“ಲೆಬನೋನಿನ ದೇವದಾರುವೃಕ್ಷದಷ್ಟು ಉದ್ದ”
ಲೆಬನೋನಿನ ಸುಂದರವಾದ ಪರ್ವತಗಳ ಮೇಲೆ, ಆರ್ಸ್ ಆರ್ರಬ್, ಅಂದರೆ “ಕರ್ತನ ದೇವದಾರುವೃಕ್ಷ” ಎಂದು ಕರೆಯಲ್ಪಡುವ ವೃಕ್ಷಗಳು ಬೆಳೆಯುತ್ತವೆ. ಒಂದುಕಾಲದಲ್ಲಿ ಪರ್ವತಗಳ ಮೇಲೆಲ್ಲ ಆವರಿಸಿದ್ದ ಈ ವೈಭವಯುತವಾದ ನಿತ್ಯಹರಿದ್ವರ್ಣವೃಕ್ಷಗಳ ಕುರಿತು ಬೈಬಲಿನಲ್ಲಿ ಸುಮಾರು 70 ಬಾರಿ ತಿಳಿಸಲಾಗಿದೆ. ಬೇರೆ ಯಾವ ವೃಕ್ಷದ ಕುರಿತೂ ಇಷ್ಟು ಬಾರಿ ತಿಳಿಸಲಾಗಿಲ್ಲ.
ಲೆಬನೋನಿನ ಭವ್ಯ ದೇವದಾರುವೃಕ್ಷಗಳನ್ನು ವರ್ಣಿಸಲಿಕ್ಕಾಗಿ, ಶಾಸ್ತ್ರವಚನಗಳು “ಶ್ರೇಷ್ಠ” (NW) ಹಾಗೂ “ಅಮೋಘ” (NW) ಎಂಬ ಶಬ್ದಗಳನ್ನು ಉಪಯೋಗಿಸುತ್ತವೆ. (ಪರಮಗೀತ 5:15; ಯೆಹೆಜ್ಕೇಲ 17:23) ದೇವದಾರುವೃಕ್ಷದ ಗಾತ್ರ ದೊಡ್ಡದಾಗಿದ್ದು, ಅದರ ಮರವು ಬಹುಕಾಲ ಬಾಳಿಕೆಬರುವುದರಿಂದ, ಮನೆಗಳನ್ನು ಮತ್ತು ಹಡಗುಗಳನ್ನು ಕಟ್ಟಲಿಕ್ಕಾಗಿ ಹಾಗೂ ಪೀಠೋಪಕರಣಗಳನ್ನು ಮಾಡಲಿಕ್ಕಾಗಿ ಇದು ಜನಪ್ರಿಯವಾಗಿದೆ. ಈ ಮರದ ಸುವಾಸನೆ ಹಾಗೂ ಮನಸ್ಸಿಗೆ ಮುದನೀಡುವ ಕೆಂಪು ಬಣ್ಣವು ತುಂಬ ಆಕರ್ಷಕವಾಗಿದೆ. ಮತ್ತು ಅದರಲ್ಲಿ ಅಂಟುಪದಾರ್ಥವು ಹೆಚ್ಚು ಪ್ರಮಾಣದಲ್ಲಿರುವುದರಿಂದ, ಈ ಮರವು ಬೇಗ ಹಾಳಾಗುವುದಿಲ್ಲ ಹಾಗೂ ಇದಕ್ಕೆ ಹುಳು ಹಿಡಿಯುವುದಿಲ್ಲ. ಈ ವೃಕ್ಷಗಳು ತುಂಬ ಎತ್ತರವಾಗಿವೆ ಹಾಗೂ ದಪ್ಪವಾಗಿವೆ; ಸುಮಾರು 37 ಮೀಟರ್ಗಳಷ್ಟು ಎತ್ತರಕ್ಕೆ ಬೆಳೆಯುತ್ತವೆ ಮತ್ತು ಅವುಗಳ ಸುತ್ತಳತೆ ಸುಮಾರು 12 ಮೀಟರ್ಗಳಷ್ಟಿರುತ್ತದೆ. ಇವುಗಳ ಬೇರುಗಳು ತೀರ ಆಳಕ್ಕೆ ಇಳಿದಿರುತ್ತವೆ ಮತ್ತು ತುಂಬ ಬಲವಾಗಿರುತ್ತವೆ. ಈ ವೃಕ್ಷಗಳನ್ನು “ಸಸ್ಯ ಜಗತ್ತಿನ ಅತ್ಯುತ್ಕೃಷ್ಟ ಹಿರಿಮೆ” ಎಂದು ಕೆಲವು ಅರಣ್ಯಾಧಿಕಾರಿಗಳು ವರ್ಣಿಸಿರುವುದರಲ್ಲಿ ಆಶ್ಚರ್ಯವಿಲ್ಲ!
