“ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನಕ್ಕೆ ಬನ್ನಿರಿ!
ಲೋಕದಾದ್ಯಂತ ನೂರಾರು ನಿವೇಶನಗಳಲ್ಲಿ ಲಕ್ಷಗಟ್ಟಲೆ ಜನರು ಉಪಸ್ಥಿತರಿರುವರು. ಭಾರತದಲ್ಲೇ, 16 ಅಧಿವೇಶನಗಳು ನಿಗದಿಗೊಳಿಸಲ್ಪಟ್ಟಿವೆ. ಪ್ರಥಮ ಅಧಿವೇಶನವು ಅಕ್ಟೋಬರ್ 10-12, ಮತ್ತು ಕೊನೆಯ ಅಧಿವೇಶನವು ಜನವರಿ 2-4ರಂದು ಇರುವುದು. ಈ ಮೂರು ದಿನದ—ಶುಕ್ರವಾರದಿಂದ ಆದಿತ್ಯವಾರದ ವರೆಗಿನ—ಒಟ್ಟುಗೂಡುವಿಕೆಗಳಲ್ಲಿ ಒಂದು, ನಿಮ್ಮ ಮನೆಯಿಂದ ಹೆಚ್ಚು ದೂರವಾಗಿರದ ಒಂದು ನಗರದಲ್ಲಿರುವುದು ಸಂಭಾವ್ಯ.
ಸಮೃದ್ಧವಾದ ಪ್ರಾಯೋಗಿಕ ಬೈಬಲ್ ಉಪದೇಶದಿಂದ ನೀವು ಪ್ರಯೋಜನ ಪಡೆಯುವಿರಿ. ಹೆಚ್ಚಿನ ಸ್ಥಳಗಳಲ್ಲಿ, ಕಾರ್ಯಕ್ರಮವು ಪ್ರತಿದಿನ ಬೆಳಗ್ಗೆ 9:30ಕ್ಕೆ ಸಂಗೀತದೊಂದಿಗೆ ಆರಂಭಗೊಳ್ಳುವುದು. ಯಾರ ಜೀವಿತಗಳು ದೇವರ ವಾಕ್ಯದಲ್ಲಿನ ತಮ್ಮ ನಂಬಿಕೆಯಿಂದ ಗಾಢವಾಗಿ ಪ್ರಭಾವಿಸಲ್ಪಟ್ಟಿವೆಯೊ, ಆ ಜನರೊಂದಿಗೆ ಮಾಡಲ್ಪಡುವ 25 ನಿಮಿಷಗಳ ಇಂಟರ್ವ್ಯೂಗಳು, ಶುಕ್ರವಾರ ಬೆಳಗ್ಗಿನ ವೈಶಿಷ್ಟ್ಯವಾಗಿರುವುವು. ಆ ಪ್ರಥಮ ಸೆಷನ್, “ನೋಡುವವರಾಗಿ ನಡೆಯದೇ, ನಂಬುವವರಾಗಿ ನಡೆಯುವುದು” ಎಂಬ ಮುಖ್ಯ ಭಾಷಣದೊಂದಿಗೆ ಕೊನೆಗೊಳ್ಳುವುದು.
ಶುಕ್ರವಾರ ಮಧ್ಯಾಹ್ನದ ಪ್ರಥಮ ಭಾಷಣವು, ಕ್ರೈಸ್ತ ಸಭೆಯಲ್ಲಿ ಯುವ ಜನರಿಗಿರುವ ಅತಿಪ್ರಾಮುಖ್ಯ ಪಾತ್ರವನ್ನು ಪರಿಗಣಿಸುವುದು. ಹಿಂಬಾಲಿಸಿ ಬರುವ ಮೂರು ಭಾಗದ ಭಾಷಣಮಾಲೆಯು, ನುಡಿ, ಶಿಷ್ಟಾಚಾರಗಳು ಮತ್ತು ವೈಯಕ್ತಿಕ ತೋರಿಕೆಯಲ್ಲಿ ಕ್ರೈಸ್ತ ನಡತೆಗೆ ಸಂಬಂಧಿಸುವ ಬೈಬಲ್ ಮಟ್ಟಗಳನ್ನು ಚರ್ಚಿಸುತ್ತದೆ. ಅನಂತರ, “ನಂಬಿಕೆಯ ಕೊರತೆಯ ಕುರಿತಾಗಿ ಎಚ್ಚರಿಕೆಯಿಂದಿರಿ” ಮತ್ತು “ದೇವರ ವಾಕ್ಯವು ಸಜೀವವಾಗಿದೆ” ಎಂಬ ಭಾಷಣಗಳು, ಇಬ್ರಿಯ 3 ಮತ್ತು 4ನೆಯ ಅಧ್ಯಾಯಗಳಲ್ಲಿನ ಉತ್ತಮ ಬುದ್ಧಿವಾದದ ಮೇಲೆ ಕೇಂದ್ರೀಕರಿಸುತ್ತವೆ. “ಸಕಲ ಜನರಿಗಾಗಿರುವ ಒಂದು ಗ್ರಂಥ” ಎಂಬ ಭಾಷಣದೊಂದಿಗೆ ಶುಕ್ರವಾರದ ಕಾರ್ಯಕ್ರಮವು ಕೊನೆಗೊಳ್ಳುವುದು.
