ನಮ್ಮ ಸಂಗ್ರಹಾಲಯ
ನಮ್ಮ ಸಂಗ್ರಹಾಲಯ “ಚಿಪ್ಪಿನೊಳಗಿನ ಆಮೆಯಂತಿದ್ದೆ ನಾನು”
ಇಸವಿ 1929ರ ಆಗಸ್ಟ್/ಸೆಪ್ಟೆಂಬರ್ನಲ್ಲಿ ಒಂಬತ್ತು ದಿನದ ಸಾಕ್ಷಿಕಾರ್ಯದ ಅಭಿಯಾನ ನಡೆಯಿತು. ಅಮೆರಿಕದಾದ್ಯಂತ ಬಿರುಗಾಳಿಯಂತೆ ಭರದಿಂದ ಸಾಗಿದ ಆ ಅಭಿಯಾನದಲ್ಲಿ 10,000 ಸೌವಾರ್ತಿಕರು ಪಾಲ್ಗೊಂಡರು. ವಿತರಿಸಲಾದ ಒಟ್ಟು ಪುಸ್ತಕ, ಕಿರುಪುಸ್ತಿಕೆಗಳು 2.5 ಲಕ್ಷ! ಅವರಲ್ಲಿ ಸುಮಾರು 1,000 ಕಾಲ್ಪೋರ್ಟರರು (ಪಯನೀಯರರು) ಇದ್ದರು. ಅವರ ಸಂಖ್ಯೆಯಲ್ಲಿ ತುಂಬ ವೃದ್ಧಿಯಾಗಿತ್ತು! 1929ರಲ್ಲಿ ಪಯನೀಯರರ ಸಂಖ್ಯೆಯು 1927ರಲ್ಲಿ ಇದ್ದದ್ದಕ್ಕಿಂತ ಮೂರುಪಟ್ಟು ಹೆಚ್ಚಾಗಿತ್ತು. ಈ ವೃದ್ಧಿಯನ್ನು ಬುಲೆಟಿನ್a “ನಂಬಲಸಾಧ್ಯ” ಎಂದು ಪ್ರಕಟಿಸಿತು.
1929ರ ಕಡೇ ಭಾಗದಲ್ಲಿ ಅಮೆರಿಕದಲ್ಲಿ ಹಣಕಾಸಿನ ಮುಗ್ಗಟ್ಟು ಸಂಭವಿಸಿತು. 1929, ಅಕ್ಟೋಬರ್ 29ರ ‘ಕರಾಳ ಮಂಗಳವಾರ’ ಎಂದು ಕರೆಯಲಾಗುವ ದಿನದಂದು ನ್ಯೂ ಯಾರ್ಕ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಬೆಲೆಗಳು ಥಟ್ಟನೆ ಕುಸಿದು ಎಲ್ಲರಲ್ಲೂ ದಿಗಿಲು ಹುಟ್ಟಿಸಿದವು. ಭೌಗೋಳಿಕ ಆರ್ಥಿಕ ವ್ಯವಸ್ಥೆಯು ‘ಮಹಾ ಕುಸಿತ’ದಲ್ಲಿ ಕೆಳಗುರುಳಿತು. ಸಾವಿರಾರು ಬ್ಯಾಂಕ್ಗಳು ದಿವಾಳಿಯಾದವು. ಫಾರ್ಮ್ಗಳಲ್ಲಿ ಕೆಲಸ ನಿಂತುಹೋಯಿತು. ದೊಡ್ಡ ದೊಡ್ಡ ಕಾರ್ಖಾನೆಗಳು ಬಾಗಿಲು ಮುಚ್ಚಿದವು. ಮಿಲಿಯಗಟ್ಟಲೆ ಜನರು ನೌಕರಿ ಕಳೆದುಕೊಂಡರು. 1933ರಲ್ಲಿ, ಸಾಲ ತೀರಿಸದವರ ಮನೆಯನ್ನು ವಶಪಡಿಸಿಕೊಂಡ ಪ್ರಕರಣಗಳು ಅಮೆರಿಕದಲ್ಲಿ ದಿನಕ್ಕೆ 1,000ಕ್ಕೇರಿದವು.
