ಕಾಂತಿವರ್ಧಕಗಳಿಗಿಂತಲೂ ಉತ್ತಮವಾದುದು
ಸ್ತ್ರೀಯರು ಸೌಂದರ್ಯ ವರ್ಧನೆಗಾಗಿ ಉಪಯೋಗಿಸುವ “ಹೊರಗಣ ಶೃಂಗಾರ”ವನ್ನು ಉಲ್ಲೇಖಿಸಿದ ನಂತರ, ಅಪೊಸ್ತಲ ಪೇತ್ರನು ಸಲಹೆ ನೀಡಿದ್ದು: “ಅದಕ್ಕೆ ಬದಲು, ನಿಮ್ಮ ಸೌಂದರ್ಯವು ನಿಜ ಆಂತರಿಕ ವ್ಯಕ್ತಿಯಾಗಿದ್ದು, ಸಾತ್ವಿಕ ಮತ್ತು ಶಾಂತಮನಸ್ಸಿನ ಚಿರನೂತನ ಸೌಂದರ್ಯವಾದದ್ದಾಗಿರಲಿ. ಇದು ದೇವರ ದೃಷ್ಟಿಯಲ್ಲಿ ಅತ್ಯಮೂಲ್ಯವಾದದ್ದಾಗಿದೆ.”—1 ಪೇತ್ರ 3:3, 4, ಟುಡೇಸ್ ಇಂಗ್ಲಿಷ್ ವರ್ಶನ್.
ಆಸಕ್ತಿಕರವಾಗಿ, ಅಪೊಸ್ತಲನು ಇಂತಹ ಬಾಹ್ಯ ಅಲಂಕಾರಗಳ ಕುರಿತು ಬರೆದಾಗ, ಗ್ರೀಕ್ ಪದವಾದ ಕಾಸ್ಮೊಸ್ ಅನ್ನು ಉಪಯೋಗಿಸಿದನು. ಇಂಗ್ಲಿಷ್ ಪದದ ಮೂಲಾರ್ಥವು ‘ಕಾಂತಿವರ್ಧಕ’ವೆಂದಾಗಿದ್ದು, “(ನಿರ್ದಿಷ್ಟವಾಗಿ) ಮುಖ ಲಕ್ಷಣವನ್ನು ಸುಂದರವಾಗಿರಿಸುವುದು” ಎಂಬ ಅರ್ಥವನ್ನು ಕೊಡುತ್ತದೆ. ಕ್ರೈಸ್ತ ಸ್ತ್ರೀಯರ ಭೂಷಣ ಸಾಮಗ್ರಿಗಳ ಹಾಗೂ ಇತರ ತದ್ರೀತಿಯ ಸೌಂದರ್ಯ ಸಹಾಯಕಗಳ ಉಪಯೋಗದ ಮೇಲೆ ಪೇತ್ರನು ನಿಷೇಧವನ್ನು ಹೇರುತ್ತಿದ್ದನೋ? ಹಾಗೆಂದು ಸೂಚಿಸುವ ಯಾವ ವಿಷಯವೂ ದೇವರ ವಾಕ್ಯದಲ್ಲಿ ಇಲ್ಲ. ಬದಲಾಗಿ, ಈ ವಿಷಯದಲ್ಲಿ ವೈಯಕ್ತಿಕ ನಿರ್ಣಯವನ್ನು ಅದು ಅನುಮತಿಸುತ್ತದೆ, ಹೀಗೆ ವ್ಯಕ್ತಿಗತ ಪ್ರವೃತ್ತಿಯಲ್ಲಿ ಸ್ವಲ್ಪ ಮಟ್ಟಿಗಿನ ವ್ಯತ್ಯಾಸವನ್ನು ನಾವು ನಿರೀಕ್ಷಿಸಬಹುದು.
ಏನೇ ಆದರೂ, ವೇಷ-ಭೂಷಣದ ಉಪಯೋಗವು ಮಿತಿಮೀರಿದ್ದಲ್ಲಿ, ಅಥವಾ ಇತರರನ್ನು ನೆಮ್ಮದಿಗೆಡಿಸುವ ಮಟ್ಟಿಗೆ ಹೋದಲ್ಲಿ, ಅದು ಯಾವ ಅಭಿಪ್ರಾಯವನ್ನು ಮೂಡಿಸುತ್ತದೆ? ಅದು ನಿಷ್ಠುರತೆ, ಅಸಭ್ಯತೆ, ಅತಿ ಬೆಡಗು, ಆಡಂಬರ ಅಥವಾ ಸ್ವ-ಕೇಂದ್ರಿತವಾದದ್ದಾಗಿರುವುದಿಲ್ಲವೋ? ನಿಜ, ಇದು ಸ್ತ್ರೀಯ ತೋರಿಕೆಯನ್ನು ಕೆಳಮಟ್ಟಕ್ಕೆ ತಂದಿಳಿಸಿ, ಪ್ರಾಯಶಃ ನೈತಿಕ ಚಾರಿತ್ರ್ಯದ ಕುರಿತು ತಪ್ಪಾದ ಅಭಿಪ್ರಾಯವನ್ನು ಕೊಡಬಲ್ಲದು.—ಯೆಹೆಜ್ಕೇಲ 23:36-42ನ್ನು ಹೋಲಿಸಿರಿ.
ಇದನ್ನು ಮನಗಂಡವರಾಗಿ, “ದೇವಭಕ್ತೆಯರೆನಿಸಿಕೊಳ್ಳುವ” ಸ್ತ್ರೀಯರು, ಕಾಂತಿವರ್ಧಕಗಳನ್ನು ಉಪಯೋಗಿಸಲು ಆರಿಸುವುದಾದರೆ, ತಮ್ಮ ಮುಖಭಾವವು ಸ್ವಸ್ಥ ಮನಸ್ಸು, ಸೌಮ್ಯತೆ, ದಯಾಪರತೆ ಮತ್ತು ವಿನಯಶೀಲತೆಯ ವಿಶಿಷ್ಟಗುಣಗಳನ್ನು ಬಹಿರಂಗಪಡಿಸುವಂತೆ ಪ್ರಯತ್ನಿಸುವರು. ಇಂತಹ ಗುಣಗಳು ಸ್ತ್ರೀಯ ರಮ್ಯತೆಯನ್ನು ಮತ್ತು ಸೊಬಗನ್ನು ಹೆಚ್ಚಿಸುತ್ತದೆ. ವಾಸ್ತವಿಕವಾಗಿ, ಅವಳು ಭೂಷಣಹಾಕಲು ಅಥವಾ ಹಾಕದಿರಲು ಆರಿಸಿಕೊಳ್ಳುವುದಾದರೂ, ತನ್ನ ಘನತೆಯನ್ನು ಮತ್ತು ಆಂತರಿಕ ಸೌಂದರ್ಯವನ್ನು ಸ್ಪಷ್ಟಗೊಳಿಸುತ್ತಾಳೆ. ಈ ಮೊದಲು ಉಲ್ಲೇಖಿಸಿದ ಪೇತ್ರನ ಮಾತುಗಳು ಅರ್ಥೈಸುವಂತೆ, ಕಾಂತಿವರ್ಧಕಗಳಿಗಿಂತಲೂ ಉತ್ತಮವಾದುದೊಂದಿದೆ ಎಂಬುದನ್ನು ತನ್ನ ಜ್ಞಾನದಿಂದ ಪ್ರತಿಬಿಂಬಿಸುತ್ತಾಳೆ.—1 ತಿಮೊಥೆಯ 2:9, 10.