಖನಗಳನ್ನು ಅಧ್ಯಯನಮಾಡಿರಿ. ಮತ್ತು ಮುಂದೆ ನಿಮ್ಮನ್ನು ಪಯನೀಯರ್ ಸೇವೆಯ ಕಡೆಗೆ ನಡೆಸುವ ಮೆಟ್ಟಿಲುಗಳಂತಿರಬಲ್ಲ ಪ್ರಾಯೋಗಿಕ ಗುರಿಗಳನ್ನು ಇಡಿರಿ. ನೀವು ಪಯನೀಯರರಾಗಿ ಸೇವೆಸಲ್ಲಿಸಲು ಸದ್ಯಕ್ಕೆ ನಿಮ್ಮನ್ನು ತಡೆಯುವ ಯಾವುದಾದರೂ ಅಡ್ಡಿಗಳಿದ್ದರೆ, ಅವನ್ನು ಪ್ರಾರ್ಥನೆಯಲ್ಲಿ ಯೆಹೋವನಿಗೆ ತಿಳಿಸಿರಿ ಮತ್ತು ಅವುಗಳನ್ನು ಪರಿಹರಿಸಲು ಆತನಲ್ಲಿ ಸಹಾಯವನ್ನು ಕೇಳಿಕೊಳ್ಳಿರಿ.—ಜ್ಞಾನೋ. 16:3.
5. ಪಯನೀಯರ್ ಸೇವೆಯು ಶುಶ್ರೂಷೆಯಲ್ಲಿ ನಮ್ಮ ಕೌಶಲವನ್ನು ಉತ್ತಮಗೊಳಿಸಲು ನಮಗೆ ಹೇಗೆ ಸಹಾಯಮಾಡುತ್ತದೆ?
5 ಆಶೀರ್ವಾದಗಳು ಮತ್ತು ಆನಂದಗಳು: ಪಯನೀಯರ್ ಸೇವೆಯು, ದೇವರ ವಾಕ್ಯವನ್ನು ಉಪಯೋಗಿಸುವ ನಮ್ಮ ಕೌಶಲವನ್ನು ಉತ್ತಮಗೊಳಿಸುತ್ತದೆ. ಮತ್ತು ಇದು ನಮಗೆ ಹೆಚ್ಚಿನ ಆನಂದವನ್ನು ತರುತ್ತದೆ. ಒಬ್ಬ ಯುವ ಪ್ರಾಯದ ಪಯನೀಯರ್ ಸಹೋದರಿಯು ತಿಳಿಸುವುದು: “ದೇವರ ಸತ್ಯವಾಕ್ಯವನ್ನು ಸರಿಯಾಗಿ ಉಪಯೋಗಿಸಲು ಶಕ್ತರಾಗುವುದು ನಿಜವಾಗಿಯೂ ಒಂದು ಆಶೀರ್ವಾದವೇ ಸರಿ. ಪಯನೀಯರ್ ಸೇವೆಯಲ್ಲಿ ನಾವು ಪದೇಪದೇ ಬೈಬಲನ್ನು ಉಪಯೋಗಿಸುತ್ತೇವೆ. ನಾನೀಗ ಮನೆಮನೆಗೆ ಹೋಗುವಾಗ, ಪ್ರತಿಯೊಬ್ಬ ಮನೆಯವನಿಗೆ ತಕ್ಕದಾಗಿರುವ ವಚನಗಳು ಯಾವುದೆಂದು ಕೂಡಲೆ ಆಲೋಚಿಸಬಲ್ಲೆ.”—2 ತಿಮೊ. 2:15.
6. ಪಯನೀಯರ್ ಸೇವೆಯು ಯಾವ ತರಬೇತಿಯನ್ನು ಒದಗಿಸುತ್ತದೆ?
