“ಐಕ್ಯಭಾವ ಮತ್ತು ಸಹೋದರತ್ವದ ಮಾದರಿ”
ಸ್ತ್ರೀಯೊಬ್ಬಳು ಕುಟುಂಬ ಸದಸ್ಯರೊಬ್ಬರ ಸಾವಿನ ಸಂಕಟಕರವಾದ ನಷ್ಟವನ್ನು ಅನುಭವಿಸಿದ ಬಳಿಕ, ಯೆಹೋವನ ಸಾಕ್ಷಿಗಳ ಕೃತ್ಯಗಳನ್ನು ಈ ಮೇಲಿನಂತೆ ವರ್ಣಿಸಿದಳು. ಅವಳು ವಿವರಿಸುವುದು:
“ನನ್ನ ಕುಟುಂಬದ ಪರವಾಗಿ ಹಾಗೂ ನನ್ನ ಪರವಾಗಿ, ಜರ್ಮನಿಯ ಫ್ರೀಬರ್ಗ್ನಲ್ಲಿರುವ ಇಟ್ಯಾಲಿಯನ್ ಸಭೆಯ ಸಾಕ್ಷಿಗಳಿಗೆ ನಾನು ಉಪಕಾರ ಹೇಳಲು ಬಯಸುತ್ತೇನೆ. ನನ್ನ ಅಣ್ಣನಾದ ಆಂಟೊನ್ಯೊ ಹಾಗೂ ಅವನ ಹೆಂಡತಿಯಾದ ಆನಾಳನ್ನು ಬಿಟ್ಟರೆ, ನನ್ನ ಕುಟುಂಬದಲ್ಲಿ ಬೇರೆ ಯಾರೂ ಯೆಹೋವನ ಸಾಕ್ಷಿಗಳಾಗಿಲ್ಲ. ನಾವು ಯಾವಾಗಲೂ ಆ ಧರ್ಮವನ್ನು ಗೌರವಿಸಿದ್ದೇವಾದರೂ, ದೀರ್ಘ ಸಮಯದಿಂದಲೂ ಅವರ ಧಾರ್ಮಿಕ ಆಯ್ಕೆಯನ್ನು ನಾವು ಟೀಕಿಸಿದ್ದೇವೆ.
“ಆದರೆ, ಈಗ ನಾವು ನಮ್ಮ ಮನಸ್ಸುಗಳನ್ನು ಬದಲಾಯಿಸಲೇಬೇಕು. ನಿಜವಾಗಿಯೂ, ನಾವು ಎಂದೂ ನಿರೀಕ್ಷಿಸದಿದ್ದಂತಹ ಸಹೋದರತ್ವ ಹಾಗೂ ಪ್ರೀತಿಯ ಮಾದರಿಯನ್ನು ಅನುಭವಿಸಿದ್ದೇವೆ.
“ದುಃಖಕರವಾಗಿ, ಒಂದು ರಸ್ತೆ ಅಪಘಾತದಲ್ಲಿ ಆನಾ ಅಕಾಲಿಕವಾಗಿ ಮೃತಪಟ್ಟಳು. ನಾವು ಇಟಲಿಯಲ್ಲಿ ವಾಸಿಸುತ್ತಿರುವುದರಿಂದ, ನನ್ನ ಅಣ್ಣ ಆಂಟೊನ್ಯೊಗೆ ಹಾಗೂ ಅವನ ಮಕ್ಕಳಿಗೆ ನಾವು ಸ್ವಲ್ಪ ಮಟ್ಟಿಗೆ ಮಾತ್ರವೇ ಭಾವನಾತ್ಮಕ ಬೆಂಬಲವನ್ನು ಕೊಡಲು ಶಕ್ತರಾಗಿದ್ದೆವು. ಆದರೆ ಅವನ ಸಾಕ್ಷಿ ಸಹೋದರರು ಅವನ ಸಹಾಯಕ್ಕೆ ಬಂದರು. ಅವರು ಮನೆಗೆ ಬರುವ ಮೂಲಕ, ತಮ್ಮ ಮಾತುಗಳಿಂದ, ತಮ್ಮ ನಂಬಿಕೆಯಿಂದ, ತಮ್ಮ ಶಾರೀರಿಕ, ನೈತಿಕ, ಹಾಗೂ ಭಾವನಾತ್ಮಕ ಬೆಂಬಲದಿಂದ ಅವನಿಗೆ ಸಹಾಯ ಮಾಡಿದ್ದಾರೆ. ನಾನು ವೈಯಕ್ತಿಕವಾಗಿ ಆ ಸಭೆಗೆ ಉಪಕಾರ ತಿಳಿಸಲು ಸಾಧ್ಯವಿಲ್ಲದಿರುವುದರಿಂದ, ನಾವೆಂದಿಗೂ ಮರೆಯದಿರುವಂತಹ ಐಕ್ಯಭಾವ ಮತ್ತು ಸಹೋದರತ್ವದ ಮಾದರಿಗಾಗಿ, ನಾನು ನಿಮ್ಮ ಪತ್ರಿಕೆಯ ಮೂಲಕ ಅವರಿಗೆ ಉಪಕಾರ ಸಲ್ಲಿಸಲು ಬಯಸುತ್ತೇನೆ.”
ಈ ಸ್ತ್ರೀಯ ದಯಾಪರ ಹೇಳಿಕೆಗಳನ್ನು ಗಣ್ಯಮಾಡಲಾಗುತ್ತದೆ. ಅವಳು ಗಮನಿಸಿದಂತೆ, ಯೆಹೋವನ ಸಾಕ್ಷಿಗಳು ಒಂದು ಅಂತಾರಾಷ್ಟ್ರೀಯ ಸಹೋದರತ್ವವಾಗಿದ್ದಾರೆ. (1 ಪೇತ್ರ 2:17) ಪ್ರೀತಿಯು “ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ” ಎಂಬುದು ಅವರಿಗೆ ತಿಳಿದಿರುವುದರಿಂದ, ಅವರು ತಮ್ಮ ನಡುವೆ ಮಮತೆಯ ಭದ್ರವಾದ ಬಂಧಗಳನ್ನು ಬೆಳೆಸಿಕೊಳ್ಳುತ್ತಾರೆ. (ಕೊಲೊಸ್ಸೆ 3:14) ನಮ್ಮೆಲ್ಲರ ಮೇಲೂ ಒದಗಿಬರಸಾಧ್ಯವಿರುವಂತಹ ಅತ್ಯಂತ ದುರಂತಮಯ ಸನ್ನಿವೇಶಗಳಲ್ಲೂ, ಯೆಹೋವನ ಸಾಕ್ಷಿಗಳು ದೇವರಿಗೆ ಹಾಗೂ ಆತನ ಜನರಿಗೆ ನಿಕಟವಾಗಿ ಅಂಟಿಕೊಳ್ಳುತ್ತಾರೆ.—ಜ್ಞಾನೋಕ್ತಿ 18:24; ಪ್ರಸಂಗಿ 9:11; ಯೋಹಾನ 13:34, 35.