ರಹಸ್ಯವಾಗಿಡಲ್ಪಟ್ಟ ವಿಷಯವನ್ನು ತಿಳಿಸುವ ಸಮಯ
ನಿರ್ದಿಷ್ಟ ವಿಷಯಗಳನ್ನು ರಹಸ್ಯವಾಗಿಡುವುದು, ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕಲಹವನ್ನು ದೂರವಿರಿಸಲು ಸಹಾಯಮಾಡಬಲ್ಲದು. ಆದರೆ ರಹಸ್ಯವಾಗಿಡಲ್ಪಟ್ಟ ವಿಷಯವನ್ನು ತಿಳಿಸುವ ಸಮಯವೂ ಇದೆಯೊ? ತನ್ನ ದೇವರ ಕುರಿತಾಗಿ ಪ್ರವಾದಿಯಾದ ಆಮೋಸನು ಏನು ಹೇಳುತ್ತಾನೆಂಬುದನ್ನು ಗಮನಿಸಿರಿ: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.” (ಆಮೋಸ 3:7) ಈ ಮಾತುಗಳಿಂದ ನಾವು ಗೋಪ್ಯತೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಒಂದು ಪಾಠವನ್ನು ಕಲಿಯಬಲ್ಲೆವು. ಯೆಹೋವನು ನಿರ್ದಿಷ್ಟ ವಿಷಯಗಳನ್ನು ಒಂದು ನಿರ್ದಿಷ್ಟ ಸಮಯಾವಧಿಯ ವರೆಗೆ ರಹಸ್ಯವಾಗಿಡಬಹುದು ಮತ್ತು ಕಟ್ಟಕಡೆಗೆ ಅದನ್ನು ಕೆಲವು ವ್ಯಕ್ತಿಗಳಿಗೆ ತಿಳಿಸಬಹುದು. ಈ ವಿಷಯದಲ್ಲಿ ನಾವು ಯೆಹೋವನನ್ನು ಹೇಗೆ ಅನುಕರಿಸಬಲ್ಲೆವು?
ಕೆಲವೊಮ್ಮೆ, ಕ್ರೈಸ್ತ ಸಭೆಯಲ್ಲಿರುವ ನೇಮಿತ ಕುರುಬರು, ಒಂದು ನಿರ್ದಿಷ್ಟ ವಿಷಯವನ್ನು ಗೋಪ್ಯವಾಗಿಡುವುದು ಒಳ್ಳೇದೆಂದು ಎಣಿಸುತ್ತಾರೆ. (ಅ. ಕೃತ್ಯಗಳು 20:28) ಉದಾಹರಣೆಗಾಗಿ, ಸಭೆಯ ಪ್ರಯೋಜನವನ್ನು ಮನಸ್ಸಿನಲ್ಲಿಟ್ಟವರಾಗಿ, ಅವರು ಸಭಾ ಜವಾಬ್ದಾರಿಗಳಲ್ಲಿನ ಕೆಲವೊಂದು ಏರ್ಪಾಡುಗಳು ಇಲ್ಲವೆ ಬದಲಾವಣೆಗಳ ಕುರಿತಾದ ವಿವರಗಳನ್ನು ನಿರ್ದಿಷ್ಟ ಸಮಯದ ವರೆಗೆ ರಹಸ್ಯವಾಗಿಡಲು ನಿರ್ಣಯಿಸಬಹುದು.
ಆದರೆ ಅಂಥ ಸಂದರ್ಭದಲ್ಲಿ, ಆ ವಿಷಯವು ತಿಳಿಸಲ್ಪಡಬೇಕೊ ಇಲ್ಲವೊ, ತಿಳಿಸಲ್ಪಡಬೇಕಾದರೆ ಯಾವಾಗ ಮತ್ತು ಹೇಗೆ ತಿಳಿಸಲ್ಪಡಬೇಕೆಂಬುದನ್ನು ಸಂಬಂಧಪಟ್ಟವರಿಗೆ ಸ್ಪಷ್ಟಪಡಿಸುವುದು ಪ್ರಾಮುಖ್ಯವಾಗಿದೆ. ಒಂದು ವಿಷಯವು ಯಾವಾಗ ಬಹಿರಂಗಗೊಳಿಸಲ್ಪಡುವುದು ಎಂಬುದನ್ನು ತಿಳಿದಿರುವುದು, ಅವರಿಗೆ ಆ ಗೋಪ್ಯತೆಯನ್ನು ಕಾಪಾಡಿಕೊಳ್ಳಲು ಸಹಾಯಮಾಡಬಹುದು.—ಜ್ಞಾನೋಕ್ತಿ 25:9.