ಸತ್ಯವು ಹೇಗೆ ನಮ್ಮನ್ನು ಬಿಡುಗಡೆಮಾಡುತ್ತದೆ
1 ಒಂದು ಸಂದರ್ಭದಲ್ಲಿ, ತನ್ನಲ್ಲಿ ನಂಬಿಕೆಯಿಟ್ಟಿದ್ದ ಯೆಹೂದ್ಯರಿಗೆ ಯೇಸು ಹೇಳಿದ್ದು: “ನೀವು . . . ಸತ್ಯವನ್ನು ತಿಳಿದುಕೊಳ್ಳುವಿರಿ; ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು.” (ಯೋಹಾ. 8:31, 32) ಅವನು ಪ್ರಜಾ ಸ್ವಾತಂತ್ರ್ಯಗಳನ್ನು ಮೀರುವ, ಶ್ರೀಮಂತ ಬಡವರೆಂದಿರದೆ, ವಿದ್ಯಾವಂತ ಅವಿದ್ಯಾವಂತರೆಂದಿರದೆ ಎಲ್ಲರಿಗೂ ಲಭ್ಯವಿರುವ ಒಂದು ಬಿಡುಗಡೆಯ ಕುರಿತು ಮಾತನಾಡುತ್ತಿದ್ದನು. ಪಾಪ ಮತ್ತು ಮರಣಗಳ ಹಿಡಿತದಿಂದ ನಮ್ಮನ್ನು ಬಿಡಿಸುವಂಥ ಸತ್ಯದ ಕುರಿತು ಯೇಸು ಬೋಧಿಸಿದನು. ಏಕೆಂದರೆ ಯೇಸು ವಿವರಿಸಿದಂತೆ, “ಪಾಪಮಾಡುವವರೆಲ್ಲರು ಪಾಪಕ್ಕೆ ದಾಸರಾಗಿದ್ದಾರೆ.” (ಯೋಹಾ. 8:34) ಎಲ್ಲಾ ವಿಧೇಯ ಮಾನವರೂ “ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವ” ಆ ಸಮಯಕ್ಕಾಗಿ ನಾವು ಅದೆಷ್ಟು ಹಾತೊರೆಯುತ್ತೇವೆ!—ರೋಮಾ. 8:21.
2 ಯೇಸು ಕ್ರಿಸ್ತನ ಕುರಿತಾದ ಸತ್ಯ ಮತ್ತು ದೇವರ ಚಿತ್ತದ ನೆರವೇರಿಕೆಯಲ್ಲಿ ಅವನು ವಹಿಸುವ ಪಾತ್ರ ನಮಗೆ ಈ ಬಿಡುಗಡೆಯನ್ನು ತರುತ್ತದೆ. ಇದರಲ್ಲಿ ಅವನು ನಮ್ಮ ಪರವಾಗಿ ಕೊಟ್ಟ ಪ್ರಾಯಶ್ಚಿತ್ತ ಯಜ್ಞದ ಪರಿಜ್ಞಾನವು ಒಳಗೂಡಿದೆ. (ರೋಮಾ. 3:24) ಈಗಲೂ ಕೂಡ, ಬೈಬಲ್ ಸತ್ಯವನ್ನು ಸ್ವೀಕರಿಸುವುದು ಮತ್ತು ವಿಧೇಯತೆಯಿಂದ ಅದಕ್ಕೆ ಅಧೀನರಾಗುವುದು, ಭಯ, ನಿರಾಶೆ, ಮತ್ತು ಎಲ್ಲಾ ರೀತಿಯ ಹಾನಿಕರ ಚಾಳಿಗಳಿಂದ ಒಂದಷ್ಟು ಪ್ರಮಾಣದ ಬಿಡುಗಡೆಯನ್ನು ಅನುಭವಿಸಲು ನಮಗೆ ಸಾಧ್ಯಗೊಳಿಸುತ್ತದೆ.
