ದೇವರ ಸಮೀಪಕ್ಕೆ ಬನ್ನಿರಿ
ಮನುಷ್ಯರಲ್ಲಿ ಒಳ್ಳೇದನ್ನು ಹುಡುಕುವ ದೇವರು
“ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ.” (1 ಪೂರ್ವಕಾಲವೃತ್ತಾಂತ 28:9) ಯೆಹೋವ ದೇವರ ಪ್ರೇರಣೆಯಿಂದ ಬರೆಯಲಾದ ಈ ಮಾತುಗಳು ಆತನಿಗೆ ನಮ್ಮ ಮೇಲಿರುವ ಅತೀವ ಕಾಳಜಿಗಾಗಿ ನಮ್ಮಲ್ಲಿ ಕೃತಜ್ಞತೆ ಮೂಡಿಸುತ್ತವೆ. ನಾವ್ಯಾರೂ ಪರಿಪೂರ್ಣರಲ್ಲದಿದ್ದರೂ ಯೆಹೋವನು ನಮ್ಮಲ್ಲಿ ಒಳ್ಳೇದನ್ನು ಹುಡುಕುತ್ತಾನೆ. ಇದು 1 ಅರಸುಗಳು 14:13ರಲ್ಲಿ ಅಬೀಯನ ಕುರಿತು ತಿಳಿಸಲಾಗಿರುವ ಮಾತುಗಳಲ್ಲಿ ಸುಸ್ಪಷ್ಟ.
ಅಬೀಯನ ಮನೆಮಂದಿಯೆಲ್ಲ ದುಷ್ಟರಾಗಿದ್ದರು. ಅವನ ತಂದೆ ಯಾರೊಬ್ಬಾಮ ಮತಭ್ರಷ್ಟ ರಾಜಸಂತತಿಯ ಶಿರಸ್ಸಾಗಿದ್ದನು.a ಅವನ ಮನೆತನವನ್ನು ಯೆಹೋವನು “ಕಸವನ್ನು ಗುಡಿಸಿ ತೆಗೆದುಹಾಕುವಂತೆ” ಪೂರ್ತಿಯಾಗಿ ಅಳಿಸಿಹಾಕಲು ಉದ್ದೇಶಿಸಿದ್ದನು. (1 ಅರಸುಗಳು 14:10) ಆದರೆ ಗಂಭೀರವಾಗಿ ಅಸ್ವಸ್ಥನಾಗಿದ್ದ ಅಬೀಯನನ್ನು ಮಾತ್ರ ಗೌರವಯುತವಾಗಿ ಹೂಳಬೇಕೆಂದು ದೇವರು ಆಜ್ಞೆ ನೀಡಿದನು.b ಏಕೆ? ಆತನು ವಿವರಿಸಿದ್ದು: “ಯಾರೊಬ್ಬಾಮನ ಮನೆಯೊಳಗೆ ಅವನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವನ ಕಡೆಗಾದ ಒಳ್ಳೇ ಕ್ರಿಯೆ ಸಿಕ್ಕಿತು.” (1 ಅರಸುಗಳು 14:1, 12, 13, NIBV) ಈ ಮಾತುಗಳು ಅಬೀಯನ ಬಗ್ಗೆ ನಮಗೇನು ತಿಳಿಸುತ್ತವೆ?
