ಸಾಕ್ಷಿಗಳಿಗೆ ಅಧಿಕಾರಿಗಳಿಂದ ಶ್ಲಾಘನೆ ಸ್ಪೇ
ಯ್ನ್ನ ಕಾಥೀತ್ ಪಟ್ಟಣದಲ್ಲಿ, ಮೇಯರ್ ಡೊನಾ ಟಿಯೊಫೀಲ ಮಾರ್ಟೀನೆಸ್ ಯೆಹೋವನ ಸಾಕ್ಷಿಗಳಿಗೆ (ಮೇಲೆ ಕಂಡುಬರುವ) ಒಂದು ಅಲಂಕಾರ ಫಲಕವನ್ನು ನೀಡಿದರು. ಈ ಪಟ್ಟಣವು, ಮ್ಯಾಡ್ರಿಡ್ನಿಂದ ಆಗ್ನೇಯ ದಿಕ್ಕಿಗೆ ಸುಮಾರು 500 ಕಿಲೊಮೀಟರುಗಳಷ್ಟು ದೂರದಲ್ಲಿ ನೆಲೆಸಿರುವ ರೇವುಪಟ್ಟಣವಾಗಿದೆ. ಆ ಫಲಕವು ಹೀಗೆ ಓದುತ್ತದೆ: “ಈ ಪಟ್ಟಣಕ್ಕಾಗಿ ಯೆಹೋವನ ಸಾಕ್ಷಿಗಳು ಸಲ್ಲಿಸಿದ ಸಹಕಾರ ಹಾಗೂ ಸೇವೆಗಳಿಗೆ ನಗರ ಆಡಳಿತ ಮಂಡಲಿಯು ಅವರಿಗೆ ಆಭಾರಿಯಾಗಿದೆ.” ಈ ಗೌರವವನ್ನು ಸಂಪಾದಿಸಲು ಸಾಕ್ಷಿಗಳು ಏನು ಮಾಡಿದರು?
ಸಾಕ್ಷಿಗಳು ನಗರಸಭೆಯ ಕ್ರೀಡಾಂಗಣದ ಒಂದು ಭಾಗವನ್ನು ನವೀಕರಿಸಲಿಕ್ಕಾಗಿ ಮಾಡಿದ ಕೆಲಸದ ಫಲವಾಗಿ ಆ ಬಹುಮಾನವು ಅವರಿಗೆ ನೀಡಲಾಯಿತು. ಹಲವಾರು ವಾರಾಂತ್ಯಗಳಂದು ನೂರಾರು ಸಾಕ್ಷಿಗಳು, ಕರಾನ್ಸಾ ಫುಟ್ಬಾಲ್ ಕ್ರೀಡಾಂಗಣದ ನೆಲಮಾಳಿಗೆಯಲ್ಲಿರುವ ಟಯಿಯಲೆಟ್ಗಳನ್ನು ನವೀಕರಿಸಲು ಸಹಾಯಮಾಡಿದ್ದರು. ಈಗ ಕ್ರೀಡಾಂಗಣವನ್ನು ಉಪಯೋಗಿಸುವ ಸಕಲರೂ ಅಲ್ಲಿ ಅಳವಡಿಸಲಾದ ಪೈಪುಗಳು, ಕೊಳಾಯಿ ವ್ಯವಸ್ಥೆ ಮತ್ತು ನೆಲಗಟ್ಟಿನಿಂದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಬಹಳ ಸಮಯದಿಂದ ಯೆಹೋವನ ಸಾಕ್ಷಿಗಳಿಗೆ ಕಾಥೀತ್ ನಗರದೊಂದಿಗೆ ಒಳ್ಳೆಯ ಸಂಬಂಧವಿದೆ. ನಗರಪಾಲಿಕೆಯು ಪ್ರತಿ ವರ್ಷ ನಡೆಯುವ ಸಾಕ್ಷಿಗಳ ವಾರ್ಷಿಕ ಜಿಲ್ಲಾ ಅಧಿವೇಶನಕ್ಕೆ ಈ ಕರಾನ್ಸಾ ಕ್ರೀಡಾಂಗಣವನ್ನು ಒದಗಿಸಿಕೊಡುತ್ತದೆ. ಆದುದರಿಂದ, ಕ್ರೀಡಾಂಗಣವನ್ನು ಸುಸ್ಥಿತಿಯಲ್ಲಿಡಲು ತಮ್ಮಿಂದ ಸಾಧ್ಯವಾದುದನ್ನು ಮಾಡಲು ಸಾಕ್ಷಿಗಳು ಹರ್ಷಿಸುತ್ತಾರೆ.
ಆಗಾಗ್ಗೆ ಮಾಡುವ ದೈಹಿಕ ಕೆಲಸಗಳೊಂದಿಗೆ, ಯೆಹೋವನ ಸಾಕ್ಷಿಗಳು ಕ್ರಮವಾಗಿ ತಮ್ಮ ನೆರೆಹೊರೆಗಳಿಗೆ ಭೇಟಿನೀಡಿ, ಸಾರ್ವಜನಿಕರನ್ನು ಮತ್ತೊಂದು ವಿಧದಲ್ಲಿ ಬೆಂಬಲಿಸುತ್ತಾರೆ. ಅವರು ದೇವರ ರಾಜ್ಯದ “ಸುವಾರ್ತೆ”ಯನ್ನು ಪ್ರಕಟಿಸುತ್ತಾರೆ. ಆದರೆ ಈ ಶುಶ್ರೂಷೆಯನ್ನು ಅವರು ಮನುಷ್ಯರಿಂದ ಶ್ಲಾಘನೆಯನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಮಾಡುವುದಿಲ್ಲ. ಬದಲಿಗೆ “ರಾಜ್ಯದ ಸುವಾರ್ತೆಯನ್ನು” ಸಾರುವ ಮತ್ತು “ಎಲ್ಲಾ ಜನಾಂಗಗಳವರನ್ನು ಶಿಷ್ಯರನ್ನಾಗಿ ಮಾಡುವ” ಯೇಸುವಿನ ಆಜ್ಞೆಗೆ ವಿಧೇಯರಾಗಿರುವ ಉದ್ದೇಶದಿಂದ ಮಾಡುತ್ತಾರೆ. (ಮತ್ತಾಯ 24:14, 28:19) ಈ ರೀತಿಯಲ್ಲಿ ಯೆಹೋವನ ಸಾಕ್ಷಿಗಳು ಜನರಿಗೆ “ನೀತಿಯ ಮಾರ್ಗವನ್ನು” ಬೋಧಿಸುವ ಮೂಲಕ ಸಮುದಾಯಕ್ಕೆ ನೆರವು ನೀಡಲು ಬಯಸುತ್ತಾರೆ.—ಜ್ಞಾನೋಕ್ತಿ 12:28.