ಪುನಸ್ಸ್ಥಾಪಿಸಲ್ಪಟ್ಟಿರುವ ದೇವರ ನಾಮ
“ಅನೇಕ ವರ್ಷಗಳಿಂದ ಬಹುಶಃ ಶತಮಾನಗಳಿಂದಲೂ, ಯೆಹೋವ ಎಂಬ ನಾಮವು ಬೈಬಲುಗಳಿಂದ ತೆಗೆದುಹಾಕಲ್ಪಟ್ಟ ತರುವಾಯ, ಚತುರಕ್ಷರಿಯ ಪರವಹಿಸಿ ಅದನ್ನು ಪುನಸ್ಸ್ಥಾಪಿಸಿದ ಏಕೈಕ ಕ್ರೈಸ್ತ ಧರ್ಮದವರು ಆಧುನಿಕ ದಿನದ ಯೆಹೋವನ ಸಾಕ್ಷಿಗಳಾಗಿದ್ದಾರೆ.”a
ಈ ಮೇಲಿನ ಮಾತುಗಳು, ಬ್ರೆಸಿಲ್ ದೇಶದ ಬರಹಗಾರ, ಆಸೀಸ್ ಬ್ರಾಸೀಲ್ ಅವರ ಪುಸ್ತಕವಾದ ಜೀವೊವಾ ಡೆಂಟ್ರೂ ಡೂ ಜೂಡಾಯೀಸ್ಮೂ ಈ ಡೂ ಕ್ರಿಸ್ಟಿಯಾನೀಸ್ಮೂಯಿಂದ ತೆಗೆಯಲ್ಪಟ್ಟಿವೆ. ಕೆಲವೊಂದು ಬೈಬಲ್ ಭಾಷಾಂತರಗಳು ಆ ದೈವಿಕ ನಾಮವನ್ನು ಒಂದಲ್ಲ ಒಂದು ವಿಧದಲ್ಲಿ ಉಪಯೋಗಿಸುತ್ತವಾದರೂ, ಬೇರೆಲ್ಲ ಕ್ರೈಸ್ತ ಗುಂಪುಗಳು ಅದನ್ನು ತಮ್ಮ ಬೈಬಲುಗಳಿಂದ ಏಕೆ ತೆಗೆದುಹಾಕಿವೆ? ಎಂಬ ಪ್ರಶ್ನೆಯು ಏಳಬಹುದು. ಬ್ರಾಸೀಲ್ ಹೇಳುವುದು: “ದೇವರ ನಾಮವು ಮೂಢನಂಬಿಕೆಯಿಂದಾಗಿ . . . , ಗ್ರಹಿಸಲಾಗದ ಉದ್ದೇಶಗಳಿಂದಾಗಿ, ಇಲ್ಲವೆ ಯೇಸು ಮತ್ತು ಅವನ ತಾಯಿಯಾದ ಮರಿಯಳ ನಾಮಗಳನ್ನು ಘನತೆಗೇರಿಸುವ ಉದ್ದೇಶದಿಂದಾಗಿ ತೆಗೆದುಹಾಕಲಾಯಿತು.”
ಆದರೆ, ಶ್ರೀ. ಬ್ರಾಸೀಲ್ ಸರಿಯಾಗಿಯೇ ಹೇಳುವುದು: “ಬಿಟ್ಟುಬಿಡಲ್ಪಟ್ಟಿರುವ ಆ [ದೈವಿಕ] ನಾಮವು, ಪೋರ್ಚುಗೀಸ್ ಭಾಷೆಯಲ್ಲಿರುವ ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಆಫ್ ದ ಹೋಲಿ ಸ್ಕ್ರಿಪ್ಚ್ರ್ಸ್ನಲ್ಲಿ ಸಂಪೂರ್ಣವಾಗಿ ತಿದ್ದಲ್ಪಟ್ಟಿದೆ.” ಹೇಗೆ? ಆ ಬೈಬಲಿನಲ್ಲಿ ಯೆಹೋವ ಎಂಬ ನಾಮವು ಅದರ ಸರಿಯಾದ ಸ್ಥಾನದಲ್ಲಿ ಪುನಸ್ಸ್ಥಾಪಿಸಲ್ಪಟ್ಟಿದೆ. ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ನಲ್ಲಿ ಯೆಹೋವ ಎಂಬ ನಾಮವು 7,200ಕ್ಕಿಂತಲೂ ಹೆಚ್ಚು ಬಾರಿ ಕಾಣಿಸಿಕೊಳ್ಳುತ್ತದೆ.
ಪ್ರಥಮವಾಗಿ ಅದು ಬಿಡುಗಡೆಯಾದ ಸಮಯದಂದಿನಿಂದ, ಪೋರ್ಚುಗೀಸ್ ಭಾಷೆಯ ಈ ಆಧುನಿಕ ಹಾಗೂ ಪದಶಃ ಭಾಷಾಂತರದ ಅರುವತ್ತೈದು ಲಕ್ಷಕ್ಕಿಂತಲೂ ಹೆಚ್ಚಿನ ಪ್ರತಿಗಳು ವಿತರಿಸಲ್ಪಟ್ಟಿವೆ. ಈ ಕಾರಣದಿಂದಲೇ, ಬ್ರೆಸಿಲಿಯನ್ ವಾರ್ತಾಪತ್ರಿಕೆಯಾದ ಡೀಆರ್ಯೂ ಡೂ ನಾರ್ಡೆಸ್ಟೀನಲ್ಲಿ ಬರೆಯುತ್ತಾ ಒಬ್ಬ ಲೇಖಕನು ಹೀಗೆ ಕೇಳುವಂತೆ ಪ್ರಚೋದಿಸಲ್ಪಟ್ಟನು: “ದೇವರಿಗೆ ಒಂದು ನಾಮವಿದೆ ಎಂದು ನಿಮಗೆ ಗೊತ್ತಿತ್ತೊ?” ಈ ಆಧುನಿಕ ಬೈಬಲ್ ಭಾಷಾಂತರ ಲಭ್ಯವಿರುವುದರಿಂದ ಲಕ್ಷಾಂತರ ಜನರು, “ಹೌದು ಗೊತ್ತಿದೆ. ಆ ದೈವಿಕ ನಾಮವು ಯೆಹೋವ ಎಂದಾಗಿದೆ” ಎಂದು ಈಗ ಉತ್ತರಿಸಬಲ್ಲರು.
[ಪಾದಟಿಪ್ಪಣಿ]
a ಹೀಬ್ರು ಭಾಷೆಯಲ್ಲಿ ದೇವರ ಹೆಸರು יהוה ಎಂದು ಬರೆಯಲ್ಪಟ್ಟಿದೆ. ಈ ನಾಲ್ಕು ಅಕ್ಷರಗಳು (ಬಲದಿಂದ ಎಡಕ್ಕೆ ಓದಲ್ಪಡುತ್ತವೆ) ಸಾಮಾನ್ಯವಾಗಿ ಚತುರಕ್ಷರಿ ಎಂಬುದಾಗಿ ಕರೆಯಲ್ಪಡುತ್ತವೆ.