ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಮಾಜಿ ವಿರೋಧಿಯೋಬ್ಬನು ಸತ್ಯವನ್ನು ಕಲಿಯುತ್ತಾನೆ
ಲೈಬೀರಿಯದಲ್ಲಿನ ಪೌರ ಯುದ್ಧದ ಕುರಿತಾಗಿ ವಾರ್ತಾಪತ್ರಿಕೆಗಳಲ್ಲಿ ತುಂಬ ವರದಿಗಳು ಬಂದಿವೆ. ಸಾವಿರಗಟ್ಟಲೆ ಜನರು ತಮ್ಮ ಜೀವಗಳನ್ನು ಕಳೆದುಕೊಂಡರು ಮತ್ತು ಇದಕ್ಕಿಂತಲೂ ಹೆಚ್ಚು ಮಂದಿ ಗಡೀಪಾರು ಮಾಡಲ್ಪಟ್ಟರು. ಮುಂದಿನ ಅನುಭವವು ತೋರಿಸುವಂತೆ, ಈ ಎಲ್ಲ ಕಷ್ಟಗಳ ಮಧ್ಯದಲ್ಲೂ, ಪ್ರಾಮಾಣಿಕ ಹೃದಯದ ಜನರು ಸತ್ಯವನ್ನು ಸ್ವೀಕರಿಸುತ್ತಾ ಇದ್ದಾರೆ.
ಹತ್ತು ವರ್ಷ ಪ್ರಾಯದಿಂದಲೇ, ಜೇಮ್ಸ್ ಎಂಬ ವ್ಯಕ್ತಿಯು ಲೂತರನ್ ಚರ್ಚಿನಿಂದ ಶಿಕ್ಷಣವನ್ನು ಪಡೆದುಕೊಂಡಿದ್ದನು. ಜೇಮ್ಸ ಚರ್ಚಿನ ಒಂದು ವಾರ್ತಾಪತ್ರಿಕೆಯ ಸಂಪಾದಕನಾದ ಬಳಿಕ, ಯೆಹೋವನ ಸಾಕ್ಷಿಗಳ ವಿರುದ್ಧ ಲೇಖನಗಳನ್ನು ಬರೆಯಲಿಕ್ಕಾಗಿ ತನ್ನ ಹುದ್ದೆಯನ್ನು ಉಪಯೋಗಿಸಿದನು. ಇಷ್ಟೆಲ್ಲ ಬರೆದರೂ, ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರನ್ನೂ ಎಂದೂ ಭೇಟಿಯಾಗಿರಲೇ ಇಲ್ಲ.
ಸಮಯಾನಂತರ, ಜೇಮ್ಸ್ ಆ ಕೆಲಸವನ್ನು ಬಿಟ್ಟು ಒಬ್ಬ ಯಶಸ್ಕೀ ಹೋಟೆಲ್ ಮಾಲಿಕನಾದನು. ಒಂದು ದಿನ ಅವನು ತನ್ನ ಹೋಟೆಲಿನ ರಿಸೆಷ್ಪನ್ ಕೋಣೆಯಲ್ಲಿ ಕುಳಿತುಕೊಂಡಿದ್ದಾಗ, ನೀಟಾಗಿ ಉಡುಪು ಧರಿಸಿದ್ಧ ಇಬ್ಬರು ಯೆಹೋವನ ಸಾಕ್ಷಿಗಳು ಅವನನ್ನು ಸಂದರ್ಶಿಸಿದರು. ಅವರ ನೀಟಾದ ಉಡುಪನ್ನು ನೋಡಿ, ಅವನು ಅವರನ್ನು ಒಳಗೆ ಆಮಂತ್ರಿಸಿದನು. ಆದರೆ ಅವರು ತಮ್ಮ ಭೇಟಿಯ ಉದ್ದೇಶವನ್ನು ವಿವರಿಸಿದಾಗ, “ನನಗೆ ಮಾತನಾಡಲು ಸಮಯವಿಲ್ಲ” ಎಂದು ಅವನು ಹೇಳಿದನು. ಆ ಸಾಕ್ಷಿಗಳು, ಕಾವಲಿನಬುರುಜು ಮತ್ತು ಎಚ್ಚ! ಪತ್ತಿಕೆಗಳಿಗೆ ಚಂದಾ ಮಾಡುವಂತೆ ಕೇಳಿಕೊಂಡರು. ಮತ್ತು ಅವರನ್ನು ಅಲ್ಲಿಂದ ಹೊರಡಿಸಲಿಕ್ಕಾಗಿ ಮಾತ್ರ, ಅವನು ಚಂದಾ ಮಾಡಿದನು. 12 ತಿಂಗಳುಗಳ ವರೆಗೆ ಅವನು ಅವುಗಳ ಕವರನ್ನು ಬಿಚ್ಚಿಯೂ ನೋಡದೆ, ಒಂದು ಪ್ಲ್ಯಾಸ್ಚಿಕ್ ಬ್ಯಾಗ್ನೊಳಗೆ ಹಾಕುತ್ತಿದ್ದನು.