3 ಭಯ ಮತ್ತು ನಿರಾಶೆಯಿಂದ ಬಿಡುಗಡೆ: ಲೋಕ ಪರಿಸ್ಥಿತಿಗಳ ದೆಸೆಯಿಂದ ನಾವು ನಿರಾಶರಾಗಬೇಕಿಲ್ಲ. ಏಕೆಂದರೆ ದುಷ್ಟತನವು ಏಕೆ ಅಸ್ತಿತ್ವದಲ್ಲಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಹಾಗೂ ಇದು ಬಲುಬೇಗನೆ ಭೂಮಿಯಿಂದ ತೆಗೆದುಹಾಕಲ್ಪಡುವುದು ಎಂಬುದು ನಮಗೆ ತಿಳಿದಿದೆ. (ಕೀರ್ತ. 37:10, 11; 2 ತಿಮೊ. 3:1; ಪ್ರಕ. 12:12) ಮಾತ್ರವಲ್ಲದೆ, ಮೃತರ ಸ್ಥಿತಿಯ ಕುರಿತ ಸುಳ್ಳು ಬೋಧನೆಗಳಿಂದಲೂ ಸತ್ಯವು ನಮ್ಮನ್ನು ಬಿಡಿಸುತ್ತದೆ. ಸತ್ತವರು ನಮಗೆ ಹಾನಿಮಾಡಲಾರರು, ಅವರು ನಿತ್ಯ ಯಾತನೆಯನ್ನು ಅನುಭವಿಸುತ್ತಿಲ್ಲ, ಮತ್ತು ದೇವರು ತನ್ನೊಂದಿಗೆ ಸ್ವರ್ಗದಲ್ಲಿ ಜನರು ಜೀವಿಸಬೇಕೆಂಬ ಮಾತ್ರಕ್ಕೆ ಜನರನ್ನು ಮರಣದಲ್ಲಿ ತೆಗೊದಕೊಳ್ಳುವುದಿಲ್ಲ ಎಂಬುದು ನಮಗೆ ತಿಳಿದಿದೆ.—ಪ್ರಸಂ. 9:5; ಅ. ಕೃತ್ಯ. 24:15.
4 ತಮ್ಮ ಮಗುವನ್ನು ಒಂದು ಅಪಘಾತದಲ್ಲಿ ಕಳೆದುಕೊಂಡಿದ್ದ ಒಬ್ಬ ತಂದೆ ತಾಯಿಯನ್ನು ಈ ಸತ್ಯವು ಸಂತೈಸಿತು. “ಪುನರುತ್ಥಾನದ ಮೂಲಕ ನಾವು ಪುನಃ ನಮ್ಮ ಮಗನನ್ನು ನೋಡುವ ವರೆಗೆ, ತುಂಬಲಾರದ ಶೂನ್ಯಭಾವವು ನಮ್ಮ ಜೀವಿತಗಳಲ್ಲಿ ಇರುತ್ತದೆ” ಎಂದು ತಾಯಿ ಹೇಳಿದಳು. “ಆದರೆ ನಮ್ಮ ನೋವು ಕೇವಲ ತಾತ್ಕಾಲಿಕವಾದದ್ದು ಎಂದು ನಮಗೆ ತಿಳಿದಿದೆ.”
5 ಹಾನಿಕರ ಚಾಳಿಗಳಿಂದ ಬಿಡುಗಡೆ: ಬೈಬಲ್ ಸತ್ಯವು ಒಬ್ಬ ವ್ಯಕ್ತಿಯ ಯೋಚನಾಧಾಟಿಯನ್ನು ಮತ್ತು ವ್ಯಕ್ತಿತ್ವವನ್ನು ಪರಿವರ್ತಿಸಬಲ್ಲದು, ಮತ್ತು ಇದು ವರ್ಜಿಸಸಾಧ್ಯವಿರುವ ಸಮಸ್ಯೆಗಳಿಂದ ಬಿಡುಗಡೆಯಲ್ಲಿ ಫಲಿಸುತ್ತದೆ. (ಎಫೆ. 4:20-24) ಯಥಾರ್ಥತೆ ಮತ್ತು ಶ್ರಮಶೀಲತೆಯನ್ನು ಅಭ್ಯಾಸಿಸುವುದು ಬಡತನದ ತೀಕ್ಷ್ಣತೆಯನ್ನು ಕಡಿಮೆಗೊಳಿಸಲು ಸಹಾಯಮಾಡಬಲ್ಲದು. (ಜ್ಞಾನೋ. 13:4) ಸ್ವತ್ಯಾಗದ ಪ್ರೀತಿಯನ್ನು ತೋರಿಸುವುದು ಇತರರೊಂದಿಗಿನ ಸಂಬಂಧಗಳನ್ನು ಉತ್ತಮಗೊಳಿಸುತ್ತದೆ. (ಕೊಲೊ. 3:13, 14) ಕ್ರೈಸ್ತ ತಲೆತನವನ್ನು ಗೌರವಿಸುವುದು ಕೌಟುಂಬಿಕ ಸಂಕಷ್ಟಗಳನ್ನು ಮಿತಗೊಳಿಸುತ್ತದೆ. (ಎಫೆ. 5:33-6:1) ಕುಡಿಕತನ, ಲೈಂಗಿಕ ಅನೈತಿಕತೆ, ಹೊಗೆಸೊಪ್ಪು, ಮತ್ತು ಚಟಹಿಡಿಯಬಲ್ಲ ಅಮಲೌಷಧಗಳಿಂದ ದೂರವಿರುವುದು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಮಾಡುತ್ತದೆ.—ಜ್ಞಾನೋ. 7:21-23; 23:29, 30; 2 ಕೊರಿಂ. 7:1.
