ದೇವರ ಮಹತ್ಕಾರ್ಯಗಳಿಗೆ ಗಮನಕೊಡಿ
1 ಭವ್ಯವಾದ ಮೂರು ದಿನಗಳ ವರೆಗೆ ನಾವು “ದೇವರ ವಾಕ್ಯದ ಪ್ರಕಾರ ನಡೆಯುವವರು” ಎಂಬ ಜಿಲ್ಲಾ ಅಧಿವೇಶನಕ್ಕಾಗಿ ಕೂಡಿಬಂದಿದ್ದೆವು. ಜೀವನದ ದೈನಂದಿನ ಚಿಂತೆಗಳಿಂದ ನಮ್ಮ ಗಮನವನ್ನು ತಿರುಗಿಸುತ್ತಾ, ಯೆಹೋವನ ಮಹತ್ಕಾರ್ಯಗಳ ಮೇಲೆ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಿದೆವು. ದೇವರು ಹಾಗೂ ಆತನ ವಾಕ್ಯದಲ್ಲಿ ನಮ್ಮ ನಂಬಿಕೆಯನ್ನು ಹೆಚ್ಚಿಸಲು, ಆತನೊಂದಿಗಿರುವ ನಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಲು ಮತ್ತು ಕ್ಷೇತ್ರ ಸೇವೆಗಾಗಿ ನಮ್ಮ ಹುರುಪನ್ನು ತೀಕ್ಷ್ಣಗೊಳಿಸಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ನಮಗೆ ಕಲಿಸಲ್ಪಟ್ಟ ವಿಷಯಗಳಿಂದ ನಾವು ಹೇಗೆ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೇವೆ?—ಯೋಹಾ. 13:17.
2 ಕುಟುಂಬಗಳು ದೇವರ ವಾಕ್ಯಕ್ಕೆ ವಿಧೇಯತೆಯನ್ನು ತೋರಿಸುತ್ತವೆ: ನಮ್ಮ ಕುಟುಂಬಗಳ ಆತ್ಮಿಕ ಸ್ಥಿತಿಯನ್ನು ಪರೀಕ್ಷಿಸಿ ನೋಡಲು “ದೇವರ ವಾಕ್ಯಕ್ಕೆ ವಿಧೇಯರಾಗಿರಿ” ಎಂಬ ಭಾಷಣಮಾಲೆಯು ಸಹಾಯಮಾಡಿತು. ಮಕ್ಕಳು ಕಲಿಯಲು ಆಸೆಪಡುತ್ತಾರೆ. ಆದುದರಿಂದ, ಆತ್ಮಿಕವಾಗಿ ಬಲವಾದ ಒಂದು ಕುಟುಂಬವನ್ನು ಕಟ್ಟಲು ಕುಟುಂಬ ಬೈಬಲ್ ಅಭ್ಯಾಸವನ್ನು ಅಸ್ತಿವಾರವನ್ನಾಗಿ ಮಾಡಿಕೊಳ್ಳುವಂತೆ ದೈವಭಕ್ತಿಯುಳ್ಳ ಹೆತ್ತವರನ್ನು ಪ್ರೋತ್ಸಾಹಿಸಲಾಯಿತು. ಇದು, ಯೆಹೋವನೊಂದಿಗೆ ಒಂದು ಸಂತೋಷವುಳ್ಳ ಹಾಗೂ ಭದ್ರವಾದ ಸಂಬಂಧವನ್ನು ಬೆಳೆಸಿಕೊಳ್ಳಲು ಮಕ್ಕಳಿಗೆ ಸಹಾಯಮಾಡುವುದು. ದೇವರ ಭಾವನೆಗಳಿಗೆ ಹೇಗೆ ಗಮನ ಕೊಡಬೇಕೆಂಬುದನ್ನು ಹೆತ್ತವರಾಗಿರುವ ನೀವು ಮಕ್ಕಳಿಗೆ ಕಲಿಸಿಕೊಡಿ. ದೇವರಿಗಾಗಿಯೂ ಆತನ ಉಪಕಾರಗಳಿಗಾಗಿಯೂ ನಿಮಗಿರುವ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಿರಿ. (ಕೀರ್ತ. 103:2) ಆತ್ಮಿಕ ಗುರಿಗಳನ್ನು ಇಟ್ಟುಕೊಳ್ಳಲು ಮತ್ತು ಆ ಗುರಿಗಳನ್ನು ಮುಟ್ಟಲು ಹಾಗೂ ಯೆಹೋವನ ಸೇವೆಯಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವುದರಲ್ಲಿ ನೀವು ಮತ್ತು ನಿಮ್ಮ ಮಕ್ಕಳು ಒಗಟ್ಟಿನಿಂದ ಕೆಲಸಮಾಡಿ.
