ಯಾರ ವಾಗ್ದಾನಗಳ ಮೇಲೆ ನೀವು ಆತುಕೊಳ್ಳಸಾಧ್ಯವಿದೆ?
ಭವಿಷ್ಯತ್ತಿನ ಕುರಿತಾಗಿ ಚರ್ಚಿಸಲಿಕ್ಕಾಗಿ, 1893ರಲ್ಲಿ, ಚಿಕಾಗೋ ಜಾಗತಿಕ ವಸ್ತುಪ್ರದರ್ಶನದಲ್ಲಿ 74 ಮಂದಿ ಸಾಮಾಜಿಕ ವ್ಯಾಖ್ಯಾನಕಾರರ ಒಂದು ಗುಂಪು ಕೂಡಿಬಂತು. (ಅದರ ನಿವೇಶನವು ಮೇಲೆ ತೋರಿಸಲ್ಪಟ್ಟಿದೆ.) 100 ವರ್ಷಗಳಷ್ಟು ಮುಂದಿದ್ದ 1993ನ್ನು ಮುನ್ನೋಡುತ್ತಾ, ಇತರ ಭವಿಷ್ಯನುಡಿಗಳೊಂದಿಗೆ ಅವರು ಈ ಮುಂದಿನ ಭವಿಷ್ಯನುಡಿಗಳನ್ನು ಮಾಡಿದರು: “ಅನೇಕ ಜನರು 150 ವರ್ಷಗಳ ವರೆಗೆ ಜೀವಿಸುವರು.” “ಸೆರೆಮನೆಗಳು ಕಡಿಮೆಯಾಗುವವು ಮತ್ತು ವಿವಾಹ ವಿಚ್ಛೇದವು ಅನಾವಶ್ಯಕವೆಂದು ಪರಿಗಣಿಸಲ್ಪಡುವುದು.” “ಸರಕಾರವು ಹೆಚ್ಚು ಸರಳವಾಗಿರುವುದು, ಯಾಕಂದರೆ ನಿಜವಾದ ಹಿರಿಮೆಯು ಯಾವಾಗಲೂ ಸರಳತೆಯ ಕಡೆಗೆ ಬಾಗಿರುತ್ತದೆ.”
ತದ್ರೀತಿಯಲ್ಲಿ, 1967ರಲ್ಲಿ, ಇಸವಿ 2000 (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಒಂದು ಪುಸ್ತಕವು ಭವಿಷ್ಯನುಡಿದದ್ದು: “ಇಸವಿ 2000ದಷ್ಟಕ್ಕೆ, ಕಂಪ್ಯೂಟರ್ಗಳು, ಮಾನವನ ಅತೀ ‘ಮಾನವಸದೃಶವಾದ’ ಬುದ್ಧಿಮತ್ತೆಯ ಸಾಮರ್ಥ್ಯಗಳಲ್ಲಿ ಕೆಲವನ್ನು—ಪ್ರಾಯಶಃ ಅವನ ಕಲಾತ್ಮಕ ಮತ್ತು ಸೃಜನಾತ್ಮಕ ಸಾಮರ್ಥ್ಯಗಳನ್ನೂ ಒಳಗೂಡಿಸಿ—ಹೋಲುವ, ಅನುಕರಿಸುವ, ಅಥವಾ ಮೀರಿಸುವ ಸಂಭವವಿದೆ.” “ಹೆಚ್ಚಿನ ಮನೆಕೆಲಸವನ್ನು ಮಾಡುವ, ಮಿತ ಬೆಲೆಯ ಯಂತ್ರಮಾನವರ ವಿಚಾರವು . . . ಇಸವಿ 2000ದೊಳಗೆ ನಿರೀಕ್ಷಿಸಸಾಧ್ಯವಿರುವಂಥದ್ದಾಗಿ ತೋರುತ್ತದೆ.”
