ಯೆಹೋವನ ತಾಳ್ಮೆಯನ್ನು ನೀವು ಗಣ್ಯಮಾಡುತ್ತೀರೊ?
1 ಒಂದುವೇಳೆ ಯೆಹೋವನು ತಾಳ್ಮೆಯನ್ನು ತೋರಿಸದೆ, 10, 20 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆಯೇ ಸಾಕ್ಷಿಕಾರ್ಯವನ್ನು ನಿಲ್ಲಿಸುತ್ತಿದ್ದಲ್ಲಿ, ನಿಮಗೆ ಸತ್ಯವನ್ನು ಕಲಿಯುವ ಅವಕಾಶ ಸಿಗುತ್ತಿತ್ತೊ? ಹೆಚ್ಚಿನ ಸಂಖ್ಯೆಯಲ್ಲಿ ಜನರು ‘ತನ್ನ ಕಡೆಗೆ ತಿರುಗಿಕೊಳ್ಳುವಂತೆ’ ಆತನು ಸಮಯವನ್ನು ಕೊಟ್ಟಿರುವುದಕ್ಕಾಗಿ ನಾವು ತುಂಬ ಆಭಾರಿಗಳಾಗಿದ್ದೇವೆ. ಹೀಗಿದ್ದರೂ, ಯೆಹೋವನ ನ್ಯಾಯತೀರ್ಪಿನ ಮಹಾ ದಿನವು ‘ಕಳ್ಳನು ಬರುವಂತೆ ಬರುವುದು.’ (2 ಪೇತ್ರ 3:9, 10) ಆದುದರಿಂದ ದೇವರು ತೋರಿಸುತ್ತಿರುವ ತಾಳ್ಮೆಯನ್ನು, ಈ ವ್ಯವಸ್ಥೆಯನ್ನು ಅಂತ್ಯಗೊಳಿಸುವುದರಲ್ಲಿ ಆತನು ತಡಮಾಡುತ್ತಿದ್ದಾನೆಂದು ನಾವು ಅಪಾರ್ಥ ಮಾಡಿಕೊಳ್ಳಬಾರದು.—ಹಬ. 2:3.
2 ಜನರಿಗಾಗಿ ಕನಿಕರವುಳ್ಳವರಾಗಿರಿ: ಯೆಹೋವನ ದೀರ್ಘಶಾಂತಿಯು ನಮ್ಮ ಗ್ರಹಿಕೆಗೆ ಮೀರಿದ್ದಾಗಿದೆ. ಆದರೂ ನಾವು ಅದರ ಹಿಂದಿರುವ ಉದ್ದೇಶವನ್ನು ಮರೆಯಬಾರದು. (ಯೋನ 4:1-4, 11) ಯೆಹೋವನು ಮಾನವಕುಲದ ಕರುಣಾಜನಕ ಸ್ಥಿತಿಯನ್ನು ನೋಡುತ್ತಾನೆ ಮತ್ತು ಅವರ ಬಗ್ಗೆ ಆತನಿಗೆ ಅನುಕಂಪವಿದೆ. ಯೇಸುವಿಗೂ ಇದೇ ರೀತಿಯ ಅನಿಸಿಕೆಯಿದೆ. ಅವನು ಭೂಮಿಯಲ್ಲಿದ್ದಾಗ ಯಾರಿಗೆ ಸುವಾರ್ತೆಯನ್ನು ಸಾರಿದನೊ ಆ ಜನರಿಗಾಗಿ ಕನಿಕರಪಟ್ಟನು. ಆದುದರಿಂದ, ಇನ್ನೂ ಹೆಚ್ಚು ಮಂದಿಗೆ ನಿತ್ಯ ಜೀವವನ್ನು ಪಡೆದುಕೊಳ್ಳುವ ಅವಕಾಶ ಸಿಗುವಂತೆ, ಸಾರುವ ಕೆಲಸವು ವಿಸ್ತರಿಸಲ್ಪಡಬೇಕೆಂದು ಅವನು ಬಯಸಿದನು.—ಮತ್ತಾ. 9:35-38.
