ಕೆಟ್ಟದ್ದನ್ನು ಜಯಿಸುವುದು
“ಈಸತ್ತ ನಾಯಿ ಅರಸನಾದ ನನ್ನ ಒಡೆಯನನ್ನು ಶಪಿಸುವದೇನು? ಅಪ್ಪಣೆಯಾಗಲಿ, ನಾನು ಅವನಿರುವಲ್ಲಿಗೆ ಹೋಗಿ ಅವನ ತಲೆ ಹಾರಿಸಿಕೊಂಡು ಬರುವೆನು.” ಈ ವಿನಂತಿಯನ್ನು, ಇಸ್ರಾಯೇಲ್ಯರ ಸೇನಾಪತಿಯಾದ ಅಬೀಷೈ ಮಾಡಿದನು. ಅವನ ಒಡೆಯನಾದ ಅರಸ ದಾವೀದನನ್ನು, ಬೆನ್ಯಾಮೀನ್ಯನಾದ ಶಿಮ್ಮೀ ಅಸಹ್ಯವಾಗಿ ತೆಗಳಿದ್ದನ್ನು ಅಬೀಷೈ ಕೇಳಿಸಿಕೊಂಡಾಗ, ಈ ರೀತಿ ಕೋಪದಿಂದ ಪ್ರತಿಕ್ರಿಯಿಸಿದನು.—2 ಸಮುವೇಲ 16:5-9.
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ಪ್ರಚಲಿತ ತತ್ವವನ್ನು ಅಬೀಷೈ ಸಮರ್ಥಿಸುತ್ತಿದ್ದನು. ಹೌದು, ದಾವೀದನ ಮೇಲೆ ಹೇರಿದಂತಹ ಅಪಮಾನಗಳಿಗಾಗಿ ಶಿಮ್ಮೀ ಕಷ್ಟಾನುಭವಿಸಬೇಕೆಂದು ಅಬೀಷೈ ಬಯಸಿದನು.
ಆದರೆ, ದಾವೀದನ ಪ್ರತಿಕ್ರಿಯೆ ಏನಾಗಿತ್ತು? ದಾವೀದನು ಅಬೀಷೈ ಅನ್ನು ತಡೆಯುತ್ತಾ ಹೇಳಿದ್ದು: “ಬಿಡಿರಿ, ಅವನು ಶಪಿಸಲಿ.” ಶಿಮ್ಮೀಯು ಮಾಡಿದಂತಹ ಆರೋಪಗಳ ವಿಷಯದಲ್ಲಿ ದಾವೀದನು ನಿರ್ದೋಷಿಯಾಗಿದ್ದರೂ, ಅವನು ಮುಯ್ಯಿಗೆ ಮುಯ್ಯಿ ತೀರಿಸುವುದರಿಂದ ದೂರವಿದ್ದನು. ಬದಲಿಗೆ, ಅವನು ಈ ವಿಷಯವನ್ನು ಯೆಹೋವನ ಹಸ್ತಗಳಲ್ಲಿ ಬಿಟ್ಟುಬಿಟ್ಟನು.—2 ಸಮುವೇಲ 16:10-13.
ದಾವೀದನು ತನ್ನ ಮಗನ ಅಸಫಲ ವಿದ್ರೋಹದಿಂದ ಪಲಾಯನಗೈದು, ಸಿಂಹಾಸನವನ್ನು ತಿರುಗಿ ಪಡೆದುಕೊಂಡಾಗ, ಅವನನ್ನು ಎದುರುಗೊಂಡು ಕ್ಷಮೆಯನ್ನು ಯಾಚಿಸಿದವರಲ್ಲಿ ಶಿಮ್ಮೀ ಮೊದಲಿಗನಾಗಿದ್ದನು. ಆಗಲೂ ಅಬೀಷೈ ಅವನನ್ನು ಕೊಲ್ಲಲು ಬಯಸಿದನಾದರೂ, ದಾವೀದನು ಅದಕ್ಕೆ ಅನುಮತಿ ನೀಡಲಿಲ್ಲ.—2 ಸಮುವೇಲ 19:15-23.
ಈ ಸಂದರ್ಭದಲ್ಲಿ, ಯೇಸು ಕ್ರಿಸ್ತನಿಗೆ ಸರಿಹೋಲುವ ಒಂದು ಚಿತ್ರಣವನ್ನು ದಾವೀದನು ನೀಡಿದನು. ಯೇಸುವಿನ ಕುರಿತು ಅಪೊಸ್ತಲ ಪೇತ್ರನು ಬರೆದುದು: “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; . . . ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.”—1 ಪೇತ್ರ 2:23.
ಇಂದು, ಕ್ರೈಸ್ತರು ‘ದೀನಭಾವ ಉಳ್ಳವರಾಗಿದ್ದು, ಅಪಕಾರಕ್ಕೆ ಅಪಕಾರವನ್ನು ಮಾಡದೆ’ ಇರುವಂತೆ ಕೇಳಿಕೊಳ್ಳಲ್ಪಟ್ಟಿದ್ದಾರೆ. (1 ಪೇತ್ರ 3:8, 9) ದಾವೀದನು ಮತ್ತು ಯೇಸು ಕ್ರಿಸ್ತನಿಟ್ಟ ಮಾದರಿಯನ್ನು ಅನುಸರಿಸುವ ಮೂಲಕ, ನಾವು ಕೂಡ “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸ”ಸಾಧ್ಯವಿದೆ.—ರೋಮಾಪುರ 12:17-21.