‘ಶೈಶವದಿಂದಲೂ ನಿನಗೆ ಪರಿಚಯವಿದೆ’
ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳಿಗನುಸಾರ, ಶಿಶುಗಳೊಂದಿಗೆ ಮಾತಾಡುವುದು, ಅವುಗಳ ಮಿದುಳುಗಳ ವಿಕಸನವನ್ನು ಗಾಢವಾಗಿ ಪ್ರಭಾವಿಸುತ್ತಾ, ಯೋಚಿಸುವ, ತರ್ಕಮಾಡುವ ಮತ್ತು ಸಮಸ್ಯೆಗಳನ್ನು ಬಗೆಹರಿಸುವ ಅವುಗಳ ಸಾಮರ್ಥ್ಯವನ್ನು ಸ್ಥಿರಪಡಿಸುತ್ತದೆ. ಇದು ವಿಶೇಷವಾಗಿ ಒಂದು ಮಗುವಿನ ಜೀವಿತದ ಪ್ರಥಮ ವರ್ಷದಲ್ಲಿ ಸತ್ಯವಾಗಿರುತ್ತದೆ. “ಒಂದು ಶಿಶು ಪ್ರತಿ ದಿನ ಕೇಳಿಸಿಕೊಳ್ಳುವ ಶಬ್ದಗಳ ಸಂಖ್ಯೆಯು, ತದನಂತರದ ಬುದ್ಧಿವಂತಿಕೆ, ಶಾಲಾ ಸಾಫಲ್ಯ ಮತ್ತು ಸಾಮಾಜಿಕ ದಕ್ಷತೆಯ ಏಕಮಾತ್ರ ಅತಿ ಪ್ರಾಮುಖ್ಯ ಮುನ್ಸೂಚಕವಾಗಿದೆ” ಎಂಬುದನ್ನು ಕೆಲವು ಸಂಶೋಧಕರು ಈಗ ನಂಬುತ್ತಾರೆಂದು ಇಂಟರ್ನ್ಯಾಷನಲ್ ಹೆರಲ್ಡ್ ಟ್ರಿಬ್ಯೂನ್ ವರದಿಸುತ್ತದೆ.
ಆದರೆ ನುಡಿಯಲ್ಪಟ್ಟ ಪದಗಳು, ಒಬ್ಬ ವ್ಯಕ್ತಿಯಿಂದ ಬರಬೇಕು. ಒಂದು ಟೆಲಿವಿಷನ್ ಅಥವಾ ರೇಡಿಯೊ ಅದಕ್ಕೆ ಬದಲಿಯಾಗಿರಸಾಧ್ಯವಿಲ್ಲವಂತೆ.
ಅಮೆರಿಕದ ಸಿಅಟಲ್ನಲ್ಲಿನ ವಾಷಿಂಗ್ಟನ್ ವಿಶ್ವವಿದ್ಯಾನಿಲಯದಲ್ಲಿನ ಒಬ್ಬ ನರವಿಜ್ಞಾನಿಯು ಹೇಳಿದ್ದು: “ನರವ್ಯೂಹ ಜೋಡಣೆಗಳು, ಜೀವನದ ಅತಿ ಆರಂಭದಲ್ಲಿ ರಚಿಸಲ್ಪಡುತ್ತವೆಂಬುದು ನಮಗೆ ಈಗ ತಿಳಿದಿದೆ ಮತ್ತು ಶಿಶುವಿನ ಮಿದುಳು, ಜೋಡಣೆಗಳು ಹೇಗೆ ಮಾಡಲ್ಪಡುತ್ತವೆಂಬುದನ್ನು ನಿರ್ಧರಿಸಲಿಕ್ಕಾಗಿ ಅಕ್ಷರಶಃ ಕಾಯುತ್ತಿರುತ್ತದೆಂದು ನಮಗೆ ಈಗ ತಿಳಿದಿದೆ. ಈ ಕಾರ್ಯಗತಿಯು ಎಷ್ಟು ಬೇಗನೆ ಆರಂಭಗೊಳ್ಳುತ್ತದೆಂದು ನಮಗೆ ತೀರ ಇತ್ತೀಚಿನ ವರೆಗೆ ತಿಳಿದಿರಲಿಲ್ಲ. ಉದಾಹರಣೆಗಾಗಿ, ಶಿಶುಗಳು ತಮ್ಮ ಮಾತೃಭಾಷೆಯ ಶಬ್ದಗಳನ್ನು, ಆರು ತಿಂಗಳ ಪ್ರಾಯದೊಳಗೆ ಕಲಿತಿವೆ.”
ಶಿಶುಗಳಿಗೆ ಕೇವಲ ಹೇರಳವಾದ ಪ್ರೀತಿಯು ಕೊಡಲ್ಪಡುವಲ್ಲಿ ಅವು ಬೌದ್ಧಿಕವಾಗಿ ವರ್ಧಿಸುವವು ಎಂಬ ವ್ಯಾಪಕವಾದ ಅಭಿಪ್ರಾಯವನ್ನು ಇತ್ತೀಚಿನ ಸಂಶೋಧನೆಯು ಪಂಥಾಹ್ವಾನಿಸುತ್ತದೆ. ಒಂದು ಮಗುವಿನ ವಿಕಸನದಲ್ಲಿ, ಹೆತ್ತವರ ಪಾತ್ರದ ಪ್ರಾಮುಖ್ಯವನ್ನೂ ಅದು ಒತ್ತಿಹೇಳುತ್ತದೆ.
ಇದು ತಿಮೊಥೆಯನಿಗೆ ಅಪೊಸ್ತಲ ಪೌಲನು ಬರೆದ ಪ್ರೇರಿತ ಪತ್ರದ ಮಾತುಗಳನ್ನು ನೆನಪಿಗೆ ತರುತ್ತದೆ: “ಚಿಕ್ಕಂದಿನಿಂದಲೂ [“ಶೈಶವದಿಂದಲೂ,” NW] ನಿನಗೆ ಪರಿಶುದ್ಧಗ್ರಂಥಗಳ ಪರಿಚಯವಾಯಿತಲ್ಲಾ. ಆ ಗ್ರಂಥಗಳು . . . ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ.” (ಓರೆಅಕ್ಷರಗಳು ನಮ್ಮವು.) ಶಿಶುವಾದ ತಿಮೊಥೆಯನಿಗೆ, ಅವನ ವಿಶ್ವಾಸಿ ತಾಯಿ ಮತ್ತು ಅಜ್ಜಿಯು ನುಡಿದಂತಹ ಆ ಪರಿಶುದ್ಧಗ್ರಂಥಗಳು, ಅವನು ದೇವರ ಒಬ್ಬ ಗಮನಾರ್ಹ ಸೇವಕನಾಗಿ ವಿಕಸಿಸುವುದರಲ್ಲಿ ಒಂದು ಪ್ರಧಾನ ಪಾತ್ರವನ್ನು ವಹಿಸಿದವೆಂಬುದು ಸಂಭವನೀಯ.—2 ತಿಮೊಥೆಯ 1:5; 3:15.