ನಿಮ್ಮ ಮಾತು ಇರಿಯುತ್ತದೊ ಅಥವಾ ಗುಣಪಡಿಸುತ್ತದೊ?
ಈ ಕಷ್ಟಕರ ಸಮಯಗಳಲ್ಲಿ, ಅನೇಕರು “ಮುರಿದ ಮನಸ್ಸುಳ್ಳ”ವರು ಹಾಗೂ “ಕುಗ್ಗಿಹೋದವ”ರು ಆಗಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. (ಕೀರ್ತನೆ 34:18) ಹೀಗೆ, ಅಪೊಸ್ತಲ ಪೌಲನ ಮಾತುಗಳಲ್ಲಿ ಹೇಳುವುದಾದರೆ, ಸತತವಾಗಿ “ಮನಗುಂದಿದವರಿಗೆ ಸಾಂತ್ವನದಾಯಕವಾಗಿ ಮಾತಾಡುವ” (NW) ಮತ್ತು ‘ಬಲಹೀನರಿಗೆ ಆಧಾರವಾಗಿರುವ’ ಅಗತ್ಯವಿದೆ. (1 ಥೆಸಲೊನೀಕ 5:14) ಆದರೆ ನಮ್ಮ ಜೊತೆಮಾನವರು ನಮಗೆ ಕೋಪವನ್ನು ಉಂಟುಮಾಡುವುದಾದರೆ ಅಥವಾ ಗಂಭೀರವಾದ ಯಾವುದೇ ತಪ್ಪನ್ನು ಮಾಡುವುದಾದರೆ ಆಗೇನು? ಅಂತಹ ಒಂದು ಸನ್ನಿವೇಶದಲ್ಲಿ, ಆ ವ್ಯಕ್ತಿಯನ್ನು ನಿರ್ದಯವಾಗಿ ಸರಿಪಡಿಸುವುದರಲ್ಲಿ ಸಮರ್ಥನಾ ಭಾವವು ಉಂಟಾಗಬಹುದು. ಹಾಗಿದ್ದರೂ, ಎಚ್ಚರಿಕೆಯು ಸೂಕ್ತವಾದದ್ದಾಗಿದೆ. ಸಲಹೆಯು ನಿರ್ದಯವಾದ ರೀತಿಯಲ್ಲಿ ಕೊಡಲ್ಪಡುವಾಗ, ಒಂದುವೇಳೆ ಅದು ಸಮಂಜಸವಾಗಿರುವಾಗಲೂ ಹಾನಿಕರವಾದದ್ದಾಗಿರಸಾಧ್ಯವಿದೆ. ಜ್ಞಾನೋಕ್ತಿ 12:18 ಹೇಳುವುದು: “ಕತ್ತಿತಿವಿದ ಹಾಗೆ ದುಡುಕಿ ಮಾತಾಡುವವರುಂಟು.”
ಆದುದರಿಂದ, ನಾವು ತಿದ್ದುಪಾಟನ್ನು ನೀಡಲು ಪ್ರಯತ್ನಿಸುವಾಗ ಅಥವಾ ಒಂದು ತಪ್ಪಭಿಪ್ರಾಯವನ್ನು ನಿರ್ವಹಿಸುವಾಗ, “ಮತಿವಂತರ ಮಾತೇ ಮದ್ದು” ಎಂಬ ಜ್ಞಾನೋಕ್ತಿ 12:18ರ ದ್ವಿತೀಯ ಭಾಗವನ್ನು ಜ್ಞಾಪಿಸಿಕೊಳ್ಳುವುದು ಅತ್ಯಾವಶ್ಯಕವಾದದ್ದಾಗಿದೆ. ಯಾವಾಗಲೂ ಸ್ವತಃ ಹೀಗೆ ಕೇಳಿಕೊಳ್ಳಿ, ‘ನನಗೆ ತಿದ್ದುಪಾಟು ಅಗತ್ಯವಿರುತ್ತಿದ್ದಲ್ಲಿ, ನನ್ನೊಂದಿಗೆ ಹೇಗೆ ವ್ಯವಹರಿಸುವಂತೆ ನಾನು ಬಯಸುತ್ತಿದ್ದೆ?’ ನಮ್ಮಲ್ಲಿ ಅನೇಕರು, ಟೀಕೆಗಿಂತಲೂ ಹೆಚ್ಚಾಗಿ ಉತ್ತೇಜನಕ್ಕೆ ಹೆಚ್ಚು ಪ್ರತಿಕ್ರಿಯೆ ತೋರಿಸುವವರಾಗಿದ್ದೇವೆ. ಆದುದರಿಂದ ಧಾರಾಳವಾಗಿ ಪ್ರಶಂಸಿಸಿರಿ. ಇದು ಅನೇಕವೇಳೆ ಕೋಪಗೊಂಡವನಿಗೆ ಪ್ರಗತಿಯನ್ನು ಮಾಡಲು ಪ್ರೇರಣೆಯನ್ನು ಕೊಡುವುದು, ಮತ್ತು ಅವನು ಕೊಡಲ್ಪಡುವ ಯಾವುದೇ ಸಹಾಯಕ್ಕೆ ಕೃತಜ್ಞನಾಗಿರುವುದು ಹೆಚ್ಚು ಸಂಭವನೀಯ.
ಯಾವಾಗಲೂ ನಮ್ಮ ಮಾತುಗಳು ಮೃದುಭಾವದಿಂದ ಕೂಡಿರುವುದು ಎಷ್ಟು ಅತ್ಯಾವಶ್ಯಕವಾದದ್ದಾಗಿದೆ! ಕೀರ್ತನೆಗಾರನಿಗೆ ಅನಿಸಿದಂತೆ, ಗುಣಪಡಿಸುವ ಮಾತುಗಳು, ಆಲಿಸುವಾತನಿಗೆ ಒಳ್ಳೆಯ ಅನಿಸಿಕೆಯನ್ನು ಉಂಟುಮಾಡುತ್ತವೆ. ಅವನು ಬರೆದುದು: “ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗುಪಕಾರ; ಅವರ ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ; ನನ್ನ ತಲೆಯು ಅದನ್ನು ಬೇಡವೆನ್ನದಿರಲಿ.”—ಕೀರ್ತನೆ 141:5.