ದೈವಿಕ ವಿವೇಕದ ಉತ್ಕೃಷ್ಟ ಮೌಲ್ಯ
1 ಇಂದು ಮಾನವಕುಲವು ಎದುರಿಸುತ್ತಿರುವ ಸಮಸ್ಯೆಗಳನ್ನು ಸುಧಾರಿಸಲು ಸಹಾಯಮಾಡುವುದರ ಮೇಲೆ ಯೆಹೋವನ ಸಾಕ್ಷಿಗಳು ತಮ್ಮ ಪ್ರಯತ್ನಗಳನ್ನು ಹೆಚ್ಚು ನೇರವಾಗಿ ಕೇಂದ್ರೀಕರಿಸಬೇಕು ಎಂಬುದು ಕೆಲವು ಜನರ ಅಭಿಪ್ರಾಯವಾಗಿದೆ. ಇಂಥ ವ್ಯಕ್ತಿಗಳು ನಮ್ಮ ಬೈಬಲ್ ಶೈಕ್ಷಣಿಕ ಕೆಲಸದ ಉತ್ಕೃಷ್ಟ ಮೌಲ್ಯವನ್ನು ನೋಡಲು ತಪ್ಪಿಹೋಗುತ್ತಾರೆ. ಇದು ಅಪೊಸ್ತಲ ಪೌಲನು ಬರೆದಂತೆ ಇದೆ: “ಶಿಲುಬೆಯ [“ಯಾತನಾ ಕಂಬದ,” NW] ವಿಷಯವಾದ ಮಾತು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುಮಾತಾಗಿದೆ, ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ದೇವರ ಶಕ್ತಿಯಾಗಿದೆ.” (1 ಕೊರಿಂ. 1:18) ವಾಸ್ತವದಲ್ಲಿ, ಇಂದು ಭೂಮಿಯ ಮೇಲೆ ನಡೆಯುತ್ತಿರುವ ಅತಿ ಪ್ರಾಮುಖ್ಯ ಕೆಲಸವು ಕ್ರೈಸ್ತ ಶುಶ್ರೂಷೆಯಾಗಿದೆ ಎಂಬುದು ನಮಗೆ ತಿಳಿದದೆ.
2 ಈಗ ಒಂದು ಉತ್ತಮ ಜೀವನ: ಮಾನವಕುಲದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಮನುಷ್ಯರು ಮಾಡಿರುವ ಪ್ರಯತ್ನಗಳು ಅತಿ ಸೀಮಿತ ಪ್ರತಿಫಲಗಳನ್ನು ತಂದಿವೆ. ಕಾನೂನಿನ ಕಾಯಿದೆಯು ಪಾತಕದ ಉಬ್ಬರವನ್ನು ನಿಲ್ಲಿಸಿರುವುದಿಲ್ಲ. ಸಮಾಧಾನ ಒಪ್ಪಂದಗಳು ಮತ್ತು ಶಾಂತಿಪಾಲಕ ಮಿತ್ರಪಡೆಗಳು ಯುದ್ಧಗಳಿಗೆ ಅಂತ್ಯವನ್ನು ತಂದಿರುವುದಿಲ್ಲ. ಸಮಾಜ ಕಲ್ಯಾಣ ಕಾರ್ಯಕ್ರಮಗಳು ಬಡತನವನ್ನು ತೆಗೆದುಹಾಕಲು ತಪ್ಪಿಹೋಗಿವೆ. (ಕೀರ್ತ. 146:3, 4; ಯೆರೆ. 8:9) ಇದಕ್ಕೆ ವ್ಯತಿರಿಕ್ತವಾಗಿ ರಾಜ್ಯದ ಸಂದೇಶವು, ದೇವರಿಗೆ ಸ್ವೀಕೃತವಾದ ಒಂದು ಹೊಸ ವ್ಯಕ್ತಿತ್ವವನ್ನು ಧರಿಸಿಕೊಳ್ಳುವಂತೆ ಲಕ್ಷಾಂತರ ಮಂದಿಗೆ ಸಹಾಯಮಾಡುವುದರ ಮೂಲಕ ಅವರ ಜೀವಿತಗಳನ್ನು ಪರಿವರ್ತಿಸಿದೆ. (ರೋಮಾ. 12:2; ಕೊಲೊ. 3:9, 10) ಹೀಗೆ ಮಾಡುವ ಮೂಲಕ, ಅವರು ಉತ್ತಮವಾದ ಜೀವನ ಮಟ್ಟದಲ್ಲಿ ಈಗಲೇ ಆನಂದಿಸುತ್ತಾರೆ.—1 ತಿಮೊ. 4:8.
