ದೇವರ ವಾಕ್ಯವನ್ನು ಪ್ರೀತಿಸಿದ ಆಫ್ರಿಕದ ಒಬ್ಬ ದೀನ ಮನುಷ್ಯ
ಆಫ್ರಿಕದ ಸ್ಥಳಿಕ ಜನರೊಂದಿಗೆ ಬೈಬಲಿಗೆ ಸಂಬಂಧಿಸಿದ ವಿಷಯಗಳ ಕುರಿತಾದ ಸಂಭಾಷಣೆಯನ್ನು ಎಷ್ಟು ಸುಲಭವಾಗಿ ಆರಂಭಿಸಬಹುದು ಎಂಬುದನ್ನು ಆ ಸ್ಥಳಕ್ಕೆ ಭೇಟಿನೀಡುವವರು ಕಂಡುಕೊಳ್ಳುವಾಗ ಅವರಿಗೆ ಬಹಳ ಆಶ್ಚರ್ಯವಾಗುತ್ತದೆ. “ದೇವರ ರಾಜ್ಯ ಎಂದರೇನು?” ಅಥವಾ “ಆಹಾರದ ಕೊರತೆ, ರೋಗ, ಯುದ್ಧ ಮತ್ತು ಪಾತಕ ಈ ಮುಂತಾದ ಸಮಸ್ಯೆಗಳಿಗೆ ಒಂದು ನಿತ್ಯ ಪರಿಹಾರವಿದೆಯೋ?” ಎಂಬಂಥ ಪ್ರಶ್ನೆಗಳನ್ನು ಕೇಳಿದರೆ ಜನರು ಅತಿ ಆಸಕ್ತಿಯಿಂದ ಆಲಿಸುತ್ತಾರೆ. ಒಬ್ಬ ಅಪರಿಚಿತನು ಇದಕ್ಕೆ ಬೈಬಲಿನಿಂದ ಉತ್ತರವನ್ನು ತೋರಿಸುವಂತೆ ಸಹ ಅನೇಕರು ಸಂತೋಷದಿಂದ ಅನುಮತಿಸುತ್ತಾರೆ. ಇದು ಅನೇಕವೇಳೆ ಒಂದು ಕ್ರಮದ ಬೈಬಲ್ ಅಧ್ಯಯನಕ್ಕೆ ನಡೆಸುತ್ತದೆ. ವಿದ್ಯಾರ್ಥಿಗಳು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿದಂತೆ, ಅವರು ಸ್ನಾತ ಕ್ರೈಸ್ತರಾಗುತ್ತಾರೆ.
ಈ ರೀತಿಯಾಗಿ ಪ್ರತಿಕ್ರಿಯಿಸಿದ ಆಫ್ರಿಕದ ಮೊದಲ ವ್ಯಕ್ತಿಯ ಕುರಿತು ಬೈಬಲು ಅಪೊಸ್ತಲರ ಕೃತ್ಯಗಳು 8:26-40ರಲ್ಲಿ ತಿಳಿಸುತ್ತದೆ. ಇವನು, ಸತ್ಯ ದೇವರಾದ ಯೆಹೋವನನ್ನು ಆರಾಧಿಸಲಿಕ್ಕಾಗಿ ಯೆರೂಸಲೇಮಿಗೆ ಪ್ರಯಾಣಿಸಿದ್ದ ಐಥಿಯೋಪ್ಯದ ಒಬ್ಬ ಮನುಷ್ಯನಾಗಿದ್ದನು.