ಆಂತರಿಕ ಯುದ್ಧವು ನಡೆಯುತ್ತಾ ಇತ್ತು. ಆದುದರಿಂದ, ಆಕ್ರಮಣದ ಪ್ರಥಮ ಸೂಚನೆ ಸಿಕ್ಕಿದ ಕೂಡಲೆ ಓಡಿಹೋಗಲಿಕ್ಕಾಗಿ, ಜೇಮ್ಸ ಒಂದು ಬ್ಯಾಗನಲ್ಲಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಹಾಕಿಟ್ಟನು. ಒಂದು ಬೆಳಗ್ಗೆ, ಅವನ ಮನೆಯ ಹಿಂದಿನ ಬಾಗಿಲ ಬಳಿಯಲ್ಲಿ ಒಂದು ಕೈಬಾಂಬು ಸ್ಫೋಟಿಸಿದ್ದನ್ನು ನೋಡಿ, ಗಾಬರಿಯಿಂದ ಅವನು ತನ್ನ ಬ್ಯಾಗನ್ನು ತೆಗೆದುಕೊಂಡು, ತನ್ನ ಜೀವವನ್ನು ಉಳಿಸಿಕೊಳ್ಳಲಿಕ್ಕಾಗಿ ಓಡಿದನು. ಪಲಾಯನಗೈಯುತ್ತಿದ್ದ ಅನೇಕ ಜನರೊಂದಿಗೆ ಅವನು ಸೇರಿಕೊಂಡನು. ಹಾಗೆ ಹೋಗುತ್ತಿರುವಾಗ, ಜೇಮ್ಸ್ ಹಲವಾರು ಚೆಕ್ಪಾಯಿಂಟ್ಗಳನ್ನು ದಾಟಿ ಹೋಗಬೇಕಾಯಿತು. ಅಲ್ಲಿ, ಮುಗ್ಧ ಜನರನ್ನು ಲೂಟಿ ಮಾಡಿ, ಯಾವುದೇ ಕಾರಣವಿಲ್ಲದೆ ಕೊಲ್ಲಲಾಗುತ್ತಿತ್ತು.