6 ಒಬ್ಬ ಯುವಕನಿಗೆ ತನ್ನ ಒಂಭತ್ತು ವರ್ಷಗಳ ಅಮಲೌಷಧದ ದುಶ್ಚಟದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ದಿನ ಬೀದಿ ಸಾಕ್ಷಿಕಾರ್ಯದಲ್ಲಿ ತೊಡಗಿದ್ದ ಒಬ್ಬ ಸಾಕ್ಷಿಯನ್ನು ಈತ ಭೇಟಿಯಾದನು. ಇವನು ಸಾಹಿತ್ಯವನ್ನು ಸ್ವೀಕರಿಸಿದನು, ಮತ್ತು ಅವನನ್ನು ಅವನ ಮನೆಯಲ್ಲಿ ಭೇಟಿಯಾಗಲು ಏರ್ಪಾಡುಗಳನ್ನು ಮಾಡಲಾಯಿತು. ಒಂದು ಬೈಬಲ್ ಅಧ್ಯಯನ ಆರಂಭಿಸಲ್ಪಟ್ಟಿತು. ಎರಡು ತಿಂಗಳಾನಂತರ ಈ ವ್ಯಕ್ತಿ ಅಮಲೌಷಧಗಳನ್ನು ಉಪಯೋಗಿಸುವುದನ್ನು ಪೂರ್ತಿಯಾಗಿ ನಿಲ್ಲಿಸಿಬಿಟ್ಟನು, ಮತ್ತು ಎಂಟು ತಿಂಗಳುಗಳ ಅಧ್ಯಯನದ ನಂತರ ದೀಕ್ಷಾಸ್ನಾನವನ್ನು ಪಡೆದುಕೊಂಡನು. ತನ್ನ ದುಶ್ಚಟದಿಂದ ಪಾರಾದ ಇವನನ್ನು ನೋಡಿ, ಇವನ ಅಣ್ಣ ಮತ್ತು ಅತ್ತಿಗೆ ಕೂಡ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸುವಂತೆ ಪ್ರಚೋದಿಸಲ್ಪಟ್ಟರು.
7 ಇತರರು ಬಿಡುಗಡೆಹೊಂದುವಂತೆ ಸಹಾಯಮಾಡಿರಿ: ಯಾರು ಸುಳ್ಳು ಬೋಧನೆಗಳಿಗೆ ಜೀವನಾದ್ಯಂತ ದಾಸರಾಗಿ ಇದ್ದುಬಂದಿದ್ದಾರೋ ಅವರಿಗೆ ದೇವರ ವಾಕ್ಯವು ಒದಗಿಸುವ ಬಿಡುಗಡೆಯನ್ನು ಗ್ರಹಿಸಿಕೊಳ್ಳಲು ಕಷ್ಟಕರವಾಗಿರಬಹುದು. ಅವರ ಮನಮುಟ್ಟುವಂತೆ ಮಾತಾಡಲು ಬೋಧಕನಿಗೆ ವಿಶೇಷ ರೀತಿಯ ಶ್ರದ್ಧೆ ಮತ್ತು ಒಳ್ಳೆಯ ತಯಾರಿಯ ಆವಶ್ಯಕತೆಯಿದೆ. (2 ತಿಮೊ. 4:2, 5) ‘ಸೆರೆಯವರಿಗೆ ಬಿಡುಗಡೆಯಾಗುವದನ್ನು ಪ್ರಸಿದ್ಧಪಡಿಸುವ’ ಕೆಲಸವನ್ನು ನಿಧಾನಗೊಳಿಸಲು ಇದು ಸಮಯವಲ್ಲ. (ಯೆಶಾ. 61:1) ಕ್ರೈಸ್ತ ಬಿಡುಗಡೆಯು ಅಮೂಲ್ಯವಾಗಿದೆ. ಅದನ್ನು ಪಡೆದುಕೊಳ್ಳುವುದು ನಿತ್ಯಜೀವವನ್ನು ಪಡೆದುಕೊಳ್ಳುವುದೆಂದರ್ಥ.—1 ತಿಮೊ. 4:16.