ಈ ಕೆಳಗಿನ ಚಿತ್ರದಲ್ಲಿ ತೋರಿಸಲ್ಪಟ್ಟಿರುವಂತೆ, ಐಥಿಯೋಪ್ಯದ ಆ ಮನುಷ್ಯನು ತನ್ನ ರಥದಲ್ಲಿ ಕೂತುಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದುತ್ತಾ ಯೆರೂಸಲೇಮಿನಿಂದ ತನ್ನ ಮನೆಗೆ ಹಿಂದಿರುಗುತ್ತಿದ್ದಾನೆ. ಒಬ್ಬ ಅಪರಿಚಿತನು ಅವನನ್ನು ಸಮೀಪಿಸಿ ಹೀಗೆ ಕೇಳುತ್ತಾನೆ: “ನೀನು ಓದುವದು ನಿನಗೆ ತಿಳಿಯುತ್ತದೋ?” ತನಗೆ ಸಹಾಯದ ಅಗತ್ಯವಿದೆ ಎಂದು ಐಥಿಯೋಪ್ಯದ ಆ ಮನುಷ್ಯನು ದೀನತೆಯಿಂದ ಒಪ್ಪಿಕೊಳ್ಳುತ್ತಾನೆ ಮತ್ತು ಕ್ರೈಸ್ತ ಸೌವಾರ್ತಿಕನಾದ ಫಿಲಿಪ್ಪನು ತನ್ನ ರಥವನ್ನು ಹತ್ತಿ ಕುಳಿತುಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಅನಂತರ, ತಾನು ಓದುತ್ತಿದ್ದ ಶಾಸ್ತ್ರವಚನದ ಭಾಗದ ಅರ್ಥವನ್ನು ವಿವರಿಸುವಂತೆ ಫಿಲಿಪ್ಪನನ್ನು ಕೇಳಿಕೊಳ್ಳುತ್ತಾನೆ. ಮೆಸ್ಸೀಯನಾದ ಯೇಸು ಕ್ರಿಸ್ತನ ಇತ್ತೀಚೆಗೆ ಸಂಭವಿಸಿದ ಮರಣಕ್ಕೆ ಆ ಪ್ರವಾದನೆಯು ಸೂಚಿಸುತ್ತದೆ ಎಂದು ಫಿಲಿಪ್ಪನು ಅವನಿಗೆ ವಿವರಿಸುತ್ತಾನೆ. “ಯೇಸುವಿನ ವಿಷಯವಾದ ಸುವಾರ್ತೆಯ” ಇತರ ವಿಷಯಗಳನ್ನೂ ಫಿಲಿಪ್ಪನು ಅವನಿಗೆ ತಿಳಿಸುತ್ತಾನೆ. ಮತ್ತು ನಿಸ್ಸಂದೇಹವಾಗಿ ಯೇಸುವಿನ ಪುನರುತ್ಥಾನದ ಕುರಿತಾಗಿಯೂ ಅವನು ಹೇಳುತ್ತಾನೆ.
ಈ ಎಲ್ಲಾ ಅದ್ಭುತಕರ ಸಂಗತಿಗಳನ್ನು ಕೇಳಿಸಿಕೊಂಡ ಬಳಿಕ ಐಥಿಯೋಪ್ಯದ ಆ ಮನುಷ್ಯನು ಯೇಸುವಿನ ಶಿಷ್ಯನಾಗಲು ಬಯಸುತ್ತಾನೆ. ಅವನು ಕೇಳುವುದು: “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”? ದೀಕ್ಷಾಸ್ನಾನವನ್ನು ಪಡೆದುಕೊಂಡ ನಂತರ, ಆಫ್ರಿಕದ ಆ ದೀನ ಮನುಷ್ಯನು ಸಂತೋಷದಿಂದ ತನ್ನ ಮನೆಗೆ ಹಿಂದಿರುಗುತ್ತಾನೆ. ಬೈಬಲ್ ಅವನ ಕುರಿತು ಮತ್ತೇನನ್ನೂ ತಿಳಿಸುವುದಿಲ್ಲ.
ಇಂದು, ಲೋಕದಾದ್ಯಂತವಿರುವ ಕೋಟ್ಯಂತರ ಜನರು ಅದೇ “ಸುವಾರ್ತೆಯ” ಕುರಿತು ಕಲಿಯುವಂತೆ ಯೆಹೋವನ ಸಾಕ್ಷಿಗಳು ಅವರಿಗೆ ಸಹಾಯಮಾಡುತ್ತಿದ್ದಾರೆ. ಸುಮಾರು 60 ಲಕ್ಷ ಉಚಿತ ಮನೆ ಬೈಬಲ್ ಅಧ್ಯಯನಗಳು ಈಗ ನಡೆಸಲ್ಪಡುತ್ತಿವೆ.