ಯೌವನದಲ್ಲಿ ನೊಗವನ್ನು ಹೊತ್ತುಕೊಳ್ಳುವುದು
“ನಿಭಾಯಿಸಲು ಕಠಿನವಾದ ಈ ಸಮಯಗಳಲ್ಲಿ,” ಯುವಕರು ಪ್ರಬಲವಾದ ಒತ್ತಡಗಳನ್ನು ಎದುರಿಸುತ್ತಾರೆ. (2 ತಿಮೊಥೆಯ 3:1, NW) ಅನೈತಿಕತೆ, ಧೂಮಪಾನ, ಮತ್ತು ಇತರ ನಾಶಕರ ನಡವಳಿಕೆಯನ್ನು ಪ್ರೋತ್ಸಾಹಿಸುವ ಪ್ರಚಾರದಿಂದ ಅವರು ದಿನನಿತ್ಯ ದಾಳಿಗೊಳಗಾಗಿದ್ದಾರೆ. ಬೈಬಲ್ ಮಟ್ಟಗಳನ್ನು ಅನುಸರಿಸುವವರು, ಗುಂಪಿನೊಂದಿಗೆ ಸೇರಿಕೊಳ್ಳಲು ನಿರಾಕರಿಸುವ ಕಾರಣ ಕುಚೋದ್ಯಕ್ಕೊಳಗಾಗಬಹುದು, ಮತ್ತು ಬಿಟ್ಟುಕೊಡುವುದೇ ಹೆಚ್ಚು ಸುಲಭವೆಂದು ಕೆಲವು ಕ್ರೈಸ್ತರು ಭಾವಿಸಬಹುದು.
ಸಾ.ಶ.ಪೂ. ಏಳನೆಯ ಶತಮಾನದ ಅಂತ್ಯದ ಸುಮಾರಿಗೆ, ಯೆರೆಮೀಯನು ಬರೆದದ್ದು: “ಯೌವನದಲ್ಲಿ ನೊಗಹೊರುವದು ಮನುಷ್ಯನಿಗೆ ಲೇಸು.” (ಪ್ರಲಾಪಗಳು 3:27) ಅವನು ಏನನ್ನು ಅರ್ಥೈಸಿದನು? ಏನೆಂದರೆ, ಯುವ ಪ್ರಾಯದಲ್ಲಿದ್ದಾಗಲೇ ಕಷ್ಟಗಳನ್ನು ನಿಭಾಯಿಸಲು ಕಲಿಯುವುದು, ಒಬ್ಬನನ್ನು ಪ್ರೌಢವಯಸ್ಸಿನ ಪಂಥಾಹ್ವಾನಗಳನ್ನು ಎದುರಿಸಲು ತಯಾರುಮಾಡುವುದರಲ್ಲಿ ಸಹಾಯಮಾಡುತ್ತದೆ. ಆಪತ್ಕಾಲಗಳು ಅಹಿತಕರವಾಗಿದ್ದರೂ, ಅವು ಕ್ರೈಸ್ತ ಯುವಕರಿಗೂ ಪ್ರೌಢರಿಗೂ ಅನಿವಾರ್ಯವಾಗಿವೆ. (2 ತಿಮೊಥೆಯ 3:12) ಆದರೆ ಒಪ್ಪಂದವು ತರಬಹುದಾದ ಯಾವುದೇ ತಾತ್ಕಾಲಿಕ ಬಿಡುಗಡೆಗಿಂತ, ನಂಬಿಗಸ್ತಿಕೆಯ ಪ್ರಯೋಜನಗಳು ಬಹು ಹೆಚ್ಚು ಪ್ರಧಾನವಾಗಿವೆ.
ನೀವು ಒಬ್ಬ ಯೌವನಸ್ಥರಾಗಿರುವುದಾದರೆ, ನಂಬಿಕೆಯ ಪರೀಕ್ಷೆಗಳನ್ನು ನೇರವಾಗಿ ಎದುರಿಸಿರಿ. ಕೆಟ್ಟ ನಡತೆಯಲ್ಲಿ ತೊಡಗುವಂತೆ ಶೋಧಿಸಲ್ಪಟ್ಟಾಗ, ಒಪ್ಪಂದಮಾಡಿಕೊಳ್ಳಲು ನಿರಾಕರಿಸಿರಿ. ಆ ಸಂದರ್ಭದಲ್ಲಿ ಅದನ್ನು ಮಾಡುವುದು ಕಷ್ಟಕರವಾಗಿರಬಹುದಾದರೂ, ನಿಮ್ಮ ಜೀವನಾವಧಿಯಲ್ಲಿ ನಿಮಗೆ ಕಡಿಮೆ ಚಿಂತೆಗಳಿರುವುವು. ಯೇಸು ವಾಗ್ದಾನಿಸಿದ್ದು: “ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿರಿ . . . ಆಗ ನಿಮ್ಮ ಪ್ರಾಣಗಳಿಗೆ ವಿಶ್ರಾಂತಿಸಿಕ್ಕುವದು. ಯಾಕಂದರೆ ನನ್ನ ನೊಗವು ಮೃದುವಾದದ್ದು; ನನ್ನ ಹೊರೆಯು ಹೌರವಾದದ್ದು.”—ಮತ್ತಾಯ 11:29, 30, NW.
ಬೈಬಲ್ ತತ್ತ್ವಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಪಂಥಾಹ್ವಾನವನ್ನು ಸ್ವೀಕರಿಸಿರಿ. ಹಾಗೆ ಮಾಡುವುದು, ಈಗ ನಿಮಗೆ ಜೀವಿತದ ಅತ್ಯುತ್ತಮ ಮಾರ್ಗವನ್ನು ಮತ್ತು ಭವಿಷ್ಯತ್ತಿಗಾಗಿ ಒಂದು ನಿಜ ನಿರೀಕ್ಷೆಯನ್ನು ಕೊಡುವುದು. ಬೈಬಲ್ ತಿಳಿಸುವಂತೆ, “ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.”—1 ಯೋಹಾನ 2:17.