ಬೈಬಲ್ ಬರಹಗಾರನಾದ ಯೆಹೆಜ್ಕೇಲನು, ಪ್ರವಾದನಾತ್ಮಕವಾಗಿ ಮೆಸ್ಸೀಯನನ್ನು ದೇವದಾರುವೃಕ್ಷದ ಕೊಂಬೆಗೆ ಹೋಲಿಸಿದನು; ಅದನ್ನು ಸ್ವತಃ ಯೆಹೋವನೇ ನೆಡಲಿಕ್ಕಿದ್ದನು. (ಯೆಹೆಜ್ಕೇಲ 17:22) ವಾಸ್ತವದಲ್ಲಿ, “ದೇವದಾರು” ಎಂಬುದಕ್ಕಿರುವ ಹೀಬ್ರು ಶಬ್ದವು, “ದೃಢವಾಗಿರು” ಎಂಬರ್ಥವನ್ನು ಕೊಡುವ ಮೂಲ ಶಬ್ದದಿಂದ ಬರುತ್ತದೆ. ಅದೇ ರೀತಿಯಲ್ಲಿ ಇಂದು, ಮೆಸ್ಸೀಯನಾದ ಯೇಸು ಕ್ರಿಸ್ತನ ಹಿಂಬಾಲಕರು, ಎತ್ತರವಾದ, ಸ್ಥಿತಿಸ್ಥಾಪಕ ದೇವದಾರು ವೃಕ್ಷದಂತೆ, ‘ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲಬೇಕಾಗಿದೆ. . . . ಬಲಗೊಳ್ಳಬೇಕಾಗಿದೆ.’ (1 ಕೊರಿಂಥ 16:13) ಇದನ್ನು ಹೇಗೆ ಮಾಡಸಾಧ್ಯವಿದೆ? ಅಕ್ರೈಸ್ತ ಪ್ರಭಾವಗಳನ್ನು ದೃಢವಾಗಿ ಪ್ರತಿರೋಧಿಸುತ್ತಾ, ಯಥಾರ್ಥಭಾವ ಹಾಗೂ ದೈವಿಕ ಭಕ್ತಿಯ ಮಾರ್ಗದಲ್ಲಿ ಸ್ಥಿರಚಿತ್ತರಾಗಿ ಉಳಿಯುವ ಮೂಲಕವೇ. ಹಾಗೆ ಮಾಡುವವರು, “ನೀತಿವಂತರು . . . [ಅವರು] ಲೆಬನೋನಿನ ದೇವದಾರುವೃಕ್ಷದಷ್ಟು ಉದ್ದಕ್ಕೆ ಬೆಳೆಯುವರು” ಎಂದು ಬೈಬಲಿನಲ್ಲಿ ವರ್ಣಿಸಲಾಗಿದೆ.—ಕೀರ್ತನೆ 92:12, ದ ನ್ಯೂ ಇಂಗ್ಲಿಷ್ ಬೈಬಲ್.