ರಾಜ್ಯ ಸಾರುವಿಕೆಯು ಜೀವಗಳನ್ನು ರಕ್ಷಿಸಲು ಸಹಾಯಮಾಡುತ್ತದೆ!
1 ಈ ಸಮಯದಲ್ಲಿ ಲೋಕದಲ್ಲಿ ನಡೆಸಲ್ಪಡುತ್ತಿರುವ ಅತಿ ಪ್ರಾಮುಖ್ಯವಾದ ಕೆಲಸ ಅದಾಗಿದೆ. ಯೆಹೋವ ದೇವರು, ಯೇಸು ಕ್ರಿಸ್ತನು ಮತ್ತು ಅಸಂಖ್ಯಾತ ದೇವದೂತರು ತಮ್ಮ ಗಮನವನ್ನು ಅದರ ಮೇಲೆ ಕೇಂದ್ರೀಕರಿಸಿದ್ದಾರೆ. ಅದು ಯಾವ ಕೆಲಸ, ಮತ್ತು ಅದೇಕೆ ಆವಶ್ಯಕವಾದದ್ದಾಗಿದೆ? ಅದು ರಾಜ್ಯ ಸಾರುವಿಕೆಯಾಗಿದೆ, ಮತ್ತು ಅದು ಜೀವಗಳನ್ನು ರಕ್ಷಿಸಲು ಸಹಾಯಮಾಡುತ್ತದೆ!—ರೋಮಾ. 1:16; 10:13, 14.
2 ನಮ್ಮ ಸುತ್ತಲಿರುವ ಜಗತ್ತನ್ನು ಸುಧಾರಿಸುವುದರಲ್ಲಿ ನಾವು ಪಾಲ್ಗೊಳ್ಳುವುದಾದರೆ, ಅದರಿಂದ ಇತರರಿಗೆ ಹೆಚ್ಚು ಸಹಾಯವಾದೀತು ಎಂದು ಕೆಲವರಿಗೆ ಅನಿಸುತ್ತದೆ. ಅನೇಕರು ಶಾಂತಿಯನ್ನು ಸಾಧಿಸುವ, ರೋಗಗಳನ್ನು ವಾಸಿಮಾಡುವ, ಅಥವಾ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಯತ್ನಗಳಲ್ಲಿ ಸಂಪೂರ್ಣವಾಗಿ ಮಗ್ನರಾಗಿದ್ದಾರೆ. ಆದರೆ ಜನರಿಗೆ ಯಾವ ರೀತಿಯ ಸಹಾಯ ಅತಿ ಉತ್ತಮವಾಗಿರುವುದು?
3 ಅತಿ ಶ್ರೇಷ್ಠವಾದ ಕೆಲಸ: ರಾಜ್ಯ ಸಂದೇಶವು ಮಾತ್ರ, ಜೀವನದ ಉದ್ದೇಶ, ಮಾನವ ಕಷ್ಟಾನುಭವಗಳಿಗೆ ಕಾರಣ ಮತ್ತು ಭವಿಷ್ಯದ ಕುರಿತಾದ ಏಕಮಾತ್ರ ಭರವಸಾರ್ಹ ನಿರೀಕ್ಷೆಯನ್ನು ವಿವರಿಸುತ್ತದೆ. ಸುವಾರ್ತೆಯು, ಜನರು ಯೆಹೋವನ ಸ್ನೇಹಿತರಾಗುವುದನ್ನು ಮತ್ತು ಹೀಗೆ “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿ”ಯನ್ನು ಪಡೆದುಕೊಳ್ಳುವುದನ್ನು ಸಾಧ್ಯಮಾಡುತ್ತದೆ. (ಫಿಲಿ. 4:7) ಕೇವಲ ರಾಜ್ಯ ಸಂದೇಶವು, ಜೀವಿತದ ಸಮಸ್ಯೆಗಳನ್ನು ಈಗ ಯಶಸ್ವಿಕರವಾಗಿ ನಿಭಾಯಿಸಿಕೊಂಡು ಹೋಗುವಂತೆ ಜನರಿಗೆ ಸಹಾಯಮಾಡುವ ಪ್ರಾಯೋಗಿಕ ಮಾರ್ಗದರ್ಶನವನ್ನು ಒದಗಿಸುತ್ತದೆ ಮತ್ತು ಭವಿಷ್ಯದಲ್ಲಿ ಈ ದುಷ್ಟ ಲೋಕವು ನಾಶಗೊಳಿಸಲ್ಪಡುವಾಗ ಹೇಗೆ ಜೀವಂತವಾಗಿ ಉಳಿಯುವುದು ಎಂಬುದನ್ನು ವಿವರಿಸುತ್ತದೆ. (1 ಯೋಹಾ. 2:17) ನಾವು ರಾಜ್ಯ ಸಾರುವಿಕೆಗೋಸ್ಕರ ಮಾಡುವ ಎಲ್ಲ ಪ್ರಯತ್ನಗಳು ಸಾರ್ಥಕವಲ್ಲವೋ?