ಮೊದಲಮನೆಯ ಚೆಕ್ಪಾಯಿಂಟ್ನಲ್ಲಿ, ಜೇಮ್ಸ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು ಮತ್ತು ಬ್ಯಾಗನ್ನು ತೆರೆದುತೋರಿಸುವಂತೆ ಹೇಳಲಾಯಿತು. ಅವನದನ್ನು ತೆರೆದು ಒಳಗೆ ನೋಡಿದಾಗ, ಅವನಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ! ಅವನು ತನ್ನ ಬೆಲೆಬಾಳುವ ವಸ್ತುಗಳನ್ನಿಟ್ಟಿದ್ದ ಬ್ಯಾಗನ್ನು ತಂದಿರಲಿಲ್ಲ. ತರಾತುರಿಯಲ್ಲಿ ಅವನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಇಟ್ಟಿದ್ದ ಬ್ಯಾಗನ್ನು ತಂದಿದ್ದನು. ಆದರೆ ಆ ಸೈನಿಕನು ಪತ್ರಿಕೆಗಳನ್ನು ನೋಡಿ, ಅದರ ಮೇಲಿದ್ದ ಲೇಬಲ್ಗಳಲ್ಲಿ ಅವನ ಹೆಸರನ್ನು ಓದಿದಾಗ, “ಓ, ನೀನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು. ನಾವು ನಿಮ್ಮಂತಹ ಜನರಿಗಾಗಿ ಹುಡುಕುತ್ತಿಲ್ಲ. ನೀವು ಸುಳ್ಳು ಹೇಳುವುದಿಲ್ಲ ಎಂಬುದು ನಮಗೆ ಗೊತ್ತು” ಎಂದು ಹೇಳಿದನು. ಆ ಬ್ಯಾಗ್ನಿಂದ ಕೆಲವೊಂದು ಪತ್ರಿಕೆಗಳನ್ನು ತೆಗೆದುಕೊಂಡು, ಜೇಮ್ಸ್ನನ್ನು ಮುಂದೆ ಕಳುಹಿಸಿದನು.
ಒಂಬತ್ತು ವಿಭಿನ್ನ ಚೆಕ್ಪಾಯಿಂಟ್ ಗಳಲ್ಲಿ ಇದೇ ರೀತಿ ನಡೆಯಿತು. ಜೇಮ್ಸ್ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನೆಂದು ಎಲ್ಲ ಕಮಾಂಡರ್ಗಳು ನೆನಸಿದರು, ಮತ್ತು ಆವನಿಗೆ ಯಾವುದೇ ಹಾನಿಯನ್ನುಂಟುಮಾಡದೆ ಹೋಗಗೊಟ್ಟರು. ತಾನು ಬೆಲೆಬಾಳುವ ವಸ್ತುಗಳನ್ನು ತರದೇ ಇದ್ದದಕ್ಕಾಗಿ ಜೇಮ್ಸ್ ಈಗ ತುಂಬಾ ಆಭಾರಿಯಾಗಿದ್ದನು. ಯಾಕೆಂದರೆ , ಇಷ್ಟರ ವರೆಗೆ ಅವನು ನೋಡಿದ್ದ ದೃಶ್ಯಗಳಿಂದ, ತನ್ನ ಬಳಿಯಿದ್ದ ಸ್ವತ್ತುಗಳಿಗಾಗಿ ಖಂಡಿತವಾಗಿಯೂ ತನ್ನನ್ನು ಕೊಲ್ಲಲಾಗುತ್ತಿತ್ತೆಂದು ಅವನಿಗೆ ತಿಳಿಯಿತು.
ಕಟ್ಟಕಡೆಗೆ ಅವನು, ಕೊನೆಯ ಮತ್ತು ಜನರು ತುಂಬ ಭಯಪಡುತ್ತಿದ್ದ ಚೆಕ್ಪಾಯಿಂಟನ್ನು ತಲುಪಿದಾಗ, ಸುತ್ತಲೂ, ಸುತ್ತಲೂ ಶವಗಳು ಬಿದ್ದಿರುವುದನ್ನು ನೋಡಿ, ಭಯದಿಂದ ನಡುಗಿಹೋದನು. ಹೆದರಿಕೆಯಿಂದ ಅವನು ಯೆಹೋವನ ಹೆಸರನ್ನು ಜೋರಾಗಿ ಹೇಳಲಾರಂಭಿಸಿದನು. ಈ ಹತ್ಯಾಕ್ಷೇತ್ರದಿಂದ ಪಾರಾಗಲು ದೇವರು ತನಗೆ ಸಹಾಯಮಾಡುವಲ್ಲಿ, ತನ್ನ ಜೀವಮಾನವೆಲ್ಲಾ ಆತನ ಸೇವೆಯಲ್ಲಿ ಕಳೆಯುವೆನೆಂದು ಅವನು ಪ್ರಾರ್ಥಿಸಿದನು.
