ನೀವು ವಿವಾಹದ ಕುರಿತು ಯೋಚಿಸುತ್ತಿದ್ದೀರೊ?
ಭೌಗೋಲಿಕವಾಗಿ ಆಗುತ್ತಿರುವ ವಿವಾಹವಿಚ್ಛೇದನಗಳನ್ನು ನಾವು ಒಂದು ಭೂಕಂಪಕ್ಕೆ ಹೋಲಿಸುವುದಾದರೆ, ಅಮೆರಿಕವು ಆ ಭೂಕಂಪದ ಕೇಂದ್ರಸ್ಥಾನವಾಗಿರುವುದು. ಅಲ್ಲಿ ಇತ್ತೀಚಿನ ವರ್ಷವೊಂದರಲ್ಲಿ, ಹತ್ತು ಲಕ್ಷಕ್ಕಿಂತಲೂ ಹೆಚ್ಚು ವಿವಾಹಗಳು ಅಂದರೆ ಪ್ರತಿಯೊಂದು ನಿಮಿಷಕ್ಕೆ ಸರಾಸರಿ ಎರಡು ವಿವಾಹಗಳು ಅಂತ್ಯಗೊಂಡವು. ಆದರೆ ವೈವಾಹಿಕ ದುರವಸ್ಥೆಯು ಕೇವಲ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲವೆಂದು ನಿಮಗೆ ಚೆನ್ನಾಗಿ ತಿಳಿದಿರಬಹುದು.
ಒಂದು ಸಮೀಕ್ಷೆಗನುಸಾರ, ಇಂಗ್ಲೆಂಡ್ ಮತ್ತು ವೇಲ್ಸ್, ಕೆನಡ, ಗ್ರೀಸ್, ನೆದರ್ಲ್ಯಾಂಡ್ಸ್ ಮತ್ತು ಫ್ರಾನ್ಸ್ ದೇಶಗಳಲ್ಲಿ ವಿವಾಹವಿಚ್ಛೇದನದ ಪ್ರಮಾಣಗಳು ಇಸವಿ 1970ರಿಂದ ಇಮ್ಮಡಿಯಾಗಿವೆ.
ಹೆಚ್ಚಿನ ದಂಪತಿಗಳು ಒಬ್ಬರನ್ನೊಬ್ಬರು ಪ್ರೀತಿಸುವುದರಿಂದ ಮತ್ತು ಜೀವನಪರ್ಯಂತ ಜೊತೆಯಾಗಿರಲು ಬಯಸುವುದರಿಂದಲೇ ಮದುವೆಯಾಗುತ್ತಾರೆಂಬುದು ಖಂಡಿತ. ಆದರೆ ದುಃಖಕರವಾಗಿ ಅನೇಕ ಸಂದರ್ಭಗಳಲ್ಲಿ, ಸಂತೋಷಭರಿತವಾದ ವಿವಾಹದ ಹೊಂಗನಸು, ಕನಸಾಗಿಯೇ ಉಳಿಯುತ್ತದೆ. ವಾಸ್ತವಿಕತೆಗೆ ಎಚ್ಚೆತ್ತುಕೊಳ್ಳುವಾಗ ಅನೇಕರು ತಾವು ತೀರ ಬೇಗನೆ ಮದುವೆಯಾದೆವು, ಇಲ್ಲವೇ ತಕ್ಕ ವ್ಯಕ್ತಿಯನ್ನು ಮದುವೆಯಾಗಲಿಲ್ಲವೆಂದು ಅಥವಾ ಈ ಎರಡೂ ಸಂಗತಿಗಳನ್ನು ಹೇಳುತ್ತಾರೆ.
ಇಷ್ಟೊಂದು ವಿವಾಹಗಳು ವಿಫಲವಾಗುವುದಕ್ಕೆ ಕಾರಣವೇನು? ಪ್ರಣಯಾಚರಣೆಯ ಕುರಿತಾದ ಪುಸ್ತಕವೊಂದರ ಲೇಖಕಿಯು ಹೇಳುವುದು, “ಮುಖ್ಯ ಕಾರಣವು, ಸಿದ್ಧತೆಯ ಕೊರತೆಯೇ ಆಗಿದೆ.” ಅವಳು ಕೂಡಿಸಿ ಹೇಳಿದ್ದು: “ವೈವಾಹಿಕ ಸಂಕಷ್ಟದ ಬೇನೆಯನ್ನು ಅನುಭವಿಸುತ್ತಿರುವ ದಂಪತಿಗಳೊಂದಿಗೆ ನಾನು ವ್ಯವಹರಿಸುವಾಗ, ಕನಿಕರ ಮತ್ತು ಕೋಪ ಎಂಬ ಎರಡು ರೀತಿಯ ಭಾವನೆಗಳು ನನ್ನಲ್ಲಿ ಉಂಟಾಗುತ್ತವೆ. ನಾನು ಕನಿಕರಪಡುವುದು ಏಕೆಂದರೆ, ಪರಸ್ಪರ ತೃಪ್ತಿದಾಯಕವಾಗಿರುವ ಸಂಬಂಧದ ಕುರಿತು ಅವರಿಗಿದ್ದ ಕನಸುಗಳು ನನಸಾಗದೆ ಉಳಿದದ್ದಕ್ಕಾಗಿಯೇ. ನಾನು ಕೋಪಗೊಳ್ಳುವುದು ಏಕೆಂದರೆ, ವಿವಾಹದ ಜಟಿಲತೆಯ ಕುರಿತಾಗಿ ಅವರು ಅಜ್ಞಾನಿಗಳಾಗಿದ್ದಾರೆ.”
