ಸಂವಾದಮಾಡುವವರಾಗಿರ್ರಿ!
1 ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ನಮ್ಮ ನೇಮಕವನ್ನು ಪೂರೈಸಲಿಕ್ಕಾಗಿ, ನಾವು ಇತರರಿಗೆ ಮಾಹಿತಿಯನ್ನು ತಿಳಿಯಪಡಿಸಬೇಕಾಗಿದೆ. (ಮತ್ತಾ. 24:14; 28:19, 20) ಸ್ನೇಹಿತರೊಂದಿಗೂ ಸಂವಾದಮಾಡುವುದು ಒಂದು ಪಂಥಾಹ್ವಾನವಾಗಿರಬಲ್ಲದು. ಹೀಗಿರುವಾಗ ನಾವು ಸುವಾರ್ತೆಯ ಕುರಿತು ಅಪರಿಚಿತರೊಂದಿಗೆ ಪರಿಣಾಮಕಾರಿಯಾಗಿ ಸಂವಾದಮಾಡಲು ಯಾವುದು ಸಹಾಯಮಾಡುವುದು?
2 ಅಪರಿಚಿತರಾಗಿರುವ ಬದಲು ಸ್ನೇಹಿತರಾಗುವುದು: ನೀವು ಶುಶ್ರೂಷೆಯಲ್ಲಿ ಯಾರನ್ನು ಭೇಟಿಯಾಗುತ್ತೀರೋ ಅವರ ಸ್ಥಾನದಲ್ಲಿ ನಿಮ್ಮನ್ನೇ ಚಿತ್ರಿಸಿಕೊಳ್ಳಲು ಪ್ರಯತ್ನಿಸಿ. ಇಂದಿನ ಲೋಕದಲ್ಲಿ, ಅಪರಿಚಿತರನ್ನು ಕಂಡರೆ ಕೆಲವರು ಏಕೆ ಸಂಶಯಪಡುತ್ತಾರೆ ಅಥವಾ ಗಾಬರಿಗೊಳ್ಳುತ್ತಾರೆ ಎಂಬುದು ಅರ್ಥಮಾಡಿಕೊಳ್ಳಬಹುದಾದ ವಿಷಯವೇ. ಇದು ಸಂವಾದವನ್ನು ಕುಂಠಿತಗೊಳಿಸಬಹುದು. ನೀವು ಯಾರನ್ನು ಭೇಟಿಯಾಗುತ್ತೀರೋ ಅವರ ಆರಂಭದ ಹಿಂಜರಿಕೆಯನ್ನು ನೀವು ಹೇಗೆ ಹೋಗಲಾಡಿಸಬಲ್ಲಿರಿ? ನಮ್ಮ ಬಾಯಿಂದ ಒಂದು ಮಾತು ಕೂಡ ಹೊರಡುವ ಮೊದಲು, ನಾವು ಸಂವಾದಮಾಡುವ ಒಂದು ವಿಧವು ನಮ್ಮ ಸಭ್ಯವಾದ ವೈಯಕ್ತಿಕ ತೋರಿಕೆಯ ಮೂಲಕವೇ ಆಗಿದೆ. ನಮ್ಮ ಸುವ್ಯವಸ್ಥಿತ ಉಡುಪು ಮತ್ತು ಗಣ್ಯಭಾವದ ವರ್ತನೆಯು, ಅವರ ಭಯವನ್ನು ಹೋಗಲಾಡಿಸಲು ಸಹಾಯಮಾಡುತ್ತದೆ.—1 ತಿಮೊ. 2:9, 10.
3 ಸಂವಾದ ಮಾಡಲಿಕ್ಕಾಗಿರುವ ಮತ್ತೊಂದು ಸಹಾಯಕವು, ಹಾಯಾದ, ಸ್ನೇಹಭಾವದ ವರ್ತನೆಯೇ ಆಗಿದೆ. ಇದು ಇತರರು ಆರಾಮವಾಗಿರುವಂತೆ ಸಹಾಯಮಾಡುತ್ತದೆ ಮತ್ತು ಅವರು ಇನ್ನಷ್ಟು ಆಸಕ್ತಿಯಿಂದ ಕಿವಿಗೊಡುವಂತೆ ಮಾಡುತ್ತದೆ. ಈ ವಿಷಯದಲ್ಲಿ ಒಳ್ಳೆಯ ತಯಾರಿಯ ಆವಶ್ಯಕತೆಯಿದೆ. ನಾವು ಏನು ಹೇಳಲಿಕ್ಕಿದ್ದೇವೋ ಅದು ನಮ್ಮ ಮನಸ್ಸಿನಲ್ಲಿ ಸ್ಪಷ್ಟವಾಗಿರುವಾಗ, ನಾವು ಹೆಚ್ಚು ಹೆದರುವುದಿಲ್ಲ. ಮತ್ತು ನಮ್ಮ ಈ ಶಾಂತಿದಾಯಕ ಮನಃಪ್ರವೃತ್ತಿಯು ಇತರರನ್ನು ನಮ್ಮ ಸಂದೇಶದ ಕಡೆಗೆ ಸೆಳೆಯುವುದು. ಒಬ್ಬ ಸ್ತ್ರೀಯು ಸಾಕ್ಷಿಯೊಬ್ಬಳ ಭೇಟಿಯ ಕುರಿತು ಈ ರೀತಿ ಹೇಳಿದಳು: “ಇದುವರೆಗೂ ನನ್ನ ಮನಸ್ಸಿನಲ್ಲಿರುವ ಸಂಗತಿಯು, ಅವಳ ಹಸನ್ಮುಖದಲ್ಲಿದ್ದ ಶಾಂತಿಯೇ. ಈ ಕಾರಣದಿಂದ ನನ್ನ ಕುತೂಹಲವು ಕೆರಳಿಸಲ್ಪಟ್ಟಿತು.” ಈ ವಿಷಯವು ಆ ಸ್ತ್ರೀಯು ಸುವಾರ್ತೆಗೆ ಕಿವಿಗೊಡುವಂತೆ ದಾರಿಯನ್ನು ತೆರೆಯಿತು.
