ಲೂಕನು ತಪ್ಪಾಗಿ ಬರೆದನೊ?
ನಜರೇತಿನಲಿ ಬೆಳೆದು, ಸಾಮಾನ್ಯವಾಗಿ ನಜರೇತಿನವನೆಂದು ಪ್ರಸಿದ್ಧನಾಗಿದ್ದ ಯೇಸು, ಸುಮಾರು 150 ಕಿಲೊಮೀಟರ್ ದೂರದಲ್ಲಿದ್ದ ಬೇತ್ಲೆಹೇಮಿನಲ್ಲಿ ಹೇಗೆ ಜನಿಸಸಾಧ್ಯವಿದೆ? ಲೂಕನು ವಿವರಿಸುವುದು: “ಆ ಕಾಲದಲ್ಲಿ [ಯೇಸುವಿನ ಜನನದ ಮುಂಚೆ] ರಾಜ್ಯವೆಲ್ಲಾ ಖಾನೆಷುಮಾರಿ ಬರಸಿಕೊಳ್ಳಬೇಕೆಂಬ ಆಜ್ಞೆಯು ಚಕ್ರವರ್ತಿಯಾದ ಔಗುಸ್ತನಿಂದ ಹೊರಟಿತು. ಕುರೇನ್ಯನು ಸುರಿಯಕ್ಕೆ ಅಧಿಪತಿಯಾಗಿದ್ದಾಗ ಈ ಮೊದಲನೆಯ ಖಾನೆಷುಮಾರಿ ನಡೆಯಿತು. ಆಗ ಎಲ್ಲರೂ ಖಾನೆಷುಮಾರಿ ಬರಸಿಕೊಳ್ಳುವದಕ್ಕಾಗಿ ತಮ್ಮತಮ್ಮ ಊರುಗಳಿಗೆ ಹೊರಟರು.”—ಲೂಕ 1:1; 2:1-3.
ಈ ವಚನ ಭಾಗವು ತಪ್ಪಾಗಿದೆ, ಅಥವಾ ಇನ್ನೂ ಕೀಳಾಗಿ ಹೇಳುವಲ್ಲಿ, ಒಂದು ಕಲ್ಪಿಸಿದ ಸಂಗತಿಯಾಗಿದೆಯೆಂದು ವಿಮರ್ಶಕರು ಹೇಳುತ್ತಾರೆ. ಆ ಖಾನೆಷುಮಾರಿಯು ಮತ್ತು ಕುರೇನ್ಯನ ಆಧಿಪತ್ಯವು, ಸಾ.ಶ. 6 ಅಥವಾ 7ರಲ್ಲಿ ನಡೆಯಿತೆಂದು ಅವರು ಪಟ್ಟುಹಿಡಿದು ಹೇಳುತ್ತಾರೆ. ಅವರು ಹೇಳುವಂತಹದ್ದು ಸರಿಯಾಗಿರುವಲ್ಲಿ, ಲೂಕನ ವೃತ್ತಾಂತವು ತುಂಬ ಸಂದೇಹಕ್ಕೀಡಾಗುತ್ತದೆ. ಯಾಕೆಂದರೆ ಯೇಸು ಸಾ.ಶ.ಪೂ. 2ರಲ್ಲಿ ಜನಿಸಿದನೆಂದು ಪುರಾವೆಯು ಸೂಚಿಸುತ್ತದೆ. ಆದರೆ ಈ ವಿಮರ್ಶಕರು ಎರಡು ಮುಖ್ಯ ವಾಸ್ತವಾಂಶಗಳನ್ನು ಅಲಕ್ಷಿಸುತ್ತಾರೆ. ಮೊದಲನೆಯದ್ದು—ಲೂಕನು “ಮೊದಲನೆಯ ಖಾನೆಷುಮಾರಿ” ಎಂದು ಸೂಚಿಸಿ ಬರೆಯುತ್ತಾನೆ. ಹೀಗೆ ಒಂದಕ್ಕಿಂತಲೂ ಹೆಚ್ಚು ಖಾನೆಷುಮಾರಿ ನಡೆದವೆಂಬುದನ್ನು ಅವನು ಅಂಗೀಕರಿಸುತ್ತಾನೆ. ಯಾಕಂದರೆ ಇನ್ನೊಂದು, ತದನಂತರ ನಡೆದ ಖಾನೆಷುಮಾರಿಯ ಕುರಿತಾಗಿ ಅವನಿಗೆ ಚೆನ್ನಾಗಿ ತಿಳಿದಿತ್ತು. (ಅ. ಕೃತ್ಯಗಳು 5:37) ಈ ತದನಂತರದ ಖಾನೆಷುಮಾರಿಯು, ಇತಿಹಾಸಕಾರನಾದ ಯೋಸೀಫಸನು ವರ್ಣಿಸಿದಂತಹ ಖಾನೆಷುಮಾರಿಯೇ ಆಗಿದೆ. ಇದು ಸಾ.ಶ. 6ರಲ್ಲಿ ನಡೆಯಿತು. ಎರಡನೆಯದ್ದು—ಕುರೇನ್ಯನ ಆಧಿಪತ್ಯದ ಸಮಯವು, ನಾವು ಯೇಸುವಿನ ಜನನದ ತಾರೀಖನ್ನು ಮುಂದೆ ತಳ್ಳುವಂತೆ ನಿರ್ಬಂಧಿಸುವುದಿಲ್ಲ. ಏಕೆ? ಏಕಂದರೆ ಕುರೇನ್ಯನು ಆ ಸ್ಥಾನದಲ್ಲಿ ಎರಡು ಬಾರಿ ಸೇವೆಸಲ್ಲಿಸಿದ್ದನೆಂಬುದು ವ್ಯಕ್ತ. ಅವನು ಆ ಸ್ಥಾನದಲ್ಲಿದ್ದ ಪ್ರಥಮ ಅವಧಿಯಲ್ಲಿ ಸಾ.ಶ.ಪೂ. 2ನೆಯ ಇಸವಿಯು ಸೇರಿತ್ತು ಎಂಬುದನ್ನು ಅನೇಕ ವಿದ್ವಾಂಸರು ಅಂಗೀಕರಿಸುತ್ತಾರೆ.
