ಪ್ರಯೋಜನಕಾರಿಯಾಗಿದ್ದ ನಿದ್ರಾರಹಿತ ರಾತ್ರಿಗಳು
ರಾಜರೂ ನಿದ್ರಾರಹಿತ ರಾತ್ರಿಗಳನ್ನು ಅನುಭವಿಸುತ್ತಾರೆ. ಸಾ.ಶ.ಪೂ. ಐದನೆಯ ಶತಮಾನದಲ್ಲಿ, ಪರ್ಷಿಯದ ಒಬ್ಬ ಶಕ್ತಿಶಾಲಿ ಅರಸನಾದ ಅಹಷ್ವೇರೋಷನು ಅವುಗಳಲ್ಲಿ ಒಂದನ್ನು ಅನುಭವಿಸಿದನು. ತಾನು ಯಾವುದೋ ಕರ್ತವ್ಯವನ್ನು ಕಡೆಗಣಿಸಿದ್ದೆನೆಂದು ಪ್ರಾಯಶಃ ನೆನಸುತ್ತಾ, ಅವನು ಪೂರ್ವವೃತ್ತಾಂತಗಳ ರಾಜಯೋಗ್ಯ ಗ್ರಂಥವನ್ನು ತರಿಸಿ ಪಾರಾಯಣಮಾಡಿಸಿದನು. ಒಬ್ಬ ವಿಶ್ವಾಸಿ ಸೇವಕನಾದ ಮೊರ್ದೆಕೈ, ಕೊಲ್ಲುವ ಒಳಸಂಚನ್ನು ನಿಷ್ಫಲಗೊಳಿಸಿದ್ದು, ಆದರೆ ಪ್ರತಿಫಲವು ಕೊಡಲ್ಪಟ್ಟಿರಲಿಲ್ಲವೆಂಬುದನ್ನು ಅವನು ತಿಳಿದುಕೊಂಡನು. ಅಹಷ್ವೇರೋಷನು ಈ ಪ್ರಮಾದವನ್ನು ತತ್ಕ್ಷಣವೇ ಸರಿಪಡಿಸಲು ನಿರ್ಧರಿಸಿದನು. ದೇವರ ಜನರ ಪರವಾಗಿ ಅವನ ಕ್ರಿಯೆಗಳ ಪ್ರಯೋಜನಕಾರಿ ಪರಿಣಾಮಗಳು, ಆ ರಾಜನ ನಿರ್ನಿದ್ರತೆಯು ದೈವಿಕವಾಗಿ ಪ್ರೇರಿಸಲ್ಪಟ್ಟಿತೆಂಬುದನ್ನು ಸೂಚಿಸುತ್ತವೆ.—ಎಸ್ತೇರಳು 6:1-10.
ದಕ್ಷಿಣ ಆಫ್ರಿಕದ ಕರಾವಳಿ ಪಟ್ಟಣವಾದ ಹರ್ಮಾನೆಸ್ನಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಗೆ, ಬೈಬಲಿನ ಈ ಭಾಗವನ್ನು ಜ್ಞಾಪಿಸಿಕೊಳ್ಳಲು ಕಾರಣವಿದೆ. ಅವರು ಒಂದು ಬಾಡಿಗೆ ಸಭಾಂಗಣದಲ್ಲಿ ಒಟ್ಟುಗೂಡಿ ಬರುತ್ತಿದ್ದರು. ತಮ್ಮದೇ ಆದ ಒಂದು ರಾಜ್ಯ ಸಭಾಗೃಹವನ್ನು ಕಟ್ಟಲಿಕ್ಕಾಗಿ ಜಮೀನನ್ನು ಖರೀದಿಸಲು ಅವರು ಅನೇಕ ವರ್ಷಗಳಿಂದ ಪ್ರಯತ್ನಿಸಿದ್ದರು. ಕಟ್ಟಕಡೆಗೆ, 1991ರಲ್ಲಿ ಉತ್ತಮ ಗುಣಮಟ್ಟದ ನಿವೇಶನವು ನಗರದ ಪುರಸಭೆಯಿಂದ ಕೊಡಲ್ಪಟ್ಟಿತು.
ಆದರೂ, ಈ ನಿವೇಶನವನ್ನು ಯೆಹೋವನ ಸಾಕ್ಷಿಗಳಿಗೆ ಮಾರಾಟಮಾಡುವ ಕುರಿತಾಗಿ ಕೆಲವರು ವಿರೋಧಿಸಿದರು. ಹಲವಾರು ತಿಂಗಳುಗಳ ವಿಳಂಬದ ಅನಂತರ, ಚರ್ಚುಗಳಿಗೆ ಆಸ್ತಿಯನ್ನು ಮಾರಾಟಮಾಡಬಾರದೆಂಬ ಮೂರು ವರ್ಷಗಳ ಪ್ರತಿಬಂಧವನ್ನು ಸಭೆಗೆ ತಿಳಿಸಲಾಯಿತು ಮತ್ತು ಕೊಡಲ್ಪಟ್ಟ ಜಮೀನನ್ನು ಹಿಂದೆಗೆದುಕೊಳ್ಳಲಾಯಿತು. ಪುರಸಭೆಯು ಅದರ ನಿರ್ಧಾರವನ್ನು ಪುನರ್ಪರಿಗಣಿಸುವಂತೆ ಕೇಳುತ್ತಾ, ಮೇ 1993ರಲ್ಲಿ ಸಭೆಯು ಪುನಃ ಪತ್ರ ಬರೆಯಿತು. ಅದಕ್ಕೆ ಉತ್ತರವಾಗಿ, ಆ ಅಧಿಕೃತ ಅವಧಿಯು ಇನ್ನೂ ಜಾರಿಯಲ್ಲಿದೆ ಎಂಬುದನ್ನು ತಿಳಿಸುತ್ತಾ ಬರೆಯಲ್ಪಟ್ಟ, ಒಂದು ವಾಕ್ಯದ ಪತ್ರವನ್ನು ಅವರು ಪಡೆದುಕೊಂಡರು.
ಅದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ, ನಗರದ ಪುರಸಭಾಸದಸ್ಯರಲ್ಲಿ ಒಬ್ಬ ಸದಸ್ಯೆ ನಿದ್ರಾರಹಿತ ರಾತ್ರಿಯನ್ನು ಅನುಭವಿಸಿದಳು. ಯಾವುದಾದರೂ ವಿಚಾರಗಳಿಗೆ ಗಮನದ ಅಗತ್ಯವಿದೆಯೋ ಎಂಬುದನ್ನು ತಿಳಿದುಕೊಳ್ಳಲು ಅವಳು ಹಳೆಯ ಪುರಸಭಾ ಕಾರ್ಯಕಲಾಪಗಳ ಸಂಕ್ಷಿಪ್ತ ವರದಿಗಳನ್ನು ತಿರುವಿಹಾಕುತ್ತಾ ಕಾಲಕಳೆದಳು. ಪುರಸಭೆಯು ಅದರ ನಿರ್ಧಾರವನ್ನು ಪುನರ್ಪರಿಗಣಿಸುವಂತೆ ಕೇಳಿಕೊಳ್ಳುತ್ತಾ, ಸಾಕ್ಷಿಗಳಿಂದ ಬರೆಯಲ್ಪಟ್ಟ ಪತ್ರವು ಅವಳ ಗಮನ ಸೆಳೆಯಿತು. ಹೀಗೆ ತಮ್ಮ ಮುಂದಿನ ಸಭಾ ಕಾರ್ಯಕ್ರಮದಲ್ಲಿ ವಿಷಯವನ್ನು ಮುಂದಿಡಲು ಅವಳು ನಿರ್ಣಯಿಸಿದಳು. ಚರ್ಚುಗಳಿಗೆ ಸ್ವತ್ತಿನ ಮೇಲೆ ಪ್ರತಿಬಂಧವನ್ನು ಹಾಕುವ ಮುನ್ನ ಜಮೀನಿಗಾಗಿ ಯೆಹೋವನ ಸಾಕ್ಷಿಗಳು ಅರ್ಜಿಹಾಕಿದ್ದರೆಂಬುದನ್ನು ಅವಳು ಎತ್ತಿಹೇಳಲು ಬಯಸಿದಳು.
ಸಕಾಲದಲ್ಲಿ, 1991ರಲ್ಲಿ ಮೂಲತಃ ಸಭೆಗೆ ಕೊಡಲ್ಪಟ್ಟಿದ್ದ ಅದೇ ಜಮೀನನ್ನು ನಿಗದಿಪಡಿಸಲಾಯಿತು! ಇದು ಸಭೆಯ ಸದಸ್ಯರಿಗೆ ಹಾಗೂ ಆಸಕ್ತ ಜನರಿಗೆ ಸುಲಭಗಮ್ಯವಾಗುವಂತೆ ಮುಖ್ಯ ರಸ್ತೆಯಲ್ಲಿದೆ. ಅವರು ಆಕರ್ಷಕವಾದೊಂದು ರಾಜ್ಯ ಸಭಾಗೃಹವನ್ನು ಕಟ್ಟಿದ್ದಾರೆ, ಇದು 1996, ಅಕ್ಟೋಬರ್ 5ರಂದು ಯೆಹೋವನಿಗೆ ಸಮರ್ಪಿಸಲ್ಪಟ್ಟಿತು.
ಪುರಸಭಾ ಸದಸ್ಯೆಯ ನಿದ್ರಾರಹಿತ ರಾತ್ರಿಯ ಅನನುಕೂಲತೆಗೆ ಸಭೆಯು ವಿಷಾದಿಸುವಾಗ, ಅರಸ ಅಹಷ್ವೇರೋಷನೂ ನಿದ್ರಾರಹಿತ ರಾತ್ರಿಯನ್ನು ಅನುಭವಿಸಿದನು ಎಂಬ ನಿಜಾಂಶದಿಂದ ಅವಳು ಸಾಂತ್ವನ ಪಡೆದುಕೊಳ್ಳಬಹುದು. ಮತ್ತು ಎರಡೂ ವಿದ್ಯಮಾನಗಳಲ್ಲಿನ ಫಲಿತಾಂಶವು ಪ್ರಯೋಜನಕಾರಿಯಾಗಿತ್ತು. ಹರ್ಮಾನೆಸ್ನಲ್ಲಿರುವ ಸಭೆಯು ತಮ್ಮ ಸ್ವಂತ ರಾಜ್ಯ ಸಭಾಗೃಹವನ್ನು, ಈ ಜನಪ್ರಿಯ ಕರಾವಳಿ ಪಟ್ಟಣದಲ್ಲಿ ಶುದ್ಧಾರಾಧನೆ ಹಾಗೂ ದೇವಪ್ರಭುತ್ವ ತರಬೇತಿಗಾಗಿ ಒಂದು ಕೇಂದ್ರಸ್ಥಾನವನ್ನು ಪಡೆದಿರಲು ನಿಶ್ಚಯವಾಗಿಯೂ ಅತ್ಯಂತ ಕೃತಜ್ಞರಾಗಿದ್ದಾರೆ.—ಇಬ್ರಿಯ 10:24, 25.