“ಲಭ್ಯವಿರುವವುಗಳಲ್ಲಿ ಇಂಟರ್ಲಿನಿಯರ್ ಹೊಸ ಒಡಂಬಡಿಕೆ ಅತ್ಯುತ್ತಮ”
ದ ಕಿಂಗ್ಡಮ್ ಇಂಟರ್ಲಿನಿಯರ್ ಟ್ರಾನ್ಸ್ಲೇಶನ್ ಆಫ್ ದ ಗ್ರೀಕ್ ಸ್ಕ್ರಿಪ್ಚರ್ಸ್ ಬಗ್ಗೆ ಡಾ. ಜೇಸನ್ ಬೆಡೂನ್ ಹೀಗೆ ವರ್ಣಿಸುತ್ತಾರೆ. ಅವರು ವಿವರಿಸುವುದು:
“ನಾನು ಇತ್ತೀಚೆಗೆ [ಅಮೆರಿಕ]ದ ಬ್ಲೂಮಿಂಗ್ಟನ್ನ ರಿಲಿಜಿಯಸ್ ಸ್ಟಡೀಸ್ ಡಿಪಾರ್ಟ್ಮೆಂಟ್ ಆಫ್ ಇಂಡಿಯಾನಾ ಯೂನಿವರ್ಸಿಟಿಯಲ್ಲಿ ಒಂದು ಪಾಠಕ್ರಮವನ್ನು ಕಲಿಸಿ, ಮುಗಿಸಿದ್ದೇನೆ. . . . ಇದು ಪ್ರಾಥಮಿಕವಾಗಿ ಸುವಾರ್ತೆಗಳಲ್ಲಿನ ಒಂದು ಪಾಠಕ್ರಮವಾಗಿದೆ. ದ ಕಿಂಗ್ಡಮ್ ಇಂಟರ್ಲಿನಿಯರ್ ಟ್ರಾನ್ಸ್ಲೇಶನ್ ಆಫ್ ದ ಗ್ರೀಕ್ ಸ್ಕ್ರಿಪ್ಚರ್ಸ್ನ ಪ್ರತಿಗಳ ರೂಪದಲ್ಲಿ ನಿಮ್ಮ ಸಹಾಯವು ಬಂತು. ಇದನ್ನು ನನ್ನ ವಿದ್ಯಾರ್ಥಿಗಳು ತರಗತಿಯ ಪಠ್ಯಪುಸ್ತಕಗಳಲ್ಲಿ ಒಂದು ಪಠ್ಯಪುಸ್ತಕವಾಗಿ ಉಪಯೋಗಿಸಿದರು. ಈ ಚಿಕ್ಕ ಸಂಪುಟಗಳು ಪಾಠಕ್ರಮಕ್ಕೆ ಅಮೂಲ್ಯವಾಗಿದ್ದು, ನನ್ನ ವಿದ್ಯಾರ್ಥಿಗಳಿಗೆ ಬಹಳ ಪ್ರಿಯವಾದವುಗಳಾಗಿದ್ದವು.”
ಡಾ. ಬೆಡೂನ್ ತಮ್ಮ ಕಾಲೇಜ್ ಪಾಠಕ್ರಮಗಳಲ್ಲಿ ಈ ಕಿಂಗ್ಡಮ್ ಇಂಟರ್ಲಿನಿಯರ್ ಅನ್ನು ಏಕೆ ಉಪಯೋಗಿಸುತ್ತಾರೆ? ಅವರು ಉತ್ತರಿಸುವುದು: “ಸರಳವಾಗಿ ಹೇಳುವುದಾದರೆ, ಲಭ್ಯವಿರುವವುಗಳಲ್ಲಿ ಇಂಟರ್ಲಿನಿಯರ್ ಹೊಸ ಒಡಂಬಡಿಕೆ ಅತ್ಯುತ್ತಮವಾಗಿದೆ. ನಾನು ಬೈಬಲ್ ಸಂಬಂಧಿತ ಅಧ್ಯಯನಗಳಲ್ಲಿ ಉಪಯೋಗದಲ್ಲಿರುವ ವಚನಗಳು ಹಾಗೂ ಸಾಧನಗಳ ಬಗ್ಗೆ ಪರಿಚಿತನಾಗಿರುವ ಬೈಬಲಿನ ಶಿಕ್ಷಿತ ವಿದ್ವಾಂಸನಾದರೂ, ಯೆಹೋವನ ಸಾಕ್ಷಿಗಳ ಒಬ್ಬ ಸದಸ್ಯನಲ್ಲ. ಆದರೆ ಒಂದು ಉತ್ಕೃಷ್ಟ ಗುಣಮಟ್ಟದ ಪ್ರಕಾಶನವನ್ನು ನೋಡುವಾಗ ಅದನ್ನು ನಾನು ಗುರುತಿಸಬಲ್ಲೆ ಮತ್ತು ನಿಮ್ಮ ‘ನ್ಯೂ ವರ್ಲ್ಡ್ ಬೈಬಲ್ ಟ್ರಾನ್ಸ್ಲೇಶನ್ ಕಮಿಟಿ’ಯು ತನ್ನ ಕೆಲಸವನ್ನು