ನೀವು ಜೀವವನ್ನು ಪ್ರೀತಿಸುತ್ತೀರೊ?
“ನಾನು ಬೆಳಕನ್ನು ನೋಡಲಿಚ್ಛಿಸುತ್ತೇನೆ.” ಈ ಮಾತುಗಳನ್ನು ಇಟ್ಯಾಲಿಯನ್ ಕವಿಯಾದ ಜಾಕೋಮೋ ಲೇಅಪಾರ್ಡೀ, ತನ್ನ ಮರಣದ ಮುಂಚೆ ತನ್ನ ಶುಶ್ರೂಷೆಯನ್ನು ಮಾಡುತ್ತಿದ್ದವರಿಗೆ ಹೇಳಿದನೆಂದು ವರದಿಸಲಾಗಿದೆ. ಈ ಮಾತುಗಳು, ಬೆಳಕಿನಿಂದ ಪ್ರತಿನಿಧಿಸಲ್ಪಟ್ಟ ಜೀವಕ್ಕಾಗಿ, ಮನುಷ್ಯನಿಗಿರುವ ತೀವ್ರವಾದ ಒಲವನ್ನು ಸೂಚಿಸುತ್ತವೆ.
ಜೀವದ ಬಗ್ಗೆ ತೀವ್ರವಾದ ಒಲವು, ಒಂದು ಅತ್ಯಮೂಲ್ಯವಾದ ಅಂತಃಪ್ರೇರಣೆಯಾಗಿದೆ. ಈ ಅಂತಃಪ್ರೇರಣೆಯೇ, ಅಪಾಯಗಳಿಂದ ದೂರವಿರುವಂತೆ ಮತ್ತು ಜೀವಿಸುತ್ತಾ ಇರಲು ತಮ್ಮಿಂದ ಸಾಧ್ಯವಾದುದೆಲ್ಲವನ್ನೂ ಮಾಡುವಂತೆ ಹೆಚ್ಚಿನ ಜನರನ್ನು ಪ್ರೇರಿಸುತ್ತದೆ. ಈ ವಿಷಯದಲ್ಲಿ ಮನುಷ್ಯರಿಗೂ ಪ್ರಾಣಿಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಇರುವುದಿಲ್ಲ, ಏಕೆಂದರೆ ಪ್ರಾಣಿಗಳಲ್ಲೂ ಬದುಕಿ ಉಳಿಯಬೇಕು ಎಂಬ ಸಹಜ ಗುಣವು ತುಂಬ ಪ್ರಬಲವಾಗಿರುತ್ತದೆ.
ಆದರೆ ಜೀವಿಸಲಿಕ್ಕೂ ಪ್ರೀತಿಸಲಿಕ್ಕೂ ಯಾವ ರೀತಿಯ ಜೀವನವು ನಿಜವಾಗಿಯೂ ಯೋಗ್ಯವಾಗಿದೆ? ಅದು ಉಸಿರಾಡುವುದನ್ನು ಮತ್ತು ಚಲಿಸುವುದನ್ನು ಒಳಗೊಂಡಿರುವ ಬರಿಯ ಶಾರೀರಿಕ ಅಸ್ತಿತ್ವವಾಗಿರುವುದಿಲ್ಲ. ಇಲ್ಲವೇ ಜೀವನದಿಂದ ಸಾಧ್ಯವಾದಷ್ಟು ಲಾಭವನ್ನು ಪಡೆದುಕೊಳ್ಳಿರಿ ಎಂಬ ಅಭಿಪ್ರಾಯದಿಂದಲೂ ಸಂತೃಪ್ತಿಯು ಸಿಗುವಂತಹದ್ದಾಗಿರುವುದಿಲ್ಲ. “ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ” ಎಂಬ ಎಪಿಕ್ಯೂರಸನ ತತ್ವಜ್ಞಾನವು ಸಹ, ಜನರಿಗೆ ಸಂತೃಪ್ತಿಯನ್ನು ತಂದಿರುವುದಿಲ್ಲ. (1 ಕೊರಿಂಥ 15:32) ಮನುಷ್ಯನಿಗೆ ಅನೇಕ ಮೂಲಭೂತ ಭೌತಿಕ ಅಗತ್ಯಗಳಿರುವುದರ ಜೊತೆಗೆ, ಅವನಿಗೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿರುಚಿಗಳು, ಅಲ್ಲದೆ ದೇವರಲ್ಲಿರುವ ನಂಬಿಕೆಗೆ ಸಂಬಂಧಿಸಿದ ಆತ್ಮಿಕ ಅಗತ್ಯಗಳು ಸಹ ಇವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ವಿಷಾದಕರವಾಗಿ, ಭೂಮಿಯ ಅನೇಕ ಕ್ಷೇತ್ರಗಳಲ್ಲಿ ತೀರ ದುರವಸ್ಥೆಯ ಸಾಮಾಜಿಕ ಹಾಗೂ ಪರಿಸರೀಯ ಪರಿಸ್ಥಿತಿಗಳಿಂದಾಗಿ, ಕೋಟಿಗಟ್ಟಲೆ ಜನರು ಕೇವಲ ಬದುಕಿರುವುದಕ್ಕಿಂತಲೂ ಇನ್ನಾವ ಹೆಚ್ಚಿನ ಸೌಕರ್ಯಗಳನ್ನೂ ಅನುಭವಿಸುವುದಿಲ್ಲ. ಮತ್ತು ತಿನ್ನುವ, ಕುಡಿಯುವ, ಸ್ವತ್ತುಗಳನ್ನು ಪಡೆಯುವ ಇಲ್ಲವೆ ಲೈಂಗಿಕ ಬಯಕೆಗಳನ್ನು ತಣಿಸುವಂತಹ ಶಾರೀರಿಕ ಅಗತ್ಯಗಳನ್ನು ಮಾತ್ರ ತೃಪ್ತಿಪಡಿಸಿಕೊಳ್ಳುವ ಜನರ ಜೀವನವು, ಹೆಚ್ಚುಕಡಿಮೆ ಪ್ರಾಣಿಗಳ ಜೀವನದಂತಿದ್ದು, ಸ್ವಲ್ಪವೇ ಸಂತೃಪ್ತಿಯನ್ನು ನೀಡುವಂತಹದ್ದಾಗಿರುತ್ತದೆ. ಇಂತಹವರು, ಮನುಷ್ಯನ ಬುದ್ಧಿಶಕ್ತಿ ಹಾಗೂ ಭಾವನೆಗಳಿಗೆ ಸಂತೃಪ್ತಿಯನ್ನು ನೀಡುವಂತಹ ಜೀವನದ ಹೆಚ್ಚು ಅರ್ಥಭರಿತವಾದ ಸಾಧನಗಳ ಉಪಯೋಗವನ್ನು ಮಾಡಿಕೊಳ್ಳುವುದೇ ಇಲ್ಲ. ಅಲ್ಲದೆ, ತಮ್ಮ ಸ್ವಾರ್ಥಪರ ಬಯಕೆಗಳನ್ನು ಮಾತ್ರ ತೃಪ್ತಿಪಡಿಸಿಕೊಳ್ಳಲು ಬಯಸುವ ಜನರು, ಜೀವನವನ್ನು ಪೂರ್ತಿಯಾಗಿ ಅನುಭವಿಸಲು ತಪ್ಪಿಹೋಗುವರು ಮಾತ್ರವಲ್ಲ, ತಾವು ವಾಸಿಸುವ ಸಮಾಜಕ್ಕೂ ನಷ್ಟವನ್ನು ಉಂಟುಮಾಡುತ್ತಾರೆ. ಅಷ್ಟುಮಾತ್ರವಲ್ಲದೆ, ಅವರು ಇತರರ ಅಭಿರುಚಿಗಳಿಗೆ ಯಾವ ಪ್ರೋತ್ಸಾಹನೆಯನ್ನೂ ನೀಡುವುದಿಲ್ಲ.
ಈ ವಿಷಯವನ್ನು ದೃಢಪಡಿಸುತ್ತಾ, ಬಾಲಾಪರಾಧಗಳೊಂದಿಗೆ ವ್ಯವಹರಿಸುವ ನ್ಯಾಯಾಧೀಶನೊಬ್ಬನು ಹೇಳುವುದೇನೆಂದರೆ, “ಮೌಲ್ಯಗಳ ಕುಸಿತ, ಅರ್ಹರಲ್ಲದ ಆದರ್ಶ ವ್ಯಕ್ತಿಗಳ ಕೊಂಡಾಡುವಿಕೆ, ಮತ್ತು ಬೇಗನೆ ಹಣಸಂಪಾದಿಸುವ ವಿಧಾನದ ಮೂಲಕ ದೊರೆಯುವ ಯಶಸ್ಸು, ಇವೆಲ್ಲವೂ ಅತಿಯಾದ ಸ್ಪರ್ಧಾತ್ಮಕ ಮನೋಭಾವವನ್ನು ಪ್ರವರ್ಧಿಸಲು” ಸಹಾಯಮಾಡುತ್ತವೆ. ಇದು, ಸಮಾಜಕ್ಕೆ ಹಾನಿಕರವಾಗಿರುವ ಮತ್ತು ವಿಶೇಷವಾಗಿ ಅಮಲೌಷಧಗಳ ಮರೆಹೋಗುವಂತಹ ಯುವಕರಿಗೆ ವಿನಾಶಕಾರಿಯಾಗಿರುವ ವರ್ತನೆಗೆ ನಡೆಸುತ್ತದೆ.
