ಅದು ತನ್ನ ಸೃಷ್ಟಿಕರ್ತನನ್ನು ಮೌನವಾಗಿ ಸ್ತುತಿಸುತ್ತದೆ
ಸ್ವಭಾವತಃ ಸೂರ್ಯಾಸ್ತಮಾನಗಳು ಪ್ರೇಕ್ಷಣೀಯವಾಗಿರುತ್ತವೆ. ಆದರೆ ಇಟಲಿಯ ಟಸ್ಕನೀಯ ಆಪ್ಯವನ್ ಆಲ್ಪ್ಸ್ನಲ್ಲಿನ ಈ ನಿರ್ದಿಷ್ಟ ಪರ್ವತದ ಹಿಂದಿನಿಂದ ಸೂರ್ಯನು ಅಸ್ತಮಿಸುತ್ತಿರುವ ದೃಶ್ಯವು, ನಿಜವಾಗಿಯೂ ಅಸದೃಶವಾಗಿದೆ.
ಸ್ವಲ್ಪ ದೂರದಿಂದ ದೃಷ್ಟಿಸಿದರೆ, ಸೂರ್ಯನು ಆ ಪರ್ವತದ ಹಿಂದೆ ಅಸ್ತಮಿಸುವುದಕ್ಕೆ ಬದಲಾಗಿ ಅದರೊಳಗೆ ಬೀಳುತ್ತಿರುವಂತೆ ಕಂಡುಬರುತ್ತಾನೆ. ಏಕೆ? ಏಕೆಂದರೆ, ಆ ಪರ್ವತದ ಶಿಖರದಲ್ಲಿ ಒಂದು ಪ್ರಾಕೃತಿಕ ಕಮಾನು ಇದೆ; ಇದು ಪರ್ವತದಿಂದಲೇ ಕೆತ್ತಲ್ಪಟ್ಟಿರುವಂತೆ ಕಂಡುಬರುತ್ತದೆ. ನಿಜವಾಗಿಯೂ ಈ ಎತ್ತರವಾದ ಭೂಶಿರವು ಮೌಂಟ್ ಫೊರಾಟೊ—ಭೇದಿತ ಪರ್ವತ—ಎಂಬ ಹೆಸರನ್ನು ಪಡೆದುಕೊಂಡಿದೆ. ಸೂರ್ಯನ ಸುತ್ತಲೂ ಭೂಮಿಯು ಸುತ್ತುವುದರಿಂದ, ಕಮಾನಿನ ಮೂಲಕ ನೋಡುತ್ತಿರುವವರು, ಮೌಂಟ್ ಫೊರಾಟೊದ ಮೇಲೆ ಬೀಳುತ್ತಿರುವ ಸೂರ್ಯನ ದೃಷ್ಟಿಭ್ರಮೆಯನ್ನು, ಪ್ರತಿ ವರ್ಷ ಎರಡು ಸಂದರ್ಭಗಳಲ್ಲಿ ಮಾತ್ರವೇ ನೋಡಸಾಧ್ಯವಿದೆ.
ಸೃಷ್ಟಿಯ ಇನ್ನಿತರ ವೈಶಿಷ್ಟ್ಯಗಳಂತೆಯೇ, ನಿರ್ಜೀವ ಆಕಾಶವು ತನ್ನ ಸೃಷ್ಟಿಕರ್ತನನ್ನು ಸ್ತುತಿಸುತ್ತದೆ. ಹೇಗೆ? ಸುಂದರವಾದ ಒಂದು ವರ್ಣಚಿತ್ರವು ಅದನ್ನು ಚಿತ್ರಿಸಿದ ಚಿತ್ರಗಾರನಿಗೆ ಪ್ರಶಂಸೆಯನ್ನು ತರಬಹುದಾದಂತಹ ರೀತಿಯಲ್ಲಿಯೇ. ಕಾರ್ಯತಃ, ಆಕಾಶಸ್ಥ ಕಾಯಗಳು ಯೆಹೋವನ ಶಕ್ತಿ, ವಿವೇಕ, ಮತ್ತು ಭವ್ಯತೆಯ ಕುರಿತು ಮಾತಾಡುತ್ತವೆ. ಕೀರ್ತನೆಗಾರನು ಅದನ್ನು ಈ ಮಾತುಗಳಲ್ಲಿ ವಿವರಿಸಿದಂತೆ, “ಆಕಾಶವು ದೇವರ ಪ್ರಭಾವವನ್ನು ಪ್ರಚುರಪಡಿಸುತ್ತದೆ; ಗಗನವು ಆತನ ಕೈಕೆಲಸವನ್ನು ತಿಳಿಸುತ್ತದೆ.” (ಕೀರ್ತನೆ 19:1; 69:34) ಸೂರ್ಯನೂ ಇತರ ನಿರ್ಜೀವ ಕಾಯಗಳೂ ತಮ್ಮ ಸೃಷ್ಟಿಕರ್ತನನ್ನು ಸ್ತುತಿಸುವುದರಿಂದ, ನಾವು ಇನ್ನೆಷ್ಟು ಹೆಚ್ಚು ಸ್ತುತಿಸಬೇಕಾಗಿದೆ!—ಕೀರ್ತನೆ 148:1, 3, 12, 13.