“ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು?”
“ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವದನ್ನು ನೀವು ನೋಡಿದ ಕೂಡಲೆ ಮಳೆ ಬರುತ್ತದೆ ಅನ್ನುತ್ತೀರಿ; ಹಾಗೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಲಾಗಿ ಸೆಕೆ ಹುಟ್ಟುವದು ಅನ್ನುತ್ತೀರಿ; ಅದೂ ಆಗುತ್ತದೆ.” ಸುವಾರ್ತಾ ಲೇಖಕನಾದ ಲೂಕನಿಂದ ಬರೆಯಲ್ಪಟ್ಟ ಯೇಸುವಿನ ಈ ಮಾತುಗಳು, ಪುರಾತನ ಪ್ಯಾಲೆಸ್ಟೀನ್ನಲ್ಲಿ ಕೊಡಲ್ಪಡುತ್ತಿದ್ದ ಹವಾಮಾನ ಮುನ್ಸೂಚನೆಗಳ ಉದಾಹರಣೆಗಳಾಗಿವೆ. (ಲೂಕ 12:54, 55) ಕೆಲವು ಸಂದರ್ಭಗಳಲ್ಲಿ, ಆ ಪ್ರಾಚೀನ ಜನರು ಸೂಚನೆಗಳನ್ನು ಅರಿತುಕೊಂಡು, ನಿಷ್ಕೃಷ್ಟವಾದ ಅಲ್ಪಾವಧಿಯ ವರೆಗಿನ ಕಾಲಜ್ಞಾನಗಳನ್ನು ಹೇಳಸಾಧ್ಯವಿತ್ತು.
ಇಂದು ಹವಾಮಾನ ತಜ್ಞರು ಹೆಚ್ಚು ದೀರ್ಘ ಸಮಯದ ವರೆಗಿನ ಹವಾಮಾನ ನಮೂನೆಗಳನ್ನು ಅಳೆಯಲಿಕ್ಕಾಗಿ, ಭೂಮಿಯನ್ನು ಸುತ್ತುವ ಉಪಗ್ರಹಗಳು, ಡಾಪ್ಲರ್ ರಾಡಾರ್, ಶಕ್ತಿಶಾಲಿ ಕಂಪ್ಯೂಟರ್ಗಳಂತಹ ಜಟಿಲವಾದ ಉಪಕರಣಗಳನ್ನು ಉಪಯೋಗಿಸುತ್ತಾರೆ. ಆದರೆ ಅನೇಕವೇಳೆ ಅವರ ಭವಿಷ್ಯನುಡಿಗಳು ತಪ್ಪಾಗಿ ಪರಿಣಮಿಸುತ್ತವೆ. ಯಾಕೆ?
ಅನೇಕ ಅಂಶಗಳು, ಹವಾಮಾನವನ್ನು ನಿಷ್ಕೃಷ್ಟವಾಗಿ ಮುನ್ಸೂಚಿಸುವುದನ್ನು ಕಷ್ಟಕರವನ್ನಾಗಿ ಮಾಡುತ್ತವೆ. ಉದಾಹರಣೆಗಾಗಿ, ತಾಪಮಾನ, ತೇವಾಂಶ, ವಾಯುವಿನ ಒತ್ತಡ ಮತ್ತು ಗಾಳಿಯ ವೇಗ ಹಾಗೂ ದಿಕ್ಕಿನಲ್ಲಿ ಮುಂಗಾಣದಂತಹ ಬದಲಾವಣೆಗಳು, ಹವಾಮಾನ ಮುನ್ಸೂಚನೆಗಳನ್ನು ನೀಡುವುದನ್ನು ಜಟಿಲಗೊಳಿಸಬಲ್ಲದು. ವಿಜ್ಞಾನಿಗಳಿಗೆ ಈಗಲೂ ಪೂರ್ಣವಾಗಿ ಅರ್ಥವಾಗದ, ಸೂರ್ಯ, ಮೋಡಗಳು, ಮತ್ತು ಸಾಗರಗಳ ಸಂಕೀರ್ಣವಾದ ಪರಸ್ಪರ ಕ್ರಿಯೆಗಳನ್ನು ಇದಕ್ಕೆ ಕೂಡಿಸಿರಿ. ಈ ಕಾರಣಕ್ಕಾಗಿ, ಹವಾಮಾನದ ಮುನ್ಸೂಚನೆಯು, ಈಗಲೂ ಅನಿಷ್ಕೃಷ್ಟವಾದ ವಿದ್ಯೆಯಾಗಿ ಉಳಿದಿದೆ.
ಹವಾಮಾನದ ಕುರಿತಾದ ಮನುಷ್ಯನ ಸೀಮಿತ ಜ್ಞಾನವು, ಯೋಬನು ಕೇಳಿದಂತಹ ಪ್ರಶ್ನೆಗಳನ್ನು ನಮಗೆ ಜ್ಞಾಪಕಹುಟ್ಟಿಸುತ್ತದೆ: “ಮಂಜಿನ ಹನಿಗಳನ್ನು ಪಡೆದವನು ಯಾರು? ಹಿಮದ ಗಡ್ಡೆಯು ಯಾರ ಗರ್ಭದಿಂದ ಹೊರಟಿತು? . . . ಮೋಡಗಳನ್ನು ಮುಟ್ಟುವಂತೆ ನೀನು ಧ್ವನಿಯೆತ್ತಿದ ಮಾತ್ರಕ್ಕೆ ಹೇರಳವಾದ ನೀರು ನಿನ್ನನ್ನು ಆವರಿಸುವದೋ? . . . ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು? ಉತ್ಪಾತಗಳಿಗೆ ವಿವೇಕವನ್ನು ಅನುಗ್ರಹಿಸಿದವರು ಯಾರು? ಜ್ಞಾನದಿಂದ ಯಾರು ಮೇಘಗಳನ್ನು ಲೆಕ್ಕಿಸುವರು? ಆಕಾಶದಲ್ಲಿನ ಬುದ್ದಲಿಗಳನ್ನು ಮೊಗಚಿಹಾಕುವವರು ಯಾರು?”—ಯೋಬ 38:28-37.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರವು ಇದು: ಮನುಷ್ಯನಲ್ಲ, ಯೆಹೋವ ದೇವರು. ಹೌದು, ಮನುಷ್ಯರು ಬಹಳ ವಿವೇಕಿಗಳಾಗಿ ತೋರಬಹುದಾದರೂ, ನಮ್ಮ ಸೃಷ್ಟಿಕರ್ತನ ವಿವೇಕವು ಅವರ ವಿವೇಕಕ್ಕಿಂತಲೂ ಎಷ್ಟೋ ಶ್ರೇಷ್ಠವಾದದ್ದಾಗಿದೆ. ನಾವು ನಮ್ಮ ಮಾರ್ಗವನ್ನು ಸಫಲಗೊಳಿಸಲಿಕ್ಕಾಗಿ, ದೇವರು ತನ್ನ ವಿವೇಕವನ್ನು ಬೈಬಲಿನ ಪುಟಗಳಲ್ಲಿ ನಮಗೆ ಲಭ್ಯಗೊಳಿಸಿರುವುದು, ನಿಜವಾಗಿಯೂ ಆತನ ಪ್ರೀತಿಯನ್ನು ತೋರಿಸುತ್ತದೆ.—ಜ್ಞಾನೋಕ್ತಿ 5:1, 2.