“ನಂಬಿಕೆಯಿಂದ ಉಂಟಾದ ಆಂತರಿಕ ಬಲ”
ಇಸವಿ 1998ರಲ್ಲಿ, ಗೀ ಕಾನೊನೀಸೀ ಎಂಬ ವ್ಯಕ್ತಿಯಿಂದ ಬರೆಯಲ್ಪಟ್ಟ, ಲೇ ಟೇಮ್ವೆನ್ ಡ ಸೇಓವ ಫಾಸ್ ಆ ಈಟ್ಲರ್ (ಹಿಟ್ಲರನ ಎದುರಿನಲ್ಲಿ ಯೆಹೋವನ ಸಾಕ್ಷಿಗಳು) ಎಂಬ ಶಿರೋನಾಮವುಳ್ಳ ಒಂದು ಹೊಸ ಪುಸ್ತಕವು ಫ್ರೆಂಚ್ ಭಾಷೆಯಲ್ಲಿ ಬಿಡುಗಡೆಯಾಯಿತು. ಈ ಪುಸ್ತಕವು ಬಿಡುಗಡೆಯಾದಾಗ, ಇದರ ಕುರಿತು ತುಂಬ ವಿಮರ್ಶೆಯು ನಡೆಯಿತು. ಈ ಪುಸ್ತಕದ ಕುರಿತಾದ ತನ್ನ ಮುನ್ನುಡಿಯಲ್ಲಿ, ಗೌರವಾನ್ವಿತ ಫ್ರೆಂಚ್ ಇತಿಹಾಸಕಾರನಾದ ಫ್ರಾನ್ಸ್ವಾ ಬೇಡರೀಡಾ ಬರೆದುದು: “ಈ ಪುಸ್ತಕವು ಜನರಿಂದ ಒಳ್ಳೆಯ ರೀತಿಯಲ್ಲಿ ಸ್ವೀಕರಿಸಲ್ಪಟ್ಟಿತು. ಇದರಲ್ಲಿ ತುಂಬ ಅಜ್ಞಾತ ಮಾಹಿತಿಗಳು ಕೊಡಲ್ಪಟ್ಟಿವೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಸಮಯೋಚಿತವಾಗಿ ಇದು ಬಿಡುಗಡೆಮಾಡಲ್ಪಟ್ಟಿತು ಎಂಬ ಕಾರಣಕ್ಕಾಗಿಯೇ. . . . ಜರ್ಮನ್ ರಾಷ್ಟ್ರದ ಆಳ್ವಿಕೆಯ ಕೆಳಗೆ ಯೆಹೋವನ ಸಾಕ್ಷಿಗಳು ಎಂತಹ ಕಷ್ಟಸಂಕಟಗಳನ್ನು ಅನುಭವಿಸಿದರು ಎಂಬುದರ ಬಗ್ಗೆ ಪರಿಣತರನ್ನು ಬಿಟ್ಟರೆ ಇನ್ನು ಯಾರಿಗೆ ಗೊತ್ತಿದೆ? ಆದರೆ, ಆ 12 ವರ್ಷಗಳ ಆಳ್ವಿಕೆಯಾದ್ಯಂತ, ಯೆಹೋವನ ಸಾಕ್ಷಿಗಳು ಸತತವಾದ ಕ್ರೌರ್ಯ ಹಾಗೂ ಹಿಂಸೆಗೆ ಗುರಿಯಾದರು. ಅವರು ಕೂಟಶಿಬಿರಗಳ ಘೋರತೆಯನ್ನು ಸಹ ಅನುಭವಿಸಿದರು. ತಮ್ಮ ನಂಬಿಕೆ ಹಾಗೂ ನಿಶ್ಚಿತಾಭಿಪ್ರಾಯಗಳಿಗೋಸ್ಕರ ಅತ್ಯುಚ್ಚ ಬೆಲೆಯನ್ನು ಅವರು ತೆತ್ತರು. ಇತಿಹಾಸವು ಈ ಕ್ರೈಸ್ತರನ್ನು ಏಕೆ ಮರೆತುಬಿಟ್ಟಿದೆ? . . .
“ಒಂದು ಚಿಕ್ಕದಾದ, ಲೋಕವ್ಯಾಪಕವಾಗಿರುವ, ಅಪಾಯರಹಿತ ಪಂಥವನ್ನು ಈ ರೀತಿಯ ಮೃಗೀಯ ಹಾಗೂ ಉದ್ದೇಶಪೂರ್ವಕವಾದ ಹಿಂಸೆಗೆ ಏಕೆ ಗುರಿಪಡಿಸಲಾಯಿತು? ಇದು ವಿರೋಧಾಭಾಸದ ಮುಖ್ಯ ಅಂಶವಾಗಿದೆ. ಜರ್ಮನಿಯ ಜನಸಂಖ್ಯೆಗೆ ಹೋಲಿಸುವಾಗ, ಯೆಹೋವನ ಸಾಕ್ಷಿಗಳ ಜನಸಂಖ್ಯೆ ತುಂಬ ಕಡಿಮೆಯಿತ್ತು, ಅಂದರೆ ಜರ್ಮನಿಯಲ್ಲಿದ್ದ ಒಟ್ಟು ಆರು ಕೋಟಿಗಿಂತಲೂ ಹೆಚ್ಚು ನಿವಾಸಿಗಳಲ್ಲಿ ಕೇವಲ 20,000 ಮಂದಿ ಸಾಕ್ಷಿಗಳಿದ್ದರು ಎಂದು ಸಂಖ್ಯಾಸಂಗ್ರಹಣಗಳು ತೋರಿಸುತ್ತವೆ. ಅಷ್ಟುಮಾತ್ರವಲ್ಲ, ಅವರು ನೀತಿನಿಯಮಗಳಿಗೆ ಗೌರವ ನೀಡುತ್ತಾ, ಯಾರಿಗೂ ಅಪಾಯವನ್ನು ತರದಂತಹ ಶಾಂತಿಭರಿತ ನಾಗರಿಕರಾಗಿದ್ದರು. ಅವರು ದುಡಿದು ತಮ್ಮ ಮಕ್ಕಳನ್ನು ಯೋಗ್ಯವಾದ ರೀತಿಯಲ್ಲಿ ಬೆಳೆಸಲು ಬಯಸುತ್ತಿದ್ದರಷ್ಟೆ. . . .
