ಒಂದು ಒಳ್ಳೆಯ ಹೆಸರನ್ನು ಕಾಪಾಡಿಕೊಳ್ಳುವುದು
ಒಂದು ಸುಂದರವಾದ ವರ್ಣಚಿತ್ರವನ್ನು ಜಾಗರೂಕತೆಯಿಂದ ಪರಿಶೀಲಿಸುವುದು, ತೃಪ್ತಿದಾಯಕವಾದ ಅನುಭವವಾಗಿರಬಲ್ಲದು. ಆ ವರ್ಣಚಿತ್ರವನ್ನು ಹೆಚ್ಚು ನಿಕಟವಾಗಿ ಗಮನಿಸುವಾಗ, ಕಲಾವಿದನು ವಿವಿಧ ವರ್ಣದ್ರವ್ಯಗಳನ್ನು ಹಚ್ಚಲು ನೂರಾರು ಸಲ ತನ್ನ ಕುಂಚವನ್ನು ಆಡಿಸಿದ್ದಾನೆಂಬುದನ್ನು ಒಬ್ಬನು ಗಮನಿಸಬಹುದು.
ತದ್ರೀತಿಯಲ್ಲಿ, ಕಲಾತ್ಮಕ ಭಾಷೆಯಲ್ಲೇ ಹೇಳುವುದಾದರೆ, ಕುಂಚವನ್ನು ಕೇವಲ ಒಮ್ಮೆ ಆಡಿಸುವ ಮೂಲಕ ಒಂದು ಒಳ್ಳೆಯ ಹೆಸರನ್ನು ಪಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ಅನೇಕ ಚಿಕ್ಕಪುಟ್ಟ ಕೃತ್ಯಗಳು ಆವಶ್ಯಕವಾಗಿವೆ. ಹೌದು, ನಮ್ಮ ಕ್ರಿಯೆಗಳ ಮೂಲಕ ನಮಗೆ ಸತ್ಕೀರ್ತಿಯು ಕ್ರಮೇಣವಾಗಿ ಹೆಚ್ಚಾಗುತ್ತದೆ.
ಇನ್ನೊಂದು ಬದಿಯಲ್ಲಿ, ಕುಂಚವನ್ನು ಒಂದೇ ಒಂದು ಸಲ ತಪ್ಪಾಗಿ ಆಡಿಸಿದರೆ ಸಾಕು, ಅದು ಆ ವರ್ಣಚಿತ್ರದ ಮೌಲ್ಯವನ್ನು ಕಡಿಮೆಗೊಳಿಸುತ್ತದೆ. ನಮ್ಮ ಹೆಸರಿನ ವಿಷಯದಲ್ಲಿಯೂ ಇದು ಸತ್ಯವಾಗಿದೆ. ವಿವೇಕಿ ಅರಸನಾದ ಸೊಲೊಮೋನನು ಹೇಳಿದ್ದು: “ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿಕೊಂಡು ಯೆಹೋವನ ಮೇಲೆ ಕುದಿಯುವನು.” (ಜ್ಞಾನೋಕ್ತಿ 19:3) ಒಂದು ಒಳ್ಳೆಯ ಹೆಸರನ್ನು ಕೆಡಿಸಲು, ಪ್ರಾಯಶಃ ಕೋಪದಿಂದ ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುವುದು, ಮದ್ಯವನ್ನು ಮಿತಿಮೀರಿ ಸೇವಿಸುವುದು, ಅಥವಾ ಲೈಂಗಿಕವಾಗಿ ಅಶುದ್ಧಗೊಳಿಸುವ ಒಂದೇ ಒಂದು ಕೃತ್ಯದಂತಹ ಸ್ವಲ್ಪವೇ ಮೂರ್ಖತನವು ಸಾಕು. (ಜ್ಞಾನೋಕ್ತಿ 6:32; 14:17; 20:1) ಆದುದರಿಂದ, ಒಂದು ಒಳ್ಳೆಯ ಹೆಸರನ್ನು ಗಳಿಸಲು ಕಷ್ಟಪಟ್ಟು ಪ್ರಯತ್ನಿಸುವುದು ಮತ್ತು ಅನಂತರ ಅದನ್ನು ಕಾಪಾಡಿಕೊಳ್ಳಲು ಹುರುಪಿನಿಂದ ಕೆಲಸಮಾಡುವುದು ಎಷ್ಟು ಅತ್ಯಾವಶ್ಯಕ!—ಪ್ರಕಟನೆ 3:5ನ್ನು ಹೋಲಿಸಿರಿ.