ಪ್ರೀತಿಯು ಸಾರುವಂತೆ ನಮ್ಮನ್ನು ಪ್ರಚೋದಿಸುತ್ತದೆ
1 ಯೆಹೋವನ ಸಾಕ್ಷಿಗಳೋಪಾದಿ ರಾಜ್ಯದ ಸಂದೇಶವನ್ನು ಹುರುಪಿನಿಂದ ಸಾರುವುದರಲ್ಲಿ ನಾವು ತುಂಬ ಪ್ರಸಿದ್ಧರು. (ಮತ್ತಾ. 24:14) ಲೋಕವ್ಯಾಪಕವಾಗಿ ಅರುವತ್ತು ಲಕ್ಷಕ್ಕಿಂತಲೂ ಹೆಚ್ಚಿನವರು ಈ ಕೆಲಸದಲ್ಲಿ ಸಕ್ರಿಯರಾಗಿದ್ದಾರೆ; ಸಾರುವುದರಲ್ಲಿ ಹೊಸಬರು ನಮ್ಮನ್ನು ಜೊತೆಗೂಡುವಾಗ ಈ ಸಂಖ್ಯೆಗೆ ಕೂಡಿಸಲ್ಪಡುತ್ತಾರೆ. ಹೀಗೆ, ಈ ಕೆಲಸದಲ್ಲಿ ಭಾಗವಹಿಸುವವರನ್ನು ಮಾತ್ರ ಆ ಸಂಖ್ಯೆಗೆ ಸೇರಿಸಲಾಗುತ್ತದೆ.
2 ಇಂಥ ಪಂಥಾಹ್ವಾನಕಾರಿ ನೇಮಕವನ್ನು ಇಷ್ಟಪೂರ್ವಕವಾಗಿ ಮಾಡಲು ನಮ್ಮನ್ನು ಯಾವುದು ಪ್ರಚೋದಿಸುತ್ತದೆ? ನಾವು ಯಾರಿಂದಲೂ ಒತ್ತಾಯಿಸಲ್ಪಟ್ಟಿಲ್ಲ, ಪ್ರಾಪಂಚಿಕ ಲಾಭದಿಂದ ಆಕರ್ಷಿಸಲ್ಪಟ್ಟಿಲ್ಲ, ಅಥವಾ ನಮಗೆ ವಿಶೇಷ ಮನ್ನಣೆಯೇನೂ ನೀಡಲ್ಪಟ್ಟಿಲ್ಲ. ಆರಂಭದಲ್ಲಿ ನಮ್ಮಲ್ಲಿ ಅನೇಕರು ಹಿಂಜರಿದೆವು, ಯಾಕೆಂದರೆ ನಾವು ಅನರ್ಹರು ಎಂಬ ಅನಿಸಿಕೆ ನಮ್ಮಲ್ಲಿತ್ತು ಮತ್ತು ಸಾಮಾನ್ಯವಾಗಿ ಸಾರ್ವಜನಿಕರ ಪ್ರತಿಕ್ರಿಯೆಯು ನಕಾರಾತ್ಮಕವಾಗಿರುತ್ತಿತ್ತು. (ಮತ್ತಾ. 24:9) ಈ ಕೆಲಸವನ್ನು ಮಾಡಲು ನಮ್ಮನ್ನು ಯಾವುದು ಪ್ರಚೋದಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಲ್ಲಿ ಹೆಚ್ಚಿನ ಪ್ರೇಕ್ಷಕರು ಸೋತುಹೋಗಿದ್ದಾರೆ. ನಾವು ಪಟ್ಟುಹಿಡಿದು ಮುಂದುವರಿಯಲು ಯಾವುದೋ ಬಲವಾದ ಕಾರಣವಿರಲೇಬೇಕು.
3 ಪ್ರೀತಿಯ ಶಕ್ತಿ: ನಾವು ‘ಯೆಹೋವನನ್ನು ಪೂರ್ಣಹೃದಯ, ಪೂರ್ಣಪ್ರಾಣ, ಪೂರ್ಣಬುದ್ಧಿ ಮತ್ತು ಪೂರ್ಣಶಕ್ತಿಯಿಂದ ಪ್ರೀತಿಸಬೇಕು’ ಎಂದು ಯೇಸು ಹೇಳಿದಾಗ, ಎಲ್ಲದ್ದಕ್ಕಿಂತಲೂ ಶ್ರೇಷ್ಠವಾದ ಆಜ್ಞೆಯನ್ನು ಅವನು ತಿಳಿಸಿದನು. (ಮಾರ್ಕ 12:30) ಯೆಹೋವನಿಗಾಗಿರುವ ನಮ್ಮ ಪ್ರೀತಿಯು, ಆತನು ಯಾರು ಹಾಗೂ ಏನಾಗಿದ್ದಾನೊ ಅದಕ್ಕಾಗಿರುವ ಗಾಢವಾದ ಗಣ್ಯತೆಯ ಭಾವನೆಗಳಲ್ಲಿ ಬೇರೂರಿದೆ. ಆತನು ಪರಮಾಧಿಕಾರಿಯೂ, ಎಲ್ಲವನ್ನು ಸೃಷ್ಟಿಸಿದಾತನೂ ಆಗಿದ್ದು, ‘ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನು’ ಆಗಿದ್ದಾನೆ. (ಪ್ರಕ. 4:11) ಆತನ ಆಶ್ಚರ್ಯಕರ ಗುಣಗಳು ಹೋಲಿಕೆಗೆ ಮೀರಿದವುಗಳಾಗಿವೆ.—ವಿಮೋ. 34:6, 7.
