“ಸಂಭವಿಸುವುದನ್ನು ಮುಂದಾಗಿ ಕಾಣುವ” ವಿವೇಕ
“ಇವರು ಉತ್ತಮ ವಿವೇಕವನ್ನು ಕಳೆದುಕೊಂಡಿರುವ ಮತ್ತು ಯಾವುದೇ ತಿಳುವಳಿಕೆಯಿಲ್ಲದ ಜನರಾಗಿದ್ದಾರೆ. ಅವರಿಗೆ ಜ್ಞಾನವಿದ್ದಿದ್ದರೆ, ಇದನ್ನೆಲ್ಲಾ ಗ್ರಹಿಸುತ್ತಿದ್ದರು ಮತ್ತು ಸಂಭವಿಸುವುದನ್ನು ಮುಂದಾಗಿ ಕಾಣುತ್ತಿದ್ದರು.”—ಧರ್ಮೋಪದೇಶಕಾಂಡ 32:28, 29, ಬೇಕ್.
ಈ ಮಾತುಗಳು, ವಾಗ್ದಾತ್ತ ದೇಶದ ಗಡಿಯಲ್ಲಿ ನಿಂತಿದ್ದ ಇಸ್ರಾಯೇಲ್ಯರಿಗೆ ಮೋಶೆಯಿಂದ ಹೇಳಲ್ಪಟ್ಟಿದ್ದವು. ಯೆಹೋವನನ್ನು ತ್ಯಜಿಸಿ, ತಮ್ಮ ಕೃತ್ಯಗಳ ಪರಿಣಾಮಗಳಿಗೆ ಸ್ವಲ್ಪವೂ ಗಮನವನ್ನು ಕೊಡದ ಸಮಯದ ಕುರಿತು ಮೋಶೆಯು ಮುಂತಿಳಿಸುತ್ತಿದ್ದನು. ಹಿಂಬಾಲಿಸಿದ ಶತಮಾನಗಳಲ್ಲಿ, ಇಸ್ರಾಯೇಲ್ಯರು—ಅನೇಕ ರಾಜರುಗಳನ್ನು ಸೇರಿಸಿ—ದೇವರ ಎಚ್ಚರಿಕೆಗಳನ್ನು ಕಡೆಗಣಿಸಿದರು.
ಉದಾಹರಣೆಗೆ, ಯೆಹೋವನನ್ನು ಬಿಟ್ಟು ಇತರ ದೇವರುಗಳನ್ನು ಆರಾಧಿಸುವವರನ್ನು ಮದುವೆಮಾಡಿಕೊಳ್ಳಬಾರದೆಂಬ ದೈವಿಕ ಆಜ್ಞೆಯ ಅರಿವು ಸೊಲೊಮೋನನಿಗೆ ಇತ್ತು. (ಧರ್ಮೋಪದೇಶಕಾಂಡ 7:1-4) ಹಾಗಿದ್ದರೂ, ಅವನು ‘ಅನ್ಯದೇಶದ ಅನೇಕ ಪತ್ನಿ’ಯರನ್ನು (NW) ಮದುವೆಮಾಡಿಕೊಂಡನು. ಇದರ ಪರಿಣಾಮವೇನಾಯಿತು? ಬೈಬಲ್ ದಾಖಲೆಯು ತಿಳಿಸುವುದು: “ಇವರು ಅವನ ಹೃದಯವನ್ನು ಅನ್ಯ ದೇವತೆಗಳ ಕಡೆಗೆ ತಿರಿಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಯಥಾರ್ಥಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡಿಯಲಿಲ್ಲ.” (1 ಅರಸು 11:1, 4) ಸೊಲೊಮೋನನು ವಿವೇಕಿಯಾದ ಪುರುಷನಾಗಿದ್ದರೂ, ದೇವರ ಆಜ್ಞೆಗೆ ಅವಿಧೇಯತೆಯನ್ನು ತೋರಿಸುವುದರ ಮೂಲಕ ‘ಸಂಭವಿಸುವುದನ್ನು ಮುಂದಾಗಿ ಕಾಣುವ’ ಸುಬುದ್ಧಿಯ ಕೊರತೆಯುಳ್ಳವನಾದನು.