ತುಂಬ ಚೆನ್ನಾಗಿ ಮಾಡಿದೆ. ಗ್ರೀಕ್ ಮಾತಾಡುವ ಜನರ ಹಾಗೂ ನಮ್ಮ ಮಧ್ಯೆಯಿರುವ ಭಾಷಾಶಾಸ್ತ್ರ, ಸಾಂಸ್ಕೃತಿಕ ಹಾಗೂ ಕಲ್ಪನೆಗಳ ಅಂತರಗಳನ್ನು ಓದುಗನು ಗಂಭೀರತರವಾಗಿ ಪರಿಗಣಿಸುವಂತೆ ಆಸಕ್ತಿಯನ್ನು ಕೆರಳಿಸುವಷ್ಟರ ಮಟ್ಟಿಗೆ, ನಿಮ್ಮ ಇಂಟರ್ಲಿನಿಯರ್ ಇಂಗ್ಲಿಷ್ ಭಾಷಾಂತರವು ನಿಷ್ಕೃಷ್ಟವೂ ಸುಸಂಗತವೂ ಆಗಿದೆ. ನಿಮ್ಮ ‘ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್’ ಉತ್ಕೃಷ್ಟ ಗುಣಮಟ್ಟದ್ದಾಗಿದ್ದು, ಗ್ರೀಕ್ ಭಾಷೆಗೆ ನಂಬಿಗಸ್ತಿಕೆಯನ್ನು ತೋರಿಸುತ್ತಾ ಸಾಂಪ್ರದಾಯಿಕ ಅಪನಿರೂಪಣೆಗಳನ್ನು ದೂರವಿರಿಸುವ ಅಕ್ಷರಾರ್ಥಕ ಭಾಷಾಂತರವಾಗಿದೆ. ಅದು ಅನೇಕ ವಿಧಗಳಲ್ಲಿ, ಇಂದು ಬಳಕೆಯಲ್ಲಿರುವ ಅತ್ಯಂತ ಯಶಸ್ವೀ ಭಾಷಾಂತರಗಳಿಗಿಂತ ಅತ್ಯುತ್ಕೃಷ್ಟವಾಗಿದೆ.”
ದೇವರ ವಾಕ್ಯವನ್ನು ಪ್ರೀತಿಸುವವರು ಬೈಬಲಿನ ಮೂಲ ಗ್ರೀಕ್ ಗ್ರಂಥಪಾಠದೊಂದಿಗೆ ಸುಪರಿಚಿತರಾಗಿರುವಂತೆ ಸಹಾಯಮಾಡಲು, ದ ಕಿಂಗ್ಡಮ್ ಇಂಟರ್ಲಿನಿಯರ್ ಟ್ರಾನ್ಸ್ಲೇಶನ್ ಆಫ್ ದ ಗ್ರೀಕ್ ಸ್ಕ್ರಿಪ್ಚರ್ಸ್ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿದೆ. ಪುಟದ ಎಡಭಾಗದಲ್ಲಿ ದ ನ್ಯೂ ಟೆಸ್ಟಮೆಂಟ್ ಇನ್ ದಿ ಒರಿಜಿನಲ್ ಗ್ರೀಕ್ (ಬಿ. ಎಫ್. ವೆಸ್ಕಾಟ್ ಮತ್ತು ಎಫ್. ಜೆ. ಎ. ಹಾರ್ಟ್ ಅವರಿಂದ ಸಂಗ್ರಹಿಸಲ್ಪಟ್ಟದ್ದು) ಆಗಿದೆ. ಗ್ರೀಕ್ ಗ್ರಂಥಪಾಠದ ಸಾಲುಗಳ ಕೆಳಗೆ ಅಕ್ಷರಾರ್ಥಕ ಪದಶಃ ಇಂಗ್ಲಿಷ್ ಭಾಷಾಂತರವು ಕಂಡುಬರುತ್ತದೆ. ನೇರವಾಗಿ ಬಲಭಾಗದ ಅಂಕಣದಲ್ಲಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ ಇದೆ. ಇದು ನಿಮಗೆ ಬೈಬಲಿನ ಆಧುನಿಕ ಇಂಗ್ಲಿಷ್ ಭಾಷಾಂತರದೊಂದಿಗೆ ಇಂಟರ್ಲಿನಿಯರ್ ಭಾಷಾಂತರವನ್ನು ಹೋಲಿಸಲು ಅವಕಾಶವನ್ನು ನೀಡುತ್ತದೆ.