19ನೆಯ ಶತಮಾನವನ್ನು ಧ್ವಂಸಗೊಳಿಸಿದ ಯುದ್ಧ
1914
ಹೊಸ ಸಹಸ್ರವರ್ಷದ ಕುರಿತು ಆಲೋಚಿಸುತ್ತಾ, ದಿ ಓರ್ಲಾಂಡೊ ಸೆಂಟಿನಲ್ ವಾರ್ತಾಪತ್ರಿಕೆಯ ಅಂಕಣಕಾರನಾದ ಚಾರ್ಲೀ ರೀಸ್ ಬರೆದುದು: “19ನೆಯ ಶತಮಾನವನ್ನು ಧ್ವಂಸಗೊಳಿಸಿದ 1914-18ರ ಯುದ್ಧವು ಇನ್ನೂ ಕೊನೆಗೊಂಡಿಲ್ಲ.” ಅವನು ಹೇಳಿದ್ದರ ಅರ್ಥವೇನು? ಅವನು ವಿವರಿಸಿದ್ದು: “ಇತಿಹಾಸವು ತಾರೀಖುಗಳಿಂದ ನಿಯಂತ್ರಿಸಲ್ಪಡುವುದಿಲ್ಲ. ಯಾವುದು ಮೂಲ್ಯತೆಗಳು, ವಿಚಾರಧಾರೆಗಳು, ಮನೋಭಾವಗಳು ಹಾಗೂ ನೈತಿಕತೆಗಳ ಆಧಾರದ ಮೇಲೆ ಅರ್ಥನಿರೂಪಿಸಲ್ಪಟ್ಟಿತ್ತೋ ಆ 19ನೆಯ ಶತಮಾನವು ಜನವರಿ 1, 1901ರಂದು ಕೊನೆಗೊಳ್ಳಲಿಲ್ಲ. ಅದು 1914ರಲ್ಲಿ ಕೊನೆಗೊಂಡಿತು. ಇದೇ ಅರ್ಥನಿರೂಪಣೆಗನುಸಾರ, 20ನೆಯ ಶತಮಾನವು ಸಹ ಅದೇ ವರ್ಷದಲ್ಲಿ ಆರಂಭವಾಯಿತು. . . .
“ಕಾರ್ಯತಃ ನಮ್ಮ ಜೀವಮಾನಕಾಲದ ಎಲ್ಲ ಕಾದಾಟಗಳು, ಆ ಯುದ್ಧದಿಂದಲೇ ಉಂಟಾದವು. ನಮ್ಮ ಸಮಯದಲ್ಲಿ ಆಗಿರುವ ಬೌದ್ಧಿಕ ಹಾಗೂ ಸಾಂಸ್ಕೃತಿಕ ಘಟನಾವಳಿಗಳು, ಆ ಯುದ್ಧದಿಂದಲೇ ಆರಂಭವಾದವು. . . .
“ಆ ಯುದ್ಧವು ಇಂತಹ ಹಾನಿಯನ್ನು ಉಂಟುಮಾಡಿದ್ದರ ಕಾರಣವೇನೆಂದರೆ, ಮಾನವರು ತಮ್ಮ ವಿಧಿಯನ್ನು ತಾವೇ ನಿಯಂತ್ರಿಸಿಕೊಳ್ಳಸಾಧ್ಯವಿದೆ ಎಂಬಂಥ ಜನರ ನಂಬಿಕೆಯನ್ನು ಅದು ನುಚ್ಚುನೂರುಮಾಡಿತೆಂದು ನನ್ನೆಣಿಕೆ. . . . ಆ ಯುದ್ಧವು ಆ ಸುಳ್ಳು ನಂಬಿಕೆಯನ್ನು ಜನರು ಬಿಟ್ಟುಬಿಡುವಂತೆ ಮಾಡಿತು. ಯುದ್ಧದಲ್ಲಿ ಭಾಗವಹಿಸಿದ್ದ ಎರಡೂ ಪಕ್ಷದವರಲ್ಲಿ ಯಾರೊಬ್ಬರೂ ಹೀಗೆ ಸಂಭವಿಸುತ್ತದೆಂದು ನೆನಸಿರಲಿಲ್ಲ. ಅದು ಬ್ರಿಟಿಷ್ ಹಾಗೂ ಫ್ರೆಂಚ್ ಚಕ್ರಾಧಿಪತ್ಯಗಳನ್ನು ಧ್ವಂಸಗೊಳಿಸಿತು. ಬ್ರಿಟಿಷ್, ಫ್ರೆಂಚ್ ಹಾಗೂ ಜರ್ಮನರಲ್ಲಿ ಇದ್ದ ಕೌಶಲಭರಿತ ಜನರಲ್ಲಿ ಹೆಚ್ಚಿನವರನ್ನು ಅದು ಕೊಂದುಹಾಕಿತು. . . . ಸ್ವಲ್ಪ ಸಮಯಾವಧಿಯಲ್ಲಿಯೇ ಅದು 1.1 ಕೋಟಿ ಜನರನ್ನು ಕೊಂದುಹಾಕಿತು.”
ಸುಮಾರು 120ಕ್ಕಿಂತಲೂ ಹೆಚ್ಚು ವರ್ಷಗಳಿಂದ ಯೆಹೋವನ ಸಾಕ್ಷಿಗಳು, “ಅನ್ಯದೇಶದವರ ಸಮಯಗಳು” ಎಂದು ಯೇಸು ಯಾವುದನ್ನು ಕರೆದನೋ ಅದರ ಅಂತ್ಯವೆಂದು 1914ನ್ನು ಸೂಚಿಸಿದ್ದಾರೆ. (ಲೂಕ 21:24) ಆ ವರ್ಷದಲ್ಲಿ, ಪುನರುತ್ಥಾನಗೊಂಡು ಮಹಿಮೆಗೇರಿದ ಯೇಸು ಕ್ರಿಸ್ತನು, ಸ್ವರ್ಗೀಯ ರಾಜ್ಯದ ರಾಜನೋಪಾದಿ ಸಿಂಹಾಸನವನ್ನು ಏರಿದನು. ಆ ರಾಜ್ಯದ ಮೂಲಕ, ಈ ಶತಮಾನದಲ್ಲಿ ವಿಶಿಷ್ಟವಾಗಿರುವ ಎಲ್ಲ ಕಷ್ಟಾನುಭವಗಳನ್ನು ಯೆಹೋವ ದೇವರು ಶಾಶ್ವತವಾಗಿ ತೆಗೆದುಹಾಕುವನು.—ಕೀರ್ತನೆ 37:10, 11; ಪ್ರಸಂಗಿ 8:9; ಪ್ರಕಟನೆ 21:3, 4.
[ಪುಟ 32 ರಲ್ಲಿರುವ ಚಿತ್ರ ಕೃಪೆ]
U.S. National Archives photo