ನಿಶ್ಚಯವಾಗಿಯೂ ಅನೇಕರು ಮದುವೆಯಾಗುವಾಗ, ವಿವಾಹವನ್ನು ಹೇಗೆ ಸಫಲಗೊಳಿಸಬೇಕೆಂಬುದರ ಕುರಿತಾಗಿ ತೀರ ಕಡಿಮೆ ತಿಳುವಳಿಕೆಯುಳ್ಳವರು ಅಥವಾ ತಿಳುವಳಿಕೆಯೇ ಇಲ್ಲದವರಾಗಿರುತ್ತಾರೆ. ಆದರೆ ಇದು ಆಶ್ಚರ್ಯಗೊಳಿಸುವ ಸಂಗತಿಯೇನಲ್ಲ. ಒಬ್ಬ ಶಿಕ್ಷಕನು ಗಮನಿಸಿದ್ದು: “ಕಾಲೇಜಿನಲ್ಲಿರುವಾಗ ಇಲಿಗಳು ಮತ್ತು ಹಲ್ಲಿಗಳ ನಡವಳಿಕೆಯ ಕುರಿತು ಅಭ್ಯಾಸಮಾಡುವುದಾದರೂ, ನಮ್ಮಲ್ಲಿ ಎಷ್ಟು ಮಂದಿ ಯುವ ಜನರು, ಪತಿ ಪತ್ನಿಯೆಂಬ ಎರಡು ವ್ಯಕ್ತಿಗಳ ನಡವಳಿಕೆಯ ಕುರಿತಾಗಿ ಕಲಿತುಕೊಳ್ಳುತ್ತಾರೆ?”
ನೀವು ಮುಂದೆ ಎಂದಾದರೂ ಮದುವೆಯಾಗುವುದರ ಕುರಿತು ಯೋಚಿಸುತ್ತಿದ್ದೀರೊ ಅಥವಾ ನೀವು ಈಗಾಗಲೇ ವಿವಾಹಿತರಾಗಿರುವಲ್ಲಿ, ನಿಮ್ಮ ಸದ್ಯದ ಸ್ಥಿತಿಯ ಕುರಿತಾಗಿ ಯೋಚಿಸುತ್ತೀರೊ? ಹಾಗಿರುವಲ್ಲಿ, ಒಂದು ನಿಜ ಜೀವನದ ಸಂಬಂಧವು, ಚಲನಚಿತ್ರಗಳಲ್ಲಿ, ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ಮತ್ತು ಪ್ರೇಮಕಾದಂಬರಿಗಳಲ್ಲಿ ಏನು ಚಿತ್ರಿಸಲ್ಪಡುತ್ತದೊ ಅದಕ್ಕಿಂತಲೂ ತೀರ ಭಿನ್ನವಾಗಿದೆ ಎಂಬುದನ್ನು ನೀವು ತಿಳಿದುಕೊಂಡಿರಬೇಕು. ಅದೇ ಸಮಯದಲ್ಲಿ, ಒಬ್ಬರನ್ನೊಬ್ಬರು ನಿಜವಾಗಿ ಪ್ರೀತಿಸುತ್ತಿರುವ ಇಬ್ಬರು ಪ್ರೌಢ ವ್ಯಕ್ತಿಗಳ ವಿವಾಹವನ್ನು, ದೇವರಿಂದ ಬಂದ ಒಂದು ಆಶೀರ್ವಾದವಾಗಿ ಪರಿಗಣಿಸಬಹುದು. (ಜ್ಞಾನೋಕ್ತಿ 18:22; 19:14) ಹಾಗಾದರೆ ವಿವಾಹದ ಬೇಡಿಕೆಗಳನ್ನು ಪೂರೈಸಲು ತಯಾರಾಗಿದ್ದೀರೆಂದು ನೀವು ಹೇಗೆ ಖಾತ್ರಿಯಿಂದಿರಬಲ್ಲಿರಿ? ಒಬ್ಬ ಸಂಗಾತಿಯನ್ನು ಆರಿಸಿಕೊಳ್ಳುವಾಗ, ನೀವು ಯಾವ ಅಂಶಗಳನ್ನು ಪರಿಗಣಿಸಬೇಕು? ಅಥವಾ ನೀವು ಈಗಾಗಲೇ ವಿವಾಹಿತರಾಗಿರುವಲ್ಲಿ, ನಿಮ್ಮ ವಿವಾಹದಲ್ಲಿ ನಿರಂತರ ಸಂತೋಷವನ್ನು ಕಂಡುಕೊಳ್ಳುವ ಸಂಭವವನ್ನು ನೀವು ಹೇಗೆ ಹೆಚ್ಚಿಸಬಲ್ಲಿರಿ?