ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊದಲ್ಲಿ ಯುವ ಜನರು ದೇವರನ್ನು ಸ್ತುತಿಸುತ್ತಾರೆ
ಶತಮಾನಗಳ ಹಿಂದೆ, ಕೀರ್ತನೆಗಾರನು ಯುವ ಜನರನ್ನು, ನಿತ್ಯತೆಯ ಅರಸನನ್ನು ಸ್ತುತಿಸುವುದರಲ್ಲಿ ಜೊತೆಗೂಡುವಂತೆ ಹಾರ್ದಿಕವಾಗಿ ಕರೆನೀಡಿದನು: “ಪ್ರಾಯಸ್ಥರಾದ ಸ್ತ್ರೀಪುರುಷರೂ ಮುದುಕರೂ ಹುಡುಗರೂ ಯೆಹೋವನನ್ನು ಕೊಂಡಾಡಲಿ [“ಸ್ತುತಿಸಲಿ,” NW]. ಆತನ ನಾಮವೊಂದೇ ಮಹತ್ವವುಳ್ಳದ್ದು.” (ಕೀರ್ತನೆ 148:12, 13) ಡೆಮೊಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೊದಿಂದ ಬಂದ ಈ ಕೆಳಗಿನ ಅನುಭವಗಳು, ಈ ಅಸಮಾನವಾದ ಸುಯೋಗವನ್ನು ಎತ್ತಿತೋರಿಸುತ್ತವೆ.
• ಒಬ್ಬ ವಿಶೇಷ ಪಯನೀಯರನ ಮನೆಯ ಒಡೆಯನು, ಯೆಹೋವನ ಸಾಕ್ಷಿಗಳ ನಡತೆಯಿಂದ ಪ್ರಸನ್ನಕರವಾಗಿ ಪ್ರಭಾವಿತನಾದನು. ಹೀಗಿರುವುದರಿಂದ ಅವನು ತನ್ನ ಐದು ವರ್ಷ ಪ್ರಾಯದ ಮಗಳಾದ ಫೀಫೀಯೊಂದಿಗೆ ಬೈಬಲನ್ನು ಅಭ್ಯಾಸಿಸುವಂತೆ ಸಾಕ್ಷಿಗಳಿಗೆ ಅನುಮತಿಸಿದನು. ಬೈಬಲ್ ಕಥೆಗಳ ನನ್ನ ಪುಸ್ತಕ (ಇಂಗ್ಲಿಷ್)ವನ್ನುa ಅಭ್ಯಾಸಿಸುತ್ತಿದ್ದ ಫೀಫೀಯ ಪ್ರಗತಿಯನ್ನು ಗಮನಿಸಿದ ಬಳಿಕ, ಅವಳ ತಂದೆ ಅವಳನ್ನು ರಾಜ್ಯ ಸಭಾಗೃಹದ ಕೂಟಗಳಿಗೆ ಹಾಜರಾಗುವಂತೆ ಅನುಮತಿಸಿದನು. ಅಲ್ಲಿ ಈ ಪುಟ್ಟ ಫೀಫೀ ಸಾಕ್ಷಿಗಳ ಸಂಗೀತ ಪುಸ್ತಕದಿಂದ ರಾಜ್ಯ ಸಂಗೀತಗಳನ್ನು ಕಲಿತುಕೊಂಡಳು. “ಪ್ರಮೋದವನದ ಕುರಿತಾದ ದೇವರ ವಾಗ್ದಾನ” (ಇಂಗ್ಲಿಷ್) ಎಂಬ ಶಿರೋನಾಮವುಳ್ಳ, ಸಂಗೀತ ನಂಬ್ರ 4ನ್ನು ಅವಳು ವಿಶೇಷವಾಗಿ ಇಷ್ಟಪಟ್ಟಳು.