ಜೇಮ್ಸ್ ತನ್ನ ಬ್ಯಾಗನ್ನು ಆ ಸೈನಿಕರಿಗೆ ತೋರಿಸಿದನು, ಮತ್ತು ಪುನಃ ಒಮ್ಮೆ ಅವರು ಅವನಿಗೆ ಹೇಳಿದ್ದು: “ನಾವು ಈ ರೀತಿಯ ಜನರಿಗಾಗಿ ಹುಡುಕುತ್ತಿಲ್ಲ.” ಅವನತ್ತ ತಿರುಗಿ, ಅವರು ಕೂಡಿಸಿ ಹೇಳಿದ್ದ: “ನಿಮ್ಮ ಸಹೋದರರಲ್ಲಿ ಒಬ್ಬರು, ಈ ಗುಡ್ಡದ ತಪ್ಪಲಿನಲ್ಲಿ ವಾಸಿಸುತ್ತಾರೆ. ಹೋಗಿ, ಅವನೊಂದಿಗೆ ಇರು.” ಇಷ್ಟರೊಳಗೆ ಸಾಕ್ಷಿಗಳ ಕುರಿತು ಜೇಮ್ಸ್ಗಿದ್ದ ಅಭಿಪ್ರಾಯವು ಸಂಪೂರ್ಣವಾಗಿ ಬದಲಾಗಿತ್ತ. ಅವನು ತಕ್ಷಣವೇ ಆ ಸಹೋದರನನ್ನು ಸಂಪರ್ಕಿಸಿದನು, ಮತ್ತು ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿa ಎಂಬ ಪುಸ್ತಕದಿಂದ ಬೈಬಲ್ ಅಭ್ಯಾಸಕ್ಕಾಗಿ ಏರ್ಪಾಡುಗಳನ್ನು ಮಾಡಲಾಯಿತು.
ಕೆಲವು ದಿನಗಳ ಬಳಿಕ, ಒಂದು ದಾಳಿಯಿಂದಾಗಿ ಅವನು ಆ ಕ್ಷೇತ್ರವನ್ನು ಬಿಟ್ಟು ಓಡಿಹೋಗಬೇಕಾಯಿತು. ಈ ಸಲ ಜೇಮ್ಸ್ ಕೇವಲ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಪೊದೆಗಾಡಿನೊಳಗೆ ಓಡಿಹೋದನು! ಅವನು ಸುಮಾರು 11 ತಿಂಗಳುಗಳ ವರೆಗೆ ಸಾಕ್ಷಿಗಳೊಂದಿಗೆ ಸಂಪರ್ಕವಿಲ್ಲದೆ ಇದ್ದನು. ಆಗ ಅವನು ಈ ಪುಸ್ತಕವನ್ನು ಐದು ಸಲ ಅಭ್ಯಾಸ ಮಾಡಿದನು. ಕೊನೆಗೆ, ಅವನು ನಗರಕ್ಕೆ ಹಿಂದಿರುಗಲು ಶಕ್ತನಾದನು ಮತ್ತು ಸಾಕ್ಷಿಗಳೊಂದಿಗಿನ ತನ್ನ ಬೈಬಲ್ ಅಭ್ಯಾಸವನ್ನು ಪುನಃ ಆರಂಭಿಸಿ, ಬೇಗನೆ ಪ್ರಗತಿಯನ್ನು ಮಾಡಿದನು. ಸ್ವಲ್ಪ ಸಮಯದ ಬಳಿಕ, ಅವನು ದೀಕ್ಷಾಸ್ನಾನ ಪಡೆದುಕೊಂಡನು, ಮತ್ತು ಈಗ ತನ್ನ ಆತ್ಮಿಕ ಸಹೋದರರೊಂದಿಗೆ ನಂಬಿಗಸ್ತಿಕೆಯಿಂದ ಸೇವೆಸಲ್ಲಿಸುತ್ತಿದ್ದಾನೆ.
[ಪಾದಟಿಪ್ಪಣಿ]
a ವಾಚಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.