“ಕ್ಯಾಥೊಲಿಕರಾದ ನಾವು ಅವರಿಂದ ಬಹಳಷ್ಟನ್ನು ಕಲಿಯಲಿಕ್ಕಿದೆ”
ಪ್ರೌಢಶಾಲೆಯಲ್ಲಿ ಧರ್ಮದ ಇತಿಹಾಸದ ಕುರಿತು ತರಗತಿಗೆ ಕಲಿಸುತ್ತಿರುವ ಸಮಯದಲ್ಲಿ, ಇಟಲಿಯ ಬ್ಯಾರಿಯಲ್ಲಿರುವ ಒಬ್ಬ ಶಿಕ್ಷಕಿಯು ಯೆಹೋವನ ಸಾಕ್ಷಿಗಳ ಕುರಿತಾದ ಈ ಹೇಳಿಕೆಯನ್ನು ಕೊಟ್ಟಳು. ತಾನು ವಿಡಿಯೊಕ್ಯಾಸೆಟ್ಟುಗಳನ್ನು ಕಲಿಸುವ ಮಾಧ್ಯಮವಾಗಿ ಉಪಯೋಗಿಸುವೆನೆಂದು ಈ ಶಿಕ್ಷಕಿ ತರಗತಿಗೆ ಹೇಳಿದ್ದಳು. ಇದನ್ನು ಕೇಳಿದಾಗ, ವಿದ್ಯಾರ್ಥಿಗಳಲ್ಲಿ ಒಬ್ಬನಾದ 18 ವರ್ಷ ಪ್ರಾಯದ ರೊರ್ಬಟೊ, ಚರ್ಚೆಯಲ್ಲಿ ತನ್ನ ಧರ್ಮವನ್ನು ಸೇರಿಸುವ ಸಲಹೆಯನ್ನು ಕೊಟ್ಟನು. ಅವನು ಅವಳಿಗೆ, ಯೆಹೋವನ ಸಾಕ್ಷಿಗಳು—ಸಂಸ್ಥೆಯ ಹಿಂದಿರುವ ಹೆಸರು ಎಂಬ ವಿಡಿಯೊಕ್ಯಾಸೆಟನ್ನು ನೀಡಿದಳು. ಅವಳು ರೊಬರ್ಟೊನ ನೀಡಿಕೆಯನ್ನು ಸ್ವೀಕರಿಸಿದಳು ಮತ್ತು ಸುಮಾರು 30 ವಿದ್ಯಾರ್ಥಿಗಳುಳ್ಳ ಇಡೀ ತರಗತಿಯು ಆ ವಿಡಿಯೊಕ್ಯಾಸೆಟನ್ನು ನೋಡಿದರು. “ಯೆಹೋವನ ಸಾಕ್ಷಿಗಳ ನಡುವೆ ಇರುವ ಐಕ್ಯಭಾವ, ಸಂಘಟನೆ, ಮತ್ತು ಆಳವಾದ ಪ್ರೀತಿಯಿಂದಾಗಿ ಎಲ್ಲರೂ ಪ್ರಭಾವಿಸಲ್ಪಟ್ಟರು,” ಎಂದು ರೊಬರ್ಟೊ ಹೇಳುತ್ತಾನೆ. “ದ ವಾಚ್ಟವರ್ ಪತ್ರಿಕೆಯ 4 ಕೋಟಿ ಪ್ರತಿಗಳು ಮತ್ತು ಅವೇಕ್! ಪತ್ರಿಕೆಯ 3.6 ಕೋಟಿ ಪ್ರತಿಗಳು ಪ್ರತಿ ತಿಂಗಳು ಮುದ್ರಿಸಲ್ಪಡುತ್ತವೆಂಬುದನ್ನು ತಿಳಿದು ಅವರಿಗೆ ಇನ್ನೂ ಹೆಚ್ಚು ಆಶ್ಚರ್ಯವಾಯಿತು.”
“ನೀವು ಇಷ್ಟು ವ್ಯವಸ್ಥಿತರಾಗಿದ್ದೀರೆಂದು ನಾನು ಯೋಚಿಸಿರಲಿಲ್ಲ,” ಎಂದು ರೊಬರ್ಟೊವಿನ ಅನೇಕ ಸಹಪಾಠಿಗಳು ವಿಡಿಯೊವನ್ನು ನೋಡಿದ ನಂತರ ಹೇಳಿದರು. ಯೆಹೋವನ ಸಾಕ್ಷಿಗಳ ಕುರಿತು, ಆ ಶಿಕ್ಷಕಿಯು ತರಗತಿಗೆ ಹೇಳಿದ್ದು: “ಅವರ ನಂಬಿಕೆಯು ಅವರನ್ನು ಎಷ್ಟು ಐಕ್ಯರು ಮತ್ತು ವ್ಯವಸ್ಥಿತರಾಗಿರುವಂತೆ ಮಾಡುತ್ತದೆಂಬುದನ್ನು ನೋಡಿರಿ. ಕ್ಯಾಥೊಲಿಕರಾದ ನಾವು ಅವರಿಂದ ಬಹಳಷ್ಟನ್ನು ಕಲಿಯಲಿಕ್ಕಿದೆ.” ಆ ವಿಡಿಯೊಕ್ಯಾಸೆಟ್ ಮತ್ತು ಅದರ ನಂತರದ ಚರ್ಚೆಯು, ಯೆಹೋವನ ಸಾಕ್ಷಿಗಳ ಕುರಿತಾಗಿ ಹೆಚ್ಚು ಉತ್ತಮವಾದ ಅಭಿಪ್ರಾಯವನ್ನು ಕೊಡಲು ತುಂಬ ಸಹಾಯಮಾಡಿತು.