ಎಲ್ಲ ಪಾದ್ರಿಗಳು ತಾವು ಕಲಿಸುವಂತಹ ವಿಷಯವನ್ನು ಸ್ವತಃ ನಂಬುತ್ತಾರೊ?
ಆ ಅಬಲೆಯ ಗಂಡನು ಆಗ ತಾನೇ ಸತ್ತಿದ್ದನು. ಅವನು ಸ್ವರ್ಗಕ್ಕೆ ಹೋಗುವಷ್ಟು ಒಳ್ಳೆಯವನಾಗಿಲ್ಲ ಇಲ್ಲವೇ ನರಕಕ್ಕೆ ಹೋಗುವಷ್ಟು ಕೆಟ್ಟವನಾಗಿಲ್ಲವೆಂದು ಪಾದ್ರಿಯು ಅವಳಿಗೆ ವಿವರಿಸುತ್ತಾನೆ. ಆದುದರಿಂದ ಪಾದ್ರಿಗನುಸಾರ, ಅವನು ಸ್ವರ್ಗಕ್ಕೆ ಹೋಗಲು ಅರ್ಹನಾಗುವಷ್ಟರ ವರೆಗೆ ಶಿಕ್ಷೆಯನ್ನು ಅನುಭವಿಸುವನು. ತನ್ನ ಗಂಡನು ಶುದ್ಧಿಲೋಕದಿಂದ (ಪರ್ಗಟರಿ) ಬೇಗನೆ ಬಿಡುಗಡೆಯಾಗಲು ಪ್ರಾರ್ಥನೆಗಳನ್ನು ಮಾಡುವಂತೆ ಅವಳು ಆ ಪಾದ್ರಿಗೆ ಹಣವನ್ನು ಕೊಡುತ್ತಾಳೆ. ಇದರಿಂದ ವಿಧವೆಯು ತೃಪ್ತಳಾಗುತ್ತಾಳೆ. ತನ್ನ ಪ್ರಾಮಾಣಿಕ ನಂಬಿಕೆಗಳನ್ನು ಪಾದ್ರಿಯೂ ನಂಬುತ್ತಾನೆಂದು ಅವಳು ನೆನಸುತ್ತಾಳೆ.
ತನ್ನ ಪಾದ್ರಿಯು ನಿಜವಾಗಿ ಮರಣಾನಂತರದ ಶಿಕ್ಷೆಯಲ್ಲಿ ನಂಬಿಕೆಯಿಡುವುದಿಲ್ಲವೆಂದು ಆ ವಿಧವೆಗೆ ತಿಳಿದುಬರುವಲ್ಲಿ, ಅವಳು ನಿರಾಶಳಾಗುವಳೆಂದು ನೀವು ನೆನಸುವುದಿಲ್ಲವೊ? ಹಲವಾರು ಪಾದ್ರಿಗಳು, ತಾವು ಸ್ವತಃ ಕಲಿಸುವಂತಹ ಅನೇಕ ವಿಷಯಗಳನ್ನು ನಂಬುವುದಿಲ್ಲವೆಂಬುದನ್ನು ತಿಳಿದುಕೊಳ್ಳುವಾಗ, ಅನೇಕರಿಗೆ ಶಾಂತಿ ಭಂಗವಾಗುತ್ತದೆ. ನ್ಯಾಷನಲ್ ಕ್ಯಾಥೊಲಿಕ್ ರಿಪೊರ್ಟರ್, “ಪಾದ್ರಿ ವರ್ಗದವರ ಲೈಂಗಿಕ ದುರ್ನಡತೆಗಿಂತಲೂ ಹೆಚ್ಚು ಗಂಭೀರವಾದ ಸಮಸ್ಯೆ” ಎಂದು ಕರೆಯುವ ವಿಷಯವನ್ನು ಸಂಬೋಧಿಸುತ್ತಾ ತಿಳಿಸಿದ್ದು: “ಪಾದ್ರಿವರ್ಗದವರಲ್ಲಿ ಅನೇಕರು, ದೇವರ ಅಸ್ತಿತ್ವದಲ್ಲಿ ಅಥವಾ ಬಹುಮಾನಗಳು ಮತ್ತು ಶಿಕ್ಷೆಗಳು ಇಲ್ಲವೇ ಪುನರುತ್ಥಾನದ ಬೋಧನೆಯಲ್ಲಿ ನಂಬಿಕೆಯಿಡುವುದನ್ನು ನಿಲ್ಲಿಸಿದ್ದಾರೆ. . . . ಪಾದ್ರಿವರ್ಗದವರ ಈ ಅಪನಂಬಿಕೆಯು ಅವರೊಳಗೆಯೇ ಮಂಜಿನಂತೆ ಹರಡಿಕೊಂಡಿದೆ.”