ನಮ್ಮ ಕುರಿತೇನು? ಜೀವಿತದ ನಿರ್ಣಯಗಳಿಗೆ ಸಾಕಷ್ಟು ಮುಂದಾಲೋಚನೆಯನ್ನು ಕೊಡುವುದಾದರೆ, ನಾವು ಹೆಚ್ಚು ವೇದನೆಯನ್ನು ತಪ್ಪಿಸಬಲ್ಲೆವು. ಉದಾಹರಣೆಗೆ, ‘ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ [ತಮ್ಮನ್ನು] ಶುಚಿಮಾಡಿಕೊಳ್ಳ’ಬೇಕೆಂಬ ಬುದ್ಧಿವಾದವು ಕ್ರೈಸ್ತರಿಗೆ ಕೊಡಲ್ಪಟ್ಟಿದೆ. (2 ಕೊರಿಂಥ 7:1) ಇದು ವಿವೇಕವುಳ್ಳದ್ದಾಗಿದೆ, ಆದರೂ ಪೌಲನ ಸಲಹೆಯನ್ನು ಧಿಕ್ಕರಿಸುವುದಾದರೆ ತಮಗೆ ಮುಂದೆ ಏನು ಸಂಭವಿಸುವುದೆಂಬುದನ್ನು ಕಾಣುವ ಸುಬುದ್ಧಿಯೇ ಅನೇಕರಿಗಿರುವುದಿಲ್ಲ. ದೃಷ್ಟಾಂತಕ್ಕೆ, ಇಂದು ಅನೇಕ ಯುವ ವ್ಯಕ್ತಿಗಳು ಧೂಮಪಾನ ಮಾಡುವಿಕೆಯು ತಮ್ಮನ್ನು ಹೆಚ್ಚು ಜ್ಞಾನಿಗಳಾಗಿಯೂ ಪ್ರೌಢರನ್ನಾಗಿಯೂ ಮಾಡುತ್ತದೆಂದು ಯೋಚಿಸುತ್ತಾ, ತಮ್ಮ ದೇಹಗಳನ್ನು ಮಲಿನಗೊಳಿಸುತ್ತಾರೆ. ಇದರ ಫಲಿತಾಂಶವಾಗಿ, ಅನೇಕರು ಕ್ರಮೇಣವಾಗಿ ಜೀವಿತದಲ್ಲಿ ಹೃದ್ರೋಗದ ಸಮಸ್ಯೆಗಳನ್ನು, ಶ್ವಾಸಕೋಶದ ಕ್ಯಾನ್ಸರ್ ಅಥವಾ ವಾಯುಕೋಶಕದ ಊತದಿಂದ ಬಳಲುವುದು ಎಷ್ಟು ದುರಂತಮಯವಾಗಿರುವುದು!
ನಮ್ಮ ನಿರ್ಣಯಗಳ ಮತ್ತು ಕೃತ್ಯಗಳ ಪರಿಣಾಮಗಳ ಕಡೆಗೆ ಗಂಭೀರ ಪರಿಗಣನೆಯನ್ನು ಕೊಡುವುದು ಮಹತ್ವವುಳ್ಳದ್ದಾಗಿದೆ. ಸಕಾರಣದಿಂದಲೇ ಪೌಲನು ಬರೆದುದು: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು. ತನ್ನ ಶರೀರಭಾವವನ್ನು ಕುರಿತು ಬಿತ್ತುವವನು ಆ ಭಾವದಿಂದ ನಾಶನವನ್ನು ಕೊಯ್ಯುವನು. ಆತ್ಮನನ್ನು ಕುರಿತು ಬಿತ್ತುವವನು ಆತ್ಮನಿಂದ ನಿತ್ಯಜೀವವನ್ನು ಕೊಯ್ಯುವನು.”—ಗಲಾತ್ಯ 6:7, 8.