ಇಂಥ ಬಿಕ್ಕಟ್ಟಿನಲ್ಲಿ ಪೂರ್ಣ ಸಮಯದ ಸೌವಾರ್ತಿಕರು ಹೇಗೆ ಜೀವನ ಸಾಗಿಸಿದರು? ಒಂದು ಪರಿಹಾರ, ಚಕ್ರಗಳುಳ್ಳ ಮನೆ! ಅಂದರೆ ಮೋಟಾರು ಮನೆ ಅಥವಾ ಟ್ರೇಲರ್. ಇದಕ್ಕೆ ಬಾಡಿಗೆಯೂ ಇಲ್ಲ, ತೆರಿಗೆಯೂ ಇಲ್ಲ. ಇದರಿಂದಾಗಿ ಅನೇಕ ಪಯನೀಯರರಿಗೆ ಅತಿ ಕಡಿಮೆ ಖರ್ಚಿನಲ್ಲಿ ಜೀವನ ಸಾಗಿಸುತ್ತಾ ಸೇವೆ ಮುಂದುವರಿಸಲು ಸಾಧ್ಯವಾಯಿತು.b ಚಲಾಯಿಸಬಹುದಾದ ಈ ಮೋಟಾರು ಮನೆಯೇ ಅವರಿಗೆ ಅಧಿವೇಶನಕ್ಕೆ ಹೋದಾಗೆಲ್ಲ ಉಚಿತ ಹೋಟೆಲ್ ರೂಮ್! ಚಿಕ್ಕದಾದರೂ ಆರಾಮಕರವಾದ ಇಂಥ ಮನೆಯನ್ನು ನೀರಿನ ವ್ಯವಸ್ಥೆ, ಸ್ಟವ್, ಮಡಚಬಹುದಾದ ಮಂಚ, ಚಳಿ ನಿರೋಧಕ ವ್ಯವಸ್ಥೆಯಂಥ ಅಗತ್ಯ ಸೌಲಭ್ಯಗಳೊಂದಿಗೆ ಹೇಗೆ ಕಟ್ಟಬಹುದೆಂದು 1934ರಲ್ಲಿ ಬುಲೆಟಿನ್ನಲ್ಲಿ ವಿವರಿಸಲಾಯಿತು.
ಲೋಕಾದ್ಯಂತ ಸೌವಾರ್ತಿಕರು ತಮ್ಮಲ್ಲಿರುವುದನ್ನು ಬಳಸಿಕೊಂಡು ಚಕ್ರಗಳುಳ್ಳ-ಮನೆಯನ್ನು ನಿರ್ಮಿಸಿದರು. “ನೋಹನಿಗೆ ನಾವೆ ಕಟ್ಟುವ ಅನುಭವವಿರಲಿಲ್ಲ, ಟ್ರೇಲರ್ ಕಟ್ಟುವ ಅನುಭವ ನನಗೂ ಇರಲಿಲ್ಲ, ಆ ಬಗ್ಗೆ ಏನೇನೂ ಗೊತ್ತಿರಲಿಲ್ಲ” ಎಂದು ವಿಕ್ಟರ್ ಬ್ಲ್ಯಾಕ್ವೆಲ್ ನೆನಪನ್ನು ಹಂಚಿಕೊಂಡರು. ಆದರೆ ಅವರು ಸಹ ಮೋಟಾರು ಮನೆಯನ್ನು ಕಟ್ಟಿದರು.
ಏವರಿ ಮತ್ತು ಪತ್ನಿ ಲೊವಿನ್ಯಾ ಬ್ರಿಸ್ಟೋ ಬಳಿ ಒಂದು ಮೋಟಾರು-ಮನೆ ಇತ್ತು. “ಚಿಪ್ಪಿನೊಳಗಿನ ಆಮೆಯಂತಿದ್ದೆ ನಾನು. ಎಲ್ಲಿ ಹೋದರೂ ನನ್ನ ಮನೆ ಜೊತೆಯಲ್ಲೇ ಇರುತ್ತಿತ್ತು” ಎಂದರು ಏವರಿ. ಈ ಗಂಡಹೆಂಡತಿ ಇಬ್ಬರೂ ಹಾರ್ವೀ ಮತ್ತು ಅವರ ಪತ್ನಿ ಆ್ಯನ್ ಕಾನ್ರೋ ಜತೆ ಪಯನೀಯರ್ ಸೇವೆ ಮಾಡುತ್ತಿದ್ದರು. ಹಾರ್ವೀ ಮತ್ತು ಆ್ಯನ್ಳಿಗೆ ಇಬ್ಬರು ಗಂಡುಮಕ್ಕಳು. ಇವರಿಗಿದ್ದ ಮೋಟಾರು-ಮನೆಯ ಗೋಡೆಗೆ ಟಾರ್-ಪೇಪರನ್ನು ಹಾಕಲಾಗಿತ್ತು. ಪ್ರತಿ ಸಲ ಆ ಮೋಟಾರು-ಮನೆಯನ್ನು ಇನ್ನೊಂದೆಡೆಗೆ ಚಲಾಯಿಸುತ್ತಿದ್ದಾಗ ಆ ಪೇಪರ್ ಕಿತ್ತುಬರುತ್ತಿತ್ತು. “ಅಂಥ ಟ್ರೇಲರ್ ಮನೆಯನ್ನು ಯಾರೂ ಯಾವತ್ತೂ ನೋಡಿರಲಿಲ್ಲ, ಮುಂದೆಯೂ ನೋಡಲಿಲ್ಲ!” ಎಂದು ಮೆಲುಕುಹಾಕುತ್ತಾರೆ ಏವರಿ. ಆದರೆ “ಯಾವಾಗಲೂ ನಗುನಗುತ್ತಾ ತುಂಬ ಸಂತೋಷವಾಗಿದ್ದ ಕುಟುಂಬ ಅವರದ್ದು” ಎನ್ನುತ್ತಾರವರು. ಸಹೋದರ ಹಾರ್ವೀ ಕಾನ್ರೋ ಹೀಗೆ ಬರೆದರು: “ನಮಗೆ ಯಾವುದಕ್ಕೂ ಕೊರತೆಯಾಗಲಿಲ್ಲ. ಯೆಹೋವನ ಸೇವೆಯಲ್ಲಿ ಮತ್ತು ಆತನ ಪ್ರೀತಿಯ ಆರೈಕೆಯಡಿ ಸಂಪೂರ್ಣ ಭದ್ರತೆಯ ಅನಿಸಿಕೆಯಿತ್ತು.” ಕಾಲಾನಂತರ ಈ ಇಡೀ ಕುಟುಂಬ ಗಿಲ್ಯಡ್ ಶಾಲೆಗೆ ಹಾಜರಾಗಿ, ಪೆರು ದೇಶಕ್ಕೆ ಮಿಷನರಿಗಳಾಗಿ ನೇಮಕ ಪಡೆದರು.
ಗೀಸ್ಟೊ ಮತ್ತು ಅವರ ಪತ್ನಿ ವಿನ್ಸೆನ್ಸಾ ಬಾಟೈನೊ ಸಹ ಪಯನೀಯರರಾಗಿದ್ದರು. ಈ ದಂಪತಿಗೆ ತಾವು ಹೆತ್ತವರಾಗಲಿದ್ದೇವೆಂದು ಗೊತ್ತಾದಾಗ, 1929ರ ಮಾಡಲ್ ಎ ಫೋರ್ಡ್ ಟ್ರಕ್ಕನ್ನು ಮನೆಯಾಗಿ ಪರಿವರ್ತಿಸಿದರು. ಅವರು ಮುಂಚೆ ಡೇರೆಗಳಲ್ಲಿ ವಾಸಿಸುತ್ತಿದ್ದರು. ಅದಕ್ಕೆ ಹೋಲಿಸುವಾಗ ಈ ಮೋಟಾರು-ಮನೆ “ಉತ್ತಮ ಹೋಟೆಲಿನಂತಿತ್ತು.” ಅನಂತರವೂ ಅವರು ತಮ್ಮ ಪುಟ್ಟ ಮಗಳ ಜತೆ, ಅಮೆರಿಕದಲ್ಲಿರುವ ಇಟಾಲಿಯನ್ ಜನರಿಗೆ ಸಾರುವ ತಮ್ಮ ನೆಚ್ಚಿನ ನೇಮಕದಲ್ಲೇ ಮುಂದುವರಿದರು.
ಆರ್ಥಿಕ ಮುಗ್ಗಟ್ಟಿದ್ದ ಆ ಸಮಯದಲ್ಲಿ ಅನೇಕ ಜನರು ಸುವಾರ್ತೆಗೆ ಕಿವಿಗೊಟ್ಟರು. ಆದರೆ ಬಡವರಿಗೆ, ನಿರುದ್ಯೋಗಿಗಳಿಗೆ ಬೈಬಲ್ ಸಾಹಿತ್ಯಕ್ಕಾಗಿ ಹಣ ಕೊಡಲು ಕಷ್ಟವಾಗುತ್ತಿದ್ದ ಕಾರಣ ಹಣದ ಬದಲು ನಾನಾ ತರದ ಸಾಮಾನುಗಳನ್ನು ಕೊಡುತ್ತಿದ್ದರು. ಇಬ್ಬರು ಪಯನೀಯರ್ ಸಹೋದರಿಯರು ತಮಗೆ ಆಸಕ್ತ ಜನರು ಕೊಟ್ಟ 64 ತರದ ಸಾಮಾನುಗಳ ಒಂದು ಪಟ್ಟಿಮಾಡಿದರು. ಆ ಪಟ್ಟಿ “ಒಂದು ಅಂಗಡಿಯಲ್ಲಿರುವ ಸಾಮಾನುಗಳ ಪಟ್ಟಿಯಂತಿತ್ತು.”
