“ಮೂರು ಮಂದಿ ಜೋಯಿಸರು” ಅವರು ಯಾರಾಗಿದ್ದರು?
ಯೇಸುವಿನ ಜನನದ ಕುರಿತಾದ ದೃಶ್ಯಗಳಲ್ಲಿ ಸಾಮಾನ್ಯವಾಗಿ, ನೀಳುಡುಪುಗಳನ್ನು ಧರಿಸಿರುವ ಮೂವರು ಮನುಷ್ಯರು ತಮ್ಮ ಒಂಟೆಗಳೊಂದಿಗೆ, ಶಿಶು ಯೇಸು ಗೋದಲಿಯಲ್ಲಿ ಮಲಗಿಕೊಂಡಿರುವ ಒಂದು ಕೊಟ್ಟಿಗೆಗೆ ಬರುತ್ತಿರುವುದನ್ನು ತೋರಿಸಲಾಗುತ್ತದೆ. ವೈಭವಯುತವಾದ ಬಟ್ಟೆಗಳನ್ನು ಧರಿಸಿಕೊಂಡಿರುವ ಈ ಸಂದರ್ಶಕರನ್ನು ಸರ್ವಸಾಮಾನ್ಯವಾಗಿ ಮೂರು ಮಂದಿ ಜೋಯಿಸರು ಎಂದು ಕರೆಯಲಾಗುತ್ತದೆ. ಅವರ ಬಗ್ಗೆ ಬೈಬಲ್ ಏನು ಹೇಳುತ್ತದೆ?
ಬೈಬಲಿಗನುಸಾರ, ಈ ಮೂವರು ಜೋಯಿಸರು ‘ಮೂಡಣದೇಶದವರು’ ಆಗಿದ್ದು, ಅಲ್ಲಿ ಅವರಿಗೆ ಯೇಸುವಿನ ಜನನದ ಬಗ್ಗೆ ಸುದ್ದಿ ಸಿಕ್ಕಿತು. (ಮತ್ತಾಯ 2:1, 2, 9) ಇವರು ಯೂದಾಯಕ್ಕೆ ಬಂದು ತಲಪಲು ತುಂಬ ಸಮಯ ಹಿಡಿದಿರಬೇಕು. ಅವರು ಕಟ್ಟಕಡೆಗೆ ಯೇಸುವನ್ನು ಕಂಡುಹಿಡಿದಾಗ, ಅವನು ಒಂದು ಕೊಟ್ಟಿಗೆಯಲ್ಲಿದ್ದ ನವಜನಿತ ಶಿಶುವಾಗಿರಲಿಲ್ಲ. ಅದಕ್ಕೆ ಬದಲಾಗಿ, ಮರಿಯಳನ್ನೂ ‘ಆ ಮಗುವನ್ನೂ’ ಆ ಜೋಯಿಸರು ಕಂಡುಹಿಡಿದಾಗ, ಅವರು ಒಂದು ಮನೆಯಲ್ಲಿ ವಾಸಿಸುತ್ತಿದ್ದರು.—ಮತ್ತಾಯ 2:11.
ಬೈಬಲು ಈ ಪುರುಷರನ್ನು ‘ಜೋಯಿಸರು’ ಎಂದು ಕರೆಯುತ್ತದೆ, ಮತ್ತು ಇವರು ಎಷ್ಟು ಮಂದಿ ಇದ್ದರೆಂಬುದನ್ನು ಅದು ತಿಳಿಸುವುದಿಲ್ಲ. ದಿ ಆಕ್ಸ್ಫರ್ಡ್ ಕಂಪಾನ್ಯನ್ ಟು ದ ಬೈಬಲ್ ವಿವರಿಸುವುದು: “ತಮ್ಮನ್ನು ಬೇತ್ಲೆಹೇಮ್ಗೆ ನಡೆಸಿದ ನಕ್ಷತ್ರದತ್ತ ಆ ಸಂದರ್ಶಕರಿಗಿದ್ದ ಆಕರ್ಷಣೆಯು, ಮಂತ್ರವಿದ್ಯೆ ಮತ್ತು ಜೋತಿಷ್ಯಶಾಸ್ತ್ರದ ನಡುವಣ ಸಂಬಂಧವನ್ನು ಪ್ರತಿಬಿಂಬಿಸುತ್ತದೆ.” ಬೈಬಲು ಸ್ಪಷ್ಟವಾಗಿ ಎಲ್ಲ ವಿಧದ ಮಂತ್ರವಿದ್ಯೆಯನ್ನೂ, ನಕ್ಷತ್ರಗಳ ಮುಖಾಂತರ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುವ ಬಾಬೆಲಿನ ಆಚರಣೆಯನ್ನು ಬಲವಾಗಿ ಖಂಡಿಸುತ್ತದೆ.—ಧರ್ಮೋಪದೇಶಕಾಂಡ 18:10-12; ಯೆಶಾಯ 47:13.
ಈ ಮನುಷ್ಯರಿಗೆ ರವಾನಿಸಲ್ಪಟ್ಟ ಮಾಹಿತಿಯು ಯಾವುದೇ ರೀತಿಯ ಒಳಿತಿಗೆ ನಡೆಸಲಿಲ್ಲ. ಅದು ದುಷ್ಟ ರಾಜನಾದ ಹೆರೋದನ ಈರ್ಷ್ಯೆಭರಿತ ಸಿಟ್ಟನ್ನು ಕೆರಳಿಸಿತು. ಇದು ಯೋಸೇಫ, ಮರಿಯಳು ಮತ್ತು ಯೇಸು ಐಗುಪ್ತಕ್ಕೆ ಪಲಾಯನಗೈಯುವುದಕ್ಕೆ ಮತ್ತು ಬೇತ್ಲೆಹೇಮ್ನಲ್ಲಿ “ಎರಡು ವರುಷದೊಳಗಿನ” ಎಲ್ಲಾ “ಗಂಡುಕೂಸುಗಳ” ಹತ್ಯೆಗೆ ನಡಿಸಿತು. ಹೆರೋದನು ಆ ಜೋಯಿಸರಿಂದ ಏನನ್ನು ತಿಳಿದುಕೊಂಡನೊ ಅದರ ಆಧಾರದ ಮೇರೆಗೆ ಯೇಸುವಿನ ಜನನದ ಸಮಯವನ್ನು ಜಾಗರೂಕತೆಯಿಂದ ಕಂಡುಹಿಡಿದನು. (ಮತ್ತಾಯ 2:16) ಅವರ ಭೇಟಿಯಿಂದಾಗಿ ಉಂಟಾದ ಈ ಎಲ್ಲ ತೊಂದರೆಗಳನ್ನು ನೋಡುವಾಗ, ಅವರು ನೋಡಿದಂಥ ಆ ನಕ್ಷತ್ರ ಮತ್ತು “ಯೆಹೂದ್ಯರ ಅರಸನಾಗಿ ಹುಟ್ಟಿದವನ” ಬಗ್ಗೆ ಅವರು ಪಡೆದ ಸಂದೇಶವು, ಯೇಸುವನ್ನು ಕೊಂದುಹಾಕಲು ಹಾತೊರೆಯುತ್ತಿದ್ದ ದೇವರ ಶತ್ರುವಾದ ಪಿಶಾಚನಾದ ಸೈತಾನನಿಂದ ಬಂತೆಂಬ ನಿರ್ಣಯಕ್ಕೆ ಬರುವುದು ನ್ಯಾಯಸಮ್ಮತವಾಗಿದೆ.—ಮತ್ತಾಯ 2:1, 2.