ಜೀವನವು ಅನೇಕ ಆಕರ್ಷಣೆಗಳನ್ನು ನಮ್ಮ ಮುಂದಿಡುತ್ತದೆಂಬುದು ಬಹುಶಃ ನಿಮಗೆ ಗೊತ್ತಿದೆ: ಆಕರ್ಷಣೀಯ ಸ್ಥಳಗಳಲ್ಲಿ ರಜೆಯನ್ನು ಕಳೆಯುವುದು, ಆಸಕ್ತಿಕರವಾದ ವಿಷಯಗಳನ್ನು ಓದುವುದು ಇಲ್ಲವೆ ಸಂಶೋಧನೆ ಮಾಡುವುದು, ಹಿತಕರವಾದ ಸಾಹಚರ್ಯ, ಮತ್ತು ಮಧುರವಾದ ಸಂಗೀತ. ಮತ್ತು ಸಂತೃಪ್ತಿಯನ್ನು ಹೆಚ್ಚಿಸುವ ಇಲ್ಲವೆ ಕಡಿಮೆಗೊಳಿಸುವ ಇತರ ಚಟುವಟಿಕೆಗಳೂ ಇವೆ. ಯಾರಿಗೆ ದೇವರಲ್ಲಿ, ಮತ್ತು ವಿಶೇಷವಾಗಿ ಬೈಬಲಿನ ದೇವರಾದ ಯೆಹೋವನಲ್ಲಿ ಆಳವಾದ ನಂಬಿಕೆಯಿದೆಯೊ, ಅಂತಹವರಿಗೆ ಜೀವನವನ್ನು ಪ್ರೀತಿಸಲು ಇನ್ನೂ ಹೆಚ್ಚಿನ ಕಾರಣಗಳಿವೆ. ನಿಜವಾದ ನಂಬಿಕೆಯು ಬಲದ ಹಾಗೂ ಪ್ರಶಾಂತತೆಯ ಮೂಲವಾಗಿದ್ದು, ಕಷ್ಟಕರವಾದ ಸಮಯಗಳನ್ನು ಜನರು ನಿಭಾಯಿಸುವಂತೆ ಸಹಾಯಮಾಡಬಲ್ಲದು. ಸತ್ಯ ದೇವರನ್ನು ನಂಬುವವರು, “[ಯೆಹೋವನು] ನನ್ನ ಸಹಾಯಕನು, ಭಯಪಡೆನು,” ಎಂಬುದಾಗಿ ಪೂರ್ಣ ಭರವಸೆಯಿಂದ ಹೇಳಬಲ್ಲರು. (ಇಬ್ರಿಯ 13:6) ದೇವರ ಪ್ರೀತಿಯನ್ನು ಬಲ್ಲವರು, ಆತನ ಪ್ರೀತಿಯನ್ನು ಅನುಭವಿಸುವವರಾಗಿದ್ದಾರೆ. ಅವರು ಆತನ ಪ್ರೀತಿಗೆ ಪ್ರತಿಕ್ರಿಯಿಸಿ, ಅದರಿಂದ ಬಹಳವಾಗಿ ಸಂತೋಷಿಸುತ್ತಾರೆ. (1 ಯೋಹಾನ 4:7, 8, 16) ಸಂತೃಪ್ತಿಯನ್ನು ತರುವಂತಹ ಸಕ್ರಿಯ ಹಾಗೂ ಪರೋಪಕಾರಿ ಜೀವನವನ್ನು ಅವರು ನಡೆಸಸಾಧ್ಯವಿದೆ. ಇದು, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬುದಾಗಿ ಯೇಸು ಕ್ರಿಸ್ತನು ಹೇಳಿದಂತೆಯೇ ಇದೆ.—ಅ. ಕೃತ್ಯಗಳು 20:35.