ಅಬೀಯನು ದೇವರ ನಂಬಿಗಸ್ತ ಆರಾಧಕನಾಗಿದ್ದನೆಂದು ಬೈಬಲ್ ಹೇಳುವುದಿಲ್ಲ. ಆದರೆ ಅವನಲ್ಲಿ ಕೊಂಚ ಮಟ್ಟಿಗಿನ ಒಳ್ಳೇತನ ಇತ್ತು. ಇದು “ಯೆಹೋವನ ಕಡೆಗಾದ” ಒಳ್ಳೇತನವಾಗಿತ್ತು, ಬಹುಶಃ ಆತನ ಆರಾಧನೆಗೆ ಸಂಬಂಧಿಸಿತ್ತು. ರಬ್ಬಿ ಲೇಖಕರ ಹೇಳಿಕೆಗನುಸಾರ ಅಬೀಯನು ಯೆರೂಸಲೇಮಿನ ಆಲಯಕ್ಕೆ ಒಮ್ಮೆ ಯಾತ್ರೆ ಕೈಗೊಂಡಿರಬಹುದು ಅಥವಾ ಯೆರೂಸಲೇಮಿಗೆ ಹೋಗದಂತೆ ಇಸ್ರಾಯೇಲ್ಯರನ್ನು ತಡೆಯಲು ತನ್ನ ತಂದೆ ನೇಮಿಸಿದ ಕಾವಲುಗಾರರನ್ನು ತೆಗೆದುಹಾಕಿರಬಹುದು.
ಅಬೀಯನ ಆ ಕ್ರಿಯೆ ಏನೇ ಆಗಿದ್ದರೂ ಅದು ಗಮನಾರ್ಹವಾಗಿತ್ತು. ಮೊದಲನೇದಾಗಿ ಅವನದನ್ನು ಮನಃಪೂರ್ವಕವಾಗಿ ಮಾಡಿದನು. ಆ ಒಳ್ಳೇತನ “ಅವನಲ್ಲಿ” ಅಂದರೆ ಅವನ ಹೃದಯದಲ್ಲಿತ್ತು. ಎರಡನೇದಾಗಿ ಅವನ ಒಳ್ಳೇತನ ಅಸಾಮಾನ್ಯವಾಗಿತ್ತು. ಅವನು “ಯಾರೊಬ್ಬಾಮನ ಮನೆಯೊಳಗೆ” ಅಂದರೆ ಅದೇ ಮನೆಯಲ್ಲಿದ್ದು ಒಳ್ಳೇತನ ತೋರಿಸಿದನು. “ಕೆಟ್ಟ ಸ್ಥಳದಲ್ಲಿ, ಕೆಟ್ಟ ಕುಟುಂಬದಲ್ಲಿ ಇದ್ದರೂ ಒಳ್ಳೇತನ ಕಾಪಾಡಿಕೊಳ್ಳುವುದು ನಿಜಕ್ಕೂ ಶ್ಲಾಘನೀಯ” ಎಂದು ವಿದ್ವಾಂಸರೊಬ್ಬರು ಹೇಳುತ್ತಾರೆ. ಅಬೀಯನ ಒಳ್ಳೇತನ “ಕಾರ್ಗತ್ತಲಿನ ಆಕಾಶದಲ್ಲಿ ಹೊಳೆಯುತ್ತಿರುವ ನಕ್ಷತ್ರಗಳಂತೆ ಮತ್ತು ಸುತ್ತಮುತ್ತಲು ಎಲೆ ಉದುರಿದ ಮರಗಳ ಮಧ್ಯೆ ನಿಂತಿರುವ ಸೀಡರ್ ಮರಗಳಂತೆ ಎದ್ದುಕಾಣುವಂಥದ್ದಾಗಿತ್ತು” ಎಂದು ಇನ್ನೊಬ್ಬ ವಿದ್ವಾಂಸ ಹೇಳುತ್ತಾರೆ.