3 ದೇವರ ವಾಕ್ಯ ನಮ್ಮ ದಾರಿಯನ್ನು ಬೆಳಗಿಸುತ್ತದೆ: ಯೆಶಾಯನ ಪ್ರವಾದನೆ—ಸಕಲ ಮಾನವಕುಲಕ್ಕೆ ಬೆಳಕು 1 ಎಂಬ ಹೊಸ ಪುಸ್ತಕವನ್ನು ಪಡೆದುಕೊಳ್ಳಲು ನಾವೆಲ್ಲರೂ ಸಂತೋಷಪಟ್ಟೆವು. ಮೊದಲನೆಯ ಸಂಪುಟವಾಗಿರುವ ಈ ಪುಸ್ತಕವನ್ನು ನೀವು ಎಷ್ಟರ ವರೆಗೆ ಓದಿದ್ದೀರಿ? ದೈವಭಕ್ತಿಯಿಲ್ಲದ ಜನಾಂಗಗಳ ಮೇಲೆ ಬರಲಿರುವ ಕರಾಳವಾದ ನ್ಯಾಯತೀರ್ಪುಗಳ ಕುರಿತಾಗಿ ಯೆಶಾಯನ ಪುಸ್ತಕವು ಮುಂತಿಳಿಸುತ್ತದೆ. ಅಷ್ಟುಮಾತ್ರವಲ್ಲ, ದೇವಜನರಿಗೆ ಸಿಗಲಿರುವ ರಾಜ್ಯದ ಉಜ್ವಲವಾದ ಆಶೀರ್ವಾದಗಳನ್ನೂ ಅದು ಮುಂತಿಳಿಸುತ್ತದೆ. (ಯೆಶಾ. 34:2; 35:10) ಅದು, ಯೆಹೋವನಲ್ಲಿ ಮತ್ತು ಆತನು ತನ್ನ ಕಾರ್ಯಗಳನ್ನು ನಡೆಸುವ ವಿಧದ ಮೇಲೆ ನಮ್ಮ ನಂಬಿಕೆಯನ್ನು ಹಾಗೂ ಭರವಸೆಯನ್ನು ಬೆಳೆಸುತ್ತದೆ.—ಯೆಶಾ. 12:2-5.
4 ಯೆಶಾಯನ ಪ್ರವಾದನೆ 1 ಪುಸ್ತಕದ ಆರಂಭ ಭಾಗವನ್ನು ಓದುವಾಗ, ತನ್ನ ಸುತ್ತಲೂ ದುಷ್ಟತನವು ಇದ್ದಾಗಲೂ ಯೆಶಾಯನು ಯೆಹೋವನ ಕಡೆಗೆ ತನ್ನ ಯಥಾರ್ಥತೆಯನ್ನು ಹೇಗೆ ಕಾಪಾಡಿಕೊಂಡನು ಎಂಬುದನ್ನು ನೀವು ಗ್ರಹಿಸಿಕೊಳ್ಳುವಿರಿ. ದೇವರ ಸಂದೇಶವಾಹಕನಾಗಿರಲು ಒಂದು ಆಮಂತ್ರಣವು ನೀಡಲ್ಪಟ್ಟಾಗ ಯೆಶಾಯನು ಉತ್ತರಿಸಿದ್ದು: “ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು.” (ಯೆಶಾ. 6:8) ಯೆಶಾಯನಿಗಿದ್ದ ಸಿದ್ಧಮನಸ್ಸಿನ ಮೇಲೆ ಮನನಮಾಡುವುದರಿಂದ “ಎಲ್ಲಾ ಜನಾಂಗಗಳಿಗೆ ಸಾಕ್ಷಿ”ನೀಡುವ ಕೆಲಸದಲ್ಲಿ ಸಂಪೂರ್ಣವಾಗಿ ಪಾಲ್ಗೊಂಡು, ಸುವಾರ್ತೆಯನ್ನು ಸಾರುತ್ತಾ ಇರಲು ನಿಮಗೆ ಬೇಕಾದ ಪ್ರೋತ್ಸಾಹನೆಯು ಸಿಗುವುದು.—ಮತ್ತಾ. 24:14.
5 ಯೆಹೋವನ ಕೃತ್ಯಗಳಿಗೆ ನಾವು ಗಮನಕೊಡುವಾಗ, ಅದು ಅವನ ಮಹತ್ವವನ್ನು ಘನಪಡಿಸುವುದು. ಆದುದರಿಂದ, ದೇವರ ವಾಕ್ಯದ ಪ್ರಕಾರ ನಡೆಯುವವರಾಗಿರುವ ಸುಯೋಗವು ನಿಮಗೆ ಅತಿಪ್ರಿಯವಾದದ್ದಾಗಿರಲಿ!