ಆದರೆ, ವಿಷಾದಕರವಾಗಿ ಈ ಪ್ರಚಲಿತ ಜೀವನಕ್ಕೆ ಮತ್ತೊಂದು ಮುಖವೂ ಇದೆ. ಜೀವನವನ್ನು ಅಸಹನೀಯವಾಗಿ ಮಾಡುವ ವೇದನಾಮಯ ವೈಶಿಷ್ಟ್ಯಗಳಲ್ಲಿ, ವ್ಯಾಪಕವಾಗಿರುವ ಕಷ್ಟಾನುಭವ, ಅನ್ಯಾಯ, ಬಡತನ, ಅನಾರೋಗ್ಯ, ಮತ್ತು ಮರಣ ಕೇವಲ ಕೆಲವಾಗಿವೆ. ಹಿಂದೆ ಇಸ್ರಾಯೇಲ್ ಜನಾಂಗವನ್ನು ಆಳಿದ ಐಶ್ವರ್ಯವಂತನೂ, ಶಕ್ತಿಶಾಲಿಯೂ, ಹಾಗೂ ಬುದ್ಧಿವಂತನೂ ಆದ ಅರಸನಾದ ಸೊಲೊಮೋನನಲ್ಲಿ, ಜನರಿಗೆ ಸಂತೋಷವನ್ನು ತರಬಲ್ಲ ಸುಖಸೌಕರ್ಯಗಳ ಕೊರತೆಯೇ ಇರಲಿಲ್ಲ. ಹಾಗಿದ್ದರೂ, ಯಾವುದೊ ಒಂದು ವಿಷಯವು ಅವನಿಗೆ ವ್ಯಥೆಯನ್ನು ಉಂಟುಮಾಡಿತು. “ಜ್ಞಾನದಿಂದಲೂ ತಿಳುವಳಿಕೆಯಿಂದಲೂ” ಸಾಧಿಸಿದ ‘ತನ್ನ ಕೆಲಸದ’ ಸಾಫಲ್ಯವನ್ನು ತಾನು ಮರಣಹೊಂದಿದಾಗ ಮತ್ತೊಬ್ಬನಿಗೆ ಬಿಟ್ಟುಹೋಗಬೇಕಿತ್ತು ಎಂಬ ಗ್ರಹಿಕೆಯೇ ಅದಾಗಿತ್ತು.—ಪ್ರಸಂಗಿ 2:17-21.
ಸೊಲೊಮೋನನಂತೆ ಹೆಚ್ಚಿನವರಿಗೆ, ಹೊಟ್ಟಿನಂತೆ ಹಾರಿಹೋಗುವ ಜೀವದ ಅಲ್ಪಾವಧಿಯ ಬಗ್ಗೆ ತಿಳಿದಿದೆ. ದೇವರು ‘ನಮ್ಮ ಮನಸ್ಸುಗಳಲ್ಲಿ ನಿತ್ಯತೆಯನ್ನು ಹಾಕಿದ್ದಾನೆ’ ಎಂಬುದಾಗಿ ಶಾಸ್ತ್ರವಚನಗಳು ಹೇಳುತ್ತವೆ. (ಪ್ರಸಂಗಿ 3:11, ಬೈಯಿಂಗ್ಟನ್) ನಿತ್ಯತೆಯ ಪ್ರಜ್ಞೆಯು ತಾನೇ, ಜೀವದ ಅಲ್ಪಾವಧಿಯ ಕುರಿತು ಯೋಚಿಸುವಂತೆ ಮನುಷ್ಯನನ್ನು ಪ್ರೇರಿಸುತ್ತದೆ. ಆದರೆ ಕಟ್ಟಕಡೆಗೆ, ಜೀವನ್ಮರಣಗಳ ಅರ್ಥಕ್ಕೆ ತೃಪ್ತಿದಾಯಕ ಉತ್ತರಗಳನ್ನು ಒಬ್ಬನು ಕಂಡುಕೊಳ್ಳದಿರುವಾಗ, ನಕಾರಾತ್ಮಕ ಹಾಗೂ ವ್ಯರ್ಥತೆಯ ಭಾವನೆಗಳಿಂದ ಚಿಂತೆಗೀಡಾಗಬಹುದು. ಇದು ಜೀವನವನ್ನು ದುಃಖಮಯವನ್ನಾಗಿ ಮಾಡಬಲ್ಲದು.
ಮನುಷ್ಯನನ್ನು ಸಂಕಟಕ್ಕೀಡುಮಾಡುವ ಪ್ರಶ್ನೆಗಳಿಗೆ ಉತ್ತರಗಳಿವೆಯೊ? ಜೀವನವನ್ನು ಹೆಚ್ಚು ಆಕರ್ಷಕವೂ ಚಿರಸ್ಥಾಯಿಯೂ ಆಗಿ ಮಾಡುವ ಪರಿಸ್ಥಿತಿಗಳು ಎಂದಾದರೂ ಬರುವವೊ?