ನೀವು ಸರಿತಪ್ಪುಗಳ ನಡುವೆ ಭೇದಕಲ್ಪಿಸಬಲ್ಲಿರೊ?
“ಸುಮಾರು 25 ಜನರನ್ನು ಸ್ವತಃ ನಾನೇ ಕೊಂದಿದ್ದೆ. . . . ಹಗಲೂರಾತ್ರಿ ಆ ದೃಶ್ಯ ನನ್ನ ಕಣ್ಣ ಮುಂದೆಯೇ ಇರುತ್ತದೆ. ನನಗೆ ಘೋರ ಸ್ವಪ್ನಗಳು ಬೀಳುತ್ತವೆ. . . . ನಾನು ಎಲ್ಲಿ ಹೋದರೂ, ನಾನು ಕೊಂದಂತಹ ಜನರ ಮುಖಗಳನ್ನೇ ನೋಡಬಹುದಿತ್ತು. ಅದು ಇಂದೇ, ಈಗಲೇ ನಡೆಯಿತೊ ಏನೋ ಎಂಬಂತೆ ನಾನು ಅದನ್ನು ಸ್ಪಷ್ಟವಾಗಿ ನೋಡಬಲ್ಲೆ. . . . ನಾನು ಮಾಡಿದಂತಹ ಕೃತ್ಯಗಳಿಗಾಗಿ ನನ್ನನ್ನು ಕ್ಷಮಿಸಿಕೊಳ್ಳಸಾಧ್ಯವಿಲ್ಲ.”—ವಿ.ಎಸ್. “ಅಲ್ಲಿ ಹೋಗಿ ವೈರಿಯನ್ನು ಕೊಂದುಹಾಕುವ ಆಜ್ಞೆ ನನಗೆ ನೀಡಲಾಗಿತ್ತು. . . . ಅಲ್ಲಿದ್ದವರು, ಸ್ತ್ರೀಪುರುಷರು ಮತ್ತು ಮಕ್ಕಳು ಎಂದು, ನಾನು ಒಂದು ನಿಮಿಷವೂ ಯೋಚಿಸಲಿಲ್ಲ. . . . ನಾನು ನಿರ್ದೇಶನಕ್ಕನುಸಾರ ಕ್ರಿಯೆಗೈದೆನೆಂದು ನನಗೆ ಆಗಲೂ ಅನಿಸಿತು, ಈಗಲೂ ಅನಿಸುತ್ತದೆ. ನನಗೆ ಕೊಡಲ್ಪಟ್ಟ ಆಜ್ಞೆಗಳನ್ನು ನಾನು ನೆರವೇರಿಸಿದೆ. ಮತ್ತು ಅದು ತಪ್ಪೆಂದು ನನಗೆ ಅನಿಸಲೇ ಇಲ್ಲ.”—ಡಬ್ಲ್ಯೂ.ಸಿ.
ಮಾರ್ಚ್ 16, 1968ರಂದು, ಮೇಲೆ ಉಲ್ಲೇಖಿಸಲ್ಪಟ್ಟಿರುವ ಈ ಪುರುಷರಿಬ್ಬರು, ಯಾವುದನ್ನು ಯುದ್ಧದ ಸಮಯದಲ್ಲಿ ಗೈದ ಕುಖ್ಯಾತ ಪಾತಕವೆಂದು ತದನಂತರ ತೀರ್ಮಾನಿಸಲಾಯಿತೊ, ಅದರಲ್ಲಿ ಭಾಗವಹಿಸಿದರು. ಅವರಿಬ್ಬರು ಇತರ ಸೈನಿಕರೊಂದಿಗೆ ಜೊತೆಗೂಡಿ, ವಿಯೇಟ್ನಾಮ್ನ ಒಂದು ಚಿಕ್ಕ ಹಳ್ಳಿಯನ್ನು ಪ್ರವೇಶಿಸಿ, ಹೆಂಗಸರು, ಮಕ್ಕಳು, ಮತ್ತು ವೃದ್ಧರನ್ನು ಸೇರಿಸಿ, ನೂರಾರು ನಾಗರಿಕರನ್ನು ಕೊಂದುಹಾಕಿದರು. ಆದರೆ ಈ ಇಬ್ಬರು ಸೈನಿಕರ ತದ್ವಿರುದ್ಧವಾದ ಅಭಿಪ್ರಾಯಗಳ ಕಡೆಗೆ ಗಮನಕೊಡಿ. ಮೊದಲನೆಯ ಸೈನಿಕನು ತಾನು ಮಾಡಿದಂತಹ ಕ್ರಿಯೆಯಿಂದ ಸಂಕಟಕ್ಕೀಡಾಗಿರುವುದು ತೀರ ಸ್ಪಷ್ಟ. ಎರಡನೆಯವನಿಗೆ ತಾನು ಮಾಡಿದ ಕೃತ್ಯಗಳು ಸರಿಯೆಂದು ಅನಿಸಿದವು. ಒಂದೇ ಅನುಭವಕ್ಕೆ ಇಬ್ಬರು ವ್ಯಕ್ತಿಗಳು ಹೇಗೆ ಇಷ್ಟು ಭಿನ್ನವಾಗಿ ಪ್ರತಿಕ್ರಿಯಿಸಬಲ್ಲರು?
