ಸುವಾರ್ತೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವವರು
1 ದೇವರ ಸುವಾರ್ತೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವವರಾದ ನಾವು ಎಷ್ಟು ಉತ್ತಮ ಸುಯೋಗವನ್ನು ಹೊಂದಿದವರಾಗಿದ್ದೇವೆ! (1 ಥೆಸ. 2:3, 4) ಕೆಲವರು ಈ ಪ್ರಬಲ ಸಂದೇಶವನ್ನು ಅಂಗೀಕರಿಸಲು ನಿರಾಕರಿಸುವುದಾದರೂ, ಹಿತಕರವಾದ ಒಂದು ಪರಿಮಳದ ಕಡೆಗೋ ಎಂಬಂತೆ ಪ್ರಾಮಾಣಿಕ ಹೃದಯದ ಜನರು ಇದರ ಕಡೆಗೆ ಸೆಳೆಯಲ್ಪಡುತ್ತಿದ್ದಾರೆ. (2 ಕೊರಿಂ. 2:14-16) ಯಾರು ಸುವಾರ್ತೆಯನ್ನು ಅಂಗೀಕರಿಸಿ ಅದಕ್ಕೆ ವಿಧೇಯರಾಗುತ್ತಾರೋ ಅವರಿಗೆ ಇದು ರಕ್ಷಣೆಯನ್ನು ಅರ್ಥೈಸುತ್ತದೆ. (ರೋಮಾ. 1:16) ನಮಗೆ ವಹಿಸಿರುವ ಸುವಾರ್ತೆಯ ಜವಾಬ್ದಾರಿಯನ್ನು ನಾವು ಹೇಗೆ ಪೂರೈಸಬೇಕು?
2 ಯೇಸು ಮತ್ತು ಅಪೊಸ್ತಲರು: ಯೇಸು ಸುವಾರ್ತೆಯ ಘೋಷಣೆಗೆ ಪ್ರಥಮ ಸ್ಥಾನವನ್ನು ಕೊಟ್ಟನು. (ಲೂಕ 4:18, 43) ಅವನು ತುಂಬ ಆಯಾಸಗೊಂಡಿದ್ದು ಹಸಿದಿದ್ದಾಗಲೂ, ಜನರ ಕಡೆಗಿನ ಪ್ರೀತಿ ಮತ್ತು ಈ ಸಂದೇಶಕ್ಕಾಗಿದ್ದ ಗಣ್ಯತೆಯು, ಅವನು ಇದನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಅವನನ್ನು ಪ್ರಚೋದಿಸಿತು. (ಮಾರ್ಕ 6:30-34) ಅವನು ತನ್ನ ನಡೆನುಡಿಯ ಮೂಲಕ, ರಾಜ್ಯದ ಸಾರುವಿಕೆಯ ಕೆಲಸದ ಪ್ರಾಮುಖ್ಯತೆಯನ್ನು ತನ್ನ ಶಿಷ್ಯರ ಮನಸ್ಸುಗಳಲ್ಲಿ ಅಚ್ಚೊತ್ತಿದನು.—ಮತ್ತಾ. 28:18-20; ಮಾರ್ಕ 13:10.
3 ಯೇಸುವನ್ನು ಅನುಕರಿಸುತ್ತಾ ಅಪೊಸ್ತಲರು ಸಹ ರಾಜ್ಯದ ಸಂದೇಶವನ್ನು ಹುರುಪಿನಿಂದ ಸಾರಿದರು. ಹೊಡೆಯಲ್ಪಟ್ಟು, ಸಾರುವುದನ್ನು ನಿಲ್ಲಿಸುವಂತೆ ಆಜ್ಞಾಪಿಸಲ್ಪಟ್ಟಾಗಲೂ, ‘ಉಪದೇಶಮಾಡುವುದನ್ನು ಮತ್ತು ಶುಭವರ್ತಮಾನವನ್ನು ಸಾರುವುದನ್ನು’ ಅವರು ಮುಂದುವರಿಸಿದರು. (ಅ. ಕೃ. 5:40-42) ಅಪೊಸ್ತಲ ಪೌಲನು ಈ ಕೆಲಸದಲ್ಲಿ ಬಹಳಷ್ಟು ಶ್ರಮಿಸಿದನು. (1 ಕೊರಿಂ. 15:9, 10; ಕೊಲೊ. 1:29) ಅವನು ಸುವಾರ್ತೆಯನ್ನು ಹಂಚಿಕೊಳ್ಳುವ ಸುಯೋಗವನ್ನು, ತನ್ನ ಜೊತೆ ಮಾನವರಿಗೆ ತೀರಿಸಬೇಕಾಗಿದ್ದ ಸಾಲಕ್ಕೆ ಹೋಲಿಸಿದನು, ಮತ್ತು ಇದನ್ನು ಪೂರೈಸಲಿಕ್ಕಾಗಿ ತನ್ನ ವೈಯಕ್ತಿಕ ಸುಖಸೌಕರ್ಯಗಳನ್ನು ತೊರೆಯಲು ಸಹ ಅವನು ಮನಃಪೂರ್ವಕವಾಗಿ ಸಿದ್ಧನಿದ್ದನು.—ಅ. ಕೃ. 20:24; ರೋಮಾ. 1:14-16.