4 ನಾವು ಯೆಹೋವನನ್ನು ತಿಳಿದುಕೊಂಡು, ಆತನನ್ನು ಪ್ರೀತಿಸುವುದರಿಂದ ನಮ್ಮ ಬೆಳಕನ್ನು ಜನರ ಮುಂದೆ ಪ್ರಕಾಶಿಸುವಂತೆ ನಾವು ಪ್ರಚೋದಿಸಲ್ಪಡುತ್ತೇವೆ. (ಮತ್ತಾ. 5:16) ನಾವು ಆತನನ್ನು ಬಹಿರಂಗವಾಗಿ ಸ್ತುತಿಸುವಾಗ, ಆತನ ಅದ್ಭುತ ಕಾರ್ಯಗಳ ಬಗ್ಗೆ ಮಾತಾಡುವಾಗ ಹಾಗೂ ಆತನ ರಾಜ್ಯದ ಸಂದೇಶವನ್ನು ಹಬ್ಬಿಸುವಾಗ ನಮ್ಮ ಬೆಳಕು ಪ್ರಕಾಶಿಸುತ್ತದೆ. ಆಕಾಶಮಧ್ಯದಲ್ಲಿರುವ ದೇವದೂತನಂತೆ, ಸಾರಿಹೇಳುವುದಕ್ಕೆ “ಸಕಲ ಜನಾಂಗ ಕುಲ ಪ್ರಜೆಗಳವರಿಗೂ ಸಕಲ ಭಾಷೆಗಳನ್ನಾಡುವವರಿಗೂ . . . ನಿತ್ಯವಾದ ಶುಭವರ್ತಮಾನವು” ನಮ್ಮ ಬಳಿ ಇದೆ. (ಪ್ರಕ. 14:6) ನಮ್ಮ ಲೋಕವ್ಯಾಪಕ ಸಾರುವ ಕೆಲಸದ ಹಿಂದಿರುವ ಶಕ್ತಿಯು ಪ್ರೀತಿಯಾಗಿದೆ.
5 ಲೋಕದ ದೃಷ್ಟಿಯಲ್ಲಿ ನಮ್ಮ ಸಾರುವ ಕೆಲಸವು ಅಸಡ್ಡೆಮಾಡಬೇಕಾದ “ಹುಚ್ಚುಮಾತಾಗಿದೆ.” (1 ಕೊರಿಂ. 1:18) ನಮ್ಮ ಕೆಲಸವನ್ನು ನಿಗ್ರಹಿಸಲು ವ್ಯಾಪಕವಾದ ಪ್ರಯತ್ನಗಳು ಮಾಡಲ್ಪಟ್ಟಿವೆ. ಆದರೆ ನಮ್ಮ ನಿಷ್ಠಾವಂತ ಪ್ರೀತಿಯು, ನಾವು ಅಪೊಸ್ತಲರಂತೆಯೇ ಘೋಷಿಸುವಂತೆ ನಮ್ಮನ್ನು ಬಲಪಡಿಸಿದೆ: “ನಾವಂತೂ ಕಂಡು ಕೇಳಿದ್ದನ್ನು ಹೇಳದೆ ಇರಲಾರೆವು.” ನಾವು “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” (ಅ. ಕೃ. 4:20; 5:29) ವಿರೋಧದ ಮಧ್ಯೆಯೂ ಲೋಕದ ಎಲ್ಲಾ ಭಾಗಗಳಲ್ಲಿ ಸಾರುವ ಕೆಲಸವು ವಿಸ್ತಾರಗೊಳ್ಳುತ್ತಾ ಮುಂದುವರಿಯುತ್ತಿದೆ.
6 ಯೆಹೋವನಿಗಾಗಿರುವ ನಮ್ಮ ಪ್ರೀತಿಯು ಉರಿಯುವ ಬೆಂಕಿಯಂತಿದ್ದು, ಆತನ ಗುಣಾತಿಶಯಗಳನ್ನು ಪ್ರಚಾರಮಾಡುವಂತೆ ನಮ್ಮನ್ನು ಒತ್ತಾಯಪಡಿಸುತ್ತದೆ. (ಯೆರೆ. 20:9; 1 ಪೇತ್ರ 2:9) ನಾವು “ಜನಾಂಗಗಳಲ್ಲಿ ಆತನ ಕೃತ್ಯಗಳನ್ನು ಪ್ರಸಿದ್ಧ”ಪಡಿಸುವುದನ್ನು ಮುಂದುವರಿಸುವೆವು, ಯಾಕೆಂದರೆ “ಆತನು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾನೆ”!—ಯೆಶಾ. 12:4, 5.