ದುಡಿಮೆ ಹಾಗೂ ವಿರಾಮವನ್ನು ಸಮತೂಕದಲ್ಲಿರಿಸುವುದು
“ವಿರಾಮವು ಒಂದು ಬೆಲೆಬಾಳುವ ಸುಂದರ ಉಡುಪು, ಆದರೆ ಅದು ಅನುದಿನದ ಬಳಕೆಗೆ ಸೂಕ್ತವಾಗಿರಲಾರದು.” ಈ ಮಾತುಗಳೊಂದಿಗೆ, ಒಬ್ಬ ಅನಾಮಧೇಯ ಬರಹಗಾರನು ವಿರಾಮದ ಮಹತ್ವವನ್ನು ಯೋಗ್ಯವಾಗಿ ದೃಷ್ಟಾಂತಿಸುತ್ತಾನೆ. ಆದರೆ ವಿರಾಮವನ್ನು, ಫಲಪ್ರದ ಚಟುವಟಿಕೆಯೊಂದಿಗೆ ಸಮತೂಕದಲ್ಲಿ ಇರಿಸಬೇಕೆಂಬುದು ಅವನ ಅಭಿಪ್ರಾಯವಾಗಿದೆ.
ಇದೇ ವಿಷಯದ ಕುರಿತು, ಪ್ರೇರಿತ ಬೈಬಲ್ ಬರಹಗಾರನಾದ ಸೊಲೊಮೋನನು ಸಹ ಮಾತನಾಡಿದನು. ನಾವು ತ್ಯಜಿಸಬೇಕಾಗಿರುವ ಎರಡು ವೈಪರೀತ್ಯಗಳನ್ನು ಈ ವಿವೇಕಿ ಅರಸನು ಗುರುತಿಸಿದನು. ಪ್ರಥಮವಾಗಿ ಅವನು ಗಮನಿಸಿದ್ದು: “ಮೂಢನು ಅಪ್ಪುಗೈ ಮಾಡಿಕೊಂಡು ತನ್ನ ಮಾಂಸವನ್ನು ತಾನೇ ತಿನ್ನುವನು.” (ಪ್ರಸಂಗಿ 4:5) ಹೌದು, ಸೋಮಾರಿತನವು ಒಬ್ಬನನ್ನು ಬಡವನನ್ನಾಗಿ ಮಾಡಬಲ್ಲದು. ಫಲಸ್ವರೂಪವಾಗಿ, ಇದು ಆ ಸೋಮಾರಿಯ ಆರೋಗ್ಯವನ್ನು, ಅವನ ಜೀವವನ್ನು ಸಹ ಅಪಾಯಕ್ಕೊಡ್ಡಬಹುದು. ಮತ್ತೊಂದು ಕಡೆಯಲ್ಲಿ, ದುಡಿಮೆಯೆಂಬ ಬಲಿಪೀಠದ ಮೇಲೆ ಎಲ್ಲವನ್ನೂ ಅರ್ಪಿಸುವ ಜನರು ಸಹ ಇದ್ದಾರೆ. ಅವರ ನಿರಂತರ ದುಡಿತವು, “ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ”ವಾಗಿದೆ ಎಂದು ಸೊಲೊಮೋನನು ವರ್ಣಿಸಿದನು.—ಪ್ರಸಂಗಿ 4:4.
ಸಕಾರಣದಿಂದಲೇ, ಸೊಲೊಮೋನನು ಒಂದು ಸಮತೂಕವನ್ನು ಸೂಚಿಸಿದನು: “ಗಾಳಿಯನ್ನು ಹಿಂದಟ್ಟುವ ವ್ಯರ್ಥ ಪ್ರಯಾಸದ ಬೊಗಸೆಗಿಂತಲೂ ನೆಮ್ಮದಿಯ [“ವಿರಾಮದ,” NW] ಸೇರೆಯೇ ಲೇಸು.” (ಪ್ರಸಂಗಿ 4:6) ವ್ಯಕ್ತಿಯೊಬ್ಬನು ‘ತನ್ನ ಪ್ರಯಾಸದ ಕಾರಣ ಸುಖವನ್ನು’ ಅನುಭವಿಸಬೇಕು, ಅಂದರೆ ತಾನು ಸಂಪಾದಿಸಿದ್ದನ್ನು ಅನುಭವಿಸಲು ಅವನು ಆಗಿಂದಾಗ್ಗೆ ಸಮಯವನ್ನು ತೆಗೆದುಕೊಳ್ಳಬೇಕು. (ಪ್ರಸಂಗಿ 2:24) ಅಷ್ಟೇ ಅಲ್ಲ, ಐಹಿಕ ದುಡಿಮೆಯ ಜೊತೆಗೆ ಸಮಯವನ್ನು ಕೇಳಿಕೊಳ್ಳುವ ಬೇರೆ ವಿಷಯಗಳೂ ಇವೆ. ದೃಷ್ಟಾಂತಕ್ಕೆ, ನಮ್ಮ ಕುಟುಂಬಕ್ಕಾಗಿ ಸಮಯವನ್ನು ಕೊಡುವುದು ಆವಶ್ಯಕವಾಗಿದೆ. ಅಂದರೆ, ಐಹಿಕ ದುಡಿಮೆಯಲ್ಲ, ದೇವರಿಗೆ ಸೇವೆಸಲ್ಲಿಸುವುದೇ ನಮ್ಮ ಪ್ರಧಾನ ಹಂಗಾಗಿದೆ ಎಂದು ಸೊಲೊಮೋನನು ಒತ್ತಿಹೇಳಿದನು. (ಪ್ರಸಂಗಿ 12:13) ದುಡಿಮೆಯ ಕುರಿತು ಸಮತೂಕ ನೋಟವನ್ನು ಹೊಂದಿರುವ ಜನರಲ್ಲಿ ನೀವೂ ಒಬ್ಬರಾಗಿದ್ದೀರೋ?