ಎಲ್ಲಕ್ಕಿಂತ ಮಿಗಿಲಾಗಿ 1 ಅರಸುಗಳು 14:13 ಯೆಹೋವನ ಬಗ್ಗೆ ಸೊಗಸಾದ ವಿಷಯವೊಂದನ್ನು, ಆತನು ನಮ್ಮಲ್ಲಿ ಏನು ಹುಡುಕುತ್ತಾನೆ ಎಂಬದನ್ನು ಕಲಿಸುತ್ತದೆ. ಅಬೀಯನಲ್ಲಿ ಒಳ್ಳೆಯದೇನೋ “ಸಿಕ್ಕಿತು” ಎಂಬ ಮಾತನ್ನು ಸ್ವಲ್ಪ ನೆನಪಿಸಿಕೊಳ್ಳಿ. ಯೆಹೋವನು ಅವನ ಹೃದಯದಲ್ಲಿ ಹುಡುಕಿದಾಗ ಒಳ್ಳೇತನದ ಚಿಕ್ಕ ಸುಳಿವನ್ನು ಕಂಡುಕೊಂಡನು. ಅವನ ದುಷ್ಟ ಕುಟುಂಬಕ್ಕೆ ಹೋಲಿಸುವಾಗ ಅಬೀಯನು “ಉರುಟುಕಲ್ಲುಗಳ ಮಧ್ಯೆ” ಇದ್ದ ಒಂದೇ ಒಂದು ಮುತ್ತಿನಂತಿದ್ದನು ಎಂದು ವಿದ್ವಾಂಸರೊಬ್ಬರು ವರ್ಣಿಸುತ್ತಾರೆ. ಅಬೀಯನ ಈ ಒಳ್ಳೇತನವನ್ನು ಯೆಹೋವನು ಅಮೂಲ್ಯ ಎಂದೆಣಿಸಿದನು. ಮಾತ್ರವಲ್ಲ ದುಷ್ಟರ ಕುಟುಂಬದವನಾದ ಅವನಿಗೆ ಕರುಣೆ ತೋರಿಸಿ ಅವನ ಒಳ್ಳೇತನಕ್ಕೆ ಪ್ರತಿಫಲವನ್ನೂ ಕೊಟ್ಟನು.
ನಮ್ಮಲ್ಲಿ ಕುಂದುಕೊರತೆಗಳಿದ್ದರೂ ಯೆಹೋವನು ಒಳ್ಳೇದನ್ನು ಹುಡುಕಿ ಮಾನ್ಯಮಾಡುತ್ತಾನೆ ಎಂಬುದು ನೆಮ್ಮದಿದಾಯಕ ವಿಷಯವಲ್ಲವೇ? (ಕೀರ್ತನೆ 130:3) ಇದನ್ನು ತಿಳಿದವರಾಗಿ ನಾವು ಯೆಹೋವನಿಗೆ ಇನ್ನೂ ಹೆಚ್ಚು ಆಪ್ತರಾಗಬೇಕು. ಆತನು ನಮ್ಮ ಹೃದಯಗಳಲ್ಲಿ ಎಳ್ಳಷ್ಟು ಒಳ್ಳೇತನಕ್ಕಾಗಿಯೂ ಸೂಕ್ಷ್ಮವಾಗಿ ಹುಡುಕುವ ದೇವರು. (w10-E 07/01)
[ಪಾದಟಿಪ್ಪಣಿಗಳು]
a ಯೆಹೋವನನ್ನು ಆರಾಧಿಸಲು ಜನರು ಯೆರೂಸಲೇಮಿನ ದೇವಾಲಯಕ್ಕೆ ಹೋಗುವುದನ್ನು ತಡೆಯಲಿಕ್ಕೆಂದೇ ಯಾರೊಬ್ಬಾಮನು ಇಸ್ರಾಯೇಲಿನ ಉತ್ತರದ ಹತ್ತು ಕುಲಗಳ ರಾಜ್ಯದಲ್ಲಿ ಬಸವನ ವಿಗ್ರಹಾರಾಧನೆಯನ್ನು ಪ್ರತಿಷ್ಠಾಪಿಸಿದನು.
b ಬೈಬಲ್ ಸಮಯಗಳಲ್ಲಿ, ಒಬ್ಬ ವ್ಯಕ್ತಿಯನ್ನು ಗೌರವಯುತವಾಗಿ ಹೂಳದಿರುವುದು ಅವನಿಗೆ ಯೆಹೋವ ದೇವರ ಅನುಗ್ರಹ ಇರದಿದ್ದದ್ದನ್ನು ಸೂಚಿಸುತ್ತಿತ್ತು.—ಯೆರೆಮೀಯ 25:32, 33.