4 ಆಕರ್ಷಿಸುವಂಥ ಗುಣಗಳು: ನಾವು ಇತರರ ವಿಷಯದಲ್ಲಿ ಪ್ರಾಮಾಣಿಕವಾದ ಆಸಕ್ತಿಯನ್ನು ತೋರಿಸುವ ಅಗತ್ಯವಿದೆ. (ಫಿಲಿ. 2:4) ನಾವು ಇದನ್ನು ಮಾಡುವ ಒಂದು ವಿಧವು, ಸಂಭಾಷಣೆಯಲ್ಲಿ ನಾವೇ ಮಾತಾಡುತ್ತಾ ಇರದಂತೆ ಜಾಗರೂಕತೆ ವಹಿಸುವ ಮೂಲಕವೇ ಆಗಿದೆ. ಎಷ್ಟೆಂದರೂ ಸಂವಾದದಲ್ಲಿ ಕಿವಿಗೊಡುವುದೂ ಒಳಗೂಡಿದೆಯಲ್ಲವೇ. ನಮ್ಮ ಕೇಳುಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತೆ ನಾವು ಪ್ರೋತ್ಸಾಹಿಸುವಾಗ ಮತ್ತು ಅವರ ಹೇಳಿಕೆಗಳಿಗೆ ನಾವು ಆಸಕ್ತಿಯಿಂದ ಕಿವಿಗೊಡುವಾಗ, ನಾವು ಅವರ ಕುರಿತು ಕಾಳಜಿ ವಹಿಸುತ್ತೇವೆ ಎಂಬುದನ್ನು ಅವರು ಗ್ರಹಿಸುವರು. ಆದುದರಿಂದ ನಿಮ್ಮ ಕೇಳುಗರು ಮಾತಾಡುತ್ತಿರುವಾಗ, ಪುನಃ ನೀವು ತಯಾರಿಸಿರುವ ನಿರೂಪಣೆಗೇ ಹಿಂದಿರುಗಲು ಆತುರಪಡಬೇಡಿರಿ. ನಿಜವಾಗಿಯೂ ಅವರನ್ನು ಶ್ಲಾಘಿಸಲು ಸಾಧ್ಯವಿರುವುದಾದರೆ ಹಾಗೆ ಮಾಡಿರಿ ಮತ್ತು ಅವರ ಹೇಳಿಕೆಗಳಿಗೆ ತಕ್ಕಂತೆ ನಿಮ್ಮ ವಿಷಯವನ್ನು ಹೊಂದಿಸಿಕೊಳ್ಳಿರಿ. ಅವರ ಹೇಳಿಕೆಗಳು ಅವರ ಮನಸ್ಸಿನಲ್ಲಿರುವ ಒಂದು ವಿಷಯವನ್ನು ವ್ಯಕ್ತಪಡಿಸುವುದಾದರೆ, ಆ ಚಿಂತೆಗಳನ್ನು ಸಂಬೋಧಿಸುವಂಥ ರೀತಿಯಲ್ಲಿ ನಿಮ್ಮ ನಿರೂಪಣೆಯನ್ನು ಅಳವಡಿಸಿಕೊಳ್ಳಿರಿ.
5 ವಿನಯಶೀಲತೆ ಮತ್ತು ದೀನಭಾವವು ಸಂವಾದವು ಸುಗಮವಾಗಿ ಸಾಗುವಂತೆ ಮಾಡುತ್ತದೆ. (ಜ್ಞಾನೋ. 11:2; ಅ. ಕೃ. 20:19) ಯೇಸು “ಸಾತ್ವಿಕನೂ ದೀನ ಮನಸ್ಸುಳ್ಳವನೂ” ಆಗಿದ್ದುದರಿಂದ ಜನರು ಅವನತ್ತ ಸೆಳೆಯಲ್ಪಟ್ಟರು. (ಮತ್ತಾ. 11:29) ಇನ್ನೊಂದು ಕಡೆಯಲ್ಲಿ, ಸ್ವಪ್ರಾಮುಖ್ಯ ಮನೋಭಾವವು ಜನರನ್ನು ದೂರ ಸರಿಸುತ್ತದೆ. ಆದುದರಿಂದ, ನಮ್ಮ ಬಳಿ ಸತ್ಯವಿದೆ ಎಂಬ ದೃಢನಿಶ್ಚಿತತೆ ನಮಗಿರುವುದಾದರೂ, ದಬಾಯಿಸುವಂಥ ರೀತಿಯಲ್ಲಿ ಮಾತಾಡುವುದನ್ನು ನಾವು ವಿವೇಕಪ್ರದವಾಗಿ ದೂರವಿಡುತ್ತೇವೆ.