3 ಉಜ್ವಲವಾದ ಭವಿಷ್ಯ: ದೈವಿಕ ವಿವೇಕವು ಜೀವನದ ಪಂಥಾಹ್ವಾನಗಳನ್ನು ಎದುರಿಸುವುದರಲ್ಲಿ ನಮಗೆ ಸಹಾಯಮಾಡುವುದರೊಂದಿಗೆ, ಭವಿಷ್ಯಕ್ಕಾಗಿ ಪರಿಣಾಮಕಾರಿಯಾಗಿ ಯೋಜಿಸುವಂತೆ ನಮ್ಮನ್ನು ಶಕ್ತಗೊಳಿಸುತ್ತದೆ. (ಕೀರ್ತ. 119:105) ಪ್ರಸ್ತುತ ವಿಷಯಗಳ ವ್ಯವಸ್ಥೆಯನ್ನು ಸುಧಾರಿಸಲು ಹೋಗುವ ವ್ಯರ್ಥ ಪ್ರಯತ್ನದಿಂದ ಇದು ನಮ್ಮನ್ನು ತಪ್ಪಿಸುತ್ತದೆ. (ಪ್ರಸಂ. 1:15; ರೋಮಾ. 8:20) ಕೇವಲ ಭ್ರಮೆಯಾಗಿರುವ ಗುರಿಗಳನ್ನು ಬೆನ್ನಟ್ಟುವುದರಿಂದ ನಾವು ನಮ್ಮ ಜೀವನವನ್ನು ವ್ಯರ್ಥಗೊಳಿಸುತ್ತಿಲ್ಲ ಎಂಬುದಕ್ಕಾಗಿ ನಾವು ತುಂಬ ಕೃತಜ್ಞರಾಗಿದ್ದೇವೆ! ಬದಲಿಗೆ, ನೀತಿಯು ವಾಸವಾಗಿರುವ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಯೆಹೋವನ ನಿಶ್ಚಿತ ವಾಗ್ದಾನದ ಮೇಲೆ ನಾವು ನಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುತ್ತೇವೆ. ಯೆಹೋವನ ನ್ಯಾಯತೀರ್ಪಿನ ದಿನವು ಬರುವಾಗ, ದೈವಿಕ ವಿವೇಕದ ಮೇಲೆ ಆತುಕೊಂಡವರು ಸರಿಯಾದ ಆಯ್ಕೆಯನ್ನು ಮಾಡಿದರು ಎಂಬುದು ಸುಸ್ಪಷ್ಟವಾಗಿ ತೋರಿಬರುವುದು.—2 ಪೇತ್ರ 3:10-13; ಕೀರ್ತ. 37:34.
4 “ಇಹಲೋಕದ ಜ್ಞಾನ”ದಲ್ಲಿ ಹೂತುಹೋಗಿರುವವರಿಗೆ ದೈವಿಕ ವಿವೇಕವು ಅಪ್ರಾಯೋಗಿಕವಾಗಿರುವುದಾಗಿ ತೋರುವುದಾದರೂ, ವಾಸ್ತವದಲ್ಲಿ ಇದು ಅನುಸರಿಸಲು ಏಕಮಾತ್ರ ಪ್ರಾಯೋಗಿಕ ಮಾರ್ಗವಾಗಿದೆ. (1 ಕೊರಿಂ. 1:21; 2:6-8) ಆದುದರಿಂದ, “ಜ್ಞಾನನಿಧಿಯಾದ ಒಬ್ಬನೇ” ದೇವರಿಂದ ಉಗಮಿಸುವ ಸಂದೇಶವನ್ನು ನಾವು ಲೋಕವಿಡೀ ಘೋಷಿಸುತ್ತಾ ಮುಂದುವರಿಯುತ್ತೇವೆ.—ರೋಮಾ. 16:27.