6 ಪಯನೀಯರ್ ಸೇವೆಯು ನಮ್ಮ ಜೀವನವನ್ನು ಉತ್ತಮಗೊಳಿಸಬಲ್ಲ ಅನೇಕ ಕೌಶಲಗಳನ್ನೂ ಕಲಿಸುತ್ತದೆ. ಅದು ಯುವ ಜನರಿಗೆ, ಅವರು ತಮ್ಮ ಸಮಯವನ್ನು ಹೇಗೆ ಸರಿಯಾಗಿ ಉಪಯೋಗಿಸುವುದು, ಹಣವನ್ನು ಹೇಗೆ ಸರಿಯಾಗಿ ವಿನಿಯೋಗಿಸುವುದು ಮತ್ತು ಜನರೊಂದಿಗೆ ಹೇಗೆ ಯೋಗ್ಯವಾದ ರೀತಿಯಲ್ಲಿ ವ್ಯವಹರಿಸುವುದು ಎಂಬುದನ್ನು ಕಲಿಸಬಲ್ಲದು. ಪಯನೀಯರ್ ಸೇವೆಯ ಮೂಲಕ ಅನೇಕರು ಜೀವನದ ಕುರಿತು ಹೆಚ್ಚು ಆಧ್ಯಾತ್ಮಿಕ ಹೊರನೋಟವನ್ನು ಬೆಳೆಸಿಕೊಳ್ಳುತ್ತಾರೆ. (ಎಫೆ. 4:12, 13) ಮಾತ್ರವಲ್ಲದೆ, ಯೆಹೋವನ ಹಸ್ತವು ತಮ್ಮ ಪರವಾಗಿ ಕೆಲಸಮಾಡುವುದನ್ನು ನೋಡುವ ಸದವಕಾಶ ಅನೇಕವೇಳೆ ಪಯನೀಯರರಿಗಿದೆ.—ಅ. ಕೃ. 11:21; ಫಿಲಿ. 4:11-13.
7. ಯೆಹೋವನ ಸಮೀಪಕ್ಕೆ ಬರುವಂತೆ ಪಯನೀಯರ್ ಸೇವೆಯು ನಮಗೆ ಹೇಗೆ ಸಹಾಯಮಾಡುತ್ತದೆ?
7 ಪಯನೀಯರ್ ಸೇವೆಯಿಂದ ದೊರಕುವ ಅತಿ ದೊಡ್ಡ ಆಶೀರ್ವಾದಗಳಲ್ಲಿ ಪ್ರಾಯಶಃ ಒಂದು ಯಾವುದೆಂದರೆ, ಅದು ನಮಗೆ ಯೆಹೋವನ ಸಮೀಪಕ್ಕೆ ಬರುವಂತೆ ಸಹಾಯಮಾಡುತ್ತದೆ. ಇದು ನಮಗೆ ಎಲ್ಲ ಸಂಕಷ್ಟಗಳನ್ನು ಸಹಿಸಲು ಶಕ್ತರನ್ನಾಗಿ ಮಾಡುತ್ತದೆ. ಕಠಿನ ಪರಿಸ್ಥಿತಿಗಳ ಅವಧಿಯನ್ನು ತಾಳಿಕೊಂಡ ಒಬ್ಬಾಕೆ ಸಹೋದರಿಯು ತಿಳಿಸುವುದು: “ಪಯನೀಯರ್ ಸೇವೆಯ ಮೂಲಕ ಯೆಹೋವನೊಂದಿಗೆ ನಾನು ಬೆಳೆಸಿಕೊಂಡಿರುವ ಆಪ್ತ ಸಂಬಂಧವು ಈ ಎಲ್ಲ ಕಠಿನ ಪರಿಸ್ಥಿತಿಗಳನ್ನು ತಾಳಿಕೊಳ್ಳಲು ನನಗೆ ಸಹಾಯಮಾಡಿತು.” ಅವಳು ಕೂಡಿಸಿದ್ದು: “ನನ್ನ ವಯಸ್ಕ ಜೀವಿತವನ್ನು ಯೆಹೋವನ ಪೂರ್ಣ ಸಮಯದ ಸೇವೆಯಲ್ಲಿ ಕಳೆದಿದ್ದೇನೆ ಎಂಬುದನ್ನು ನೆನಸುವಾಗ ನನಗೆ ತುಂಬ ಸಂತೋಷವಾಗುತ್ತದೆ. ನಾನು ನೆನಸದಂಥ ರೀತಿಗಳಲ್ಲಿ ನನ್ನನ್ನು ಯೆಹೋವನ ಸೇವೆಯಲ್ಲಿ ನೀಡಿಕೊಳ್ಳಲು ಅದು ನನಗೆ ಸಂದರ್ಭವನ್ನು ಒದಗಿಸಿತು.” (ಅ. ಕೃ. 20:35) ಅತಿ ಪ್ರಾಮುಖ್ಯವಾದ ಸಾರುವ ಕೆಲಸದಲ್ಲಿ ನಮ್ಮಿಂದಾದಷ್ಟನ್ನು ಮಾಡುವ ಮೂಲಕ ನಾವು ಸಹ ಅದೇ ರೀತಿಯಲ್ಲಿ ಹೇರಳವಾದ ಆಶೀರ್ವಾದಗಳನ್ನು ಪಡೆಯೋಣ.—ಜ್ಞಾನೋ. 10:22.