ಸಹೋದರ ಫ್ರೆಡ್ ಆ್ಯಂಡರ್ಸನ್ ಒಬ್ಬ ರೈತನನ್ನು ಭೇಟಿಯಾದನು. ಆ ರೈತನಿಗೆ ನಮ್ಮ ಕೆಲವು ಪುಸ್ತಕಗಳನ್ನು ತಕ್ಕೊಳ್ಳಲು ಮನಸ್ಸಿತ್ತಾದರೂ ಹಣವಿರಲಿಲ್ಲ. ಹಾಗಾಗಿ ತನ್ನ ತಾಯಿ ಬದುಕಿದ್ದಾಗ ಬಳಸುತ್ತಿದ್ದ ಕನ್ನಡಕವನ್ನು ಸಹೋದರನಿಗೆ ಕೊಟ್ಟ. ಫ್ರೆಡ್ ಮುಂದಿನ ಫಾರ್ಮ್ಗೆ ಹೋದಾಗ ಇನ್ನೊಬ್ಬ ವ್ಯಕ್ತಿ ಆಸಕ್ತಿ ತೋರಿಸಿದ. ಆದರೆ ಅವನು “ಈ ಪುಸ್ತಕಗಳನ್ನು ಓದಲು ನನಗೆ ಇಷ್ಟವಿದೆ. ಆದರೆ ಕನ್ನಡಕ ಇಲ್ಲ” ಎಂದ. ಫ್ರೆಡ್ ಆಗ ನೆರೆಯವನು ಕೊಟ್ಟಿದ್ದ ಕನ್ನಡಕವನ್ನು ಇವನಿಗೆ ಕೊಟ್ಟನು. ಅದರಿಂದ ಅವನಿಗೆ ಚೆನ್ನಾಗಿ ಓದಲು ಸಾಧ್ಯವಾಯಿತು. ಅವನು ನಗುಮುಖದಿಂದ ಆ ಕನ್ನಡಕಕ್ಕಾಗಿಯೂ ಪುಸ್ತಕಗಳಿಗಾಗಿಯೂ ಹಣಕೊಟ್ಟ.
ಹರ್ಬರ್ಟ್ ಆಬಾಟ್ ಎಂಬವರು ತಮ್ಮ ಕಾರಲ್ಲಿ ಕೋಳಿ ಗೂಡನ್ನು ಇಡುತ್ತಿದ್ದರು. ಜನರು ಸಾಹಿತ್ಯಕ್ಕಾಗಿ ಹಣದ ಬದಲು ಕೋಳಿ ಕೊಡುತ್ತಿದ್ದಾಗ ಮೂರ್ನಾಲ್ಕು ಕೋಳಿ ಸಿಕ್ಕಿದ ಮೇಲೆ ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಿ ಆ ಹಣದಲ್ಲಿ ಕಾರಿಗೆ ಪೆಟ್ರೋಲ್ ತುಂಬಿಸುತ್ತಿದ್ದರು. ಅವರು ಬರೆದದ್ದು: “ಕೈಯಲ್ಲಿ ಬಿಡಿಗಾಸೂ ಇಲ್ಲದ ಸಮಯಗಳೂ ಇದ್ದವು. ಆದರೆ ನಾವು ನಮ್ಮ ಸೇವೆಯನ್ನು ನಿಲ್ಲಿಸುತ್ತಿರಲಿಲ್ಲ. ಕಾರಲ್ಲಿ ಪೆಟ್ರೋಲ್ ಇದ್ದರೆ ಅಷ್ಟೇ ಸಾಕು, ಮುಂದೆ ಹೋಗುತ್ತಿದ್ದೆವು. ಯೆಹೋವನು ನಮ್ಮನ್ನು ಹೇಗೂ ನೋಡಿಕೊಳ್ಳುತ್ತಾನೆಂಬ ನಂಬಿಕೆ, ಭರವಸೆ ನಮಗಿತ್ತು.”