ಒಂದು ದಿನ ಫೀಫೀಯ ತಂದೆ ಅವಳನ್ನು ತನ್ನ ಚರ್ಚಿಗೆ ಕರೆದೊಯ್ಯಲು ನಿರ್ಧರಿಸಿದರು. ಪ್ರತಿಯೊಬ್ಬರಿಗೂ ಆಶ್ಚರ್ಯವಾಗುವಂತೆ, ಫೀಫೀ ಚರ್ಚ್ ಗೀತಗಳನ್ನು ಹಾಡಲು ನಿರಾಕರಿಸಿದಳು. ಏಕೆ? ಏಕೆಂದರೆ, ತನ್ನ ತಂದೆಯ ಚರ್ಚಿನಲ್ಲಿ ಹಾಡಲ್ಪಟ್ಟ ಗೀತಗಳು, ತನ್ನ ಬೈಬಲ್ ಅಭ್ಯಾಸದಿಂದ ಅವಳು ಏನನ್ನು ಕಲಿತುಕೊಂಡಿದ್ದಳೋ ಅದರೊಂದಿಗೆ ಹೊಂದಿಕೆಯಲ್ಲಿರಲಿಲ್ಲವೆಂದು ಅವಳಿಗನಿಸಿತು. ಅದಕ್ಕೆ ಬದಲಾಗಿ ಅವಳು ಧೈರ್ಯದಿಂದ ತನ್ನ ಅಚ್ಚುಮೆಚ್ಚಿನ ರಾಜ್ಯ ಗೀತವನ್ನು ಹಾಡಿದಳು.
ಅವಳ ಮನಸ್ಸನ್ನು ಬದಲಾಯಿಸಲಿಕ್ಕಾಗಿ ಮಾಡಲ್ಪಟ್ಟ ಅನೇಕ ಯಶಸ್ವಿರಹಿತ ಪ್ರಯತ್ನಗಳ ಬಳಿಕ, ಚರ್ಚ್ ಮುಖಂಡರು ಐದು ವರ್ಷ ಪ್ರಾಯದ ಫೀಫೀಯನ್ನು ಬಹಿಷ್ಕರಿಸಲು ನಿರ್ಧರಿಸಿದರು! ಈ ದುರುಪಚಾರವನ್ನು ನೋಡಿದರೂ, ಅವಳ ತಂದೆಯು ಶಾಂತರಾಗಿ ಉಳಿದರು. ತಾನು ಏನನ್ನು ನಂಬಿದಳೋ ಅದಕ್ಕಾಗಿ ಫೀಫೀ ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿದ್ದರಿಂದ ಅವರು ಹೆಮ್ಮೆಪಟ್ಟಿದ್ದರು. ಫೀಫೀಯ ತಂದೆ ಹಾಗೂ ತಾಯಿ—ಇಬ್ಬರೂ, ಅವಳು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಿಸುತ್ತಾ ಮುಂದುವರಿಯುವಂತೆ ಬಯಸುತ್ತಾರೆ.
• ಲೂಕೊಡಿ ಎಂಬ ಹೆಸರಿನ ಹದಿವಯಸ್ಕನೊಬ್ಬನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ನಿರ್ಧರಿಸಿದಾಗ, ಅವನ ತಂದೆಯು ಬಹಳವಾಗಿ ವಿರೋಧಿಸಿದರು. ಒಂದು ಸಂದರ್ಭದಲ್ಲಿ ಲೂಕೊಡಿ ರಾಜ್ಯ ಸಭಾಗೃಹದಲ್ಲಿನ ಕೂಟಗಳಿಗೆ ಹೋಗಲಿಕ್ಕಾಗಿ ಸಿದ್ಧನಾಗುತ್ತಿದ್ದಾಗ, ಅವನ ತಂದೆ ಅವನಿಗೆ ಒಂದು ಮಚ್ಚುಕತ್ತಿಯಿಂದ ಬೆದರಿಕೆಯೊಡ್ಡಿದರು. ಇನ್ನೊಂದು ಸಂದರ್ಭದಲ್ಲಿ ಲೂಕೊಡಿಯ ತಂದೆ ಅವನನ್ನು ಒಂದು ದೊಣ್ಣೆಯಿಂದ ಹೊಡೆದರು; ಇದು ಅವನ ಬೆನ್ನಿನ ಮೇಲೆ ದೊಡ್ಡ ಗಾಯವನ್ನು ಮಾಡಿತು. ಈ ತೀವ್ರವಾದ ವಿರೋಧದ ಮಧ್ಯೆಯೂ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗುವ ತನ್ನ ಸ್ಥಿರಸಂಕಲ್ಪವನ್ನು ಲೂಕೊಡಿ ದೃಢವಾಗಿ ಇಟ್ಟುಕೊಂಡನು. ಅವನು ಪ್ರಗತಿಯನ್ನು ಮಾಡುತ್ತಾ ಮುಂದುವರಿದು, ದೀಕ್ಷಾಸ್ನಾನವನ್ನು ಪಡೆದುಕೊಂಡನು. ಈಗ ಅವನು ಒಬ್ಬ ಕ್ರಮದ ಪಯನೀಯರನೋಪಾದಿ ಸೇವೆಸಲ್ಲಿಸುತ್ತಾನೆ.