4 ಇಂದು ನಮ್ಮ ಸುಯೋಗ: ನಮಗೆ ವಹಿಸಿಕೊಡಲ್ಪಟ್ಟಿರುವ ಪವಿತ್ರ ನೇಮಕಕ್ಕಾಗಿರುವ ಗಣ್ಯತೆಯು, ಸಾರುವ ಕೆಲಸದಲ್ಲಿ ನಮ್ಮ ಭಾಗವಹಿಸುವಿಕೆಯನ್ನು ಇನ್ನಷ್ಟು ವಿಸ್ತರಿಸುವ ಮಾರ್ಗಗಳನ್ನು ಹುಡುಕುವಂತೆ ನಮ್ಮನ್ನು ಪ್ರಚೋದಿಸುವುದು. (ರೋಮಾ. 15:15) ಗಾಲಿಕುರ್ಚಿಯಲ್ಲೇ ಇರುವ ಎಡ್ವರ್ಡ್, ಒಂದು ಹೋಟೆಲಿನ ಪ್ರವೇಶದ್ವಾರದಲ್ಲಿ ಕುಳಿತುಕೊಂಡು, ಅಲ್ಲಿ ಉಳಿದುಕೊಂಡಿರುವ ಅತಿಥಿಗಳೊಂದಿಗೆ ತನ್ನ ನಂಬಿಕೆಯ ಕುರಿತು ಮಾತಾಡುತ್ತಿದ್ದನು. ಆದರೂ, ಇನ್ನೂ ಹೆಚ್ಚನ್ನು ಮಾಡುವ ಬಯಕೆಯಿಂದ ಅವನು, ಸಣ್ಣ ಮೋಟಾರ್ ಟ್ರಕ್ಕಿನ ಮೇಲೆ ಒಂದು ಚಿಕ್ಕ ಕಂಪಾರ್ಟ್ಮೆಂಟನ್ನು ಕಟ್ಟಿಸಿದನು, ಮತ್ತು ಈ ವಾಹನದ ಸಹಾಯದಿಂದ ಅವನು ಸಾವಿರಾರು ಕಿಲೊಮೀಟರುಗಳಷ್ಟು ಪ್ರಯಾಣಿಸುತ್ತಾ ಅನೇಕ ವರ್ಷಗಳ ವರೆಗೆ ಪಯನೀಯರ್ ಸೇವೆಯನ್ನು ಮಾಡಿದನು. ಎಡ್ವರ್ಡ್ನಂತೆಯೇ ಇಂದು ಅನೇಕರು ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಹೆಚ್ಚಿನ ಪಾಲನ್ನು ವಹಿಸಲಿಕ್ಕಾಗಿ ತಮ್ಮ ಸನ್ನಿವೇಶಗಳನ್ನು ಹೊಂದಿಸಿಕೊಂಡಿದ್ದಾರೆ.
5 ಇಂದು ನಾವು ಯೇಸುವನ್ನು ಮತ್ತು ಅಪೊಸ್ತಲರನ್ನು ಅನುಕರಿಸುತ್ತಾ, ಯಾವಾಗಲೂ ಸಾರುವ ಕೆಲಸಕ್ಕೆ ನಮ್ಮ ಜೀವಿತದಲ್ಲಿ ಆದ್ಯತೆಯನ್ನು ನೀಡೋಣ. ಹೀಗೆ ಮಾಡುವ ಮೂಲಕ, ಜನರಿಗಾಗಿರುವ ನಮ್ಮ ಪ್ರೀತಿಯನ್ನು ಹಾಗೂ ನಮಗೆ ವಹಿಸಿಕೊಡಲ್ಪಟ್ಟಿರುವ ಸುವಾರ್ತೆಗಾಗಿ ಗಣ್ಯತೆಯನ್ನು ನಾವು ತೋರಿಸುವೆವು.