ಶನಿವಾರ ಬೆಳಗ್ಗಿನ ಪ್ರಥಮ ಭಾಷಣವು, “ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದು” ಎಂದಾಗಿದೆ. “ಸತ್ಯದಲ್ಲಿ ಬೇರೂರಿಸಲ್ಪಟ್ಟವರೂ ಸುದೃಢರೂ ಆಗಿರಿ” ಎಂಬ ಆ ಬೆಳಗ್ಗಿನ ಇನ್ನೊಂದು ಪ್ರಮುಖ ಭಾಷಣವು, ಆತ್ಮಿಕ ಬೆಳವಣಿಗೆಯನ್ನು ಹೇಗೆ ಸಾಧಿಸಸಾಧ್ಯವಿದೆಯೆಂಬುದನ್ನು ವರ್ಣಿಸುತ್ತದೆ. ಆ ಸೆಷನ್, ಅಧಿವೇಶನದ ಒಂದು ಕ್ರಮವಾದ ವೈಶಿಷ್ಟ್ಯ—“ದೇವರ ವಾಕ್ಯದಲ್ಲಿ ನಂಬಿಕೆಯು ದೀಕ್ಷಾಸ್ನಾನಕ್ಕೆ ನಡಿಸುತ್ತದೆ” ಎಂಬ ಭಾಷಣ—ದೊಂದಿಗೆ ಸಮಾಪ್ತಿಗೊಳ್ಳುವುದು. ಅದರ ಅನಂತರ ಹೊಸ ಶಿಷ್ಯರಿಗೆ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಏರ್ಪಾಡಿರುವುದು.
ಶನಿವಾರ ಮಧ್ಯಾಹ್ನ, ಆರಂಭದ ಭಾಷಣವಾದ, “ನಂಬಿಕೆಗಾಗಿ ಕಠಿನವಾದ ಹೋರಾಟವನ್ನು ನಡಿಸಿರಿ,” ಎಂಬುದು ಬೈಬಲ್ ಪುಸ್ತಕವಾದ ಯೂದದಲ್ಲಿರುವ ಬುದ್ಧಿವಾದವನ್ನು ಚರ್ಚಿಸುತ್ತದೆ. “ಯೆಹೋವನ ಆಲಯಕ್ಕೆ ನಾವು ಹೋಗೋಣ” ಎಂಬ ಶಿರೋನಾಮದ, ಒಂದು ತಾಸು ಉದ್ದದ ಭಾಷಣಮಾಲೆಯು, ಕ್ರೈಸ್ತ ಕೂಟಗಳ ಪ್ರಯೋಜನಗಳನ್ನು ಪರಿಗಣಿಸುವುದು. ಆ ದಿನದ ಕಾರ್ಯಕ್ರಮವು, “ನಿಮ್ಮ ನಂಬಿಕೆಯ ಗುಣಮಟ್ಟ—ಈಗ ಪರೀಕ್ಷಿಸಲ್ಪಡುತ್ತದೆ” ಎಂಬ ಭಾಷಣದೊಂದಿಗೆ ಅಂತ್ಯಗೊಳ್ಳುತ್ತದೆ.
ಆದಿತ್ಯವಾರ ಬೆಳಗ್ಗಿನ ಕಾರ್ಯಕ್ರಮದಲ್ಲಿ, ಬೈಬಲಿನ ಯೋವೇಲ ಪುಸ್ತಕವನ್ನು ಚರ್ಚಿಸುವ ಮೂರು ಭಾಗದ ಭಾಷಣಮಾಲೆಯಿರುವುದು. ಅದು ನಮ್ಮ ದಿನಕ್ಕಾಗಿರುವ ಅದರ ಅನ್ವಯವನ್ನು ಒಳಗೊಂಡಿರುವುದು. “ನಿಮ್ಮ ಕಣ್ಣನ್ನು ಸರಳವಾಗಿಡಿರಿ” ಎಂಬ ಶಿರೋನಾಮದ ಒಂದು ಬೈಬಲ್ ನಾಟಕವು ಅನಂತರ ಹಿಂಬಾಲಿಸುವುದು. ಮಧ್ಯಾಹ್ನದ ಸಾರ್ವಜನಿಕ ಭಾಷಣವಾದ, “ನಂಬಿಕೆ ಮತ್ತು ನಿಮ್ಮ ಭವಿಷ್ಯತ್ತು,” ಅಧಿವೇಶನದ ಒಂದು ಉಜ್ವಲ ಭಾಗವಾಗಿದೆ.
ಉಪಸ್ಥಿತರಿರುವ ಮೂಲಕ ನೀವು ಖಚಿತವಾಗಿಯೂ ಆತ್ಮಿಕವಾಗಿ ಪೋಷಿಸಲ್ಪಡುವಿರಿ. ಪ್ರತಿಯೊಂದು ಸೆಷನ್ನಲ್ಲಿ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸಲಾಗುವುದು. ಹಾಜರಾಗಲಿಕ್ಕಾಗಿ ಈಗಲೇ ಯೋಜನೆಗಳನ್ನು ಮಾಡಿರಿ. ನಿಮ್ಮ ಮನೆಗೆ ಅತಿ ಹತ್ತಿರದಲ್ಲಿರುವ ನಿವೇಶನದ ಕುರಿತಾಗಿ ತಿಳಿದುಕೊಳ್ಳಲಿಕ್ಕಾಗಿ, ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹವನ್ನು ಸಂಪರ್ಕಿಸಿರಿ ಅಥವಾ ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯಿರಿ. ಭಾರತದಲ್ಲಿನ ಅಧಿವೇಶನ ನಿವೇಶನಗಳ ವಿಳಾಸಗಳನ್ನೂ ನೀವು ಎಚ್ಚರ! ಪತ್ರಿಕೆಯ ಮುಂದಿನ ಸಂಚಿಕೆಯೊಂದರಲ್ಲಿ ಕಂಡುಕೊಳ್ಳಸಾಧ್ಯವಿದೆ.