ಯೆಹೋವನ ಸಾಕ್ಷಿಗಳು ಭೇಟಿನೀಡುವಾಗ
ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ತಮ್ಮ ಮನೆಗೆ ಭೇಟಿನೀಡುವಾಗ ಕ್ಯಾಥೊಲಿಕರು ಏನು ಮಾಡಬೇಕು? ಇಟ್ಯಾಲಿಯನ್ ಬಿಷಪರ ಸಭೆಯ, ರಾಷ್ಟ್ರೀಯ ಕ್ಯಾಟೆಕಿಸ್ಟಿಕ್ ವಿಭಾಗದಿಂದ ತಯಾರಿಸಲ್ಪಟ್ಟ ಇತ್ತೀಚಿನ ಒಂದು ಪ್ರಕಾಶನವು ಹೇಳುವುದು: “ಒಂದು ಸಂಭಾಷಣೆಯನ್ನು ದಯಾಪರವಾಗಿ—ಆದರೆ ದೃಢತೆಯಿಂದ—ನಿರಾಕರಿಸುವುದು, ಈ ಸಂದರ್ಭದಲ್ಲಿ ಸದ್ಭಾವನೆಯ ಕೊರತೆಯಾಗಿರುವುದಿಲ್ಲ.”
ಎಲ್ಲ ಕ್ಯಾಥೊಲಿಕರೂ ಇದಕ್ಕೆ ಸಮ್ಮತಿಸುವುದಿಲ್ಲ. ಇದು ಇಟಲಿಯ ಫಾಜಿಆದಲ್ಲಿ ವಾಸಿಸುತ್ತಿರುವ ಒಬ್ಬ ಮನುಷ್ಯನಿಂದ ಗಾಡ್ಸೆಟಾ ಡೆಲ್ ಮೆಡ್ಸೊಜೊರ್ನೊ ಎಂಬ ದಿನಪತ್ರಿಕೆಗೆ ಕಳುಹಿಸಲ್ಪಟ್ಟ ಪತ್ರದಿಂದ ತಿಳಿದುಬರುತ್ತದೆ:
“ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಲ್ಲ. ನಾನೊಬ್ಬ ಕ್ಯಾಥೊಲಿಕನು. ಆದರೆ ಯೆಹೋವನ ಸಾಕ್ಷಿಗಳನ್ನು ತಾವು ಸ್ವಾಗತಿಸುವುದಿಲ್ಲವೆಂದು ಹೇಳುವ ನೋಟಿಸುಗಳನ್ನು ತಮ್ಮ ಮನೆಬಾಗಿಲಿಗೆ ಅಂಟಿಸುವಂತೆ ಹೇಳುತ್ತಾ, ಚರ್ಚು ಅದರ ಸದಸ್ಯರ ಮೇಲೆ ಹೇರುವ ನಿರ್ದಿಷ್ಟ ನಿಯಮಗಳಿಂದ ನಾನು ಬೆರಗಾಗಿದ್ದೇನೆ. ಈ ಜನರಾದರೊ ಕೇವಲ ದೇವರ ವಾಕ್ಯವನ್ನು ಸಾರುತ್ತಾ ಮತ್ತು ಬೈಬಲಿನ ಹೆಚ್ಚು ಗಾಢವಾದ ಜ್ಞಾನವನ್ನು ಪಡೆಯುವಂತೆ ಇತರರಿಗೆ ಸಹಾಯಮಾಡುತ್ತಾ ಇದ್ದಾರೆ. ಇದು ನನಗೆ, ಇಟಲಿಯು ಕಾಲರದಿಂದ ಬಾಧಿಸಲ್ಪಟ್ಟ ಸಮಯ, ಸೋಂಕಿತರಾಗುವುದರಿಂದ ನಾವು ಹೇಗೆ ದೂರವಿರಸಾಧ್ಯವಿದೆ ಎಂಬುದರ ಕುರಿತು ನಮಗೆ ಕೊಡಲಾದ ಬುದ್ಧಿವಾದವನ್ನು ಜ್ಞಾಪಕಕ್ಕೆ ತರುತ್ತದೆ.
“ನನ್ನ ಅಭಿಪ್ರಾಯದಲ್ಲಿ, ಚರ್ಚು ತನ್ನ ಸದಸ್ಯರ ಅಪೇಕ್ಷೆಗಳನ್ನು ಪರಿಗಣಿಸದೆಯೇ ಸ್ವಂತ ನಿಯಮಗಳನ್ನು ಜಾರಿಗೊಳಿಸುತ್ತದೆ ಎಂದು ಇದು ತೋರಿಸುತ್ತದೆ. ಆದರೆ ಈಗ ಕೆಲವು ವರ್ಷಗಳಿಂದ, ಕ್ಯಾಥೊಲಿಕರು ಸಹ ಮನೆಯಿಂದ ಮನೆಗೆ, ಯೆಹೋವನ ಸಾಕ್ಷಿಗಳ ಮನೆಗಳನ್ನೂ ಸಂದರ್ಶಿಸುವುದನ್ನು ನಾನು ನೋಡಿದ್ದೇನೆ; ಮತ್ತು ಅವರು ಯಾರನ್ನೂ ತಿರಸ್ಕರಿಸದೆ, ಬಂದವರನ್ನು ಒಳಗೆ ಸ್ವಾಗತಿಸಿ ಅವರೊಂದಿಗೆ ಸಂಭಾಷಿಸುತ್ತಾರೆ.”
ತಮ್ಮ ಸಂದೇಶವನ್ನು ಸ್ವೀಕರಿಸುವಂತೆ ಯೆಹೋವನ ಸಾಕ್ಷಿಗಳು ಜನರನ್ನು ಒತ್ತಾಯಿಸುವುದಿಲ್ಲ. ಬದಲಿಗೆ, ದೇವರ ವಾಕ್ಯದಲ್ಲಿರುವಂತಹ ನಿರೀಕ್ಷೆಯನ್ನು ಅವರು ಇತರರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ತೊಂದರೆಯುಕ್ತ ಸಮಯಗಳಲ್ಲಿ ಆ ನಿರೀಕ್ಷೆಯು ಸಾಂತ್ವನದಾಯಕವಾಗಿರುವುದನ್ನು ಅವರು ಕಂಡುಕೊಂಡಿದ್ದಾರೆ. ಮನೆಯಿಂದ ಮನೆಗೆ ಹೋಗುವ ಮೂಲಕ, ಅಲ್ಲದೆ ಬೀದಿಯಲ್ಲಿ ತಾವು ಸಂಧಿಸುವ ಜನರೊಂದಿಗೆ ಮಾತಾಡುವ ಮೂಲಕ, ಯೆಹೋವನ ಸಾಕ್ಷಿಗಳು ಆಲಿಸಲು ಸಿದ್ಧರಾಗಿರುವವರೊಂದಿಗೆ ದೇವರ ರಾಜ್ಯದ ಸುವಾರ್ತೆಯನ್ನು ಹಂಚಿಕೊಳ್ಳುತ್ತಾರೆ.—ಮತ್ತಾಯ 24:14; ಅ. ಕೃತ್ಯಗಳು 5:42; 17:17.