3 ದುರಂತಗಳು ಮತ್ತು ವಿಪತ್ತುಗಳ ಸಮಯದಲ್ಲಿ, ಸತ್ಯವನ್ನು ತಿಳಿಯದೆ ಇರುವ ಜನರಿಗಾಗಿ ನಮ್ಮಲ್ಲಿ ಅನುಕಂಪ ಉಂಟಾಗುವುದಿಲ್ಲವೊ? ಇಂದು ಜನರು ಲೋಕದಲ್ಲಿನ ಅಸ್ತವ್ಯಸ್ತ ಸ್ಥಿತಿಯನ್ನು ನಿಭಾಯಿಸಲು ಮತ್ತು ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅವರು ‘ಕುರುಬನಿಲ್ಲದ ಕುರಿಗಳಂತೆ’ ಇದ್ದಾರೆ. (ಮಾರ್ಕ 6:34) ನಾವು ಹುರುಪಿನಿಂದ ಸುವಾರ್ತೆಯನ್ನು ಸಾರುವ ಮೂಲಕ, ಯೋಗ್ಯ ಪ್ರವೃತ್ತಿಯುಳ್ಳವರನ್ನು ಸಂತೈಸಿ, ಯೆಹೋವನ ತಾಳ್ಮೆಗಾಗಿ ನಮಗಿರುವ ಗಣ್ಯತೆಯನ್ನು ಪ್ರದರ್ಶಿಸುತ್ತೇವೆ.—ಅ. ಕೃ. 13:48.
4 ನಮ್ಮ ಕೆಲಸವು ತುರ್ತಿನದ್ದಾಗಿದೆ: ಕಳೆದ ವರ್ಷ 3,23,439 ಮಂದಿ ದೀಕ್ಷಾಸ್ನಾನವನ್ನು ಪಡೆದುಕೊಂಡರು ಮತ್ತು 1,40,00,000ಕ್ಕಿಂತಲೂ ಹೆಚ್ಚು ಮಂದಿ ಜ್ಞಾಪಕಾಚರಣೆಗೆ ಹಾಜರಾದರು. ಈ ದುಷ್ಟ ವ್ಯವಸ್ಥೆಯ ನಾಶನದಿಂದ ಪಾರಾಗುವ ಸಂಭವನೀಯತೆ ಇನ್ನೂ ಅನೇಕರಿಗೆ ಇದೆಯೆಂದು ಈ ಸಂಖ್ಯೆಗಳು ತೋರಿಸುತ್ತವೆ. ಆ ನಾಶನದಿಂದ ಪಾರಾಗುವ “ಮಹಾ ಸಮೂಹವು” ಎಷ್ಟು ದೊಡ್ಡದಾಗಿರುವುದು ಎಂಬುದು ನಮಗೆ ಗೊತ್ತಿಲ್ಲ. (ಪ್ರಕ. 7:9) ಮತ್ತು ನಮ್ಮ ಸಾರುವ ಕೆಲಸವು ಎಷ್ಟರ ತನಕ ನಡೆಯುವುದೆಂಬುದೂ ನಮಗೆ ಗೊತ್ತಿಲ್ಲ. ಆದರೆ ಯೆಹೋವನಿಗೆ ಖಂಡಿತವಾಗಿಯೂ ಗೊತ್ತಿದೆ. ಆತನಿಗೆ ತೃಪ್ತಿಯಾಗುವಷ್ಟರ ಮಟ್ಟಿಗೆ ಸುವಾರ್ತೆಯು ಸಾರಲ್ಪಡುವುದು, ಮತ್ತು “ಆಗ ಅಂತ್ಯವು ಬರುವದು.”—ಮತ್ತಾ. 24:14.
5 ಉಳಿದಿರುವ ಸಮಯವು ಕೊಂಚವೇ ಮತ್ತು ದೇವರ ದಿನವು ತುಂಬ ಹತ್ತಿರದಲ್ಲಿದೆ. (1 ಕೊರಿಂ. 7:29ಎ; ಇಬ್ರಿ. 10:37) ನಿಸ್ಸಂದೇಹವಾಗಿಯೂ, “ನಾವು ಕ್ರಿಸ್ತನನ್ನು ಮೊದಲು ನಂಬಿದ ಕಾಲದಲ್ಲಿ ಇದ್ದದ್ದಕ್ಕಿಂತ ಈಗ ನಮ್ಮ ವಿಮೋಚನೆಯು ಹತ್ತಿರ”ವಾಗಿದೆ. (ರೋಮಾ. 13:11) ದೇವರ ತಾಳ್ಮೆಯ ಹಿಂದಿರುವ ಉದ್ದೇಶವನ್ನು ನಾವು ಗ್ರಹಿಸಲು ತಪ್ಪದಿರೋಣ. ಅದರ ಬದಲು, ನೀತಿಗಾಗಿ ಹಾತೊರೆಯುವವರು ಯೆಹೋವನ ಮಹಾ ಕರುಣೆಯನ್ನು ಅನುಭವಿಸಲು ಸಾಧ್ಯವಾಗುವಂತೆ ನಾವು ತುರ್ತಿನಿಂದ ಸುವಾರ್ತೆಯನ್ನು ಸಾರೋಣ.