ಇತರ ಚರ್ಚುಗಳು ಅಂತಹದ್ದೇ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆ್ಯಂಗ್ಲಿಕನ್ ಚರ್ಚಿನ ಪಾದ್ರಿಗಳ ಒಂದು ಸಮೀಕ್ಷೆಯು ಪ್ರಕಟಿಸಿದ ವಿಷಯವನ್ನು ಆಸ್ಟ್ರೇಲಿಯದ ಕ್ಯಾನ್ಬೆರಾ ಟೈಮ್ಸ್ ಹೀಗೆ ವರದಿಸುತ್ತದೆ: ಅನೇಕರು “ಯೇಸು ಕನ್ನಿಕೆಯಿಂದ ಜನಿಸಿರುವ ಸಂಗತಿ, ಯೇಸುವಿನ ಅದ್ಭುತಗಳು ಮತ್ತು ಮೆಸ್ಸೀಯನ ಎರಡನೆಯ ಬರೋಣದಂತಹ, ಸಾಂಪ್ರದಾಯಿಕ ಕ್ರೈಸ್ತ ನಂಬಿಕೆಯ ಮೂಲಭೂತ ವೈಶಿಷ್ಟ್ಯಗಳನ್ನು ನಂಬುವುದಿಲ್ಲ.”
ಒಬ್ಬ ಪಾದ್ರಿಯು ಸ್ವತಃ ನಂಬದಂತಹ ಒಂದು ವಿಶ್ವಾಸಪ್ರಮಾಣವನ್ನು ಶುದ್ಧ ಮನಸ್ಸಾಕ್ಷಿಯಿಂದ ಹೇಗೆ ಪಠಿಸಬಹುದು, ಎಂದು ಧರ್ಮ ಲೇಖಕ ಜಾರ್ಜ್ ಆರ್. ಪ್ಲಾಗೆನ್ಸಾ ಕೇಳಿದರು. ಆ ವಿಶ್ವಾಸ ಪ್ರಮಾಣದ, “ನಾನು ನಂಬಿಕೆಯಿಡುತ್ತೇನೆ” ಎಂಬ ಮಾತುಗಳನ್ನು ತಾನು ಬದಲಾಯಿಸಿಬಿಡುತ್ತೇನೆ ಎಂದು ಒಬ್ಬ ಪಾದ್ರಿಯು ಹೇಳಿದನು. ಅವನಂದದ್ದು: ‘ಸರ್ವಶಕ್ತ ತಂದೆಯಾದ ದೇವರಲ್ಲಿ ಅವರು ನಂಬಿಕೆಯಿಡುತ್ತಾರೆ’ ಎಂದು ಹೇಳುತ್ತಾ ಆ ವಿಶ್ವಾಸ ಪ್ರಮಾಣವನ್ನು ತಿಳಿಸುತ್ತೇನೆ.” ಅಂತಹ ಕಪಟಾಚರಣೆಯನ್ನು “ದೇಶದಲ್ಲಿನ ಅತ್ಯಂತ ದೊಡ್ಡ ಮೋಸ” ಎಂದು ಪ್ಲಾಗೆನ್ಸಾ ಕರೆದರು.
ದುಃಖಕರವಾಗಿ, ಪಾದ್ರಿವರ್ಗದವರ ಅಂತಹ ಅಪನಂಬಿಕೆ ಮತ್ತು ಅಪ್ರಾಮಾಣಿಕತೆಯಿಂದಾಗಿ, ಅನೇಕ ಜನರು ಧರ್ಮದ ವಿಷಯದಲ್ಲಿ ನಿರಾಶೆಗೊಂಡಿದ್ದಾರೆ. ಆದರೆ ಅದು ಧರ್ಮದ ಕುರಿತಾದ ಏಕಮಾತ್ರ ಗೊಂದಲಮಯ ವಿಷಯವಲ್ಲ. ಚರ್ಚಿಗೆ ಹೋಗುವವರಲ್ಲಿ ಹೆಚ್ಚಿನವರಿಗೆ, ಬೈಬಲ್ ದೇವರ ವಾಕ್ಯವಾಗಿದೆಯೆಂದು ಕಲಿಸಲಾಗಿದೆ. ದೀರ್ಘ ಕಾಲದಿಂದ ಕಲಿಸಲ್ಪಟ್ಟಿರುವ ಕೆಲವು ಚರ್ಚ್ ಬೋಧನೆಗಳು ಬೈಬಲಿನಲ್ಲಿ ಕಲಿಸಲ್ಪಟ್ಟಿಲ್ಲವೆಂದು ತಿಳಿದುಕೊಳ್ಳಲು ಅವರು ಆಶ್ಚರ್ಯಪಡುವರೊ? ಮುಂದಿನ ಲೇಖನವು ಒಂದು ಉದಾಹರಣೆಯನ್ನು ಪರಿಗಣಿಸಲಿದೆ.