4 ದೃಷ್ಟಾಂತಕ್ಕಾಗಿ: ಒಂದು ಅಣೆಕಟ್ಟು ಶೀಘ್ರದಲ್ಲೇ ಒಡೆದುಹೋಗಲಿದೆ ಎಂದಿಟ್ಟುಕೊಳ್ಳಿ. ಈ ಅಪಾಯದ ಅರಿವಿಲ್ಲದೇ ನಿದ್ರಿಸುತ್ತಿರುವ ಹಳ್ಳಿಗರಿಗೆ ಸಹಾಯಮಾಡಬಹುದಾದ ಅತ್ಯುತ್ತಮವಾದ ವಿಧಾನವು ಯಾವುದಾಗಿರುವುದು? ದುರ್ಬಲಗೊಳ್ಳುತ್ತಿರುವ ಅಣೆಕಟ್ಟಿನ ಆಚೆಬದಿಯಿಂದ ನೀರನ್ನು ಮೊಗೆದು ಹಾಕುವುದೋ? ಅಪಾಯಕ್ಕೊಳಗಾಗಿರುವ ಹಳ್ಳಿಯನ್ನು ಅಂದಗೊಳಿಸುವುದೋ? ಇಲ್ಲ! ಬದಲಾಗಿ, ಹಳ್ಳಿಗರು ಎಚ್ಚತ್ತುಕೊಳ್ಳುವಂತೆ ಮಾಡಿ, ಅವರಿಗೆ ಆಗಲಿರುವ ದುರಂತದ ಕುರಿತು ಎಚ್ಚರಿಸಿ, ತಪ್ಪಿಸಿಕೊಳ್ಳುವಂತೆ ಸಹಾಯಮಾಡಬೇಕು! ಇಂದು ಆತ್ಮಿಕ ನಿದ್ರಾವಸ್ಥೆಯಲ್ಲಿರುವವರು ಮರಣದ ಅಪಾಯದಲ್ಲಿದ್ದಾರೆ. (ಲೂಕ 21:34-36) ಈ ವಿಷಯಗಳ ವ್ಯವಸ್ಥೆಯು ಶೀಘ್ರವೇ ಗತಿಸಿಹೋಗಲಿರುವುದರಿಂದ, ಅತ್ಯಂತ ತುರ್ತಿನ ಭಾವನೆಯೊಂದಿಗೆ ನಮ್ಮಿಂದ ಸಾಧ್ಯವಿರುವವರೆಲ್ಲರಿಗೂ ಸಾರಲು ನಾವು ಪ್ರಯತ್ನಿಸೋಣ!—2 ತಿಮೊ. 4:2; 2 ಪೇತ್ರ 3:11, 12.
5 ಈ ಕೆಲಸವನ್ನು ಪಟ್ಟುಹಿಡಿದು ಮಾಡಿರಿ: ಇನ್ನೂ ಹೆಚ್ಚಿನ ಯಥಾರ್ಥ ಮನಸ್ಸುಳ್ಳ ಜನರಿಗೆ ಸುವಾರ್ತೆಯನ್ನು, ಅವರ ಮನೆಗಳಲ್ಲಿ, ಬೀದಿ ಬದಿಯಲ್ಲಿ, ಟೆಲಿಫೋನಿನ ಮೂಲಕ, ಮತ್ತು ಅನೌಪಚಾರಿಕವಾಗಿ ತಲಪಿಸಲು ಹೆಚ್ಚಿನ ಅವಕಾಶಗಳಿಗಾಗಿ ಹುಡುಕೋಣ. ನಾವು ಮಾಡಸಾಧ್ಯವಿರುವಂಥ ಅತಿ ಪ್ರಾಮುಖ್ಯವಾದ ಕೆಲಸವು ಯೆಹೋವನು ಕೊಟ್ಟಿರುವ ಈ ಕೆಲಸವಾಗಿದೆ. ನಾವು ಇದನ್ನು ಹುರುಪಿನಿಂದ ಮಾಡುವುದಾದರೆ, ನಾವು ‘ನಮ್ಮನ್ನೂ ನಮ್ಮ ಉಪದೇಶ ಕೇಳುವವರನ್ನೂ ರಕ್ಷಿಸುವೆವು.’—1 ತಿಮೊ. 4:16.