ಯೆಹೋವನ ಮೇಲೆ ಭರವಸೆ ಹಾಗೂ ದೃಢಮನಸ್ಸು ಆ ಕಷ್ಟಕರ ಸಮಯಗಳನ್ನು ನಿಭಾಯಿಸಿ ಮುಂದೆಸಾಗಲು ಆತನ ಜನರಿಗೆ ಬಲಕೊಟ್ಟಿತು. ಒಮ್ಮೆ ಜೋರು ಗಾಳಿಮಳೆ ಬರುತ್ತಿದ್ದಾಗ ಮ್ಯಾಕ್ಸ್ವೆಲ್ ಮತ್ತವರ ಪತ್ನಿ ಎಮ್ಮಿ ಲುವಿಸ್ ಇಬ್ಬರೂ ಟ್ರೇಲರ್ನಿಂದ ಹೊರಬಂದದ್ದೇ ಸೈ, ಅದರ ಮೇಲೆ ಒಂದು ಮರ ಬಿದ್ದು ಅದನ್ನು ಎರಡು ಭಾಗ ಮಾಡಿತು. “ಇವೆಲ್ಲವೂ ನಮ್ಮ ಸೇವೆಗೆ ತಡೆಗಳಾಗಿರಲಿಲ್ಲ, ಚಿಕ್ಕಪುಟ್ಟ ದುರ್ಘಟನೆಗಳಷ್ಟೇ. ಆಗಲೂ ಪಯನೀಯರ್ ಸೇವೆ ಬಿಟ್ಟುಬಿಡುವ ವಿಚಾರ ಮನಸ್ಸಿಗೆ ಬರಲಿಲ್ಲ. ಇನ್ನೂ ತುಂಬ ಸೇವೆ ಮಾಡಲಿಕ್ಕಿತ್ತು. ಅದನ್ನು ಪೂರೈಸುವ ಉದ್ದೇಶ ನಮಗಿತ್ತು” ಎಂದು ಮ್ಯಾಕ್ಸ್ವೆಲ್ ಬರೆದರು. ಎಡರುತೊಡರುಗಳಿಗೆ ಜಗ್ಗದ ಅವರಿಬ್ಬರೂ ನೆಚ್ಚಿನ ಸ್ನೇಹಿತರ ಸಹಾಯದಿಂದ ಆ ಮೋಟಾರು-ಮನೆಯನ್ನು ಪುನಃ ಕಟ್ಟಿದರು.
ಹಲವಾರು ಸವಾಲುಗಳಿರುವ ನಮ್ಮೀ ಸಮಯದಲ್ಲೂ ಅಂಥದ್ದೇ ಸ್ವತ್ಯಾಗದ ಮನೋಭಾವವನ್ನು ಲಕ್ಷಾಂತರ ಹುರುಪಿನ ಸಾಕ್ಷಿಗಳು ತೋರಿಸುತ್ತಿದ್ದಾರೆ. ಯಾಕೆಂದರೆ ಆರಂಭದ ಆ ಪಯನೀಯರರಂತೆ ನಾವು ಸಹ ಸಾರುವ ಕೆಲಸವನ್ನು ಯೆಹೋವ ಸಾಕೆನ್ನುವ ವರೆಗೆ ಮುಂದುವರಿಸಲು ದೃಢನಿರ್ಧಾರ ಮಾಡಿದ್ದೇವೆ.
a ಈಗ ಅದರ ಹೆಸರು ನಮ್ಮ ರಾಜ್ಯ ಸೇವೆ.
b ಆ ಸಮಯಗಳಲ್ಲಿ ಹೆಚ್ಚಿನ ಪಯನೀಯರರು ಐಹಿಕ ಕೆಲಸ ಮಾಡುತ್ತಿರಲಿಲ್ಲ. ಪಯನೀಯರರಿಗೆ ಸಾಹಿತ್ಯ ಕಡಿಮೆ ದರಕ್ಕೆ ಸಿಗುತ್ತಿತ್ತು. ಅವರು ಜನರಿಗೆ ಸಾಹಿತ್ಯ ನೀಡಿದಾಗ ಸಿಗುತ್ತಿದ್ದ ಹಣವನ್ನು ಸರಳ ಜೀವನ ನಡೆಸಲಿಕ್ಕಾಗಿ ಬಳಸುತ್ತಿದ್ದರು.