ಆಧುನಿಕ ಗ್ರೀಕ್ ಭಾಷೆಯಲ್ಲಿ ಒಂದು ಹೊಸ ಬೈಬಲ್
ಗ್ರೀಸ್ನಲ್ಲಿ “ದೇವರ ವಾಕ್ಯದಲ್ಲಿ ನಂಬಿಕೆ” ಎಂಬ ಜಿಲ್ಲಾ ಅಧಿವೇಶನಕ್ಕೆ ಒಟ್ಟುಗೂಡಿದವರಿಗೆ, 1997ರ ಆಗಸ್ಟ್ 23, ಒಂದು ವಿಶೇಷ ದಿನವಾಗಿತ್ತು. ಮಧ್ಯಾಹ್ನದ ಕಾರ್ಯಕ್ರಮದ ಮುಕ್ತಾಯದಲ್ಲಿ, ಒಂದು ಹೊಸ ಬೈಬಲು ಬಿಡುಗಡೆಯಾಯಿತು. ಆಧುನಿಕ ಗ್ರೀಕ್ ಭಾಷೆಯಲ್ಲಿ ನ್ಯೂ ವರ್ಲ್ಡ್ ಟ್ರ್ಯಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್. ಆಶ್ಚರ್ಯಚಕಿತರಾದ ಸಭಿಕರು ಆನಂದಾಶ್ರುಗಳನ್ನು ತಡೆದುಕೊಳ್ಳಲಾಗದೆ, ಬಹಳ ಸಮಯದ ವರೆಗೆ ಚಪ್ಪಾಳೆತಟ್ಟುತ್ತಾ ನಿಂತಿದ್ದರು!
1905ರಿಂದ, ಯೆಹೋವನ ಸಾಕ್ಷಿಗಳು, ಗ್ರೀಕ್ ಆರ್ತೊಡಾಕ್ಸ್ ಪಾದ್ರಿಯಿಂದ ಬರೆಯಲ್ಪಟ್ಟ, 19ನೇ ಶತಮಾನದ ಬೈಬಲ್ ಭಾಷಾಂತರವನ್ನು ಉಪಯೋಗಿಸುತ್ತಿದ್ದರು. ಈ ಬೈಬಲು ಅನೇಕ ವರ್ಷಗಳ ವರೆಗೆ ಉಪಯುಕ್ತವಾಗಿತ್ತು. ಆದರೆ ಕೆಲವು ಸಮಯದಿಂದ, ಹೆಚ್ಚು ನಿಷ್ಕೃಷ್ಟವೂ ಅರ್ಥಮಾಡಿಕೊಳ್ಳಲು ತುಂಬ ಸುಲಭವೂ ಆದಂಥ ಒಂದು ಬೈಬಲ್ ಭಾಷಾಂತರದ ಅಗತ್ಯವನ್ನು ಯೆಹೋವನ ಸಾಕ್ಷಿಗಳು ಕಂಡುಕೊಂಡರು. 1993ರಲ್ಲಿ, ಅವರು ನ್ಯೂ ಟ್ರ್ಯಾನ್ಸ್ಲೇಶನ್ ಆಫ್ ದ ಕ್ರಿಶ್ಚಿಯನ್ ಗ್ರೀಕ್ ಸ್ಕ್ರಿಪ್ಚರ್ಸ್ನ ಗ್ರೀಕ್ ಅನುವಾದವನ್ನು ಪಡೆದುಕೊಳ್ಳಲು ಸಂತೋಷಪಟ್ಟರು. ಆದರೆ ಈಗ, ಆಧುನಿಕ ಗ್ರೀಕ್ ಭಾಷೆಯಲ್ಲಿ ಇಡೀ ಬೈಬಲನ್ನು ಪಡೆದುಕೊಳ್ಳಲು ಅವರು ತುಂಬ ಸಂತೋಷವುಳ್ಳವರಾಗಿದ್ದರು.
ಒಬ್ಬ ಗುಣಗ್ರಾಹಿ ಸಾಕ್ಷಿಯು, ನ್ಯೂ ವರ್ಲ್ಡ್ ಟ್ರ್ಯಾನ್ಸ್ಲೇಶನ್ ಅನ್ನು, “ಯೆಹೋವನ ವಾಣಿಯನ್ನು ಒಯ್ಯುತ್ತಿರುವ ಒಂದು ಕವಿತೆ, ಮೃದುಲ ಮಂದಮಾರುತ” ಎಂದು ವರ್ಣಿಸಿದಳು. “ಇದೇ ಮೊದಲ ಬಾರಿ, ನಾವು ನಮ್ಮ ಸ್ವಂತ ಭಾಷೆಯಲ್ಲಿ ಸ್ಪಷ್ಟವಾಗಿ ಅದನ್ನು ಅರ್ಥಮಾಡಿಕೊಳ್ಳಸಾಧ್ಯವಾಯಿತು.” ಮನೆಗೆ ಹಿಂದಿರುಗಿ ಹೋದ ಕೂಡಲೇ, ಕೆಲವರು ತಮ್ಮ ಹೊಸ ಬೈಬಲನ್ನು ಓದಲು ಪ್ರಾರಂಭಿಸಿದರು. ಅಧಿವೇಶನಕ್ಕೆ ಹಾಜರಾದ ಒಬ್ಬ ಉತ್ಸಾಹಶೀಲ ವ್ಯಕ್ತಿ, ತನ್ನ ಬೈಬಲನ್ನು ಮುಂಜಾನೆ ಒಂದು ಗಂಟೆಯ ತನಕ ಓದುತ್ತಿದ್ದನು. ಅವನು ಯೋಬನ ಇಡೀ ಪುಸ್ತಕವನ್ನು ಓದಿಮುಗಿಸಿದ್ದನು!
ಸುಮಾರು ಏಳು ವರ್ಷಗಳ ಕಠಿನ ಪರಿಶ್ರಮದಿಂದಲೇ, ಗ್ರೀಕ್ ಭಾಷೆಯಲ್ಲಿ ನ್ಯೂ ವರ್ಲ್ಡ್ ಟ್ರ್ಯಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಅನ್ನು ಹೊರತರಲಾಯಿತು. ಬಂದ ಪತ್ರವೊಂದು ಹೀಗೆ ಹೇಳಿತು: “ಪ್ರಾಮಾಣಿಕ ಜನರಿಗೆ ಯೆಹೋವನ ಬಗ್ಗೆ ತಿಳಿದುಕೊಳ್ಳುವಂತೆ ಸಹಾಯಮಾಡುವುದರಲ್ಲಿ, ನ್ಯೂ ವರ್ಲ್ಡ್ ಟ್ರ್ಯಾನ್ಸ್ಲೇಶನ್ ಮಹತ್ತರವಾದ ನೆರವನ್ನು ನೀಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.”