ಒಳ್ಳೆಯ ಒಡನಾಡಿಗಳನ್ನು ಆಯ್ಕೆಮಾಡಲು ಮಾರ್ಗದರ್ಶನೆ
ಯೌವನಸ್ಥರು, ಬಟ್ಟೆ-ಬರೆ ಮತ್ತು ಸಂಗೀತದ ವಿಷಯದಲ್ಲಿ ಮಾರ್ಗದರ್ಶನಕ್ಕಾಗಿ ತಮ್ಮ ಹೆತ್ತವರ ಬದಲಿಗೆ ತಮ್ಮ ಸಮಾನಸ್ಥರ ಬಳಿ ಹೋಗುತ್ತಾರೆಂದು ರೀಡರ್ಸ್ ಡೈಜೆಸ್ಟ್ ಪುಸ್ತಕದ ಒಂದು ವರದಿಯು ತಿಳಿಸುತ್ತದೆ. ಆದುದರಿಂದಲೇ, ತಮ್ಮ ಮಕ್ಕಳು ಎಲ್ಲಿ ಮತ್ತು ಯಾರೊಂದಿಗೆ ಸಹವಾಸಿಸುತ್ತಾರೆಂಬುದನ್ನು ಹೆತ್ತವರು ತಿಳಿದುಕೊಳ್ಳುವುದು ಅತ್ಯಾವಶ್ಯಕವಾಗಿದೆ.
“ಅವರ ಮೇಲೆ ನಿಗಾ ಇಡುವುದು ನಿಮ್ಮ ಜವಾಬ್ದಾರಿಯಾಗಿದೆ” ಎಂದು ಪಶ್ಚಿಮ ಆಫ್ರಿಕದ ವಿಶ್ವವಿದ್ಯಾಲಯವೊಂದರಲ್ಲಿ ಮನೋಶಾಸ್ತ್ರದ ಇಲಾಖೆಯಲ್ಲಿ ಹಿರಿಯ ಉಪನ್ಯಾಸಕಿಯಾಗಿರುವ ಎಸ್ಮೆ ಫಾನ್ ರೆನ್ಸ್ಬುರ್ಕ್ ಹೇಳುತ್ತಾರೆ. ಅವರು ಕೂಡಿಸಿ ಹೇಳುವುದು: “ನಿಮ್ಮ ಮಕ್ಕಳು ನಿಮ್ಮೊಂದಿಗೆ ಸಿಟ್ಟುಗೊಳ್ಳುವ ಸಂಭಾವ್ಯತೆಯಿದೆ, ಆದರೆ ಅವರು ಅನಂತರ ಶಾಂತರಾಗುವರು.” ಆಮೇಲೆ ಅವರು ಹೆತ್ತವರಿಗೆ ಈ ಮುಂದಿನ ಸೂಚನೆಗಳನ್ನು ಕೊಟ್ಟರು. ನಿಯಮಗಳು ತರ್ಕಸಂಗತವಾಗಿದ್ದು, ಖಡಾಖಂಡಿತವಾದ ಮೂಲಭೂತ ತತ್ವಗಳುಳ್ಳವುಗಳಾಗಿರಬೇಕು; ನಿಮ್ಮ ಮಕ್ಕಳಿಗೆ ಕಿವಿಗೊಡಿರಿ; ಅತಿರೇಕವಾಗಿ ಪ್ರತಿಕ್ರಿಯಿಸದೆ, ಶಾಂತರಾಗಿರಿ ಮತ್ತು ನೀವೇನನ್ನು ಹೇಳಲು ಬಯಸುತ್ತೀರೋ ಅದು ನಿಮಗೆ ಚೆನ್ನಾಗಿ ತಿಳಿದಿರಲಿ. ನಿಮ್ಮ ಮಗು ಈಗಾಗಲೇ ಒಂದು ಕೆಟ್ಟ ಒಡನಾಡಿಯೊಂದಿಗೆ ಸ್ನೇಹವನ್ನು ಬೆಳೆಸಿಕೊಂಡಿರುವಲ್ಲಿ, ಅವನೊಂದಿಗೆ ಇನ್ನು ಮುಂದೆ ಸಹವಾಸಿಸಬಾರದೆಂದಷ್ಟೇ ಹೇಳಬೇಡಿರಿ. ಬದಲಿಗೆ, ಆ ಸ್ನೇಹದಿಂದ ಪರಿಣಮಿಸಿರುವ ಅನಂಗೀಕೃತ ನಡವಳಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸಿರಿ.
ದೇವರ ವಾಕ್ಯವಾದ ಬೈಬಲಿನಲ್ಲಿ, ದೀರ್ಘ ಸಮಯದಿಂದಲೂ ಹೆತ್ತವರಿಗಾಗಿ ಸ್ವಸ್ಥವಾದ ಬುದ್ಧಿವಾದವನ್ನು ಲಭ್ಯಗೊಳಿಸಲಾಗಿದೆ. ದೃಷ್ಟಾಂತಕ್ಕಾಗಿ ಅದು ತಿಳಿಸುವುದು: “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ.” (ಯಾಕೋಬ 1:19) ಒಡನಾಡಿಗಳನ್ನು ಆಯ್ಕೆಮಾಡುವ ವಿಷಯದಲ್ಲೂ ಶಾಸ್ತ್ರವಚನಗಳು ಈ ಉತ್ತಮ ಬುದ್ಧಿವಾದವನ್ನು ಕೊಡುತ್ತವೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ಈ ಉದಾಹರಣೆಗಳು, ಬೈಬಲನ್ನು ಗಣ್ಯತಾ ಭಾವದೊಂದಿಗೆ ಓದಿ, ಅದರಲ್ಲಿರುವ ವಿಷಯಗಳನ್ನು ದೈನಂದಿನ ಜೀವಿತದಲ್ಲಿ ಅನ್ವಯಿಸುವವರಿಗೆ ಲಭ್ಯವಾಗುವ ವಿವೇಕವನ್ನು ದೃಷ್ಟಾಂತಿಸುತ್ತವೆ.