ಲೂಕೊಡಿಯ ತಂಗಿಯಾದ ಸೋನಾ, ತನ್ನ ಅಣ್ಣನ ನಿಲುವಿನಿಂದ ಎಷ್ಟು ಪ್ರಭಾವಿತಳಾದಳೆಂದರೆ, ಅವಳು ಸಹ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸತೊಡಗಿದಳು. ಹಾಗಿದ್ದರೂ, ಅಭ್ಯಾಸಿಸುವುದರಿಂದ ಅವಳನ್ನು ತಡೆಯಲಿಕ್ಕಾಗಿ, ಅವರ ತಂದೆಯು ಸೋನಾಳನ್ನು ಇನ್ನೊಂದು ಹಳ್ಳಿಯಲ್ಲಿರುವ ಶಾಲೆಗೆ ಕಳುಹಿಸಿದನು. ಆ ಹಳ್ಳಿಯಲ್ಲಿ ಸಾಕ್ಷಿಗಳಿರಲಿಲ್ಲ. ಆದರೂ, ತಾನು ಕಲಿತಿದ್ದ ವಿಷಯಗಳ ಕುರಿತಾಗಿ ಇತರರೊಂದಿಗೆ ಮಾತಾಡುವ ಹವ್ಯಾಸವನ್ನು ಸೋನಾ ಬೆಳೆಸಿಕೊಂಡಳು. ಫಲಿತಾಂಶವಾಗಿ, ಅವಳ ಸೋದರಸಂಬಂಧಿಯು ಕೂಡ ಆಸಕ್ತಿಯುಳ್ಳವಳಾದಳು.
ಪಕ್ಕದ ಹಳ್ಳಿಯ ಸಾಕ್ಷಿಗಳು ಸೋನಾಳ ಸಾರುವಿಕೆಯ ಚಟುವಟಿಕೆಯ ಕುರಿತು ಕೇಳಿಸಿಕೊಂಡಾಗ, ಅವರು ಅವಳನ್ನು ಭೇಟಿಮಾಡಿ, ಅವಳು ಕ್ರಮವಾದ ಮನೆ ಬೈಬಲ್ ಅಭ್ಯಾಸವನ್ನು ಪಡೆದುಕೊಳ್ಳುವಂತೆ ಏರ್ಪಾಡನ್ನು ಮಾಡಿದರು. ಅವಳು ಪ್ರಗತಿಮಾಡುತ್ತಾ ಮುಂದುವರಿದಳು ಮತ್ತು ಬೇಗನೆ ಯೆಹೋವನ ಒಬ್ಬ ಸಮರ್ಪಿತ, ದೀಕ್ಷಾಸ್ನಾತ ಸಾಕ್ಷಿಯೋಪಾದಿ ತನ್ನ ಸಹೋದರನನ್ನು ಜೊತೆಗೂಡಿದಳು. ಇದಕ್ಕೆ ಕೂಡಿಸಿ, ಅವಳ ಸೋದರಸಂಬಂಧಿಯು ಈಗ ಒಬ್ಬ ಅಸ್ನಾತ ಪ್ರಚಾರಕಳಾಗಿದ್ದಾಳೆ ಮತ್ತು ಈ ಹಳ್ಳಿಯಲ್ಲಿ ಪುಸ್ತಕ ಅಭ್ಯಾಸವೊಂದು ನಡೆಸಲ್ಪಡುತ್ತಿದೆ.
ಯೆಹೋವನ ನಾಮವನ್ನು ಸ್ತುತಿಸುವುದರಲ್ಲಿ ಎಳೆಯರು ಜೊತೆಗೂಡುವಾಗ, ಅದೆಷ್ಟು ಅದ್ಭುತಕರವೂ ಚೈತನ್ಯದಾಯಕವೂ ಆದದ್ದಾಗಿದೆ!
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.