6 ಆ ವ್ಯಕ್ತಿಯ ಹೇಳಿಕೆಗಳು ಬೈಬಲ್ ಬೋಧನೆಗೆ ಹೊಂದಿಕೆಯಲ್ಲಿರದಂಥ ನಂಬಿಕೆಗಳನ್ನು ವ್ಯಕ್ತಪಡಿಸುವುದಾದರೆ ಆಗೇನು? ಅವನನ್ನು ತಿದ್ದುವ ಹೊಣೆಗಾರಿಕೆ ನಮಗಿದೆಯೋ? ಹೌದು, ಆದರೆ ಕಾಲಕ್ರಮೇಣವಾಗಿ. ಇದನ್ನು ನಾವು ಮೊತ್ತಮೊದಲ ಭೇಟಿಯಲ್ಲೇ ಮಾಡಲು ಪ್ರಯತ್ನಿಸುವ ಆವಶ್ಯಕತೆಯಿಲ್ಲ. ಅನೇಕವೇಳೆ ನಮ್ಮ ಕೇಳುಗನು ಅಂಗೀಕರಿಸಲು ಹೆಚ್ಚು ಕಷ್ಟಕರವಾಗಿ ಕಂಡುಕೊಳ್ಳುವಂಥ ಬೈಬಲ್ ಬೋಧನೆಗಳನ್ನು ಅವನೊಂದಿಗೆ ಹಂಚಿಕೊಳ್ಳುವ ಮೊದಲು, ಪರಸ್ಪರ ಒಪ್ಪುವಂಥ ವಿಷಯಗಳ ಕುರಿತು ಮಾತಾಡುವುದು ಪ್ರಯೋಜನದಾಯಕವಾಗಿರುವುದು. ಇದು ತಾಳ್ಮೆ ಮತ್ತು ಸಮಯೋಚಿತ ಜಾಣ್ಮೆಯನ್ನು ಅವಶ್ಯಪಡಿಸುತ್ತದೆ. ಪೌಲನು ಅರಿಯೊಪಾಗದ ಸಭೆಯವರಿಗೆ ಸಾಕ್ಷಿ ನೀಡುತ್ತಿದ್ದಾಗ ಈ ವಿಷಯದಲ್ಲಿ ಒಂದು ಉತ್ತಮ ಮಾದರಿಯನ್ನು ಇಟ್ಟನು.—ಅ. ಕೃ. 17:18, 22-31.
7 ಎಲ್ಲಕ್ಕಿಂತಲೂ ಮಿಗಿಲಾಗಿ, ನಿಸ್ವಾರ್ಥ ಪ್ರೀತಿಯು ನಾವು ಪರಿಣಾಮಕಾರಿ ಸಂವಾದಕರಾಗಿರಲು ನಮಗೆ ಸಹಾಯಮಾಡುತ್ತದೆ. ಯೇಸುವಿನಂತೆ ನಾವು, “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ” ಹೋಗಿರುವ ಜನರ ವಿಷಯದಲ್ಲಿ ಕನಿಕರವುಳ್ಳವರಾಗಿರಬೇಕು. (ಮತ್ತಾ. 9:36) ಇದು ನಾವು ಅವರಿಗೆ ಸುವಾರ್ತೆಯನ್ನು ಕೊಂಡೊಯ್ಯುವಂತೆ ಮತ್ತು ಜೀವಕ್ಕೆ ನಡೆಸುವ ಮಾರ್ಗವನ್ನು ಹಿಡಿಯಲು ಅವರಿಗೆ ಸಹಾಯಮಾಡುವಂತೆ ನಮ್ಮನ್ನು ಪ್ರಚೋದಿಸುತ್ತದೆ. ನಮ್ಮದು ಪ್ರೀತಿಯ ಸಂದೇಶವಾಗಿದೆ; ಆದುದರಿಂದ ನಾವದನ್ನು ಪ್ರೀತಿಯಿಂದ ಹೇಳುತ್ತಿರೋಣ. ಹೀಗೆ ಮಾಡುವ ಮೂಲಕ, ನಾವು ವಿಶ್ವದಲ್ಲೇ ಪ್ರಪ್ರಧಾನ ಸಂವಾದಕರಾಗಿರುವ ಯೆಹೋವ ದೇವರನ್ನು ಮತ್ತು ಯೇಸು ಕ್ರಿಸ್ತನನ್ನು ಅನುಕರಿಸುತ್ತೇವೆ.