ಭವಿಷ್ಯತ್ತಿನ ಘಟನೆಗಳನ್ನು ಮುಂಗಾಣುವ ಮಾನವನ ಅಸಾಮರ್ಥ್ಯವು, ದೇವರ ಸಾಮರ್ಥ್ಯದೊಂದಿಗೆ ಗಮನಾರ್ಹವಾಗಿ ತದ್ವಿರುದ್ಧವಾಗಿದೆ. ಉದಾಹರಣೆಗಾಗಿ, ಹೆಚ್ಚಿನಂಶ 20 ಶತಮಾನಗಳ ಹಿಂದೆ, ನಮ್ಮ ದಿನದ ಸಂಬಂಧದಲ್ಲಿ ಬೈಬಲ್ ಏನನ್ನು ಮುಂತಿಳಿಸಿತೋ ಅದನ್ನು ಈ ಹಿಂದೆ ಕೊಡಲ್ಪಟ್ಟಿರುವ ಭವಿಷ್ಯನುಡಿಗಳೊಂದಿಗೆ ಹೋಲಿಸಿ ನೋಡಿ: “ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.”—2 ತಿಮೊಥೆಯ 3:1-5.
“ಕಡೇ ದಿವಸಗಳ” ಕುರಿತಾದ ಈ ಬೈಬಲ್ ಪ್ರವಾದನೆಯು, ನಮ್ಮ ದಿನದಲ್ಲಿ ನೆರವೇರಿರುವ ಅನೇಕ ಪ್ರವಾದನೆಗಳಲ್ಲಿ ಕೇವಲ ಒಂದಾಗಿದೆ. ಯೇಸುವಿನ ಸಾನ್ನಿಧ್ಯದ “ಸೂಚನೆ”ಯು, ಜಾಗತಿಕ ಯುದ್ಧ, ಆಹಾರದ ಅಭಾವಗಳು, ಅಂಟುರೋಗಗಳು, ಭೂಕಂಪಗಳು, ಮತ್ತು ದೇವರ ರಾಜ್ಯದ ಸುವಾರ್ತೆಯ ಲೋಕವ್ಯಾಪಕ ಸಾರುವಿಕೆಯನ್ನು ಒಳಗೊಳ್ಳುವುದೆಂಬುದನ್ನು ಮುಂತಿಳಿಸಿತು.—ಮತ್ತಾಯ 24:3-14; ಲೂಕ 21:11.
ದೇವರ ವಾಗ್ದಾನಗಳ ವಿಫಲವಾಗದ ನಿಷ್ಕೃಷ್ಟತೆಯು, ಒಬ್ಬ ಬೈಬಲ್ ಬರಹಗಾರನು ಶತಮಾನಗಳ ಹಿಂದೆ ಹೀಗೆ ಪ್ರಕಟಿಸುವಂತೆ ಪ್ರಚೋದಿಸಿತು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದ”ವು.—ಯೆಹೋಶುವ 23:14.
ಹೌದು, ದೇವರ ವಾಗ್ದಾನಗಳಲ್ಲಿ ಎಲ್ಲವೂ ಬೇಗನೆ ನೆರವೇರುವವು ಎಂಬ ಆಶ್ವಾಸನೆ ನಮಗಿರಬಲ್ಲದು. ದೇವರ ರಾಜ್ಯವು, ಅಸ್ವಸ್ಥತೆ, ಪಾತಕ, ಅಮಲೌಷಧ ವ್ಯಸನ, ಹಸಿವು, ಮತ್ತು ಯುದ್ಧಕ್ಕೆ ಒಂದು ಅಂತ್ಯವನ್ನು ತರುವುದು. ಇಡೀ ಭೂಮಿಯು ಒಂದು ಪ್ರಮೋದವನವಾಗುವುದು. (ಕೀರ್ತನೆ 37:10, 11, 29; ಪ್ರಕಟನೆ 21:3, 4) ನೀವು ಈ ಪ್ರವಾದನೆಯ ನೆರವೇರಿಕೆಯ ಮೇಲೆ ಭರವಸೆ ಇಡಸಾಧ್ಯವಿದೆ! ಅದು, “ಸುಳ್ಳಾಡದ” ನಮ್ಮ ಸೃಷ್ಟಿಕರ್ತನಿಂದ ಬರುತ್ತದೆ.—ತೀತ 1:2; ಇಬ್ರಿಯ 6:13-19ನ್ನು ಹೋಲಿಸಿರಿ.
[ಪುಟ 32 ರಲ್ಲಿರುವ ಚಿತ್ರ ಕೃಪೆ]
Cleveland State University Archive