“ವಿಶ್ವಾಸಿಗಳ ಬಲವಾದ ಹಾಗೂ ವಿಜಯಶಾಲಿ ಆತ್ಮಿಕ ಪ್ರತಿರೋಧದ ವಿರುದ್ಧ ಈ ಹಿಂಸೆಯು ಬಂದೆರಗಿತು. ಇವರು, ಯೇಸು ಕ್ರಿಸ್ತನಲ್ಲಿ ತಾವು ಇಟ್ಟಿದ್ದಂತಹ ನಂಬಿಕೆಯ ಆಂತರಿಕ ಬಲದಿಂದ, ಹೊರಗಿನ ಒತ್ತಡಗಳ ಬಲವನ್ನು ವಿರೋಧಿಸಲು ಶಕ್ತರಾಗಿದ್ದರು. ಈ ಹಿಂಸೆಯು, ಸರಕಾರಿ ಪೊಲೀಸರ ಕೈಯಿಂದ ಶಾರೀರಿಕ ಹಿಂಸಾಕೃತ್ಯವನ್ನು ಅನುಭವಿಸುವುದರಿಂದ ಹಿಡಿದು, ವೀರವರ್ತನೆ ಮತ್ತು ವೀರಮರಣದ ಹಂತವನ್ನೂ ತಲಪಿತ್ತು.”
ಧಾರ್ಮಿಕ ಅಸಹಿಷ್ಣುತೆಯ ಎದುರಿನಲ್ಲಿ ತಮ್ಮ ಕ್ರೈಸ್ತ ನಂಬಿಕೆಗೋಸ್ಕರ ಹುತಾತ್ಮರೋಪಾದಿ ಕಷ್ಟಾನುಭವಿಸಿದ ಯೆಹೋವನ ಸಾಕ್ಷಿಗಳ ಕಥೆಯು ನಿಜವಾಗಿಯೂ ತುಂಬ ಪ್ರಭಾವಶಾಲಿಯಾದದ್ದಾಗಿದೆ. ಲಾ ಕ್ರವಾ ಎಂಬ ಒಂದು ಪ್ರಸಿದ್ಧ ಫ್ರೆಂಚ್ ಕ್ಯಾತೊಲಿಕ್ ವಾರ್ತಾಪತ್ರಿಕೆಯು, ಈ ಮೇಲಿನ ಪುಸ್ತಕದ ಕುರಿತಾದ ತನ್ನ ಪುನರ್ವಿಮರ್ಶೆಯಲ್ಲಿ ಈ ಹೃದಯಸ್ಪರ್ಶಿ ಮಾತುಗಳನ್ನು ಕೂಡಿಸಿತು: “ಯೆಹೋವನ ಸಾಕ್ಷಿಗಳ ಕುರಿತು ಗೊತ್ತಿರುವ ಅಲ್ಪಸ್ವಲ್ಪ ಇತಿಹಾಸದಿಂದ, ಗೀ ಕಾನೊನೀಸೀಯವರು ಅನೇಕಾನೇಕ ಪುರಾವೆಗಳನ್ನು ಒಟ್ಟುಗೂಡಿಸಿದ್ದಾರೆ. ನಂಬಿಕೆಯಿಂದ ಉಂಟಾದ ಆಂತರಿಕ ಬಲದ ಕುರಿತು, ಅಂದರೆ ಮಕ್ಕಳ ನಡುವೆ ಕಡೇ ವರೆಗೂ ಇದ್ದ ಅಚಲ ನಂಬಿಕೆಯ ಕುರಿತು, ಅತಿ ಸರಳವಾದ ಮಾತುಗಳಲ್ಲಿ ಅವರು ವ್ಯಕ್ತಪಡಿಸಿರುವುದನ್ನು ನೋಡುವುದು ಒಬ್ಬನನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತದೆ. ಈ ಸ್ಮರಣೆಯು, ಯೆಹೋವನ ಸಾಕ್ಷಿಗಳ ಕ್ರೈಸ್ತ ಸ್ವಭಾವದ ಕುರಿತು ಸದ್ಯದಲ್ಲಿ ನಡೆಯುತ್ತಿರುವ ವಿವಾದಕ್ಕೆ ಹಿನ್ನೆಲೆಯನ್ನು ಒದಗಿಸತಕ್ಕದ್ದು.”