ಮೀಕ 5:2ರಲ್ಲಿರುವ ಪ್ರವಾದನೆಯನ್ನು ನೆರವೇರಿಸುತ್ತಾ, ಯೇಸು ಬೇತ್ಲೆಹೇಮಿನಲ್ಲಿ ಹುಟ್ಟಿರುವುದಕ್ಕೆ ಒಂದು ಕಾರಣವನ್ನು ರಚಿಸಲಿಕ್ಕಾಗಿ ಲೂಕನು ಆ ಖಾನೆಷುಮಾರಿಯ ಕಥೆ ಕಟ್ಟಿದನೆಂದು ಕೆಲವು ವಿಮರ್ಶಕರು ಹೇಳುತ್ತಾರೆ. ಆ ವಾದವು ಲೂಕನನ್ನು ಒಬ್ಬ ಉದ್ದೇಶಪೂರ್ವಕ ಸುಳ್ಳುಗಾರನನ್ನಾಗಿ ಮಾಡುತ್ತದೆ. ಮತ್ತು ಯಾವ ವಿಮರ್ಶಕನೂ, ಸುವಾರ್ತಾ ಪುಸ್ತಕ ಮತ್ತು ಅಪೊಸ್ತಲರ ಕೃತ್ಯಗಳ ಪುಸ್ತಕವನ್ನು ಬರೆದಂತಹ ಈ ಕಟ್ಟುನಿಟ್ಟಿನ ಇತಿಹಾಸಕಾರನ ಮೇಲೆ ಅಂತಹ ಒಂದು ಆರೋಪವನ್ನು ಹೊರಿಸಲಾರನು.
ಯಾವ ವಿಮರ್ಶಕನೂ ವಿವರಿಸಲಾರದ ಇನ್ನೊಂದು ಸಂಗತಿಯಿದೆ: ಸ್ವತಃ ಆ ಖಾನೆಷುಮಾರಿಯೇ ಒಂದು ಪ್ರವಾದನೆಯನ್ನು ನೆರವೇರಿಸಿತು! ಸಾ.ಶ.ಪೂ. ಆರನೆಯ ಶತಮಾನದಲ್ಲಿ, ಪ್ರವಾದಿ ದಾನಿಯೇಲನು “ಶಿರೋಮಣಿಯಾದ ದೇಶವನ್ನೆಲ್ಲ ದೋಚಿಕೊಳ್ಳತಕ್ಕವನನ್ನು ನೇಮಿಸುವ” ಒಬ್ಬ ಅಧಿಪತಿಯ ಕುರಿತಾಗಿ ಪ್ರವಾದಿಸಿದನು. ಇದು ಔಗುಸ್ತನಿಗೆ ಮತ್ತು ಇಸ್ರಾಯೇಲಿನಲ್ಲಿ ಖಾನೆಷುಮಾರಿ ನಡೆಯುವಂತೆ ಅವನು ಕೊಟ್ಟ ಆಜ್ಞೆಗೆ ಅನ್ವಯಿಸಿತೊ? ಅದೇ ಪ್ರವಾದನೆಯು, ಆ ಅಧಿಪತಿಯ ಉತ್ತರಾಧಿಕಾರಿಯ ದಿನಗಳಲ್ಲಿ ಮೆಸ್ಸೀಯನು, ಅಥವಾ “ನಿಬಂಧನಾಧಿಪತಿಯು” “ಭಂಗ”ವಾಗುವನೆಂದು ಮುಂತಿಳಿಸಿತು. ಮತ್ತು ಖಂಡಿತವಾಗಿಯೂ ಔಗುಸ್ತನ ಉತ್ತರಾಧಿಕಾರಿಯಾದ ತಿಬೇರಿಯನ ಆಳ್ವಿಕೆಯ ಸಮಯದಲ್ಲೇ ಯೇಸು “ಭಂಗ”ವಾದನು ಅಥವಾ ಕೊಲ್ಲಲ್ಪಟ್ಟನು.—ದಾನಿಯೇಲ 11:20-22.
[ಪುಟ 7 ರಲ್ಲಿರುವ ಚಿತ್ರ]
ಕೈಸರ್ ಔಗುಸ್ತನು (ಸಾ.ಶ.ಪೂ. 27ರಿಂದ—ಸಾ.ಶ. 14)
[ಕೃಪೆ]
Musée de Normandie, Caen, France
[ಪುಟ 7 ರಲ್ಲಿರುವ ಚಿತ್ರ]
ತಿಬೇರಿಯ ಕೈಸರನು (ಸಾ.ಶ. 14-37)
[ಕೃಪೆ]
Photograph taken by courtesy of the British Museum