ಉತ್ತರವು, ಮನಸ್ಸಾಕ್ಷಿಗೆ ಸಂಬಂಧಿಸಿದೆ. ಅದು ದೈವದತ್ತವಾದ ಸಾಮರ್ಥ್ಯವಾಗಿದ್ದು, ನಮ್ಮ ಕುರಿತಾಗಿ ಮುಚ್ಚುಮರೆಯಿಲ್ಲದೆ ತೀರ್ಪುಮಾಡುವಂತೆ ಮತ್ತು ನಮ್ಮ ಕ್ರಿಯೆಗಳು ಹಾಗೂ ಉದ್ದೇಶಗಳನ್ನು ತೀರ್ಮಾನಿಸುವಂತೆ ಸಹಾಯಮಾಡುತ್ತದೆ. ಮನಸ್ಸಾಕ್ಷಿಯು, ಸರಿತಪ್ಪುಗಳನ್ನು ನಿರ್ಣಯಿಸುವ ನಮ್ಮ ಆಂತರಿಕ ಅರಿವಾಗಿದೆ.
ನಿರ್ಣಯಗಳನ್ನು ಮಾಡುವಾಗ, “ನಿಮ್ಮ ಮನಸ್ಸಾಕ್ಷಿಯು ನಿಮ್ಮ ಮಾರ್ಗದರ್ಶಿಯಾಗಿರಲಿ” ಎಂಬ ಗಾದೆಯನ್ನು ಕೆಲವರು ಅನುಸರಿಸುತ್ತಾರೆ. ಆದರೆ, ಮನಸ್ಸಾಕ್ಷಿಯು ಸದಾ ವಿಶ್ವಾಸಾರ್ಹವಲ್ಲವೆಂಬುದು ವಿಷಾದನೀಯ. ಅನೇಕರು ಘೋರ ದುಷ್ಕೃತ್ಯಗಳನ್ನು ಗೈದಿದ್ದಾರೆ ಹಾಗೂ ಸಹಿಸಿಕೊಂಡಿದ್ದಾರೆಂಬುದು ನಿಶ್ಚಯ. ಆದರೆ, ಅವರ ಮನಸ್ಸಾಕ್ಷಿಗಳು ಅವರನ್ನು ಚುಚ್ಚುವುದೇ ಇಲ್ಲ. (ಯೋಹಾನ 16:2; ಅ. ಕೃತ್ಯಗಳು 8:1) ಇಂಗ್ಲಿಷ್ ಕಾದಂಬರಿಕಾರ ಸ್ಯಾಮುವೆಲ್ ಬಟ್ಲರ್ ಒಮ್ಮೆ ಗಮನಿಸಿದಂತೆ, ಮನಸ್ಸಾಕ್ಷಿಯು, “ಅದಕ್ಕೆ ಕಿವಿಗೊಡಲು ಬಯಸದವರೊಂದಿಗೆ ಮಾತಾಡುವುದನ್ನು ನಿಲ್ಲಿಸಿಬಿಡುತ್ತದೆ.”
ನಿಮ್ಮ ಮನಸ್ಸಾಕ್ಷಿಯನ್ನು ನೀವು ನಂಬಸಾಧ್ಯವಿದೆಯೊ? ಮುಂದಿನ ಲೇಖನವು ತೋರಿಸಲಿರುವಂತೆ, ಅದು ಎಷ್ಟು ಚೆನ್ನಾಗಿ ತರಬೇತುಗೊಳಿಸಲ್ಪಟ್ಟಿದೆ ಎಂಬ ವಿಷಯದ ಮೇಲೆ ಉತ್ತರವು ಮುಖ್ಯವಾಗಿ ಅವಲಂಬಿಸಿರುತ್ತದೆ.
[ಪುಟ 3 ರಲ್ಲಿರುವ ಚಿತ್ರ ಕೃಪೆ]
Upper war scene: U.S. Signal Corps photo